ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕ್ಷೇತ್ರ ಕದ್ರಿಯಲ್ಲಿ ಜಾತ್ರಾ ಮಹೋತ್ಸವದ ಪ್ರಭೆ

Last Updated 13 ಜನವರಿ 2018, 5:29 IST
ಅಕ್ಷರ ಗಾತ್ರ

ಮಂಗಳೂರಿನ ಕದ್ರಿ ಕ್ಷೇತ್ರದಲ್ಲಿ ಈಗ ಜಾತ್ರಾ ಮಹೋತ್ಸವದ ಸಂಭ್ರಮ. ಇತಿಹಾಸ ಪ್ರಸಿದ್ದವಾದ ಕದ್ರಿ ಮಂಜು ನಾಥ ದೇವಸ್ಥಾನದಲ್ಲಿ ಇದೇ 14ರಿಂದ 24ರವರೆಗೆ ವಾರ್ಷಿಕೋತ್ಸವ ಜರಗ ಲಿದ್ದು ಭಕ್ತರಿಗೆ ಸಂಭ್ರಮದ ಸಂದರ್ಭ.

ವಾಣಿಜ್ಯ ನಗರವಾದ ಮಂಗಳೂ ರಿನ ಬಹುದೊಡ್ಡ ಆಧ್ಯಾತ್ಮಿಕ ಕೇಂದ್ರ ಕದ್ರಿ. ಋಷಿವರೇಣ್ಯರಾದ ಪರಶುರಾ ಮರ ತಪಸ್ಸಿಗೆ ಶಿವನು ಒಲಿದು ಲಿಂಗ ರೂಪದಲ್ಲಿ ಮಂಜುನಾಥನಾಗಿ ನೆಲೆ ಗೊಂಡ ಕ್ಷೇತ್ರ .

ಮಕರ ಸಂಕ್ರಮಣದಂದು ಧ್ವಜಾರೋಹಣವಾಗಿ ಉತ್ಸವ ಆರಂಭವಾಗುತ್ತದೆ. ಅಂದು ಗರುಡಾರೋಹಣ, ಉತ್ಸವಬಲಿ, ಕಂಚಿಲು ಸೇವೆ, ಸಣ್ಣ ರಥೋತ್ಸವ ನಡೆಯುತ್ತದೆ. 13ರಂದು ದೇವರ ಪ್ರಾರ್ಥನೆ, ತಂತ್ರಿಗಳ ಯಾಗಶಾಲಾ ಪ್ರವೇಶ. 15ರಂದು ದೀಪದ ಬಲಿ ಉತ್ಸವ, 16ರಂದು ಬಿಕರ್ನಕಟ್ಟೆ ಸವಾರಿ ನಿತ್ಯಬಲಿ, 17ರಂದು ಮಲ್ಲಿಕಟ್ಟೆ ಸವಾರಿ, 18ರಂದು ಮುಂಡಾಣಕಟ್ಟೆ ಸವಾರಿ, 19ರಂದು ಕೊಂಚಾಡಿ ಸವಾರಿ, 20ರಂದು ಏಳನೆಯ ದೀಪೋತ್ಸವ. ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಚಂದ್ರಮಂಡಲ ಉತ್ಸವ. 21ರಂದು ಮಹಾರಥೋತ್ಸವ, 22ರಂದು ಅವಭೃತ ಸ್ನಾನ, ಧ್ವಜಾರೋಹಣ, 24ರಂದು ಸಂಪ್ರೋಕ್ಷಣೆ, ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವಸೇವೆ, ರಾತ್ರಿ ಮಲರಾಯ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀದೇವಳದ ಆಡಳಿತ ನಡೆಯುತ್ತಿದೆ, ರಾಜಾ ನಿರ್ಮಲ್ ನಾಥ್‌ ಜೀ ಅವರು ಕದ್ರಿ ಯೋಗೀಶ್ವರ ಮಠಾಧಿಪತಿಗಳಾಗಿದ್ದಾರೆ. ನಿಂಗಯ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ಎ.ಜನಾರ್ದನ್ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಭವ್ಯ ಸಾನ್ನಿಧ್ಯ: ಶ್ರೀಮಂಜುನಾಥನ ಭವ್ಯ ಸಾನ್ನಿಧ್ಯವು ದರ್ಶನಾಪೇಕ್ಷಿಗಳನ್ನು ಪುಳಕಗೊಳಿಸುತ್ತದೆ. ಶ್ರೀ ಮಂಜುನಾಥ ದೇವರ ವಿಗ್ರಹ, ಲೋಕೇಶ್ವರ ಮೂರ್ತಿ, ಗಣಪತಿ, ದುರ್ಗೆ ಮೊದಲಾದ ದೇವರ ಸಾನ್ನಿಧ್ಯಗಳು ಪುಷ್ಪಾಲಂಕೃತವಾಗಿ ಭಕ್ತಿಪ್ರದವಾಗಿವೆ. ಸಹ್ಯಾದ್ರಿಯ ದಕ್ಷಿಣಾಪಥದಲ್ಲಿ ಕಡಲತಡಿಯ ಸಮೃದ್ಧ ಪರಿಸರದಲ್ಲಿ ಕದ್ರಿ ದೇವಳ ಭಕ್ತರ ಪ್ರೀತಿಯ ಕ್ಷೇತ್ರವಾಗಿದೆ. ಪುರಾತನವೂ ಆಗಿರುವುದರಿಂದ ಬೃಹತ್‌ ಸಂಖ್ಯೆಯಲ್ಲಿ ಭಕ್ತರು ದೇವಳ ಸಂದರ್ಶಿಸುತ್ತಾರೆ.

ಮುನಿ ಪರಶುರಾಮ ಈ ಮಂಜುನಾಥ ದೇವಾಲಯವನ್ನು ವಿಶ್ವಕರ್ಮನ ನೆರವಿನಿಂದ ನಿರ್ಮಿಸಿದರೆಂದು ಇತಿಹಾಸಕಾರರ ಅಭಿಮತ. ಡಾ.ಗುರುರಾಜ ಭಟ್ ಬರೆದ ಕದ್ರಿ ಕ್ಷೇತ್ರ ಮಹಾತ್ಮೆ ಪುಸ್ತಕದಲ್ಲಿ ಕ್ಷೇತ್ರ ಚರಿತ್ರೆಯ ಬಗ್ಗೆ ವಿವರಗಳಿವೆ.

ಕದ್ರಿ ದೇವಳದ ಮೇಲ್ಭಾಗದಲ್ಲಿ 7 ಕೆರೆ(ತೀರ್ಥಕೊಳ)ಗಳಿದ್ದು ಶಿವನು ಗಂಗೆಯನ್ನು ಧರಿಸಿದ್ದರ ದ್ಯೋತಕವೆಂದು ನಂಬಲಾಗಿದೆ. ಪವಿತ್ರ ವಾರಿಧಿಗಳಾದ ಗಂಗೆ, ಭಾಗೀರಥಿಯವರ ತೀರ್ಥಗಳೂ ಇಲ್ಲಿವೆ. ಮಕರ ಸಂಕ್ರಮಣದಂದು ಪ್ರಾತಃಕಾಲ 5 ಗಂಟೆಗೆ ತೀರ್ಥಸ್ನಾನ ವಿಶೇಷ ಎಂದು ಭಕ್ತರು ನಂಬುತ್ತಾರೆ.

ಕದ್ರಿ ಮಠಾಧೀಶರೂ ಈ ತೀರ್ಥಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಮಹರ್ಷಿ ಕಪಿಲರ ಆಶ್ರಮವೂ ಒಂದು ಕಾಲದಲ್ಲಿ ಇಲ್ಲಿದ್ದು ಇದೊಂದು ಸಿದ್ಧಾಶ್ರಮದ ಭಾಗ. ಮುನಿವರರಾದ ಕಪಿಲ-ಭೃಗು ಅವರ ಸಂವಾದದಲ್ಲಿ ಮಂಜುನಾಥ ಮಹಾತ್ಮೆ ಸ್ತುತಿಪ್ರದವಾಗಿದೆ. ಓಂನಮೋ ಮಂಜುನಾಥಾಯ ಎನ್ನುವ ಏಕಾದಶಾಕ್ಷರ ಮಹಾ ಮಂತ್ರವು ಭಕ್ತಿಪುರಸ್ಸರವಾದ ದಿವ್ಯ ಧ್ಯಾನಸ್ತುತಿ. ಭಗವಾನ್ ಮಂಜುನಾಥನು ಕದಲೀವನದ ಮಧ್ಯದ ರಸಕೂಪದಲ್ಲಿ ಜ್ಯೋತಿರ್ಲಿಂಗ ಸ್ವರೂಪನಾಗಿ ಮೇಲಿನ ಮಂತ್ರಕ್ಕೆ ಒಲಿದು ಅವತರಿಸಿದನೆಂಬ ಉಕ್ತಿಯಿದೆ.

ಕುಡ್ಲ ಕದ್ರಿ ನಾಮ ವೀಶೇಷತೆ: ಕುಡು ಅಂದರೆ ದಾನ- ಆಳ ಎಂದರೆ ಸ್ಥಳ. ದಾನ ಧರ್ಮಾದಿಗಳ ಸ್ಥಳ ‘ಕುಡಾಳ’ ಮುಂದೆ ಕುಡ್ಲವೆಂದು ಆಯಿತು ಕಡವ ಶಂಭು ಶರ್ಮರ ಅಭಿಮತ. ಪ್ರಾಚೀನ ಹೆಸರು ಕದರಿಕಾ. ಸಹ್ಯಾದ್ರಿಯಿಂದ ಹತ್ತು ಯೋಜನ ದೂರದಲ್ಲಿರುವ ಸ್ಥಳವೇ ಕದಳಿವನ, ಕದಲೀ ಕ್ಷೇತ್ರವೆಂದು ಹೇಳುತ್ತಾರೆ. ಆ ದಿವ್ಯ ಕ್ಷೇತ್ರವೇ ಕದ್ರಿ.
ಚೌಕಾಕಾರದ ಗರ್ಭಗೃಹ, ದಕ್ಷಿಣೋತ್ತರ ಪಾರ್ಶ್ವದ್ವಾರ, ತೀರ್ಥಮಂಟಪ, ನವಗ್ರಹ ಸಾನ್ನಿಧ್ಯ, ಮಹಾಬಲಿ ಪೀಠ, ರಜತದ್ವಾರ, ವಸಂತ ಮಂಟಪ, ಉದ್ಭವಲಿಂಗ, ಅಲಂಕೃತ ರಥಗಳು, ಬೆಳ್ಳಿಯ ರಥ, ದೇವಾಲಯದ ಒಳಾಂಗಣ, ಹೊರಾಂಗಣವೂ ಆಕರ್ಷಕವಾಗಿವೆ.

ದೇವಾಲಯದಲ್ಲಿ ಅಭಿಮುಖವಾಗಿ ಮೇಲ್ಭಾಗದಲ್ಲಿರುವ ಗೋಮುಖ ಗಣಪತಿ ದೇವರ ಸನ್ನಿಧಾನದಲ್ಲಿ ಸದಾ ಹರಿದು ಬರುವ ಜಲಧಾರೆ ತೀರ್ಥವಾಹಿನಿಯಾಗಿ ಪ್ರಾಚೀನವಾಗಿದೆ. ಕಾಶೀಕ್ಷೇತ್ರದಿಂದ ತೀರ್ಥವು ಹರಿದು ಬರುತ್ತದೆ ಎಂದು ನಂಬಿಕೆ ಇದೆ. ಬುದ್ದನ ಉಬ್ಬು ಶಿಲ್ಪ ಇರುವ ಶಿಲಾಕಂಬವೂ ಇಲ್ಲಿದೆ.

ನಾಥ ಪಂಥಕ್ಕೂ ಕದ್ರಿಗೂ ಸಂಬಂಧ: ಮತ್ಸ್ಯೇಂದ್ರನಾಥ, ಗೋರಕ್ಷನಾಥ, ಚೌರಂಗಿನಾಥ ಮೊದಲಾದ ನಾಥಪಂಥದ ಪ್ರಮುಖರ ಶಿಲಾ ಪ್ರತಿಮೆ ಇಲ್ಲಿದೆ. ನಾಥ ಪಂಥದ ಋಷಿ ಮುನಿಗಳಿಗೆ ಸೇರಿದ ಕದ್ರಿ ಯೋಗೀಶ್ವರ ಮಠ ಇದೇ ಪರಿಸರದಲ್ಲಿದೆ. ಕದ್ರಿ ಯೋಗೀಶ್ವರ ಮಠಕ್ಕೂ ಕದ್ರಿ ದೇವಳಕ್ಕೂ ಬಾಂಧವ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT