ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ವೈಭವದ ಮಲ್ಲಯ್ಯನ ಮಹಾರಥೋತ್ಸವ

Last Updated 1 ಫೆಬ್ರುವರಿ 2018, 6:50 IST
ಅಕ್ಷರ ಗಾತ್ರ

ಮಸ್ಕಿ: ಎರಡನೇ ಶ್ರೀಶೈಲವೆಂದೇ ಖ್ಯಾತಿಗೆ ಪಾತ್ರವಾದ ಐತಿಹಾಸಿಕ ಮಲ್ಲಿಕಾರ್ಜುನ ಮಹಾರಥೋತ್ಸವವು ಬುಧವಾರ ಮದ್ಯಾಹ್ನ 3ರ ಸುಮಾರಿಗೆ ಭಾರಿ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಸಂಜೆ 5–30 ಕ್ಕೆ ನಡೆಯಬೇಕಿದ್ದ ರಥೋತ್ಸವವು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮೂರು ಗಂಟೆ ಮುಂಚಿತವಾಗಿ ನಡೆಯಿತು. ರಥದ ಸುತ್ತ ಐದು ಬಾರಿ ಪಲ್ಲಕ್ಕಿ ಸೇವೆ ನಡೆಸಲಾಯಿತು.

ಗಚ್ಚಿನಮಠದ ಪೀಠಾಧ್ಯಕ್ಷ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಕೆ. ವೀರನಗೌಡ, ಮಹಾದೇವಪ್ಪಗೌಡ ಪೊಲೀಸ ಪಾಟೀಲ, ಪುರಸಭೆ ಉಪಾಧ್ಯಕ್ಷ ರವಿಕುಮಾರ ಪಾಟೀಲ ಸೇರಿದಂತೆ ಗ್ರಾಮದ ಮುಖಂಡರು ಮಹಾರಥಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಲ್ಲಿಕಾರ್ಜುನನ ಉತ್ಸವ ಮೂರ್ತಿಯನ್ನು ಭಕ್ತರ ಜಯಘೋಷಗಳ ನಡುವೆ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಅಮರೇಗೌಡ ಕಾರಲಕುಂಟಿ, ಆರ್‌. ಬಸನಗೌಡ, ರಾಜಾ ಸೋಮನಾಥ ನಾಯಕ ಇದ್ದರು.

ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಎಸೆದು ಜನರು ಭಕ್ತಿ ಸಮರ್ಪಿಸಿದರು. ರಥದ ಮೇಲೆ ಜಾಗಟೆ ಬಾರಿಸುತ್ತಿದ್ದಂತೆ ಸಹಸ್ರಾರು ಭಕ್ತರು ರಥದ ಮಿಣಿ ಹಿಡಿದು ಎಳೆಯತೊಡಗಿದರು. ದೈವದಕಟ್ಟೆಯ ಪಾದಗಟ್ಟೆವರೆಗೆ ರಥ ಎಳೆದು ಗ್ರಹಣ ಹಿಡಿಯುವುದರ ಒಳಗಾಗಿ ವಾಪಸ್ ದೇವಸ್ಥಾನಕ್ಕೆ ತರಲಾಯಿತು. ರಥ ವಾಪಸ್ ಬರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿದವು.

ಬೆಳಿಗ್ಗೆ ಶಾಸಕ ಪ್ರತಾಪಗೌಡ ಪಾಟೀಲ ಮತ್ತು ಕುಟುಂಬ ಸದಸ್ಯರು ದೇವಸ್ಥಾನಕ್ಕೆ ತೆರಳಿ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆ ನಿಮಿತ್ತ ಬೆಳಿಗ್ಗೆ 6ರಿಂದ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಡೆದವು. ರಥಕ್ಕೆ ಕಳಸಾರೋಹಣ ಮಾಡಲಾಯಿತು. ಭೋವಿ (ವಡ್ಡರ್‌) ಸಮಾಜದ ನೂರಾರು ಭಕ್ತರು ಮಡಿವಂತಿಕೆಯಿಂದ ರಥೋತ್ಸವದ ಗಾಲಿಗಳಿಗೆ ಮಿಣಿ ಹಾಕುವ ಮೂಲಕ ರಥೋತ್ಸವದ ಯಶಸ್ಸಿಗೆ ಸಹಕರಿಸಿದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಚನ್ನಯ್ಯ ಹಿರೇಮಠ, ಸಬ್‌ ಇನ್‌ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಆತಂಕ ಸೃಷ್ಠಿ: ರಥದ ಗೋಪುರಕ್ಕೆ ಕಟ್ಟಿದ್ದ ಹಗ್ಗ ಹರಿದ ಕಾರಣ ಗೋಪುರ ಒಂದು ಕಡೆ ವಾಲಿತು. ಇದರಿಂದ ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು. ಶಾಸಕ ಪ್ರತಾಪಗೌಡ ಪಾಟೀಲ,ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಗೋಪುರ ಸರಿಯಾದ ಬಳಿಕ ರಥೋತ್ಸವ ಮುಂದುವರೆಯಿತು.

* * 

ಮಲ್ಲಿಕಾರ್ಜುನ ರಥೋತ್ಸವಕ್ಕೆ ಪ್ರತಿ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ದೇವಸ್ಥಾನದಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ.
–ಅಶೋಕ ಪಾಟೀಲ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT