ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತನ ಹೆಗಲ ಮೇಲೆ ಸಾಲದ ಹೊರೆ’

Last Updated 24 ಜನವರಿ 2018, 11:23 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜನೀತಿಯ ಪರಿಣಾಮ ರೈತರು ಭಿಕಾರಿಗಳಾಗುತ್ತಿದ್ದಾರೆ. ರೈತನ ಹೆಗಲ ಮೇಲೆ ಸಾಲದ ಹೊರೆ ಏರುತ್ತಿದ್ದು, ಕೃಷಿಯ ಗೊಡವೆಯೇ ಬೇಡ ಎನ್ನುವ ಸ್ಥಿತಿಗೆ ರೈತನನ್ನು ತಂದಿಡಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ ಕಳವಳ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ದುಂಡಿಬಸವೇಶ್ವರ ಜನಪದ ಕಲಾಸಂಘದ 27 ನೇ ಕನ್ನಡ ನುಡಿ ಸಂಭ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿದ್ದ ‘ರೈತ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದೆ. ಆದರೆ, ರೈತನ ಉತ್ಪನ್ನಗಳು ಮಾತ್ರ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ. ಇದನ್ನೇ ಸರ್ಕಾರಗಳು ಕೃಷಿ ಸಂಸ್ಕೃತಿಯ ಅವನತಿಯ ಸೂತ್ರವನ್ನಾಗಿಸಿಕೊಂಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಗೋವಿನಜೋಳವನ್ನು ಪಿಡಿಎಸ್‌ನಿಂದ ಹೊರಗಿಟ್ಟು ಯಾರೂ ಕೂಡ ಬೆಂಬಲ ಬೆಲೆ ನೀಡಿ ಗೋವಿನಜೋಳ ಖರೀದಿಸದಂತೆ ಮಾಡಿದ್ದಾರೆ. ರೈತನ ಆದಾಯದ ಮೂಲಗಳನ್ನೆಲ್ಲ ಬರಿದಾಗಿಸಿ ಆರ್ಥಿಕವಾಗಿ ದಿವಾಳಿ ಎಬ್ಬಿಸಲಾಗುತ್ತಿದೆ’ ಎಂದು ದೂರಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಮ್ ಮಾತನಾಡಿ, ‘ರೈತ ನಿತ್ಯವೂ ಎದುರಾಗುತ್ತಿರುವ ಸಂಕಷ್ಟಗಳಿಂದ ಬಸವಳಿಯುತ್ತಿದ್ದಾನೆ. ನಮ್ಮ ದೇಶದ ಕೃಷಿ ಸಂಸ್ಕೃತಿ ನಾಶದ ಭೀತಿಯಲ್ಲಿದೆ’ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ, ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರಪಣ್ಣನವರ, ಮಾಲತೇಶ ಪರಪ್ಪನವರ, ಬಸವರಾಜ್ ಕೋರಿ, ಪ್ರೇಮಾನಂದ ಇದ್ದರು. ಇದಕ್ಕೂ ಮೊದಲಿಗೆ ಪ್ರಮುಖ ಬೀದಿಗಳಲ್ಲಿ ರೈತ ಜಾಗೃತಿ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT