ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭೀಕರ ದಾಳಿ: ದಂಡೆ

Last Updated 21 ಜನವರಿ 2018, 10:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಾಹಿತ್ಯ ವಲಯ ಇಂದು ಹೆಚ್ಚು ಭಯಗ್ರಸ್ಥವಾಗಿದೆ. ಸ್ವತಂತ್ರ ವಿಚಾರಗಳನ್ನು ಮಂಡಿಸಿದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಭೀಕರ ದಾಳಿಯಾಗಿದೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ವೀರಣ್ಣ ದಂಡೆ ಕಳವಳ ವ್ಯಕ್ತಪಡಿಸಿದರು.

ಚಿಂಚೋಳಿ ಪಟ್ಟಣದ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಈ ಎರಡೂ ಪ್ರಕರಣಗಳು ರಾಜ್ಯ ಸೇರಿ ದೇಶದಾದ್ಯಂತ ಸುದ್ದಿ ಮಾಡಿದವು. ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಅನೇಕರು ಪ್ರತಿಭಟನೆ ಮಾಡಿದರು. ಆದರೆ ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾದರೆ ಪ್ರಜೆಗಳನ್ನು ರಕ್ಷಿಸುವವರು ಯಾರು ಎಂಬ ಭೀತಿಯಲ್ಲೇ ಬರಹಗಾರರು ಮುಳುಗಿ ಹೋಗಿದ್ದಾರೆ’ ಎಂದರು.

‘ಅಮೋಘವರ್ಷ ಬಿರುದಾಂಕಿತ ನೃಪತುಂಗನಿಗೆ ಕನ್ನಡವೆಂದರೆ ಪ್ರಾಣ. ಕನ್ನಡಕ್ಕೆ ಸರಿಸಮಾನವಾದ ಭಾಷೆ ಇನ್ನೊಂದಿಲ್ಲ ಎಂಬುದು ಆತನ ಅಂಬೋಣ. ತನ್ನ ಮಗ ಕನ್ನಡ ವಿರೋಧಿಗಳ ಜತೆ ಸೇರಿಕೊಂಡಿದ್ದ ಎಂಬ ಕಾರಣಕ್ಕೆ ಯಾವ ಮುಲಾಜಿಲ್ಲದೆ ಆತನನ್ನು ನೇಣಿಗೇರಿಸಿದ್ದ. ಕನ್ನಡದ ಪ್ರಶ್ನೆ ಬಂದಾಗ ನೃಪತುಂಗನಿಗೆ ಮಗ ಕೂಡ ಕಣ್ಣಿಗೆ ಬೀಳಲಿಲ್ಲ. ಆದರೆ ಇಂದಿನ ಸರ್ಕಾರ ಕನ್ನಡ ಸಾಹಿತ್ಯ, ಸಂಸ್ಕೃತಿಯ ಮೇರು ವ್ಯಕ್ತಿಗಳ ಹತ್ಯೆಯಾದರೂ ಗಮನ ಹರಿಸುತ್ತಿಲ್ಲ. ಇಂತಹ ವೇಳೆಯಲ್ಲಿ ನಾವೆಲ್ಲ ಬದುಕಿದ್ದೇವೆ ಎಂಬುದೇ ನಮ್ಮ ದುರ್ದೈವ’ ಎಂದರು.

ಕೃತಿಗಳ ಖರೀದಿಗೆ ಒತ್ತಾಯ:‘ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಾಣ, ಕಟ್ಟಡ ಕಾಮಗಾರಿ ಅಷ್ಟೇ ಅಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ಪ್ರಾದೇಶಿಕ ಸಂಸ್ಕೃತಿ, ಸಾಹಿತ್ಯ, ಕಲೆ, ಧರ್ಮ, ಇತಿಹಾಸವನ್ನು ಅಭಿವೃದ್ಧಿ ಪಡಿಸುವ, ಅಧ್ಯಯನಕ್ಕೆ ಪ್ರೋತ್ಸಾಹಿಸುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ವರ್ಷಕ್ಕೊಮ್ಮೆ ಈ ಭಾಗದ ಲೇಖಕರ ಕೃತಿಗಳನ್ನು ಖರೀದಿಸಬೇಕು’ ಎಂದರು. ಸಂಶೋಧಕರಿಗೆ ನೆರವು:‘ಸ್ಥಳೀಯ ಸಾಹಿತ್ಯ, ಸಂಸ್ಕೃತಿ, ಧರ್ಮ, ಇತಿಹಾಸದ ಬಗ್ಗೆ ಕಾಲಬದ್ಧ ಕಿರು ಸಂಶೋಧನೆ ಅವಶ್ಯಕವಾಗಿದೆ. ಸಂಶೋಧನೆಯಲ್ಲಿ ಆಸಕ್ತಿಯುಳ್ಳ ಗ್ರಾಮಾಂತರ ಪ್ರದೇಶದ ಪ್ರತಿಭಾವಂತರಿಗೆ ಎಚ್‌ಕೆಆರ್‌ಡಿಬಿಯಿಂದ ಹಣಕಾಸು ನೆರವು ನೀಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಪ್ರತಿ ಗ್ರಾಮಗಳ ಪರಿಚಯವನ್ನು ಒಳಗೊಂಡ 200 ಪುಟಗಳ ಕೃತಿಯನ್ನು ಪ್ರಕಟಿಸಬೇಕು. ಇದರಲ್ಲಿ ಆಯಾ ಗ್ರಾಮಗಳ ಜನ, ಉದ್ಯೋಗ, ದೇವಸ್ಥಾನ, ಮಠಗಳು, ಸ್ಮಾರಕಗಳು, ಜಾತ್ರೆ–ಉತ್ಸವ, ಕಲಾವಿದರು–ಸಾಹಿತಿಗಳ ಪರಿಚಯ, ಗ್ರಾಮದ ವಿಶೇ ಕಲೆಗಳು, ಗುಡಿ ಕೈಗಾರಿಕೆಗಳು ಕುರಿತ ವಿವರಗಳನ್ನು ಸೇರಿಸಬೇಕು’ ಎಂದು ಸಲಹೆ ನೀಡಿದರು.

371 (ಜೆ) ಸೌಲಭ್ಯ ಕಲ್ಪಿಸಿ:‘ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಾರಿಗೆ ತಂದಿರುವ 371 (ಜೆ) ಕಾಯ್ದೆಯ ಸೌಲಭ್ಯ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದರು.

ಚಿಂಚೋಳಿಯ ಸಂಕಟಗಳು: ‘ಚಿಂಚೋಳಿ ತಾಲ್ಲೂಕಿನಲ್ಲಿ ಮಕ್ಕಳ ಮಾರಾಟ ಮತ್ತು ಗುಜ್ಜರ್ ಕಿ ಶಾದಿ ಎಂಬ ಕೆಟ್ಟ ಸಂಗತಿಗಳು ಆಚರಣೆಯಲ್ಲಿವೆ. ಚಿಂಚೋಳಿ ತಾಲ್ಲೂಕಿನಲ್ಲಿ 100ಕ್ಕೂ ಅಧಿಕ ತಾಂಡಾಗಳಿದ್ದು, ಬಡತನದ ಕಾರಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾತುಗಳಿವೆ. ಈ ಅನಿಷ್ಟ ಪದ್ಧತಿಗಳನ್ನು ತಡೆಯುವ ಪ್ರಯತ್ನಗಳು ನಡೆಯಬೇಕು’ ಎಂದು ಹೇಳಿದರು. ಸಮ್ಮೇಳನದ ಸ್ಮರಣ ಸಂಚಿಕೆ ‘ಬಿಸಿಲ ನಾಡಿನ ಹಸಿರು’, ‘ಉಮಾಚಲ ಕಾವ್ಯ’ ಮತ್ತು ‘ಗುಡ್ಡದ ಮೈಲಾರಲಿಂಗನ ವಚನ ಸಂಕಲನ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಚಿಂಚೋಳಿ ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ಉಪಾಧ್ಯಕ್ಷೆ ಫರಜಾನ್ ಬೇಗಂ, ತಾಪಂ ಅಧ್ಯಕ್ಷೆ ರೇಣುಕಾ ಚವಾಣ್, ಉಪಾಧ್ಯಕ್ಷ ರುದ್ರಪ್ಪ ಪಡಶೆಟ್ಟಿ, ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷ ಸಿದ್ಧರಾಮ ಪೊಲೀಸ್ ಪಾಟೀಲ ಇದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು. ಡಾ. ವಿಜಯಕುಮಾರ ಪರುತೆ ವಂದಿಸಿದರು.

ಮೂವರು ಅಧ್ಯಕ್ಷರಿಗೆ ಬಂಗಾರ ಕಾಣಿಕೆ!

ಸಮ್ಮೇಳನದ ಸರ್ವಾಧ್ಯಕ್ಷ ಡಾ. ವೀರಣ್ಣ ದಂಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಚಿಂಚೋಳಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಅವರಿಗೆ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ತಲಾ 10 ಗ್ರಾಂ ಚಿನ್ನದ ಉಂಗುರಗಳನ್ನು ಕಾಣಿಕೆಯಾಗಿ ನೀಡಿದರು.

ದೂರದರ್ಶನ ಕೇಂದ್ರ ಸ್ಥಳಾಂತರ ಹುನ್ನಾರ

‘ಕಲಬುರ್ಗಿಯಲ್ಲಿರುವ ದೂರದರ್ಶನ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಅವಕಾಶ ಕೊಡಬಾರದು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಸಂಸದ ಭಗವಂತ ಖೂಬಾ ಅವರಲ್ಲಿ ಮನವಿ ಮಾಡಿದರು.

ಶಾಸಕ ಡಾ. ಉಮೇಶ ಜಾಧವ್ ಮಾತನಾಡಿ, ‘ದೂರದರ್ಶನ ಕೇಂದ್ರ ಆರಂಭಿಸಲು ಚಿಂಚೋಳಿ ತಾಲ್ಲೂಕು ಅಣವಾರದಲ್ಲಿ 50 ಎಕರೆ ಜಾಗ ಕೊಡಲು ಸಿದ್ಧರಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಅದನ್ನು ಸ್ಥಳಾಂತರ ಮಾಡಬಾರದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಭಗವಂತ ಖೂಬಾ, ‘ದೂರದರ್ಶನ ಕೇಂದ್ರವನ್ನು ಕಲಬುರ್ಗಿಯಲ್ಲೇ ಮುಂದುವರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಬೇಂದ್ರೆ ನೆನಪು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಸಾವಿನ ಕೊನೆಯ ದಿನಗಳಲ್ಲಿ ಅವರನ್ನು ಭೇಟಿ ಮಾಡಿದ ಕೆಲವರು ಸಾವಿನ ಬಗ್ಗೆ ನಿಮಗೆ ಭಯವಿಲ್ಲವೆ ಎಂದು ಪ್ರಶ್ನಿಸಿದರು.

ಆಗ ಬೇಂದ್ರೆ ಅವರು, ‘ಸಾವಿಗೆ ನಾನು ಹೆದರುವುದಿಲ್ಲ; ನಾನು ಇರುವವರೆಗೆ ಸಾವು ಬರುವುದಿಲ್ಲ; ಸಾವು ಬಂದರೆ ನಾನಿರುವುದಿಲ್ಲ’ ಎಂದು ಸ್ವಾರ ಸ್ಯಕರವಾಗಿ ಹೇಳಿದ್ದರು ಎಂದು ಹಾರಕೂಡಶ್ರೀ ತಿಳಿಸಿದರು.

ಮಕ್ಕಳಿಗೆ ಮೊಬೈಲ್ ಬೇಡ

ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಿಸಬಾರದು. ಮೊಬೈಲ್‌ನಿಂದ ಅವರನ್ನು ದೂರವಿರಿಸಬೇಕು. ಸಿನಿಮಾ ನಟರ ಜತೆ ಸೆಲ್ಫಿ ತೆಗೆದುಕೊಳ್ಳುವ ಬದಲು ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಮಠಾಧೀಶರು ಸಾಹಿತ್ಯವನ್ನು ಗೌರವಿಸಬೇಕು.
ವೀರಭದ್ರ ಸಿಂಪಿ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ

ಮೊದಲ ಸಮ್ಮೇಳನದ ಕಂಪು

ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಚಿಂಚೋಳಿ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ತೆಲುಗು ಭಾಷಿಕರೇ ಹೆಚ್ಚಾಗಿದ್ದ ಈ ಪ್ರದೇಶದಲ್ಲಿ ಈಗ ಕನ್ನಡದ ಕಂಪು ಹರಡುತ್ತಿದೆ.
ಡಾ. ಉಮೇಶ ಜಾಧವ್ ಶಾಸಕ, ಚಿಂಚೋಳಿ

ಮಾತೃಭಾಷೆ ಉಳಿಸಿ

ಮಾತೃಭಾಷೆ ಇಂದು ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ. ಯುವಕರು ಅನ್ಯ ಭಾಷೆಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ. ಆದ್ದರಿಂದ ಮಾತೃಭಾಷೆಯನ್ನು ಉಳಿಸಿ, ಬೆಳೆಸಬೇಕು. ಸಾಹಿತ್ಯದ ಎರಡು ಕಣ್ಣುಗಳಂತಿರುವ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸಬೇಕು.
ಡಾ. ಶರಣಪ್ರಕಾಶ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ಜೀವನದ ಸಂಕಲ್ಪವಾಗಲಿ

ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಜೀವನದ ಸಂಕಲ್ಪವಾಗಬೇಕು. ಕನ್ನಡದ ಶ್ರೀಮಂತಿಕೆಯನ್ನು ಪಸರಿಸಲು ಚಿಂಚೋಳಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾದ್ದರಿಂದ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿದೆ.
ಭಗವಂತ ಖೂಬಾ ಸಂಸದ, ಬೀದರ್

ಪುಸ್ತಕ ಖರೀದಿಸಿ

ಗ್ರಂಥಾಲಯದಿಂದ ಪುಸ್ತಕ ಖರೀದಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಸಾಹಿತಿಗಳು, ಲೇಖಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕಂದಾಯ ವಿಭಾಗ ಮಟ್ಟದಲ್ಲಿ ಪುಸ್ತಕಗಳನ್ನು ಖರೀದಿಸಬೇಕು. ಇದಕ್ಕಾಗಿ ಸರ್ಕಾರ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು.
ಸಿದ್ಧರಾಮ ಪೊಲೀಸ್ ಪಾಟೀಲ ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷ

* * 

10 ಜಾತ್ರೆಯಿಂದ ಸಿಗುವ ಫಲ ಒಂದು ಸಾಹಿತ್ಯ ಸಮ್ಮೇಳನದಿಂದ ಸಿಗುತ್ತದೆ. ಕನ್ನಡ ಹೃದಯಸ್ಥ ಭಾಷೆ ಆಗಬೇಕು.
ಚನ್ನವೀರ ಶಿವಾಚಾರ್ಯರು ಪೀಠಾಧಿಪತಿ, ಸಂಸ್ಥಾನ ಹಿರೇಮಠ, ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT