ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಇನ್ನೂ ಗಗನ ಕುಸುಮ!

Last Updated 23 ಜನವರಿ 2018, 9:03 IST
ಅಕ್ಷರ ಗಾತ್ರ

ಹುನಗುಂದ: ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗಾಗಿ ಹಲವು ವರ್ಷಗಳ ಹಿಂದೆ ಖರೀದಿಸಿದ್ದ ಪಟ್ಟಣದ ಚಿತ್ತವಾಡಗಿ ರಸ್ತೆಯಲ್ಲಿರುವ ಚಿಕ್ಕಬಾದವಾಡಗಿ ಗ್ರಾಮ ವ್ಯಾಪ್ತಿಯ 39.7 ಗುಂಟೆ ಭೂಮಿ ನಿವೇಶನ ಹಂಚಿಕೆಯಾಗದೇ ಹಾಗೆ ಬಿದ್ದಿದೆ. ವರ್ಷದಲ್ಲಿ ಮುಗಿಯಬೇಕಾದ ಕಾಮಗಾರಿ ಹಲವು ವರ್ಷಗಳಿಂದ ಆರಂಭವಾಗದೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಚಿಕ್ಕಬಾದವಾಡಗಿ ರೈತರಿಂದ ಜಮೀನು ಖರಿದಿಸಿದ ನಂತರ ಗೃಹ ಮಂಡಳಿ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಚರಂಡಿ, ಉದ್ಯಾನವನ, ಬಾಹ್ಯವಿದ್ಯುದ್ದೀಕರಣ, ಮೇಲ್ಮಟ್ಟದ, ನೆಲಮಟ್ಟದ ಜಲಸಂಗ್ರಹಾಲಯ, ಸೇರಿದಂತೆ ಯಾವುದೇ ಮೂಲ ಸೌಕರ್ಯಗಳೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಇದು ಗೃಹ ಮಂಡಳಿಯ ಆಮೆಗತಿ ಕೆಲಸಕ್ಕೆ ಸಾಕ್ಷಿಯಾಗಿದೆ. ಅರ್ಜಿ, ಠೇವಣಿ ಕಟ್ಟಿದ್ದರೂ ಇದುವರೆಗೆ ನಿವೇಶನದ ಕನಸು ಅವರ ಪಾಲಿಗೆ ಗಗನ ಕುಸುಮವಾಗಿದೆ.

ಗೃಹ ಮಂಡಳಿಯ 225 ವಸತಿ ಯೋಜನೆಯಲ್ಲಿ 39.7 ಎಕರೆ ಜಾಗದಲ್ಲಿ 579 ವಿವಿಧ ವರ್ಗಗಳ ನಿವೇಶನಗಳು ಫಲಾನುಭವಿಗಳಿಗೆ ಹಂಚಿಕೆಯಾಗಬೇಕಾಗಿದೆ. ನಿವೇಶನಕ್ಕಾಗಿ ಹಣ ತುಂಬಿದ ನೌಕರರು, ಮಧ್ಯಮ ವರ್ಗದ ಜನತೆ ಪರದಾಡುತ್ತಿದ್ದಾರೆ. ಅರ್ಜಿ ಸಲ್ಲಿಸಿ ಹಲವು ವರ್ಷಗಳಾದರೂ ಸರಿಯಾದ ಮಾಹಿತಿ ಇಲ್ಲ ಎಂದು ಡಾ. ನಾಗರಾಜ ನಾಡಗೌಡ, ಪಿ.ಎಚ್. ಮೇದಿನಾಪುರ ಹೇಳುತ್ತಾರೆ.

ನಿವೇಶನ ಕಾಮಗಾರಿ ಭೂಮಿ ಪೂಜೆಯಾಗಿದೆ ಆದರೆ ನಾವು ನಿವೇಶನ ಪಡೆಯಬೇಕಾದರೆ ಏನು ಮಾಡಬೇಕು ಗೊತ್ತಾಗುತ್ತಿಲ್ಲ, ಗೃಹ ಮಂಡಳಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ, ಮಿಸಲಾತಿ ಅನ್ವಯ ನಿವೇಶನ ಹಂಚಿಕೆ ಇತ್ಯಾದಿ ಅಂಶಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ ಎಂದು ದಲಿತ ಮುಖಂಡ ಬಸವರಾಜ ಹೊಸಮನಿ ಅಭಿಪ್ರಾಯ ಪಡುತ್ತಾರೆ.

‘ನಿವೇಶನ ಹಂಚಿಕೆಯಾಗಬೇಕಾದರೆ ಕಾಮಗಾರಿ ಆರಂಭಿಸಲು ಹಲವು ಇಲಾಖೆಗಳ ಅನುಮತಿ ಅಗತ್ಯ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈಗಾಗಲೇ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ನಂತರ ನಗರ ಯೋಜನೆ ಅನುಮತಿ ಪಡೆದುಕೊಳ್ಳಬೇಕು ಇನ್ನೊಂದು ತಿಂಗಳೊಳಗಾಗಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಬಾಗಲಕೋಟೆ ಗೃಹ ಮಂಡಳಿಯ ಸಹಾಯಕ ಎಂಜಿನಿಯರ್ ಹೇಳುತ್ತಾರೆ.

‘ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅರ್ಧ ಬೆಲೆ, ಅಂಗವಿಕಲರಿಗೆ ಶೇ 5ರಷ್ಟು ರಿಯಾಯತಿ ಈ ಯೋಜನೆಯಡಿ ಇದೆ. ಬೇಗ ಕಾಮಗಾರಿ ಆರಂಭವಾಗಿ ಫಲಾನುಭವಿಗಳಿಗೆ ಹಂಚಿಕೆಯಾದರೆ ಅಷ್ಟೇ ಸಾಕು’ ಎಂದು ಫಲಾನುಭವಿಗಳು ಹೇಳುತ್ತಾರೆ.

* * 

ವಸತಿ ಯೋಜನೆಯ ಕಾಮಗಾರಿ ಭೂಮಿ ಪೂಜೆಯಾಗಿದೆ. ಆದರೆ ನಾವು ನಿವೇಶನ ಪಡೆಯಬೇಕಾದರೆ ಏನು ಮಾಡಬೇಕು ಗೊತ್ತಾಗುತ್ತಿಲ್ಲ
ಬಸವರಾಜ ಹೊಸಮನಿ ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT