ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೋವಿ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ’

Last Updated 16 ಜನವರಿ 2018, 8:44 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಭೋವಿ (ವಡ್ಡರ) ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಂಘಟಿತರಾಗಬೇಕು. ಸಂಸ್ಕಾರವಂತರಾಗಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು’ ಎಂದು ಸಮಾಜದ ರಾಜ್ಯ ಮುಖಂಡ ಅಶೋಕ ಲಿಂಬಾವಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಭೋವಿ (ವಡ್ಡರ) ಸೋಶಿಯಲ್ ವೆಲ್ಫೇರ್ ಸೊಸೈಟಿ, ಶಿವಯೋಗಿ ಸಿದ್ದರಾಮೇಶ್ವರ 846ನೇ ಜಯಂತ್ಯುತ್ಸವ ಸಮಿತಿ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಬಾಂಧವರು ಸ್ವಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಭೋವಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿದ್ದು ಖಂಡನೀಯ. ಸಮಾಜ ಬಾಂಧವರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು’ ಎಂದರು.

ಚಿತ್ರದುರ್ಗ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನೇಗಿನಹಾಳ ಗುರುಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸಮಾಜದ ಯುವಕರು ಶ್ರಮಿಸಬೇಕಾಗಿದೆ.

ಕಿತ್ತೂರು ಚನ್ನಮ್ಮ ಪ್ರಾಧಿಕಾರದವರು ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಸ್ಮರಿಸುವಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಬಲಗೈಬಂಟನಾದ ಬೆಳವಡಿ ವಡ್ಡರ ಯಲ್ಲಣ್ಣನನ್ನು ಸ್ಮರಿಸಬೇಕು. ಬೆಳವಡಿಯ ಶಬ್ದವೇಧಿಯ ಯಲ್ಲಣ್ಣ ಹೆಸರಿನಲ್ಲಿ ಒಂದು ಪಾರ್ಕ್‌ ಮಾಡಿ ಸಂಶೋಧನೆ ಕೈಗೊಳ್ಳಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ಜಾರಿಗೆ ತರಬಾರದು. ತಂದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‌ಮುಖಂಡರಾದ ಜಗದೀಶ ಮೆಟಗುಡ್ಡ ಮಾತನಾಡಿದರು. ಬಿಜೆಪಿ ಮಂಡಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಶಾಂತವೀರ ಕುಡಸೋಮನ್ನವರ, ಎಲ್.ಬಿ. ಬಂಡಿವಡ್ಡರ, ಅರವಿಂದ ಕಲಕುಟಕರ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಬಂಡಿವಡ್ಡರ, ಭೋವಿ ಸಮಾಜದ ಹಿರಿಯರಾದ ಕಲ್ಲೋಳಪ್ಪ ಮಮದಾಪುರ, ಲೋಕೇಶ ಬಂಡಿವಡ್ಡರ ಇದ್ದರು.

ಚನ್ನಮ್ಮ ವೃತ್ತದಿಂದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ಸಾರೋಟಿನ ಮೆರವಣಿಗೆ, ಸುಮಂಗಲೆಯರ ಪೂರ್ಣ ಕುಂಭ, ಅರತಿ, ವಾದ್ಯಮೇಳ ನಡೆಯಿತು. ಎನ್.ಎಸ್. ಬೂದಿಹಾಳ ನಿರೂಪಿಸಿದರು. ವಕೀಲ ಎಫ್.ಎಸ್. ಸಿದ್ದನಗೌಡ್ರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT