ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಬಗ್ಗೆ ದನಿಯೆತ್ತಿದ ನ್ಯಾಯಮೂರ್ತಿಗಳಿವರು

Last Updated 12 ಜನವರಿ 2018, 16:03 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಾಗಿರುವ ಅವ್ಯವಸ್ಥೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಹೇಳಿ ಸುಪ್ರೀಂಕೋರ್ಟ್ ನ ನಾಲ್ವರು ನ್ಯಾಯಾಧೀಶರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನ್ಯಾಯಾಧೀಶರಾದ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮತ್ತು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಮತ್ತು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ವಿರುದ್ಧ ದನಿಯೆತ್ತಿದ ನ್ಯಾಯಮೂರ್ತಿಗಳ ಕಿರು ಪರಿಚಯ ಇಲ್ಲಿದೆ.

ಜೆ. ಚೆಲಮೇಶ್ವರ್


ಸುಪ್ರೀಂಕೋರ್ಟಿನ ಹಿರಿಯ ನ್ಯಾಯಾಧೀಶರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜೆ. ಚೆಲಮೇಶ್ವರ್ ಅವರು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಫಿಸಿಕ್ಸ್ ಪದವಿ ಪಡೆದು ನಂತರ ಆಂಧ್ರ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಶಿಕ್ಷಣ ಪಡೆದಿದ್ದಾರೆ. 1995ರಲ್ಲಿ ಹಿರಿಯ ವಕೀಲರಾಗಿ ಕಾರ್ಯ ಆರಂಭಿಸಿದ ಅವರು  1997ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನಲ್ಲಿ  ನ್ಯಾಯಾಧೀಶರಾಗಿ ನೇಮಕಗೊಂಡರು.

ಗುವಾಹಟಿ ಹೈ ಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಕೇರಳ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದರು. ಇದೀಗ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿರುವ ದೀಪಕ್ ಮಿಶ್ರಾ ಜತೆಗೇ 2011ರಲ್ಲಿ ಸುಪ್ರೀಂಕೋರ್ಟ್ ಗೆ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು.

ನ್ಯಾಯಾಧೀಶರನ್ನು ಹೇಗೆ ನೇಮಕ ಮಾಡಬೇಕೆಂಬ ವಿಷಯ ಬಂದಾಗ ಕೊಲಿಜಿಯಂನಲ್ಲಿ (ನ್ಯಾಯಾಧೀಶರ ನೇಮಕಾತಿ ಸಮಿತಿ)ಲ್ಲಿ ವ್ಯವಸ್ಥೆ ಪಾರದರ್ಶಕವಾಗಿಲ್ಲ. ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು 2015ರಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ  ಟಿ.ಎಸ್. ಠಾಕೂರ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತ ಪಡಿಸಿದ ನ್ಯಾಯಾಧೀಶರಾಗಿದ್ದಾರೆ ಚೆಲಮೇಶ್ವರ್.
1993ರಿಂದ 2014ರವರೆಗೂ ನ್ಯಾಯಾಧೀಶರನ್ನು ಕೊಲಿಜಿಯಂ ವ್ಯವಸ್ಥೆಯ ಮೂಲಕವೇ ನೇಮಕ ಮಾಡಲಾಗುತ್ತಿತ್ತು. ಈ ವೇಳೆ ಆಡಳಿತಾರೂಢ  ಎನ್‌ಡಿಎ ಸರ್ಕಾರವು ನ್ಯಾಯಾಧೀಶರ ನೇಮಕಾತಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಎನ್‌ಜೆಎಸಿಯನ್ನು 99ನೇ ತಿದ್ದುಪಡಿ ಮೂಲಕ ರಚಿಸಿತ್ತು. ಎನ್‌ಜೆಎಸಿಯನ್ನು ಜಾರಿಗೆ ತಂದ ಮರುಕ್ಷಣವೇ ಸುಪ್ರೀಂಕೋರ್ಟ್, ಸ್ವತಂತ್ರ ನ್ಯಾಯಾಂಗ ವಸ್ತು ವಿಷಯವನ್ನು ಮುಂದಿಟ್ಟುಕೊಂಡು, ''ತಿದ್ದುಪಡಿ ಅಸಾಂವಿಧಾನಿಕ,'' ಎಂದು ತೀರ್ಪು ನೀಡಿ, 5 ನ್ಯಾಯಾಧೀಶರನ್ನೊಳಗೊಂಡ (4:1) ಸಾಂವಿಧಾನಿಕ ಪೀಠವನ್ನು ಘೋಷಿಸಿ ಬಿಟ್ಟಿತು.
ಅಕ್ಟೋಬರ್ 2018ಕ್ಕೆ ಚೆಲಮೇಶ್ವರ್ ನಿವೃತ್ತಿ ಹೊಂದಲಿದ್ದಾರೆ

ರಂಜನ್ ಗೊಗೋಯಿ


ಹಿರಿಯ ನ್ಯಾಯಾಧೀಶರಾದ ರಂಜನ್ ಗೊಗೋಯಿ 2018 ಅಕ್ಟೋಬರ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಸಿಜೆಐ ಸ್ಥಾನಕ್ಕೇರುವ ಈಶಾನ್ಯ ರಾಜ್ಯದ ಮೊದಲ ನ್ಯಾಯಾಧೀಶರಾಗಲಿದ್ದಾರೆ ಗೊಗೋಯಿ.  2019 ನವೆಂಬರ್‍‍ನಲ್ಲಿ ಇವರು ನಿವೃತ್ತರಾಗಲಿದ್ದಾರೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗುವ ಮುನ್ನ 2011ರಲ್ಲಿ ಗುವಾಹಟಿ ಹೈಕೋರ್ಟ್ ನಲ್ಲಿ  ನ್ಯಾಯಾಧೀಶರಾಗಿದ್ದರು, ಇವರು. 2016ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ನಿಂದನಾತ್ಮಕ ಅಭಿಪ್ರಾಯವನ್ನು ಬ್ಲಾಗ್ ನಲ್ಲಿ ಬರೆದು ಕೋರ್ಟ್ ನಿಂದನೆಯ ಕಾನೂನು ಕ್ರಮಕ್ಕೆ ಗುರಿಯಾಗಿದ್ದ ಮಾರ್ಕಂಡೇಯ ಕಾಟ್ಜು ಪ್ರಕರಣದಲ್ಲಿ ಗಗೋಯಿ ಅವರು ಕಾಟ್ಜು ವಿರುದ್ಧದ ಕೋರ್ಟ್‌ ನಿಂದನೆಯ ಕಾನೂನು ಉಪಕ್ರಮವನ್ನು ಕೊನೆಗೊಳಿಸಿ ಆದೇಶ ಹೊರಡಿಸಿದ್ದರು.

ಎಂ.ಬಿ ಲೋಕುರ್


ದೆಹಲಿಯ ಮಾಡರ್ನ್ ಸ್ಕೂಲ್ ಮತ್ತು ಅಲಹಾಬಾದ್‍ನ ಸೇಂಟ್ ಜೋಸೆಫ್ ಶಾಲೆಯಲ್ಲಿ  ಶಿಕ್ಷಣ ಮತ್ತು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸ ಪದವಿ ಪಡೆದ ಲೋಕುರ್ ದೆಹಲಿ ವಿವಿಯಲ್ಲಿ ಕಾನೂನು ಶಿಕ್ಷಣ ಪಡೆದಿದ್ದರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ ಇವರು 1997ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಇದರ ನಂತರದ ವರ್ಷ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಗಿ ನೇಮಕಗೊಂಡರು

1999ರಲ್ಲಿ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯೇ ದೆಹಲಿ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾದರು. 2012ರಲ್ಲಿ  ಸುಪ್ರೀಂಕೋರ್ಟ್ ನ್ಯಾಯಾಧೀಶರಾಗುವ ಮುನ್ನ ಇವರು ಗುವಾಹಟಿ ಹೈಕೋರ್ಟ್ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೋರ್ಟ್‍ಗಳ  ಡಿಜಿಟೈಸೇಷನ್‍ನಾಗಿ ರಚಿಸಲ್ಪಟ್ಟ ಸುಪ್ರೀಂ ಕೋರ್ಟ್ ನ ಇ -ಕಮಿಟಿಯ ನೇತೃತ್ವ ವಹಿಸಲು ಇವರು ಮರು ನೇಮಕಗೊಂಡಿದ್ದರು. 2018 ಡಿಸೆಂಬರ್‍‍ನಲ್ಲಿ ನಿವೃತ್ತರಾಗಲಿದ್ದಾರೆ.

ಕುರಿಯನ್ ಜೋಸೆಫ್


ಕೇರಳದ ಕುರಿಯನ್ ಜೋಸೆಫ್ ತಿರುವನಂತಪುರಂನ ಕೇರಳ ಲಾ ಅಕಾಡೆಮಿ ಕಾನೂನು ಕಾಲೇಜಿನ ಪದವೀಧರರಾಗಿದ್ದಾರೆ. 1979ರಲ್ಲಿ ಕೇರಳ ಹೈಕೋರ್ಟ್ ನಲ್ಲಿ ವಕೀಲರಾಗಿದ್ದ ಇವರ 2000 ಇಸವಿಯಲ್ಲಿ ನ್ಯಾಯಮೂರ್ತಿಯಾಗುವ ಮುನ್ನ ಅಡಿಷನಲ್ ಅಡ್ವಕೇಟ್ ಜನರಲ್ ಮತ್ತು ಹಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೇರಳ ಹೈಕೋರ್ಟ್ ನಲ್ಲಿ ಎರಡು ಬಾರಿ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. ಫೆಬ್ರುವರಿ 8, 2010ರಿಂದ ಮಾರ್ಚ್ 7, 2013ರ ವರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. 2018 ನವೆಂಬರ್ ತಿಂಗಳಲ್ಲಿ ಇವರು ನಿವೃತ್ತರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT