ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋ ರಾತ್ರಿ ‍ಕೆಂಪೇಗೌಡ ಪ್ರತಿಮೆ ಉದ್ಘಾಟನೆ

Last Updated 16 ಜನವರಿ 2018, 9:50 IST
ಅಕ್ಷರ ಗಾತ್ರ

ಬಂಗಾರಪೇಟೆ: ತಡೆಯಾಜ್ಞೆ ಉಲ್ಲಂಘಿಸಿ ರಾತ್ರೋ ರಾತ್ರಿ ಪಟ್ಟಣದ ಚೆಕ್‌ಪೋಸ್ಟ್‌ ಬಳಿ ಇರುವ ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿ, ಮಾಲಾರ್ಪಣೆ ಮಾಡಲಾಗಿದೆ. ಶಾಸಕರ ಬೆಂಬಲಿಗರೇ ಪ್ರತಿಮೆ ಉದ್ಘಾಟಿಸಿದ್ದಾರೆ ಎನ್ನುವ ಮಾತುಗಳು ನಗರದಲ್ಲಿ ವ್ಯಾಪಕವಾಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಮಾತನಾಡಲು ಯಾರೂ ಮುಂದೆ ಬರುತ್ತಿಲ್ಲ.

ಕಳೆದ ಕೆಂಪೇಗೌಡ ಜಯಂತಿ ಸಂದರ್ಭ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಪುರಸಭೆ ಸಮ್ಮತಿಯಂತೆ ಪ್ರತಿಮೆ ಅನಾವರಣ ಮಾಡಲು ಸಿದ್ಧತೆ ನಡೆಸಿದ್ದರು. ಪ್ರತಿಮೆ ಅನಾವರಣಗೊಳಿಸದಂತೆ ಜಿಲ್ಲಾಡಳಿತ ತಡೆಯಾಜ್ಞೆ ನೀಡಿತ್ತು.

ರಾಷ್ಟ್ರೀಯ ನಾಯಕರ ಪ್ರತಿಮೆ ಯನ್ನು ಸರ್ಕಾರದ ಸಮ್ಮತಿಯೊಂದಿಗೆ ಅನಾವರಣ ಗೊಳಿಸಲು ಅವಕಾಶ ವಿದೆ. ಯಾವುದೇ ಕಾರಣಕ್ಕೂ ಸ್ಥಳೀಯ ನಾಯಕರು ಪ್ರತಿಮೆ ಅನಾವರಣಗೊಳಿಸಲು ಅವಕಾಶವಿಲ್ಲ. ಕೆಂಪೇಗೌಡ ಅವರ ಪ್ರತಿಮೆ ಉದ್ಘಾಟನೆ ಮಾಡಬಾರದು ಎಂದು ಸೂಚಿಸಿತ್ತು. ಪ್ರತಿಮೆ ಸುತ್ತ ಕಂಬಗಳನ್ನು ನಿಲ್ಲಿಸಿ ಬಟ್ಟೆ ಸುತ್ತಲಾಗಿತ್ತು.

‘ಜ.25ರಂದು ಪ್ರತಿಮೆ ಅನಾವರಣಗೊಳಿಸಲಾಗುವುದು. ಚೆಕ್‌ಪೋಸ್ಟ್ ಬಳಿಯಿಂದ ಸಂತೆ ಗೇಟ್ ವರೆಗಿನ ರಸ್ತೆಗೆ ಕೆಂಪೇಗೌಡ ರಸ್ತೆ ಎಂದು ನಾಮಕರಣ ಮಾಡಲಾಗುವುದು’ ಎಂದು ಶಾಸಕರು ಇತ್ತೀಚೆಗೆ ತಿಳಿಸಿದ್ದರು.

ರಾತ್ರಿ ವೇಳೆ ಯಾರಿಗೂ ತಿಳಿಸದಂತೆ ಪ್ರತಿಮೆ ಉದ್ಘಾಟನೆ ಮಾಡಿರುವುದಕ್ಕೆ ಒಕ್ಕಲಿಗರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ‘ಎಲ್ಲರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಪ್ರತಿಮೆ ಉದ್ಘಾಟನೆಯಾಗಬೇಕು ಎನ್ನುವುದು ಸಂಘದ ನಿಲುವಾಗಿದೆ. ರಸ್ತೆ ಮಧ್ಯೆ ಪ್ರತಿಮೆ ಅನಾವರಣ ಮಾಡುವುದು ಬೇಡ. ಪ್ರತ್ಯೇಕ ಸ್ಥಳದಲ್ಲಿ ಅಧಿಕೃತವಾಗಿ ಪ್ರತಿಮೆ ಅನಾವರಣಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಗೆ ಮನವಿ ನೀಡುತ್ತೇವೆ. ಈ ಬಗ್ಗೆ  ಸಂಘ ನಿರ್ಣಯ ಕೈಗೊಂಡಿದೆ’ ಎಂದು ಸಂಘದ ಸದಸ್ಯ ಮಾರ್ಕಂಡೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT