ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ರತ್ನ: ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಚರ್ಚೆ’

Last Updated 29 ಜನವರಿ 2018, 8:52 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಫೀಲ್ಡ್ ಮಾರ್ಷೆಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು’ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳೀದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಫೀಲ್ಡ್ ಮಾರ್ಷೆಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಇಲ್ಲಿನ ಕಾವೇರಿ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಕಾರ್ಯಪ್ಪ ಅವರ 119ನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕಂಡ ಮಹಾನ್ ಚೇತನ ಕಾರ್ಯಪ್ಪ ಅವರ ಸಾಧನೆ ಮತ್ತು ಶಿಸ್ತು ಯುವ ಜನಾಂಗಕ್ಕೆ ದಾರಿದೀಪವಾಗ ಬೇಕು ಎಂದು ಹೇಳಿದರು.

ಅವರ ಪ್ರತಿಮೆ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ನೀಡಬೇಕು. ಪ್ರತಿಮೆಗಳ ಚಾವಣಿಗೂ ಅನುದಾನದ ಅಗತ್ಯವಿದೆ. ಇದರ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಪ್ರತಿಮೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸುವುದರ ಬದಲು ಪ್ರತ್ಯೇಕ ಫೋರಂ ರಚಿಸಿಕೊಂಡು ನಿರ್ವಹಣೆ ಜವಾಬ್ದಾರಿ ಹೊತ್ತುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಫೋರಂ ಸಂಚಾಲಕ ಮೇಜರ್ ಬಿ.ಎ.ನಂಜಪ್ಪ ಮಾತನಾಡಿ, ಕಾವೇರಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿರುವ ಪ್ರತಿಮೆಗಳ ನಿರ್ವಹಣಾ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ವಹಿಸಿಕೊಳ್ಳಬೇಕು. ಪ್ರತಿಮೆಗಳ ಮೇಲಿನ ಚಾವಣಿ ನಿರ್ಮಾಣಕ್ಕೆ ಅಂದಾಜು ₹12 ಲಕ್ಷ ವೆಚ್ಚವಾಗಲಿದೆ. ಇದನ್ನು ಶಾಸಕರು ತಮ್ಮ ನಿಧಿಯಿಂದ ಭರಿಸಿಕೊಡಬೇಕು. ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿ ಮತ್ತು ಗೋಣಿಕೊಪ್ಪಲಿನಲ್ಲಿ ಜಯಂತಿ ನಡೆಯುವಂತಾಗಬೇಕು ಎಂದು ಒತ್ತಾಯಿಸಿದರು.

ಕಾರ್ಯಪ್ಪ ಅವರ ಜೀವನ ಚರಿತ್ರೆ ಕುರಿತು ನಿವೃತ್ತ ಪ್ರಾಂಶುಪಾಲ ಪ್ರೊ.ಇಟ್ಟೀರ ಬಿದ್ದಪ್ಪ ಮಾತನಾಡಿದರು. ಸಿಪಿಐ ದಿವಾಕರ್ ಮಾತನಾಡಿ, ‘ಕಾರ್ಯಪ್ಪ ಅವರು ಒಮ್ಮೆ ಅನಾರೋಗ್ಯ ನಿಮಿತ್ತ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗಲೂ ಅವರು ತಮ್ಮ ಸಮವಸ್ತ್ರ ತೆಗೆದಿರಲಿಲ್ಲ. ಅವರನ್ನು ನೋಡಲು ಅಂದಿನ ರಕ್ಷಣಾ ಸಚಿವರು ಆಸ್ಪತ್ರೆಗೆ ಬಂದಾಗ ಕಾರ್ಯಪ್ಪ ಅವರು ಎದ್ದುನಿಂತು ಅವರಿಗೆ ಗೌರವ ಸಲ್ಲಿಸಿದರು. ಅಂತಹ ಮೇರು ವ್ಯಕಿತ್ವ ಕಾರ್ಯಪ್ಪ ಅವರದು’ ಎಂದು ಗುಣಗಾನ ಮಾಡಿದರು.

ತಹಶಿಲ್ದಾರ್ ಆರ್.ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಆರ್ಎಸ್‌ಸ್‌ ಪ್ರಮುಖ ಅವಿನಾಶ್, ಕೊಡಂದೇರ ಕುಟುಂಬದ ಅಧ್ಯಕ್ಷ ಸುಬ್ಬಯ್ಯ, ಕಬ್ಬಚ್ಚೀರ ಪ್ರಭು ಸುಬ್ರಮಣಿ, ಬಿಇಒ ಜಿ.ಎ.ಲೋಕೇಶ್, ಲೋಹಿತ್ ಭೀಮಯ್ಯ, ಟಿ.ಬಿ.ಜೀವನ್ ಹಾಜರಿದ್ದರು.

ತಾಲ್ಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆ 9.30ಕ್ಕೆ ಸ್ಥಳೀಯ ಬಸ್ ನಿಲ್ದಾಣದಿಂದ ನಡೆಸಿದ ಬ್ಯಾಂಡೆಸೆಟ್ ವಾದನದೊಂದಿಗಿನ ಮೆರವಣಿಗೆ ನಡೆಸಿದರು. ಹುದಿಕೇರಿ ಮಹದೇವರ ಆಮಕ್ಕಡ ಕೂಟದ ಹುತ್ತರಿ ಕೋಲಾಟ ಗಮನಸೆಳೆಯಿತು.

ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರಗೀತೆ ಗಾಯನ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಗೋಣಿಕೊಪ್ಪ ಲಿನ ಲಯನ್ಸ್ ಶಾಲೆ ಪ್ರಥಮ, ಅರುವತ್ತೊಕ್ಕಲಿನ ಸರ್ವದೈವತಾ ಶಾಲೆ ದ್ವಿತೀಯ ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.

ಪ್ರೌಢಶಾಲೆ ವಿಭಾಗದಲ್ಲಿ ವಿರಾಜಪೇಟೆ ಅರಮೇರಿಯ ಎಸ್ಎಂಎಸ್ ಅಕಾಡೆಮಿ ಶಾಲೆ ಪ್ರಥಮ, ಪೊನ್ನಂಪೇಟೆ ಸೇಂಟ್ ಅಂಥೋಣಿ ಶಾಲೆ ದ್ವಿತೀಯ, ಗೋಣಿಕೊಪ್ಪಲಿನ ಲಯನ್ಸ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು. ಕಾಲೇಜು ವಿಭಾಗದಲ್ಲಿ ಪೊನ್ನಂಪೇಟೆ ಸೇಂಟ್ ಅಂಥೋಣಿ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT