ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹ 16 ಕೋಟಿ ವಿಮಾ ಮೊತ್ತ ವಾಪಸ್‌’

Last Updated 19 ಜನವರಿ 2018, 9:28 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಫಸಲ್‌ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆ ಬಾಬ್ತಿಗೆ ಜಿಲ್ಲೆಗೆ ಬಿಡುಗಡೆಯಾಗಿದ್ದ ₹ 32 ಕೋಟಿ ವಿಮಾ ಮೊತ್ತದ ಪೈಕಿ ₹ 16 ಕೋಟಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಯ ಲೋಪದಿಂದಾಗಿ ಹಣ ವಾಪಸಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೇಖಾ ಹುಲಿಯಪ್ಪಗೌಡ ಇಲ್ಲಿ ಗುರುವಾರ ದೂಷಿಸಿದರು.

‘2016–17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೆಂಗು, ಅಡಿಕೆ, ದಾಳಿಂಬೆ, ಟೊಮೆಟೊ ಮೊದಲಾದ ತೋಟಗಾರಿಕೆ ಬೆಳೆಗಳಿಗೆ ಸುಮಾರು 24,193 ಬೆಳೆಗಾರರು ವಿಮೆ ಮಾಡಿಸಿದ್ದಾರೆ. ಬೆಳೆ ನಷ್ಟವಾಗಿ 22,493 ಬೆಳೆಗಾರರು ವಿಮಾ ಮೊತ್ತ ಪಡೆಯಲು ಅರ್ಹರಾಗಿದ್ದಾರೆ. ಜಿಲ್ಲೆಗೆ ₹ 49.16 ಕೋಟಿ ವಿಮಾ ಮೊತ್ತ ಸಂದಾಯವಾಗಬೇಕಿದೆ. ಈ ಪೈಕಿ ₹ 32 ಕೋಟಿ ಬಿಡುಗಡೆ ಮಾಡಲಾಗಿದೆ, ಉಳಿಕೆ ₹ 17 ಕೋಟಿಯನ್ನು ಬಿಡುಗಡೆ ಮಾಡುವುದಾಗಿ ವಿಮಾ ಕಂಪನಿ ಹೇಳಿತ್ತು. ವಿಮಾ ಕಂಪನಿ ಬಿಡುಗಡೆ ಮಾಡಿದ್ದ ₹ 32 ಕೋಟಿ ಪೈಕಿ ₹16 ಕೋಟಿ ವಾಪಸ್‌ ಹೋಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಫಲಾನುಭವಿ ರೈತನ ಹೆಸರು ತಾಳೆಯಾಗುತ್ತಿಲ್ಲ ಮೊದಲಾದ ಕಾರಣದಿಂದಾಗಿ ಹಣ ವಾಪಸಾಗಿದೆ ಎಂದು ಅಧಿಕಾರಿಗಳು ಸಬೂಬು ನೀಡಿದ್ದಾರೆ. ಬಿಡುಗಡೆಯಾಗಿದ್ದ ಹಣವನ್ನು ಅರ್ಹ ರೈತರಿಗೆ ಪಾವತಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪಿಸಿದರು.

‘ಎಚ್‌.ತಿಮ್ಮಾಪುರದ ರೈತರ ಗುರುಸಿದ್ದಪ್ಪ ಅವರು ತೆಂಗು ಬೆಳೆಗೆ ವಿಮೆ ಕಂತು ಪಾವತಿಸಿದ್ದಾರೆ. ವಿಮಾ ಮೊತ್ತ ಪಡೆಯಲು ಅವರು ಅರ್ಹರಾಗಿದ್ದಾರೆ. ವಿಮಾ ಮೊತ್ತ ಅನುಮೋದನೆಯಾಗಿದೆ ಎಂದು ‘ಸಂರಕ್ಷಣೆ’ ತಂತ್ರಾಂಶದಲ್ಲಿ ನಮೂದಾಗಿದೆ. ಅವರ ಬ್ಯಾಂಕ್‌ ಖಾತೆ ಸಂಖ್ಯೆ, ತೋಟದ ಸರ್ವೆ ನಂ, ವಿಮಾ ಮೊತ್ತ ಎಲ್ಲ ತೋರಿಸುತ್ತಿದೆ. ಖಾತೆಗೆ ಹಣ ಜಮೆಯಾಗಿಲ್ಲ’ ಎಂದು ಹೇಳಿದರು.

‘ಕೃಷಿ ಬೆಳೆ ವಿಮೆಯಡಿ ಜಿಲ್ಲೆಯಲ್ಲಿ 11,920 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 1747 ಮಂದಿ ಕಡ್ಲೆ ಬೆಳೆಗೆ, 3875 ಮಂದಿ ಹುರುಳಿ ಬೆಳೆಗೆ, 6,272 ಮಂದಿ ಜೋಳದ ಬೆಳೆಗೆ ವಿಮೆ ಕಂತು ಪಾವತಿಸಿದ್ದಾರೆ. ರೈತರು ₹ 37.03 ಲಕ್ಷ ವಿಮೆ ಕಂತು ಪಾವತಿಸಿದ್ದಾರೆ. ₹ 24.26 ಕೋಟಿ ವಿಮಾ ಮೊತ್ತ ರೈತರಿಗೆ ಪಾವತಿಯಾಗಬೇಕಿದೆ’ ಎಂದರು.

‘ಕೃಷಿ ಬೆಳೆ ವಿಮೆಯಡಿ ಒಬ್ಬರಿಗೂ ವಿಮಾ ಮೊತ್ತ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ. ಬ್ಯಾಂಕಿನಲ್ಲಿ ವಿಚಾರಿಸಿದರೆ ವಿಮಾ ಮೊತ್ತ ಪಾವತಿಯಾಗಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ’ ಎಂದು ಹೇಳಿದರು.

‘ ಫಸಲ್‌ ಭಿಮಾ ಯೋಜನೆ ಕೇಂದ್ರ ಸರ್ಕಾರದ್ದು, ಇದನ್ನು ಅನುಷ್ಟಾನದ ಹೊಣೆ ರಾಜ್ಯ ಸರ್ಕಾರ ನಿರ್ವಹಿಸಬೇಕು. ರಾಜ್ಯ ಸರ್ಕಾರವು ಯೋಜನೆಯ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಆರೋಪಿಸಿದರು.

‘ ರೈತರು ಈಗ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸಲು ರೈತಸ ಸಭೆ ಕರೆಯಲಾಗಿದೆ. ಕಡೂರಿನ ಪ್ರವಾಸಿ ಮಂದಿರದಲ್ಲಿ ಇದೇ19ರಂದು ಮಧ್ಯಾಹ್ನ 3.30ಕ್ಕೆ ಸಭೆ ನಿಗದಿಯಾಗಿದೆ’ ಎಂದು ತಿಳಿಸಿದರು. ರೈತರಾದ ಟಿ.ಮೂರ್ತಪ್ಪ, ರಾಮಪ್ಪ, ರಮೇಶ್‌, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT