ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಿಕೆಯ ದೇಶಭಕ್ತಿ ಪ್ರದರ್ಶನಕ್ಕೆ ಅಂಕುಶ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರದರ್ಶಿಸುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹವಾಗಿದ್ದು, ಹುಸಿ ದೇಶಭಕ್ತಿಯ ಪ್ರದರ್ಶನವನ್ನು ನಿರುತ್ಸಾಹಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ವಿದ್ಯಮಾನವಾಗಿದೆ.

ಪ್ರಸ್ತುತ, ರಾಷ್ಟ್ರಗೀತೆ ಕಡ್ಡಾಯ ವಿಷಯಕ್ಕೆ ಸಂಬಂಧಿಸಿದಂತೆ ವಿಧಿ-ವಿಧಾನ ರೂಪಿಸಲು 12 ಸದಸ್ಯರನ್ನೊಳಗೊಂಡ ಅಂತರ ಸಚಿವಾಲಯ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಗೀತೆ ನುಡಿಸುವ, ಹಾಡುವ ಸಂಬಂಧ ಪರಾಮರ್ಶೆ ನಡೆಸಲಿದೆ. ಈ ಮುನ್ನ 2016ರಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಸುಪ್ರೀಂ ಕೋರ್ಟ್‌ ಕಡ್ಡಾಯಗೊಳಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಮನರಂಜನಾ ಕೇಂದ್ರಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಲು ನಡೆದ ಪ್ರಯತ್ನ ಅನೇಕ ಸಂದರ್ಭಗಳಲ್ಲಿ ಅಸಂಗತ ಪ್ರಹಸನವಾಗಿ ಕಾಣಿಸುತ್ತಿತ್ತು. ಬಲವಂತದ ಈ ಕ್ರಮ, ಹಿರಿಯ ನಾಗರಿಕರು ಹಾಗೂ ಅಂಗವಿಕಲರನ್ನು ಪೇಚಿಗೆ ಸಿಲುಕಿಸಿದ ಉದಾಹರಣೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಪೊಲೀಸ್‍ಗಿರಿಗೂ ಕಾರಣವಾಗಿದೆ. ಇವೆಲ್ಲ ಘಟನೆಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿನ ಸಾಂಸ್ಕೃತಿಕ ಅತಿರೇಕಗಳು ಚಿತ್ರಣಗೊಳ್ಳಲು ಕಾರಣವಾಗಿದ್ದವು.

ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಂಸ್ಕೃತಿಕ ನಡಾವಳಿಯೊಂದನ್ನು ದೇಶದ ಮೇಲೆ ಹೇರುವ ಪ್ರಯತ್ನಗಳು ಬೇರೆ ಬೇರೆ ರೀತಿ ನಡೆಯುತ್ತಿವೆ. ಅಭಿವೃದ್ಧಿಯ ಬಗ್ಗೆ ಜನರ ಗಮನಸೆಳೆಯಬೇಕಾದ ಸರ್ಕಾರ, ರಾಷ್ಟ್ರಭಕ್ತಿಯ ಹೆಸರಿನಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಜೆಂಡಾವೊಂದನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದನ್ನೇ ತನ್ನ ಸಾಧನೆಯ ರೂಪದಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇಂಥ ಧೋರಣೆ ಹಾಗೂ ಹೇರಿಕೆಗಳ ಕುರಿತು ಮಧ್ಯಮವರ್ಗದ ಜನರಲ್ಲಿದ್ದ ಕುತೂಹಲ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಆ ಜಾಗದಲ್ಲೀಗ ಭ್ರಮನಿರಸನ ಕಾಣಿಸುತ್ತಿದೆ. ಹುಸಿ ರಾಷ್ಟ್ರಭಕ್ತಿ ದೇಶದ ಘನತೆಯನ್ನೂ ಹೆಚ್ಚಿಸುವುದಿಲ್ಲ, ಜನಸಾಮಾನ್ಯರ ಬದುಕಿನ ಮಟ್ಟವನ್ನೂ ಸುಧಾರಿಸುವುದಿಲ್ಲ ಎನ್ನುವ ಸರಳಸತ್ಯವನ್ನು ಪ್ರಜಾಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಿದ ನಿಲುವಿನಲ್ಲಿ ರಾಷ್ಟ್ರಭಕ್ತಿಗಿಂತಲೂ ಹೆಚ್ಚಾಗಿ ತೆಳು ಭಾವಾವೇಶವೇ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚಿತ್ರಮಂದಿರಗಳಿಗೆ ಅನ್ವಯವಾಗುವ ದೇಶಭಕ್ತಿಯ ಪ್ರದರ್ಶನ, ಬೇರೆಡೆಗಳಲ್ಲಿ ಯಾಕಿಲ್ಲ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿರಲಿಲ್ಲ. ದೇಶಭಕ್ತಿಯ ಅಭಿವ್ಯಕ್ತಿಗೆ ರಾಷ್ಟ್ರಗೀತೆಯನ್ನು ಮಾನದಂಡವನ್ನಾಗಿ ನೋಡುವ ರೀತಿಯೇ ಸರಿಯಾದುದಲ್ಲ. ದೇಶದ ಕುರಿತ ಅಭಿಮಾನವನ್ನು ಕಾನೂನು ಮೂಲಕ ಅಥವಾ ಒತ್ತಾಯಪೂರ್ವಕವಾಗಿ ಉಂಟುಮಾಡಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಪ್ರಬುದ್ಧತೆಗೆ ತಕ್ಕುದಾದುದಲ್ಲ.

ನಿಜವಾದ ದೇಶಭಕ್ತಿ ಪ್ರಾಮಾಣಿಕವಾಗಿ ತೆರಿಗೆಯನ್ನು ಕಟ್ಟುವ, ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟವಾಗಿ ಇಡುವ ಹಾಗೂ ತನ್ನ ನಂಬಿಕೆಗಳು ಹಾಗೂ ಜೀವನವಿಧಾನ ನೆರೆಹೊರೆಯವರಿಗೆ ಕಿರಿಕಿರಿ ಉಂಟುಮಾಡದಂತಹ ಸರಳ ಹಾಗೂ ಪ್ರಾಮಾಣಿಕ ಚಟುವಟಿಕೆಗಳಲ್ಲಿರುತ್ತದೆ. ತೆರಿಗೆಕಳ್ಳರು ದೇಶಪ್ರೇಮದ ಕುರಿತು ದೊಡ್ಡ ದೊಡ್ಡ ಭಾಷಣ ಮಾಡುವ ವೈರುಧ್ಯ ಪ್ರಸ್ತುತ ಎದ್ದುಕಾಣುವಂತಿದೆ.

ನಾವು ಬದಲಿಸಬೇಕಾದುದು ಅಭಿವೃದ್ಧಿಯ ಪಥವನ್ನೇ ಹೊರತು, ಕಟ್ಟಡಗಳ ಬಣ್ಣಗಳನ್ನಲ್ಲ. ಸರ್ಕಾರದ ಆದ್ಯತೆ ಅಭಿವೃದ್ಧಿ ಚಟುವಟಿಕೆಗಳ ಮೂಲಕ ಸಾಮಾಜಿಕ ಹಿತವನ್ನು ಸಾಧಿಸುವುದಾಗಿರಬೇಕೇ ಹೊರತು, ದೇಶಪ್ರೇಮದ ಹೆಸರಿನಲ್ಲಿ ಜನರನ್ನು ಭಾವಾವೇಶಕ್ಕೆ ಒಳಗು ಮಾಡುವುದಲ್ಲ. ರಾಷ್ಟ್ರಭಕ್ತಿ ಎನ್ನುವುದು ಪ್ರದರ್ಶನದ ಸರಕಲ್ಲ ಅಥವಾ ಯಾರಿಗಾದರೂ ಸಾಬೀತು ಮಾಡಬೇಕಾದ ಸಂಗತಿಯೂ ಅಲ್ಲ ಎನ್ನುವುದನ್ನು ದೇಶಭಕ್ತಿ ಮತ್ತು ಸಂಸ್ಕೃತಿಯ ವಕ್ತಾರಿಕೆಯನ್ನು ವಹಿಸಿಕೊಂಡವರು ಅರ್ಥಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT