ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 28–1–1968

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಅಸ್ಸಾಂ ನೆರವಿಗೆ ಸೇನೆ: ಕರ್ಫ್ಯೂ
ಗೌಹಾಟಿ, ಜ. 27–
ಅಸ್ಸಾಂ ರಾಜ್ಯ ಪುನರ್ವಿಂಗಡಣೆ ವಿರುದ್ಧ ನಿನ್ನೆ ಹಿಂದೆಂದೂ ಕಂಡರಿಯದ ಹಿಂಸಾತ್ಮಕ ಚಟುವಟಿಕೆಗಳ ದೃಷ್ಟಿಯಿಂದ ವಿಧಿಸಲಾಗಿದ್ದ 18 ಗಂಟೆಗಳ ಕರ್ಫ್ಯೂವನ್ನು ಇಂದು ಇನ್ನೂ 24 ಗಂಟೆಗಳವರೆಗೆ ಗೌಹಾಟಿ ಮತ್ತು ಅದರ ಸುತ್ತಮುತ್ತ ಪ್ರದೇಶದಲ್ಲಿ ವಿಸ್ತರಿಸಲಾಗಿದೆ.

ನಿನ್ನೆ ವಿಧಿಸಲಾಗಿದ್ದ ಕರ್ಫ್ಯೂ ಇಂದು ಬೆಳಿಗ್ಗೆ ಮುಕ್ತಾಯಗೊಂಡಿತು.

ಇಂದು ಬೆಳಿಗ್ಗೆ ಪುನಃ ಗಲಭೆಗಳು ಕಾಣಿಸಿಕೊಂಡು ಕುಪಹರ್ ಪ್ರದೇಶದಲ್ಲಿ ಸೆಣಬಿನ ಗಿರಣಿ ಮತ್ತು ಜೀಪಿಗೆ ಗೂಂಡಾಗಳು ಬೆಂಕಿ ಹಚ್ಚಿದರು.

ಡಾ. ಎಂ.ಎಸ್. ಆಣೆ ಅವರ ನಿಧನ
ಮುಂಬೈ, ಜ. 26–
ವಿದರ್ಭದ ಹಿರಿಯ ನಾಯಕ ಡಾ. ಎಂ.ಎಸ್. ಆಣೆಯವರು ನಿನ್ನೆ ಸಂಜೆ ಇಲ್ಲಿಯ ಸೇಂಟ್ ಜಾರ್ಜ್ ನರ್ಸಿಂಗ್ ಹೋಂನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಈ ಸಲದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.

ಸೋಮವಾರವೂ ನಗರದಲ್ಲಿ ಕಾಲೇಜ್‌ಗಳು ಬಂದ್
ಬೆಂಗಳೂರು, ಜ. 27–
ತನ್ನ ಅಧಿಕಾರವ್ಯಾಪ್ತಿಗೊಳಪಟ್ಟ ಕಾಲೇಜುಗಳನ್ನು ಜನವರಿ 29 ರಂದು ಕೂಡ ಮುಚ್ಚಬೇಕೆಂದು ಬೆಂಗಳೂರು ವಿಶ್ವವಿದ್ಯಾನಿಲಯವು ಇಂದು ನಿರ್ಧರಿಸಿತು.

ಕಳೆದ ಸೋಮವಾರ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಲಭೆ ನಡೆದ ನಂತರ ಮಂಗಳವಾರದಿಂದ ನಗರದ ಕಾಲೇಜುಗಳನ್ನು ಮುಚ್ಚಲಾಯಿತು.

ಶಿಕ್ಷಣ ಕ್ಷೇತ್ರ ‘ರಾಷ್ಟ್ರೀಕರಣ’ ಆಗುತ್ತಿದೆಯೆಂಬ ಆಪಾದನೆ ನಿರಾಕರಣೆ
ಬೆಂಗಳೂರು, ಜ. 27–
ಶಿಕ್ಷಣದ ರಾಷ್ಟ್ರೀಕರಣಕ್ಕೆ ಪ್ರಯತ್ನಗಳಾಗುತ್ತಿವೆ ಎಂಬ ‘ಆಪಾದನೆ’ಯನ್ನು ನಿರಾಕರಿಸಿದ ರಾಜ್ಯ ಅರ್ಥ ಶಾಖೆಯ ಉಪಸಚಿವ ಶ್ರೀ ಅಬ್ದುಲ್ ಗಫಾರ್ ಅವರು ಇಂದು ‘ತದ್ವಿರುದ್ಧವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದರು.

‘ಶಿಕ್ಷಣ ಯಾರ ಕೈಲಿ ಇರಬೇಕೆಂಬ ಪ್ರಶ್ನೆಮುಖ್ಯವಲ್ಲ. ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಲು ಯಾವ ರೀತಿಯಲ್ಲಿ ಪ್ರಯತ್ನಿಸಬೇಕು ಎಂಬುದರ ಬಗ್ಗೆ ನಾವು
ಯೋಚಿಸಬೇಕು’ ಎಂದು ಅವರು ನುಡಿದರು.

ದಕ್ಷಿಣದಲ್ಲಿ ಹಿಂದಿ ಮುನ್ನಡೆ: ಎಸ್ಸೆನ್ ವಿಶ್ವಾಸ
ನವದೆಹಲಿ, ಜ. 27–
ಮದ್ರಾಸ್ ಸರಕಾರ ಅನ್ಯ ರೀತಿ ನಿರ್ಧರಿಸಿದ್ದರೂ ಅದೂ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಹಿಂದಿಯು ರಾಷ್ಟ್ರಭಾಷೆಯಾಗಿ ಬೆಳೆಯುವುದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

ಸತ್ಕಾರ ಕೂಟವೊಂದರಲ್ಲಿ ಮಾತನಾಡುತ್ತಿದ್ದ ಅವರು ಹಿಂದೀತರ ಜನರಲ್ಲಿರುವ ಕೆಲವು ಸಂಶಯಗಳ ನಿವಾರಣೆಗೆ ತಾವು ಶ್ರಮಿಸುವುದಾಗಿ ತಿಳಿಸಿ
ಶ್ರೀ ಮುರಾರಜಿ ದೇಸಾಯಿಯವರಂತಹ ಕೇಂದ್ರ ಸರಕಾರದ ನಾಯಕರೂ ಅದಕ್ಕಾಗಿ
ದುಡಿಯಬೇಕೆಂದರು.

ಮೊದಲು ಭಾರತೀಯರು ಎಂಬುದನ್ನು ಮರೆಯದಿರಿ: ಗೌರ‍್ನರ್‌ ಕರೆ
ಬೆಂಗಳೂರು, ಜ.25:
ಈಚೆಗೆ ಭಾಷಾ ವಿಷಯವಾಗಿ ನಮ್ಮ ಜನರಲ್ಲಿ ಉಂಟಾಗಿರುವ ಭೇದಭಾವಗಳು ಸ್ವಲ್ಪಮಟ್ಟಿಗೆ ದೇಶದ ಶಾಂತ ವಾತಾವರಣಕ್ಕೆ ಧಕ್ಕೆ ತಂದಿವೆ ಎಂದು ರಾಜ್ಯಪಾಲ ಶ್ರೀ ಗೋಪಾಲ ಸ್ವರೂಪ್‌ ಪಾಠಕ್‌ ಅವರು ಇಂದು ಇಲ್ಲಿ ಕಳವಳ ವ್ಯಕ್ತಪಡಿಸಿ ‘ಜನರು ಮೊದಲು ನಾವು ಭಾರತೀಯರು ಎಂಬುದನ್ನು ಎಂದೂ ಮರೆಯಬಾರದು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT