ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ದರ ಪರಿಷ್ಕರಿಸಿ, ಮನ್ನಾಕ್ಕೆ ಪ್ರಸ್ತಾವ

Last Updated 6 ಫೆಬ್ರುವರಿ 2018, 9:57 IST
ಅಕ್ಷರ ಗಾತ್ರ

ದಾವಣಗೆರೆ: ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನೂ ಉಲ್ಬಣವಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಮತ್ತೆ ನೀರಿನ ಕಂದಾಯ ಹೆಚ್ಚಳ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಪಾಲಿಕೆ ಸದಸ್ಯರಾದ ದಿನೇಶ್‌ ಶೆಟ್ಟಿ, ಶಿವನಹಳ್ಳಿ ರಮೇಶ್‌ ಹಾಗೂ ಆವರಗೆರೆ ಉಮೇಶ್‌ ಅವರು, ಸೋಮವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಮೂರು ವರ್ಷಕ್ಕೊಮ್ಮೆ ನೀರಿನ ಕಂದಾಯ ಪರಿಷ್ಕರಿಸಬೇಕೆಂಬ ನಿಯಮವಿದೆ. ಆದರೆ, ಪಾಲನೆಯಾಗಿಲ್ಲ. ಈ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿ, ನಿರ್ಣಯ ಕೈಗೊಳ್ಳಬೇಕು ಎಂದು ಸರ್ಕಾರವೇ ಸೂಚನೆ ನೀಡಿದೆ ಎಂದು ಆಯುಕ್ತ ಮಂಜುನಾಥ ಆರ್‌. ಬಳ್ಳಾರಿ ಸಭೆಯ ಗಮನಕ್ಕೆ ತಂದಾಗ, ಸದಸ್ಯರು ಈ ರೀತಿ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಶಿವನಹಳ್ಳಿ ರಮೇಶ್‌ ಪ್ರತಿಕ್ರಿಯಿಸಿ, ‘2014ರಲ್ಲಿ ಉಂಟಾದ ನೀರಿನ ಹಾಹಾಕಾರವು ಇಂದಿಗೂ ಮುಂದುವರಿದಿದೆ. ಟಿವಿ ಸ್ಟೇಷನ್‌ ಕೆರೆ, ಕುಂದವಾಡ ಕೆರೆಯಲ್ಲಿ ನೀರು ಸಂಗ್ರಹ ಸಾಮಾರ್ಥ್ಯ ಹೆಚ್ಚಳ ಮಾಡಲಾಗಿದೆ. ಆದರೂ, ಜನರ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ 8 ದಿನಗಳಿಗೊಮ್ಮೆ ಜನರಿಗೆ ನೀರು ನೀಡುತ್ತಿದ್ದೇವೆ. ಇಂತಹ ಸಮಯದಲ್ಲಿ ನೀರಿನ ಕಂದಾಯ ಹೆಚ್ಚಳ ಮಾಡಿದರೆ ಜನರು ಪಾವತಿ ಮಾಡುವುದು ಕಷ್ಟ’ ಎಂದರು.

ನೀರಿನ ಕಂದಾಯ ಹೆಚ್ಚಳ ಮಾಡುವುದು ಅವೈಜ್ಞಾನಿಕವಾಗಿದ್ದು, ಅನಗತ್ಯವಾಗಿ ಜನರ ಮೇಲೆ ಹೊರೆ ಹಾಕುವುದು ಬೇಡ. ಪ್ರತಿ ಮನೆಗೂ ಮೀಟರ್‌ ಅಳವಡಿಸಿ, ಬಳಕೆಯ ಮೇಲೆ ಕಂದಾಯ ನಿಗದಿ ಮಾಡಬಹುದು ಎಂದು ಸಲಹೆ ನೀಡಿದರು.

ಮಧ್ಯಪ್ರವೇಶಿಸಿದ ಸದಸ್ಯ ದಿನೇಶ್‌ ಶೆಟ್ಟಿ, ‘ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ನೀರಿನ ಕಂದಾಯ ₹ 600 ನಿಗದಿ ಮಾಡಲಾಗಿತ್ತು. ಹೆಚ್ಚಳಕ್ಕೆ ನಾವೇ ಒಪ್ಪಿಗೆ ಕೊಟ್ಟು ತಪ್ಪು ಮಾಡಿದೆವು’ ಎಂದು ಬೇಸರ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಉದ್ದೇಶದಿಂದ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು, ‘ಜಲಸಿರಿ ಯೋಜನೆ’ ಜಾರಿಗೆ ಆದ್ಯತೆ ನೀಡಿದ್ದಾರೆ. ಇದರ ಟೆಂಡರ್‌ ಪ್ರಕ್ರಿಯೆ ಆರಂಭವಾಗಬೇಕಿದೆ. ಜತೆಗೆ ₹ 65 ಕೋಟಿ ವೆಚ್ಚದಲ್ಲಿ ಹರಿಹರದ ಬಳಿ ತುಂಗಾಭದ್ರಾ ನದಿಗೆ ಬ್ಯಾರೇಜ್‌ ನಿರ್ಮಾಣ ಚಿಂತನೆಯೂ ನಡೆದಿದೆ. ಈ ಸಮಯದಲ್ಲಿ ನೀರಿನ ಕಂದಾಯ ಹೆಚ್ಚಳ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ನೀರಿನ ಕಂದಾಯ ಪರಿಷ್ಕರಿಸದಿದ್ದಲ್ಲಿ ಸರ್ಕಾರದಿಂದ ಪಾಲಿಕೆಗೆ ಬರುವ ಅನುದಾನ ಕಡಿಮೆಯಾಗುತ್ತದೆ. ಅತ್ಯಂತ ಕನಿಷ್ಠ ದರ ಹೆಚ್ಚಳ ಮಾಡಿ, ನಂತರ ಅದನ್ನು ಮನ್ನಾ ಮಾಡುವಂತೆ ಪ್ರಸ್ತಾವ ಸಲ್ಲಿಸೋಣ’ ಎಂದರು. ಇದಕ್ಕೆ ಸದಸ್ಯರು ಟೇಬಲ್‌ ಬಡಿದು ಸಮ್ಮತಿ ಸೂಚಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್, ಪೌರಕಾರ್ಮಿಕರು, ವಾಲ್ವ್‌ಮನ್‌ ಒಳಗೊಂಡಂತೆ ಇತರೆ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ಏಜೆನ್ಸಿಯವರೆಗೆ ವಹಿಸಬೇಕು ಎಂದು ಸದಸ್ಯ ಎಂ.ಹಾಲೇಶ್‌ ಸಲಹೆ ನೀಡಿದರು.

ಚೌಡೇಶ್ವರಿ ನಗರದ ಬಳಿಯ ಹಿಂದೂ ರುದ್ರಭೂಮಿಯಲ್ಲಿ 6 ಜನ ಕಾರ್ಮಿಕರು ಗುಂಡಿ ತೆಗೆಯುವ ಕೆಲಸ ಮಾಡುತ್ತಿದ್ದು, ಅವರನ್ನೂ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು. ಅಲ್ಲದೇ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 11 ಕಾರ್ಮಿಕರನ್ನು ತೆಗೆದು ಹಾಕಲಾಗಿತ್ತು. ಅವರ ಸೇವೆಯನ್ನೂ ಪರಿಗಣಿಸಬೇಕು ಎಂದು ಆವರಗೆರೆ ಉಮೇಶ್‌ ಹಾಗೂ ಶಿವನಹಳ್ಳಿ ರಮೇಶ್‌ ಮನವಿ ಮಾಡಿದರು.

ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಉದ್ಯಾನಗಳ ಸ್ವಚ್ಛತೆಗೆ ಇನ್ನೂ 120 ಕಾರ್ಮಿಕರ ಅವಶ್ಯವಿದೆ ಎಂದು ಶಿವನಹಳ್ಳಿ ರಮೇಶ್‌ ಹೇಳಿದರು.

‘ಪ್ರಸ್ತುತ 180 ಉದ್ಯಾನಗಳಿದ್ದು, 20 ಗುಂಟೆಯ ಉದ್ಯಾನಕ್ಕೆ ಒಬ್ಬ ಸಿಬ್ಬಂದಿ ಇರಬೇಕು ಎಂಬ ನಿಯಮವಿದೆ. ಆದರೆ, ಅಗತ್ಯ ಸಿಬ್ಬಂದಿಯಿಲ್ಲ. ಇನ್ನೂ 104 ಸಿಬ್ಬಂದಿ ಅಗತ್ಯವಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಕ್ತರು ಹೇಳಿದರು. ಮೇಯರ್‌ ಅನಿತಾಬಾಯಿ ಮಾಲತೇಶ್‌, ಉಪ ಮೇಯರ್‌ ನಾಗರತ್ನಮ್ಮ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರೂ ಇದ್ದರು.

ಅನುದಾನ ಹಂಚಿಕೆ ತಾರತಮ್ಯ: ವಾಕ್ಸಮರ

‘ಕೆಲ ವಾರ್ಡ್‌ಗಳ ಅಭಿವೃದ್ಧಿಗೆ ₹ 2 ಕೋಟಿಯ ತನಕ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ, ನಮ್ಮ ವಾರ್ಡ್‌ಗೆ ಕೇವಲ
₹ 25 ಲಕ್ಷ ಅನುದಾನ ನೀಡಲಾಗಿದೆ. ಈ ರೀತಿ ತಾರತಮ್ಯ ಮಾಡಿದರೆ, ವಾರ್ಡ್ ಅಭಿವೃದ್ಧಿ ಮಾಡುವುದಾದರೂ ಹೇಗೆ’ ಎಂದು ಬಿಜೆಪಿ ಸದಸ್ಯ ಡಿ.ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಸಂಸದರಿಂದ ಅನುದಾನ ಮಂಜೂರು ಮಾಡಿಸು’ ಎಂದು ಶಿವನಹಳ್ಳಿ ರಮೇಶ್‌ ಕಿಚಾಯಿಸಿದರು. ಪ್ರಚಾರಕ್ಕಾಗಿ ಕುಮಾರ್‌ ಈ ರೀತಿ ಮಾಡುತ್ತಿದ್ದು, ಅವರನ್ನು ಸಭೆಯಿಂದ ಹೊರಗೆ ಹಾಕಿ ಎಂದು ದಿನೇಶ್‌ ಶೆಟ್ಟಿ ಒತ್ತಾಯಿಸಿದರು. ಈ ಸಮಯದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ತುಸು ಜೋರಾಯಿತು.

ಮಧ್ಯ ಪ್ರವೇಶಿಸಿದ ಮೇಯರ್‌ ಅನಿತಾಬಾಯಿ ಅವರು, ‘ಇದೇ ರೀತಿ ಮುಂದುವರಿದರೆ, ಸಭೆಯಿಂದ ನಿಮ್ಮನ್ನು ಹೊರಗೆ ಕಳುಹಿಸಬೇಕಾಗುತ್ತದೆ’ ಎಂದು ಕುಮಾರ್‌ಗೆ ಎಚ್ಚರಿಕೆ ನೀಡಿದರು.

ಮೂವರು ಮೇಯರ್‌..?

ಪ್ರತಿ ಭಾರಿ ಸಭೆಯಲ್ಲಿ ಪ್ರಸ್ತಾಪವಾಗುವ ವಿಷಯಗಳಿಗೆ ಶಿವನಹಳ್ಳಿ ರಮೇಶ್‌ ಹಾಗೂ ದಿನೇಶ್‌ ಕೆ.ಶೆಟ್ಟಿ ಮಧ್ಯಪ್ರವೇಶಿಸಿ, ಉತ್ತರ ನೀಡುತ್ತಾರೆ. ಪಾಲಿಕೆಯಲ್ಲಿ ಮೂವರು ಮೇಯರ್‌ ಇದ್ದಾರೆಯೇ ಎಂದು ಡಿ.ಕುಮಾರ್‌, ಮೇಯರ್‌ ಅವರನ್ನು ಪ್ರಶ್ನಿಸಿದರು.

‘ಪವರ್‌ ಇಲ್ಲದ ಸದಸ್ಯತ್ವ ಬೇಡ...’

‘ನಾಮ ನಿರ್ದೇಶಿತ ಸದಸ್ಯರಿಗೆ ಯಾವುದೇ ಅನುದಾನ ನೀಡಿಲ್ಲ. ನಮಗೆ ‘ಪವರ್‌’ ಕೂಡ ಇಲ್ಲ. ಇಂತಹ ಸದಸ್ಯತ್ವ ನಮಗೆ ಬೇಡ. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ಬಂದ ನಂತರ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ನಾಮ ನಿರ್ದೇಶಿತ ಸದಸ್ಯ ಎಲ್‌.ಎಂ.ಹನುಮಂತಪ್ಪ ಅವರು ಸಭೆಯ ಅಜೆಂಡಾ ಕಾಪಿಯನ್ನು ಮೇಯರ್‌ಗೆ ವಾಪಸು ನೀಡಿದ ಘಟನೆ ಕೂಡ ನಡೆಯಿತು.

ಶಾಮನೂರು ಶಿವಶಂಕರಪ್ಪ ಸಾಗರ

ನಗರದ ನೀರು ಸರಬರಾಜು ಕೇಂದ್ರವಾದ ಟಿವಿ ಸ್ಟೇಷನ್‌ ಕೆರೆಗೆ ‘ಡಾ.ಶಾಮನೂರು ಶಿವಶಂಕರಪ್ಪ ಸಾಗರ’ ಎಂದು ನಾಮಕರಣ ಮಾಡಲು ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯು ತೀರ್ಮಾನಿಸಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಬಿ.ಲಿಂಗರಾಜ್ ಅವರ ಪ್ರಸ್ತಾವಕ್ಕೆ ಪಾಲಿಕೆಯ ಎಲ್ಲಾ ಸದಸ್ಯರು ಬೆಂಬಲಿಸಿದರು. ಇದಕ್ಕೆ ಮೇಯರ್‌ ಅನಿತಾಬಾಯಿ ಮಾಲತೇಶ್‌ ಅವರು ಅನುಮೋದನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT