ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಇಲಾಖೆ: ನೌಕರರ ಒತ್ತಡ ಹೆಚ್ಚಳ

Last Updated 19 ಜನವರಿ 2018, 9:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕಂದಾಯ ಇಲಾಖೆಯಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿಲ್ಲ. ಇದರಿಂದಾಗಿ ಈಗ ಇರುವ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್‌ ಹೇಳಿದರು.

ಅವರು ಗುರುವಾರ ನಗರದಲ್ಲಿ ರಾಜ್ಯ ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಹಾಗೂ ಗ್ರಾಮ ಸಹಾಯಕರ ಸಂಘದ ವತಿಯಿಂದ ನಡೆದ ದಿನಚರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

60ರ ದಶಕದಲ್ಲಿ ಕಂದಾಯ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು ಈಗಲೂ ಇವೆ. ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಕಂದಾಯ ಇಲಾಖೆಗೆ ವಹಿಸಲಾಗುತ್ತಿದೆ. ಹಲವಾರು ವರ್ಷಗಳಿಂದಲೂ ಕಂದಾಯ ಇಲಾಖೆ ನೌಕರರಿಗೆ ಬಡ್ತಿಗಳನ್ನೇ ನೀಡಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಗ್ರಾಮ ಸಹಾಯಕರ ಕಾಯಂಗೊಳಿಸುವ ಬೇಡಿಕೆಯು ಭರವಸೆಯಾಗಿಯೇ ಉಳಿದಿದೆ. ಸರ್ಕಾರದ ಉನ್ನತ ಹುದ್ದೆಯಲ್ಲಿನ ಅಧಿಕಾರಿಗಳಿಗೆ ಪ್ರತಿ ವರ್ಷ ಡಿಸೆಂಬರ್‌ ಬರುತ್ತಿದ್ದಂತೆಯೇ ಬಡ್ತಿ ದೊರೆಯುತ್ತದೆ. ಆದರೆ ಸಿ.ಗ್ರೂಪ್‌ ನೌಕರರಿಗೆ ಇದುವರೆವಿಗೂ ಯಾವುದೆ ಬಡ್ತಿಗಳೂ ದೊರೆಯದಾಗಿವೆ. ಗ್ರಾಮ ಸಹಾಯಕರಿಗೆ ಖಾಯಂಗೊಳಿಸದಿದ್ದರೆ ಮತ್ತೆ ಹೋರಾಟ ಅನಿವಾರ್ಯವಾಗಲಿದೆ ಎಂದರು.

ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಮೈಕಲ್‌ ಬೆಂಜಮಿನ್‌ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬಡ್ತಿ ಹೊಂದುವ ಹಾಗೂ ಹೊಸದಾಗಿ ನೇಮಕವಾಗುವ ಮತ್ತು ಸರ್ಕಾರದ ಹೊಸ ನಿಯಮಗಳು ಜಾರಿಗೆ ಬಂದಾಗ ತರಬೇತಿ ನೀಡಲು ಜಿಲ್ಲಾ ಮಟ್ಟದಲ್ಲಿ ಕಂದಾಯ ಇಲಾಖೆಗೆ ಪ್ರತ್ಯೇಕ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ನೌಕರರಿಂದ ಮಾರ್ಗದರ್ಶನ ನೀಡುವಂತಾಗಬೇಕು ಎಂದರು.

ಇಡೀ ಗ್ರಾಮಾಂತರ ಜಿಲ್ಲೆಯಲ್ಲಿ 38,920 ಜನ ರೈತರ ಖಾತೆಗಳಿಗೆ ನೇರವಾಗಿ ಬೆಳೆಪರಿಹಾರದ ಹಣವನ್ನು ಜಮಾಮಾಡುವುದರಲ್ಲಿ ಕಂದಾಯ ಇಲಾಖೆ ನೌಕರರ ಶ್ರಮ ಹೆಚ್ಚಾಗಿದೆ. ಸರ್ವೆ ವಿಭಾಗದಲ್ಲಿ ಶೇ 61ರಷ್ಟು ಸಾಧನೆ ಮಾಡುವ ಮೂಲಕ ರೈತರಿಗೆ ನೆರವಾಗಿದೆ. ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿತರಿಸುವಲ್ಲಿ ಶೇ 100ರಷ್ಟು ಸಾಧನೆಯನ್ನು ಗ್ರಾಮಾಂತರ ಜಿಲ್ಲೆ ಮಾಡಿದೆ.

ಜಿಲ್ಲೆಯಲ್ಲಿ ₹ 1.33 ಲಕ್ಷ ಜನರಿಗೆ ವಿವಿಧ ಸಾಮಾಜಿಕ ಪಿಂಚಣಿ ಸೌಲಭ್ಯಗಳನ್ನು ಮಂಜೂರಾತಿ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕಂದಾಯ ಇಲಾಖೆಯ ನೌಕರರ ಕುಂದು–ಕೊರತೆಗಳನ್ನು ನಿವಾರಿಸಲು ವರ್ಷಕ್ಕೆ ಒಮ್ಮೆ ಸಭೆಗಳನ್ನು ನಡೆಸಬೇಕು ಎಂದು ಹೇಳಿದರು.

ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಉಪಾಧ್ಯಕ್ಷ ಡಿ.ದೀಪಕ್‌ ಮಾತನಾಡಿ, ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಬೂತ್‌ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇಷ್ಟದಾರು ಸಹ ಮತ್ತೆ ಗ್ರಾಮಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸುವಂತೆ ಮಾಡುವುದು ಸರಿಯಲ್ಲ. ವಾರ್ಷಿಕ ಆದಾಯ ಪ್ರಮಾಣವನ್ನು 15,000ಕ್ಕೆ ಮಿತಿಗೊಳಿಸಿ ಪ್ರಮಾಣ ಪತ್ರ ನೀಡಬೇಕು ಎಂದರೆ ಹೇಗೆ ಸಾಧ್ಯ. ಈ ನಿಯಮ ಸರಿಯಾಗಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್‌ ಕೆ.ವಿ.ರಾಜೀವಲೋಚನ, ದೊಡ್ಡಬಳ್ಳಾಪುರ ತಹಶೀಲ್ದಾರ್‌ ಬಿ.ಎ.ಮೋಹನ್‌, ದೇವನಹಳ್ಳಿ ತಹಶೀಲ್ದಾರ್‌ ಎಂ.ರಾಜಣ್ಣ, ನೆಲಮಂಗಲ ತಹಶೀಲ್ದಾರ್‌ ಎನ್‌.ರಮೇಶ್‌ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ನೌಕರರು ಹಾಜರಿದ್ದರು.

ಕಂದಾಯ ಇಲಾಖೆ ಉತ್ತಮ ಕೆಲಸ

ದಿನಚರಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಪಾಲಯ್ಯ, ರಾಜ್ಯದಲ್ಲೇ ಗ್ರಾಮಾಂತರ ಜಿಲ್ಲಾ ಕಂದಾಯ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸಿದೆ. ಸಕಾಲ, ಸರ್ವೆ ವಿಭಾಗದ ಸಾರ್ವಜನಿಕರ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಈ ಎಲ್ಲ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಯಾವುದೆ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ಪ್ರಾಯೋಗಿಕವಾಗಿ ಪರಿಶೀಲಿಸಲು ಗ್ರಾಮಾಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕಂದಾಯ ಇಲಾಖೆ ನೌಕರರಿಗೆ ಸದ್ಯದಲ್ಲೇ ಬಡ್ತಿ ನೀಡಲಾಗುವುದು. ಗ್ರಾಮ ಸಹಾಯಕರನ್ನು ಖಾಯಂಗೊಳಿಸಲು ಕಾನೂನು ಇಲಾಖೆ ಒಪ್ಪಿಗೆ ನೀಡಿದೆ. ಗ್ರಾಮಾಂತರ ಜಿಲ್ಲೆ ಚಿಕ್ಕದಾದರು ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT