ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯದ ಪಶುತ್ವ ನಾಶ; ವಿಜಯಯಾತ್ರೆ ಆರಂಭಿಸಿ

Last Updated 24 ಜನವರಿ 2018, 7:24 IST
ಅಕ್ಷರ ಗಾತ್ರ

ವಿಜಯಪುರ: ‘ಲಿಂಗ ತಾರತಮ್ಯದ ಹಿಂಸೆಯ ಪಶುತ್ವವನ್ನು ನಾಶಪಡಿಸುವ ವಿಜಯಯಾತ್ರೆ ವಿಜಯಪುರದಿಂದಲೂ ಆರಂಭವಾಗಲಿ’ ಎಂದು ಪುಣೆಯ ಸಿಂಬಯಾಸಿಸ್ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಡಾ.ಶಶಿಕಲಾ ಗುರುಪುರ ಹೇಳಿದರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಸೋಮವಾರ ಪ್ರದಾನ ಭಾಷಣ ಮಾಡಿದ ಅವರು, ತಾರತಮ್ಯದ ವಿರುದ್ಧ ಗುಡುಗಿದರು.

‘ಮಹಿಳೆ, ಪುರುಷರಲ್ಲಿ ಮಿದುಳಿನ ನರವ್ಯೂಹಗಳು ಒಂದೇ ತೆರನಾಗಿವೆ. ಸಾಮರ್ಥ್ಯ ಕೂಡಾ ಸಮಾನವಾಗಿದೆ ಎಂಬುದನ್ನು ನ್ಯೂರೋಪ್ಲಾಸ್ಟಿಸಿಟಿ ಅಧ್ಯಯನ ಸ್ಪಷ್ಟಪಡಿಸಿದೆ. ಯಾರೂ ಹೆಚ್ಚು ಅಲ್ಲ. ಎಲ್ಲರೂ ಸಮಾನರು ಎಂಬುದು ಇನ್ನಾದರೂ ಕಾರ್ಯರೂಪಕ್ಕೆ ಬರಬೇಕಿದೆ’ ಎಂದು ಶಶಿಕಲಾ ಪ್ರತಿಪಾದಿಸಿದರು.

ವಿವಿಧ ರಂಗದಲ್ಲಿ ಮಹಿಳೆಯರ ಸಾಧನೆ, ಸಾಧನೆಯ ಪಥದಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾಗಿಯೂ ನಿದರ್ಶನಗಳ ಸಮೇತ ವಿವರಿಸಿದ ಡಾ.ಶಶಿಕಲಾ, ಯಾವ ರೀತಿ ಸಮಸ್ಯೆಗಳನ್ನು ಎದುರಿಸಬೇಕು ಎಂಬುದನ್ನು ತಮ್ಮ ಸಂದೇಶದುದ್ದಕ್ಕೂ ನಿರೂಪಿಸಿದರು.

ಸೂಕ್ತ ಮಾರ್ಗದರ್ಶನ, ಕೆಲಸ, ಬದುಕಿನ ಸಮತೋಲನ, ಧನಾತ್ಮಕ ಪ್ರವೃತ್ತಿ, ಸತತ ಬೆಂಬಲ ಬಲದಿಂದಾಗಿ ವಿದ್ಯಾರ್ಥಿನಿಯರು ಸಾಧನೆಯ ಶಿಖರವೇರಬಹುದು ಎಂದು ಯಶಸ್ಸಿನ ಗುಟ್ಟಿನ ಮಾರ್ಗವನ್ನು ಹೇಳಿದರು.

ಮಹಿಳೆಯರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ವಿವರಿಸಿದ ಅವರು, ಇನ್ನೂ ಬಹಳಷ್ಟು ಮಹಿಳೆಯರು ಪದವಿ ಪಡೆದರೂ ಗೋಪುರಾಕೃತಿಯ (ಪಿರಮಿಡ್) ತಳಭಾಗದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ನೋವಿನ ಸಂಗತಿ. ಮುಖ್ಯವಾಹಿನಿಯಲ್ಲಿ ತಾರತಮ್ಯ ನಿವಾರಣೆಗಾಗಿ ಸೂಕ್ಷ್ಮ ರೀತಿಯ ತಾರ್ಕಿಕ ಯೋಜನೆ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ ಇಂದಿಗೂ ಶೇ 66ರಷ್ಟು ಮಹಿಳೆಯರು ಅನಕ್ಷರಸ್ಥರಿದ್ದಾರೆ. ಕೆಲವೊಂದು ದೇಶದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಸಹ ದೊರಕಿಲ್ಲ. ರಾಜಕಾರಣದಲ್ಲಿಯೂ ಜಗತ್ತಿನ ಜನಪ್ರತಿನಿಧಿಗಳ ಪೈಕಿ ಕೇವಲ ಶೇ 10ರಷ್ಟು ಮಹಿಳೆಯರಿಗೆ ಮಾತ್ರ ಪ್ರಾತಿನಿಧ್ಯ ದೊರಕಿದೆ ಎಂದರು.

ಶಾಲೆಯ ಹೊಸ್ತಿಲು ನೋಡದವರು...

‘ವಿಶ್ವದಾದ್ಯಂತ ಮಹಿಳಾ ಶಿಕ್ಷಣದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೂ, ಇಂದಿಗೂ 1.60 ಕೋಟಿ ಬಾಲಕಿಯರು ಶಾಲೆಯ ಹೊಸ್ತಿಲನ್ನೇ ಮುಟ್ಟಿಲ್ಲ. ಇದು ದುರಂತ’ ಎಂದು ಶಶಿಕಲಾ ವಿಷಾದಿಸಿದರು.

‘ಭಾರತದಲ್ಲಿನ ಮಹಿಳಾ ವಿಶ್ವವಿದ್ಯಾಲಯಗಳ ಪಠ್ಯ, ಕ್ರಮವಿಧಿಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದಾಗ, ಬಹುತೇಕ ಸಂಗತಿಗಳು ಸ್ತ್ರೀತ್ವ, ಸ್ತ್ರೀಸಹಜ ಸಾಂಕೇತಿಕ ಧೋರಣೆ ಕಂಡು ಬರುತ್ತಿದೆ’ ಎಂದರು.

‘ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮೊದಲಾದ ವಿಷಯಗಳಲ್ಲಿ ಮಹಿಳೆಯರ ಸಾಧನೆ ಅತ್ಯಂತ ನಿರಾಶಾದಾಯಕವಾಗಿದೆ. ಈ ವಿಷಯವನ್ನು ಯುನಸ್ಕೋ ವರದಿಯೇ ಸ್ಪಷ್ಟಪಡಿಸಿದೆ’ ಎಂದು ಬೇಸರ ವ್ಯಕ್ತಪಡಿಸದರು.

‘ಜಗತ್ತಿನಾದ್ಯಂತ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ನೋಂದಣಿಯಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೂ ಸಹ ಯಶಸ್ಸಿನ ಭ್ರಮೆಯನ್ನು ಸೃಷ್ಟಿಸಿರುವ ನಯ-ನಾಜೂಕಿನ ಅಂಕಿ-ಅಂಶಗಳ ಮೇಲೆ ಮಾತ್ರ ಅವಲಂಬನೆ ಆಗುವುದು ಬೇಡ’ ಎಂದು ಡಾ.ಶಶಿಕಲಾ ಅಭಿಪ್ರಾಯಪಟ್ಟರು.

‘ಯಾವಾಗಲೂ ಸಂಶೋಧನೆ, ಹುಡುಕಾಟ, ಅಧ್ಯಯನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ, ಜೀವನವಿಡಿ ಕಲಿಯುತ್ತಲೇ ಇರಿ, ತಂತ್ರಜ್ಞಾನದ ಮೇಲೆ ಹಿಡಿತ ಸಾಧಿಸಿ, ಅಲ್ಪಕಾಲೀನ, ದೀರ್ಘಕಾಲೀನ ಗುರಿಗಳನ್ನು ನಿಗದಿಪಡಿಸಿಕೊಳ್ಳಿ, ನೀವು ಸಾಧಿಸಬಲ್ಲೀರಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ’ ಎನ್ನುವ ಮೂಲಕ ವಿದ್ಯಾರ್ಥಿನಿ ಸಮೂಹಕ್ಕೆ ಆಶತ್ಮವಿಶ್ವಾಸದ ನುಡಿಗಳನ್ನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT