ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಿ ಕಾಳುಮೆಣಸು ಸಂಪನ್ನ ಕೃಷಿ

Last Updated 17 ಜನವರಿ 2018, 5:02 IST
ಅಕ್ಷರ ಗಾತ್ರ

ರೈತ ಜಗದೀಶ ರೈ ಅವರು ಪುತ್ತೂರು ತಾಲ್ಲೂಕಿನಿಂದ ಕೃಷಿಯ ಜಾಡು ಹಿಡಿದು ಬೆಳ್ತಂಗಡಿ ತಾಲ್ಲೂಕಿನ ಬಳಂಜ ಗ್ರಾಮಕ್ಕೆ ಬಂದವರು. ಹತ್ತನೆಯ ತರಗತಿ ಮುಗಿಸಿದ ಬಳಿಕ ಅವರು ಬೇರೆ ನೌಕರಿಯ ಬೆನ್ನು ಹತ್ತಿ ಪೇಟೆಗೆ ಸೇರಲಿಲ್ಲ. ಅಡಿಕೆ ಮತ್ತು ತೆಂಗಿನ ಕೃಷಿಯ ಜೊತೆಗೆ ಕೋಕೋ, ಬಾಳೆ ಅಲ್ಲದೆ ರಬ್ಬರ್ ವ್ಯವಸಾಯದವರೆಗೆ ತಮ್ಮ ಮೂರು ಎಕರೆ ಜಾಗದಲ್ಲಿ ತೊಡಗಿಕೊಂಡವರು. ಆಗ ಎಲ್ಲ ಅಡಿಕೆ ಮರಗಳಿಗೂ ಕರಿಮುಂಡ ತಳಿಯ ಕಾಳುಮೆಣಸು ಬಳ್ಳಿಯನ್ನು ನೆಟ್ಟು, ಸಾಕಿ ಉತ್ತಮ ಫಸಲನ್ನೂ ಪಡೆಯುತ್ತಿದ್ದರು. ಪ್ರತ್ಯೇಕವಾಗಿ ನೀರು ಮತ್ತು ಗೊಬ್ಬರ ಪೂರೈಸುವ ಅಗತ್ಯವಿಲ್ಲದೆ ಅಡಿಕೆ ಮರದ ಸಹವರ್ತಿಯಾಗಿ ಬೆಳೆಯುವ ಮೆಣಸಿನ ಬೆಳೆ ರೈ ಅವರ ಕೈ ಹಿಡಿಯಿತು. ಅದರ ಯೋಗ್ಯವಾದ ಧಾರಣೆಯಿಂದಾಗಿ ಸಾಕಷ್ಟು ಲಾಭವೂ ಆಗುತ್ತಿತ್ತು.

ಆದರೆ, ಸೊರಗು ರೋಗದ ದೆಸೆಯಿಂದಾಗಿ ಮೆಣಸಿನ ಬಳ್ಳಿಗಳೆಲ್ಲವೂ ಒಣಗಿ ಬರಡಾದಾಗ ಗಣನೀಯವಾದ ಆದಾಯವೊಂದು ಬರಿದಾಗಿತ್ತು. ಮತ್ತೆ ಮತ್ತೆ ಬಳ್ಳಿ ನೆಡಲು ಯತ್ನಿಸಿದಾಗಲೂ ರೋಗದ ಸೋಂಕು ಕಾಡಿತು. ಹತಾಶರಾದ ಅವರಿಗೆ ಯಾರೋ ಕಸಿ ಕಟ್ಟಿದ ಕಾಳುಮೆಣಸಿನ ಬಳ್ಳಿಗಳನ್ನು ನೆಡುವಂತೆ ಸಲಹೆ ನೀಡಿದರು. ಕಾಡಿನಲ್ಲಿ ಸಹಜವಾಗಿ ಬೆಳೆಯುವ ಕಸಿ ಹಿಪ್ಪಲಿ ಗಿಡಕ್ಕೆ ಸೋಂಕು ಬಾಧೆಯಾಗದ ರೋಗ ನಿರೋಧಕ ಗುಣವಿದೆ. ಈ ಗಿಡದ ಕೊಂಬೆಗಳಿಂದ ಸುಲಭವಾಗಿ ತಯಾರಿಸಿದ ಗಿಡದ ಶಿರೋಭಾಗವನ್ನು ಕತ್ತರಿಸಿ, ಸೀಳಿ, ಅದರಲ್ಲಿ ಮೆಣಸಿನ ಬಳ್ಳಿಯನ್ನಿರಿಸಿ ಕಸಿ ಕಟ್ಟಿದರೆ ಮಾತೃಗಿಡದ ಪ್ರಾಕೃತಿಕ ಗುಣದಿಂದಾಗಿ ಸೊರಗು ರೋಗವನ್ನು ದೂರವಿಡುತ್ತದೆ ಎಂದು ಗೊತ್ತಾಯಿತು.

ಪ್ರಾಯೋಗಿಕ ಕೃಷಿಗಾಗಿ ನಾಲ್ಕು ವರ್ಷಗಳ ಹಿಂದೆ ರೈಗಳು ತಂದು ನೆಟ್ಟದ್ದು 400 ಬಳ್ಳಿಗಳು. ಒಂದು ಬಳ್ಳಿಗೆ ₹35 ಖರ್ಚಾಗಿದೆ. ಮಳೆಗಾಲದ ಆರ್ದ್ರಾ ನಕ್ಷತ್ರದ ಸೋನೆ ಮಳೆಗೆ ನಾಟಿ ಮಾಡಿದರೆ ಮೆಣಸಿನ ಗಿಡ ಬೇಗನೆ ಬೇರು ಕೊಡುತ್ತದೆ. ಹೀಗಾಗಿ ನನಗೆ ಒಂದು ಗಿಡ ಕೂಡ ಸಾಯದೆ ಚೆನ್ನಾಗಿ ಬೆಳೆಯಿತು ಎನ್ನುತ್ತಾರೆ ರೈಗಳು. ಕಸಿ ಜಾತಿಗೆ ಸೊರಗು ರೋಗ ಬರುವುದಿಲ್ಲ ಎಂಬುದಕ್ಕೆ ಅವರ ತೋಟದಲ್ಲಿ ನೆಟ್ಟ ಮರುವರ್ಷದಿಂದಲೇ ಫಸಲು ಕೊಡುತ್ತಿರುವ ಬಳ್ಳಿಗಳೇ ಸಾಕ್ಷಿಯಾಗಿವೆ. ವರ್ಷದಿಂದ ವರ್ಷಕ್ಕೆ ಫಸಲು ಹೆಚ್ಚುತ್ತ ಬಂದಿದೆ. ಕಳೆದ ಸಾಲಿನಲ್ಲಿ ಒಂದು ಕ್ವಿಂಟಾಲು ಮೆಣಸು ಮಾರಾಟಕ್ಕೆ ಸಿಕ್ಕಿದೆ.

ರೋಗ ಬರುವುದಿಲ್ಲ ಎಂದು ಕಸಿ ಬಳ್ಳಿಯ ಬಗೆಗೆ ಅಸಡ್ಡೆ ವಹಿಸಬಾರದು ಎಂಬುದು ರೈಗಳ ಕಿವಿಮಾತು. ಕಸಿಗೆ ಬಳಸಿರುವ ಮೂಲ ಗಿಡದ ತಳಭಾಗದ ಬೇರುಗಳು ಮಾತ್ರ ಮಣ್ಣಿನೊಳಗೆ ಹೋಗಬೇಕು. ಆದರೆ ನಾಟಿ ಮಾಡಿದ ಮೇಲುಭಾಗದಲ್ಲಿ ಸುಮಾರು ಒಂದು ಅಡಿ ಎತ್ತರದವರೆಗೂ ಕಾಡು ಹಿಪ್ಪಲಿಯ ಮಾತೃಗಿಡವಿದ್ದು ಇದರಿಂದ ಉದ್ದವಾಗಿ ಬೇರುಗಳು ಹೊರಟು ಕೆಳಗಿಳಿದು ಮಣ್ಣಿನೊಳಗೆ ಸೇರದಂತೆ ಕತ್ತರಿಸಿ ತೆಗೆಯುತ್ತ ಇರಬೇಕು. ಈ ಬೇರು ಮಣ್ಣಿನೊಳಗಿಳಿದರೆ ಗಿಡಕ್ಕೆ ಅದರಿಂದಲೇ ಸೋಂಕು ತಗಲುತ್ತದೆ, ಬಳ್ಳಿ ಸಾಯುತ್ತದೆ.

ಅಲ್ಲದೆ ಮೂಲದಲ್ಲಿರುವ ಹಿಪ್ಪಲಿ ಗಿಡದಲ್ಲಿ ಚಿಗುರುಗಳು ಬಂದರೆ ಚಿವುಟಿ ತೆಗೆಯಬೇಕು. ಹಾಗೆಯೇ ಬಿಟ್ಟರೆ ಅದು ದೊಡ್ಡದಾಗಿ ಬೆಳೆದು, ಮೆಣಸಿನ ಬಳ್ಳಿಯ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಇದರ ಕೊಂಬೆಯನ್ನು ಕತ್ತರಿಸಿ ತೆಗೆದು ಪಾಲಿಥಿನ್ ತೊಟ್ಟೆಯಲ್ಲಿ ನೆಟ್ಟು ಆರೈಕೆ ಮಾಡಿದರೆ ಬದುಕುತ್ತದೆ. ಅದಕ್ಕೆ ನಾವೇ ಮೆಣಸಿನ ಬಳ್ಳಿಯ ಕಸಿ ಕಟ್ಟಬಹುದು. ನೆಟ್ಟ ಗಿಡದಲ್ಲಿ ಕೊಂಬೆ ಚಿಗುರುತ್ತಿದೆಯೇ ಎಂಬುದು ಆಗಾಗ ಗಮನಿಸುತ್ತಲೇ ಇರಬೇಕಾದ ಮಹತ್ತ್ವದ ಅಂಶ ಎನ್ನುವುದು ರೈಗಳ ಅನುಭವದ ಮಾತು.

ಪಾರಂಪರಿಕವಾದ ಮೆಣಸಿನ ಬಳ್ಳಿಯನ್ನು ಕಾಡಿನ ಮರಗಿಡಗಳಿಗೂ ನೆಡಬಹುದು. ಕಡು ಬಿಸಿಲಿಗೂ ನೀರಿನ ಬಯಕೆಯಿಲ್ಲದೆ ಸೊಂಪಾಗಿ ಬೆಳೆಯುತ್ತದೆ. ಆದರೆ ಕಸಿ ಗಿಡ ಹಾಗಲ್ಲ, ಬೇಸಿಗೆಯಲ್ಲಿ ನೀರು ಸಿಗದಿದ್ದರೆ ಒಣಗಿ ಹೋಗುತ್ತದೆ. ಹೀಗಾಗಿ ಇದು ಅಡಿಕೆ ತೋಟಕ್ಕೆ ಮಾತ್ರ ಸೂಕ್ತವಾದದ್ದು ವಿನಹ ಕಾಡುಗಳಲ್ಲಿ ಕೃಷಿ ಮಾಡಲು ಯೋಗ್ಯವಾದುದಲ್ಲ ಎನ್ನುತ್ತಾರೆ.

ಹೆಚ್ಚಾಗಿ ಈ ಕಸಿಗೆ ಪಣಿಯೂರು ತಳಿಯನ್ನೇ ಆರಿಸುವ ಕಾರಣ ವರ್ಷವೂ ಫಸಲು ಸಿಗುತ್ತದೆ. ಒಂದು ಅಡಿಕೆ ಮರದ ಬಳ್ಳಿಯಿಂದ ಒಂದು ಕೆ.ಜಿ. ತನಕ ಎಕರೆಗೆ ಐದು ಕ್ವಿಂಟಾಲು ಫಸಲು ಕೊಯ್ಯಲು ಸಾಧ್ಯವಿದೆ. ಅಡಿಕೆ ಮರಕ್ಕೆ ರಸಗೊಬ್ಬರ ಹಾಕುವಾಗ ಈ ಬಳ್ಳಿಯ ಬೇರುಗಳಿಗೆ ನೇರವಾಗಿ ತಗುಲದಂತೆ ಎಚ್ಚರ ವಹಿಸಬೇಕು. ಬೇರುಗಳಿಗೆ ಸ್ವಲ್ಪ ರಾಸಾಯನಿಕ ತಗಲಿದರೂ ಬಳ್ಳಿ ಒಣಗುತ್ತದೆ ಎಂಬುದನ್ನು ಮರೆಯಬಾರದು ಎನ್ನುವ ರೈಗಳಲ್ಲಿ ಹಸನಾದ ಹೈನುಗಾರಿಕೆಯಿದೆ. ಸೆಗಣಿ ಗೊಬ್ಬರ ಧಾರಾಳವಾಗಿ ಇಫ್ಕೋ ರಸಗೊಬ್ಬರವನ್ನು ಮಿತ ಪ್ರಮಾಣದಲ್ಲಿ ಕೃಷಿಗೆ ಉಪಯೋಗಿಸುತ್ತಾರೆ. ಇದಲ್ಲದೆ ಒಣಭೂಮಿಯಲ್ಲಿ ಉಳ್ಳಾಲ ಭಾಸ್ಕರ ತಳಿಯ ಗೇರು ಕೃಷಿಯನ್ನು ಮಾಡಿ ರೈಗಳು ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಜಗದೀಶ ರೈ ಸಂಕರ್ಪಕ್ಕೆ: 97418 15301.

ಪ. ರಾಮಕೃಷ್ಣ ಶಾಸ್ತ್ರಿ
ಅಂಚೆ ತೆಂಕಕಾರಂದೂರು ೫೭೪೨೧೭
ಬೆಳ್ತಂಗಡಿ ತಾಲೂಕು ದ.ಕ.
೯೪೮೩೩೫೨೩೦೬

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT