ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರ

Last Updated 12 ಜನವರಿ 2018, 10:02 IST
ಅಕ್ಷರ ಗಾತ್ರ

ಹಿರೇಕೆರೂರ: ಮುಂಗಾರು ಆರಂಭದಲ್ಲಿ ಮಳೆಯ ಕೊರತೆ ಹಾಗೂ ಅಂತ್ಯದಲ್ಲಿ ಸುರಿದ ವಿಪರೀತ ಮಳೆಯಿಂದ ತಾಲ್ಲೂಕಿನಲ್ಲಿ ಹತ್ತಿ ಬೆಳೆಯ ಮೇಲೆ ದುಷ್ಪರಿಣಾಮ ಉಂಟಾಗಿ ಕಡಿಮೆ ಇಳುವರಿ ಬಂದಿದ್ದರೂ ಸೂಕ್ತ ಬೆಲೆ ಸಿಗೆದೆ ರೈತರು ಪರದಾಡುವಂತಾಗಿದೆ.

ಈಗಾಗಲೇ ರೈತರು ಗೋವಿನ ಜೋಳ ಕಟಾವು ಮುಗಿಸಿದ್ದು, ಹತ್ತಿ ಬಿಡಿಸುವುದು ಕೊನೆಗೊಳ್ಳುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿರುವ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ.

ಪಟ್ಟಣದ ಮಾಸೂರು ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಸಂಸ್ಥೆಗೆ ಸೇರಿದ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಮಿಲ್ ಹಳ್ಳಿಗಳಿಂದ ರೈತರು ನಿತ್ಯವೂ ಹತ್ತಿಯನ್ನು ತರುತ್ತಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

‘ಕಳೆದ ವರ್ಷ ಜ.10ವರೆಗೆ ರೈತರಿಂದ 13,206 ಕ್ವಿಂಟಲ್ ಹತ್ತಿಯನ್ನು ಖರೀದಿಸಲಾಗಿತ್ತು. ಈ ವರ್ಷ ಜ.10ರವರೆಗೆ ಕೇವಲ 7,700 ಕ್ವಿಂಟಲ್ ಮಾತ್ರ ಖರೀದಿಸಲಾಗಿದೆ. ಸಕಾಲದಲ್ಲಿ ಮಳೆಯಾಗದೇ ಇರುವುದು, ಕೊನೆಯಲ್ಲಿ ವಿಪರೀತ ಮಳೆ ಸುರಿದಿರುವುದರಿಂದ ಇಳುವರಿ ಕಡಿಮೆಯಾಗಿದ್ದರಿಂದ ಹತ್ತಿ ಆವಕ ಕಡಿಮೆಯಾಗಿದೆ’ ಎಂದು ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಮಿಲ್ ವ್ಯವಸ್ಥಾಪಕ ಜೋತಿಬಾ ಜಾಧವ ತಿಳಿಸಿದ್ದಾರೆ.

‘ಮಾರುಕಟ್ಟೆ ದರಕ್ಕೆ ಅನುಗುಣವಾಗಿ ರೈತರಿಂದ ಹತ್ತಿ ಖರೀದಿಸುತ್ತಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಸಹ ಕಡಿಮೆಯಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹ 6,000 ರಿಂದ 6,200ರ ವರೆಗೆ ಖರೀದಿ ಮಾಡಲಾಗಿತ್ತು. ಈ ಬಾರಿ ಬೆಲೆ ಕಡಿಮೆಯಾಗಿದ್ದು, ಪ್ರತಿ ಕ್ವಿಂಟಲ್‌ಗೆ ₹ 5,000– ₹5,350 ವರೆಗೆ ಖರೀದಿಸಲಾಗುತ್ತಿದೆ’ ಎಂದರು.

‘ತಾಲ್ಲೂಕಿನ ರೈತರ ಶ್ರೇಯೋಭಿವೃದ್ಧಿಗೆ ಟಿಎಪಿಸಿಎಂಎಸ್‌ ಸಂಸ್ಥೆ ಶ್ರಮಿಸುತ್ತಿದ್ದು, ಕಳೆದ ವರ್ಷ ಮಾರ್ಚ್ 28ರ ವರೆಗೆ ರೈತರಿಂದ ಹತ್ತಿ ಖರೀದಿಸಿದ್ದು, ಒಟ್ಟು 21,662 ಕ್ಟಿಂಟಲ್ ಖರೀದಿಸಿ, ₹ 10.96 ಕೋಟಿ ರೈತರಿಗೆ ಬಟವಡೆ ಮಾಡಲಾಗಿದೆ’ ಎಂದು ಹೇಳಿದರು.

ಕೆ.ಎಚ್.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT