ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರ ಮತ ನಿರ್ಣಾಯಕ

Last Updated 19 ಜನವರಿ 2018, 8:48 IST
ಅಕ್ಷರ ಗಾತ್ರ

ಕೋಲಾರ: ‘ಯುವ ಮತದಾರರು ಕಡ್ಡಾಯವಾಗಿ ಮತ ಚಲಾವಣೆ ಮಾಡಿದರೆ ಮಾತ್ರ ಸೂಕ್ತ ಜನಪ್ರತಿನಿಧಿಗಳ ಆಯ್ಕೆ ಸಾಧ್ಯ’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರದಲ್ಲಿ ಶೇ 60ರಷ್ಟು ಯುವ ಪೀಳಿಗೆಯಿದೆ. ಸರ್ಕಾರದ ಆಯ್ಕೆಯಲ್ಲಿ ಯುವ ಮತದಾರರ ಮತ ನಿರ್ಣಾಯಕ. ಯುವ ಪೀಳಿಗೆಯಿಂದಲೇ ಸಂಸ್ಕೃತಿ, ಸಂಸ್ಕಾರ ನಿರ್ಧಾರಗೊಳ್ಳುತ್ತದೆ’
ಎಂದರು.

ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡರೆ ಮಾತ್ರ ಯುವ ಮತದಾರರ ಆಶಯಗಳು ಈಡೇರಿ, ದೇಶ ಕಟ್ಟಲು ಸಹಕಾರಿಯಾಗುತ್ತದೆ. ಮತದಾನ ಕಡ್ಡಾಯವಾಗಿದ್ದರೂ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಇಳಿಕೆಯಾಗುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ಯಾವುದೇ ವಿಚಾರವಾಗಿ ಮಾತನಾಡುವ ಹಕ್ಕು ಪಡೆದುಕೊಳ್ಳುತ್ತೇವೆ. ಮತ ಚಲಾಯಿಸದೆ ಅಲ್ಲಿ ಇಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ಮತ ಚಲಾಯಿಸುವುದರ ಜತೆಗೆ ಇತರರಿಗೂ ಮತದಾನದ ಅರಿವು ಮೂಡಿಸಬೇಕು. ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಕಡ್ಡಾಯ ಮತದಾನದ ಘೋಷಣೆ ಮೊಳಗಬೇಕು. ಕಲಾವಿದರು ಸಹ ಜನರಲ್ಲಿ ಸಾಂಸ್ಕೃತಿಕವಾಗಿ ಮತದಾನದ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಭಾಗವಹಿಸುವಿಕೆ ಮುಖ್ಯ: ‘ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಲಿದ್ದು, ಯುವಕ ಯುವತಿಯಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಸೋಲು ಗೆಲುವಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಹೇಳಿದರು.

ಯುವಕ ಯುವತಿಯರು, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಮತದಾರರ ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.

ಸ್ಪರ್ಧೆ ವಿಜೇತರು: ಸ್ಪರ್ಧೆಯಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೋಲಾರದ ಎಇಎಸ್ ಪಬ್ಲಿಕ್ ಶಾಲೆಯ ರಂಜಿತ್‌ಕುಮಾರ್‌ ಪ್ರಥಮ, ಮಧು ದ್ವಿತೀಯ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ವಿನುತಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಬಹುಮಾ ವಿತರಿಸಲಾಗುತ್ತದೆ.

ಹಳ್ಳಿನಾಡು ಸಾಂಸ್ಕೃತಿಕ ಜಾನಪದ ಕಲಾ ಸಂಘದ ಅಧ್ಯಕ್ಷ ಕೃಷ್ಣ, ಈ ನೆಲ ಈ ಜಲ ಸಂಸ್ಥೆ ಅಧ್ಯಕ್ಷ ವೆಂಕಟಾಚಲಪತಿ, ಜನಪದ ಕಲಾವಿದ ಕೃಷ್ಣಮೂರ್ತಿ, ಶಿಕ್ಷಕ ಕಾಳಿದಾಸ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT