ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಯ ಕುಟುಂಬದ ಮೇಲೆ ಒತ್ತಡ

ಲೋಯ ಚಿಕ್ಕಪ್ಪ ಶ್ರೀನಿವಾಸ್‌ ಆರೋಪ
Last Updated 15 ಜನವರಿ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಚ್‌.ಬಿ. ಲೋಯ ಅವರ ಸಾವಿನ ಬಗ್ಗೆ ತನಿಖೆ ನಡೆಯಬೇಕು ಎಂದು ಅವರ ಚಿಕ್ಕಪ್ಪ ಶ್ರೀನಿವಾಸ ಲೋಯ (81) ಒತ್ತಾಯಿಸಿದ್ದಾರೆ ಎಂದು ‘ದಿ ಕ್ಯಾರವಾನ್‌’ ವೆಬ್‌ಸೈಟ್‌ ವರದಿ ಮಾಡಿದೆ.

‘ಎಚ್‌.ಬಿ. ಲೋಯ ಅವರ ಮಗ ಅನುಜ್‌ ಬಹಳ ಚಿಕ್ಕವನು ಮತ್ತು ಆತನ ಮೇಲೆ ಒತ್ತಡ ಇರುವ ಸಾಧ್ಯತೆ ಇದೆ’ ಎಂದು ಶ್ರೀನಿವಾಸ್‌ ಹೇಳಿದ್ದಾರೆ. ತಮ್ಮ ತಂದೆಯದ್ದು ಸಹಜ ಸಾವು. ಸಾವಿನ ಬಗ್ಗೆ ಕುಟುಂಬಕ್ಕೆ ಯಾವುದೇ ಅನುಮಾನ ಇಲ್ಲ ಎಂದು ಅನುಜ್‌ (21) ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

‘ಅನುಜ್‌ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೂ ತನಿಖೆ ನಡೆಯುವುದು ಅಗತ್ಯ. ಲೋಯ ಕುಟುಂಬ ಈಗ ಎಲ್ಲಿ ನೆಲೆಸಿದೆ ಎಂಬುದು ತಮಗೆ ಗೊತ್ತಿಲ್ಲ’ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

‘ಸಾವಿನ ಬಗ್ಗೆ ತನಿಖೆ ನಡೆಯಲೇಬೇಕು. ಸಂಬಂಧಿಕನಾಗಿ ಮಾತ್ರವಲ್ಲ, ಈ ದೇಶದ ಪ್ರಜೆಯಾಗಿ ಅದು ನನ್ನ ಆಗ್ರಹ. ಸುಪ್ರೀಂ ಕೋರ್ಟ್‌ನಲ್ಲಿ ಆರಂಭ ಆಗಿರುವ ವಿಚಾರಣೆ ಮುಂದುವರಿಯಬೇಕು’ ಎಂದು ಶ್ರೀನಿವಾಸ್‌ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠದಲ್ಲಿ ಲೋಯ ಸಾವಿನ ಪ‍್ರಕರಣವು ಮಂಗಳವಾರ ವಿಚಾರಣೆಗೆ ಬರಲಿದೆ.

ಕುಟುಂಬದ ಮೇಲೆ ಇರುವ ಒತ್ತಡಗಳೇನು ಎಂಬ ಪ್ರಶ್ನೆಗೆ ‘ಅನುಜ್‌ ಅಜ್ಜನಿಗೆ ಈಗ 85 ವರ್ಷ. ಅನುಜ್‌ಗೆ ತಾಯಿ ಇದ್ದಾಳೆ. ಲೋಯ ಮಗಳಿಗೆ ಮದುವೆ ಮಾಡಬೇಕಿದೆ. ಈ ಎಲ್ಲವೂ ಒತ್ತಡಕ್ಕೆ ಕಾರಣವಾಗಿರಬಹುದು’ ಎಂದು ಶ್ರೀನಿವಾಸ್‌ ಹೇಳಿದ್ದಾಗಿ ‘ದ ಕ್ಯಾರವಾನ್‌’ ವರದಿಯಲ್ಲಿದೆ.

ಲೋಯ ಅವರ ಗೆಳೆಯ ಮತ್ತು ಅವರು ವಕೀಲಿ ವೃತ್ತಿ ಮಾಡುತ್ತಿದ್ದಾಗ ಸಹೋದ್ಯೋಗಿಯಾಗಿದ್ದ ಬಲವಂತ ಜಾಧವ್‌ ಕೂಡ ‘ಕುಟುಂಬದ ಮೇಲೆ ಒತ್ತಡ ಇದೆ’ ಎಂದು ಹೇಳಿದ್ದಾಗಿ ‘ದಿ ಕ್ಯಾರವಾನ್‌’ ವರದಿ ಹೇಳಿದೆ. ‘ನನಗೆ ಈ ಕುಟುಂಬ ದಶಕಗಳಿಂದ ಗೊತ್ತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ರಕ್ಷಿಸುವುದಕ್ಕಾಗಿ ರಾಜಕೀಯ ಒತ್ತಡ ಹೇರಿ ಕುಟುಂಬವನ್ನು ಸುಮ್ಮನಿರಿಸಲಾಗಿದೆ’ ಎಂದು ಜಾಧವ್‌ ಹೇಳಿದ್ದಾರೆ.

ಲೋಯ ಸಾವಿನ ಬಗ್ಗೆ ಕುಟುಂಬದ ಸದಸ್ಯರಿಗೆ ಆರಂಭದಲ್ಲಿ ಅನುಮಾನ ಇತ್ತು. ಮಾಧ್ಯಮದಲ್ಲಿ ಇದು ದೊಡ್ಡ ಸುದ್ದಿಯಾದ ಬಳಿಕ ಅವರು ಸುಮ್ಮನಾಗಿದ್ದಾರೆ. ಈಗ ಅನುಮಾನ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿರುವುದು ಆಘಾತಕರ’ ಎಂದು ಜಾಧವ್‌ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಸೂಕ್ಷ್ಮ ಪ್ರಕರಣಗಳ  ವಿಚಾರಣೆಯನ್ನು ಕಿರಿಯ ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುತ್ತಾರೆ ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಆರೋಪಿಸಿದ ಬೆನ್ನಿಗೇ ಅನುಜ್‌ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಈ ವಿಚಾರವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಜಾಧವ್‌ ಹೇಳಿದ್ದಾರೆ.

2014 ಡಿಸೆಂಬರ್‌ನಲ್ಲಿ ಲೋಯ ಅವರು ನಾಗ್ಪುರದಲ್ಲಿ ಮೃತಪಟ್ಟರು. ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣವನ್ನು ಆ ಸಂದರ್ಭದಲ್ಲಿ ಅವರು ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT