ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 12 ಜಿಲ್ಲೆಗಳಲ್ಲಿ ಶಾಲೆಬಿಟ್ಟ ಬಾಲಕಿಯರಿಗೆ ವಿಶೇಷ ಯೋಜನೆ

ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಅಭಿವೃದ್ಧಿಯ ಉದ್ದೇಶ
Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಶಾಲೆ ತೊರೆದ, 11–14 ವರ್ಷದ ಬಾಲಕಿಯರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ‘ಹದಿಹರೆಯದ ಹೆಣ್ಣುಮಕ್ಕಳ ಯೋಜನೆ–ಎಸ್‌ಎಜಿ’ ಅಡಿ ಕೊಪ್ಪಳ, ಯಾದಗಿರಿ ಮತ್ತು ಬಾಗಲಕೋಟೆ ಸೇರಿ ರಾಜ್ಯದ 12 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.

‘ಯೋಜನೆಗೆ ಆಯ್ಕೆಯಾಗಿರುವ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ, ಫಲಾನುಭವಿಗಳನ್ನು ಗುರುತಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೂಚನೆ ನೀಡಿದೆ. ಆಯ್ಕೆಯಾಗಿರುವ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸಬೇಕಾಗುತ್ತದೆ. ಸಮೀಕ್ಷೆ ನಡೆಸಲು ಅಗತ್ಯವಿರುವ ವಿದ್ಯಾರ್ಹತೆಯನ್ನು ಕಾರ್ಯಕರ್ತೆಯರು ಹೊಂದಿಲ್ಲದಿದ್ದರೆ, ಸರ್ಕಾರವೇ ಪ್ರತಿನಿಧಿಗಳನ್ನು ನೇಮಿಸಿ ಸಮೀಕ್ಷೆ ನಡೆಸಬೇಕಾಗುತ್ತದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘2010ರಿಂದ ಈವರೆಗೆ ದೇಶದ ಹಲವು ರಾಜ್ಯಗಳ 205 ಜಿಲ್ಲೆಗಳಲ್ಲಿ ಯೋಜನೆಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು. ಈಗ ಮತ್ತಷ್ಟು ಜಿಲ್ಲೆಗಳಿಗೆ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿತ್ತು. ದೇಶದ 30 ರಾಜ್ಯಗಳ ಒಟ್ಟು 303 ಜಿಲ್ಲೆಗಳು ಈಗ ಯೋಜನೆಗೆ ಆಯ್ಕೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.

ಹೀಗೆ ನಡೆಯಲಿದೆ ಸಮೀಕ್ಷೆ

* ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಿದ್ದಾರೆ

* ಪ್ರತಿ ಮನೆಗೂ ತೆರಳಿ, ಕಾರ್ಯಕರ್ತೆಯರು ಮಾಹಿತಿ ಸಂಗ್ರಹಿಸಲಿದ್ದಾರೆ. ಇದು ಒಂದು ಬಾರಿ ಮಾತ್ರ ನಡೆಯುವ ಸಮೀಕ್ಷೆ

* ಯೋಜನೆ ಅಡಿ ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ ಶಾಲೆ ತೊರೆದಿರುವ, ಅದೇ ಜಿಲ್ಲೆಗಳಲ್ಲಿ ಆರು ತಿಂಗಳಿಂದ ನೆಲೆಸಿರುವ ಮತ್ತು ಮುಂದೆಯೂ ನೆಲೆಸಲಿರುವ ಬಾಲಕಿಯರ ಮಾಹಿತಿಯನ್ನಷ್ಟೇ ಸಂಗ್ರಹಿಸಲಾಗುತ್ತದೆ

* ಬಾಲಕಿಯರ ವಯಸ್ಸು, ಆಧಾರ್ ವಿವರ, ಶೈಕ್ಷಣಿಕ ವಿವರ, ಶಾಲೆ ತೊರೆಯಲು ಕಾರಣಗಳನ್ನು ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುತ್ತದೆ

* ಅಂಗನವಾಡಿ ಕಾರ್ಯಕರ್ತೆಯರು ಕಲೆಹಾಕಿದ ಮಾಹಿತಿಯನ್ನು ಪರಿಶೀಲಿಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ

ಆಯ್ಕೆಯಾದ ಜಿಲ್ಲೆಗಳು

ಕೊಪ್ಪಳ, ಯಾದಗಿರಿ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಬೀದರ್, ಹಾವೇರಿ, ಚಿಕ್ಕಬಳ್ಳಾಪುರ, ಗದಗ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ

ಉದ್ದೇಶ

ವೈಯಕ್ತಿಕ ಸ್ವಚ್ಛತೆ ಮತ್ತು ‘ಸ್ಯಾನಿಟರಿ ಪ್ಯಾಡ್’ನ ಬಳಕೆ ಬಗ್ಗೆ ಶಾಲೆ ತೊರೆದ ಬಾಲಕಿಯರಲ್ಲಿ ಅರಿವು ಮೂಡಿಸುವುದು, ಅವರಲ್ಲಿನ ಅಪೌಷ್ಟಿಕತೆ ನಿವಾರಣೆ ಈ ಯೋಜನೆಯ ಮೂಲ ಉದ್ದೇಶ. ಇದರ ಜತೆಯಲ್ಲೇ ಅವರಿಗೆ ಔಪಚಾರಿಕ ಅಥವಾ ಅನೌಪಚಾರಿಕ ಶಿಕ್ಷಣ ನೀಡುವುದು ಈ ಯೋಜನೆಯ ಮತ್ತೊಂದು ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT