ರಾಜ್ಯಾಭಿಷೇಕ ಮಹೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಸಾಮರಸ್ಯದ ಸಮಾಜ: ಅಹಿಂಸಾ ಸಿದ್ಧಾಂತ ಅಗತ್ಯ

‘ಶಾಂತಿ, ಸಾಮರಸ್ಯದ ಸಮಾಜ ಸ್ಥಾಪನೆಗೆ ಅಹಿಂಸಾ ಸಿದ್ಧಾಂತ ಅಗತ್ಯ. ಗಾಂಧೀಜಿ ಸಹ ಜೈನ ಧರ್ಮದ ಪ್ರಭಾವದಿಂದಲೇ ತಮ್ಮ ಚಳವಳಿಯಲ್ಲಿ ಅಹಿಂಸೆಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡರು’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಶ್ರವಣಬೆಳಗೊಳ: ‘ಶಾಂತಿ, ಸಾಮರಸ್ಯದ ಸಮಾಜ ಸ್ಥಾಪನೆಗೆ ಅಹಿಂಸಾ ಸಿದ್ಧಾಂತ ಅಗತ್ಯ. ಗಾಂಧೀಜಿ ಸಹ ಜೈನ ಧರ್ಮದ ಪ್ರಭಾವದಿಂದಲೇ ತಮ್ಮ ಚಳವಳಿಯಲ್ಲಿ ಅಹಿಂಸೆಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡರು’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಚಾವುಂಡರಾಯ ಸಭಾ ಮಂಟಪದಲ್ಲಿ ಆದಿನಾಥ ಸ್ವಾಮಿ ರಾಜ್ಯಾಭಿಷೇಕ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯತೆ, ಧರ್ಮ ಮತ್ತು ಪರಂಪರೆಯ ಕುರಿತು ಯಾವತ್ತೂ ನಾಚಿಕೆ ಪಟ್ಟುಕೊಳ್ಳಬಾರದು. ಗುರು-ಹಿರಿಯರು, ಸಂತರನ್ನು ಗೌರವಿಸುವ ಭಾರತೀಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಸಂಸ್ಕೃತಿಯನ್ನು ಗೌರವಿಸಬೇಕೆಂಬ ಭಾವನೆ ಹೊಸಪೀಳಿಗೆಯಲ್ಲಿ ಮೂಡಲಿ ಎಂಬ ಉದ್ದೇಶದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನದಲ್ಲಿದ್ದರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ’ ಎಂದು ನುಡಿದರು.

‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಕೃತಿ ತಲೆದೋರುತ್ತಿದೆ. ಅದನ್ನು ನಿವಾರಿಸಲು ಇಂತಹ ಧಾರ್ಮಿಕ ಉತ್ಸವಗಳು ಅತ್ಯಗತ್ಯ. ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯತ್ವ ಉಳಿಯಬೇಕಾದರೆ ಜೈನಧರ್ಮದ ಸಾರವಾದ ‘ಬದುಕು-ಬದುಕಲು ಬಿಡು’ ಎಂಬ ಪರಮತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇತಿಹಾಸದಲ್ಲಿ ಭಾರತ ಮತ್ತೊಂದು ದೇಶದ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಏಕೆಂದರೆ, ಭಾರತದ ಸಾಧು, ಸಂತರು ನೀಡಿದ ಅಹಿಂಸೆಯ ಸಂದೇಶ ಇದಕ್ಕೆ ಕಾರಣ. ನಮ್ಮದು ಕಿತ್ತು ತಿನ್ನುವ ಸಂಸ್ಕೃತಿಯಲ್ಲ. ನಮ್ಮಲ್ಲಿರುವ ಅನ್ನವನ್ನು ಹಂಚಿ ತಿನ್ನುವಂತ ಧರ್ಮ. ಕೆಲ ಸಿನಿಮಾಗಳಿಂದಾಗಿ ಯುವಜನರು ಅನ್ಯ ದೇಶಗಳ ಸಂಸ್ಕೃತಿ ಅನುಕರಣೆ ಮಾಡುತ್ತಿದ್ದಾರೆ. ಭಾರತ ವಿಶ್ವದ ಆಧ್ಯಾತ್ಮಿಕತೆಯ ರಾಜಧಾನಿ’ ಎಂದು ಅಭಿಪ್ರಾಯಪಟ್ಟರು.

ರಾಜ್ಯಪಾಲ ವಜುಭಾಯಿವಾಲಾ, ‘ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಬಾಹುಬಲಿಯಂತೆ ಬಾಹುಬಲವುಳ್ಳವರಾಗಬೇಕಿದೆ’ ಎಂದು ಯುವಜನರನ್ನು ಹುರಿದುಂಬಿಸಿದರು.

ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ‘ಜಗತ್ತು ಅಣುಯುದ್ಧದ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ಜೈನಧರ್ಮದ ತತ್ವಗಳು ಪರಿಹಾರ ಒದಗಿಸಬಲ್ಲವು’ ಎಂದರು.

ಶ್ರವಣಬೆಳಗೊಳದಲ್ಲಿ ಸ್ಥಾಪನೆ ಯಾಗಲಿರುವ ಪ್ರಾಕೃತ ವಿಶ್ವವಿದ್ಯಾಲಯಕ್ಕೆ ನೆರವು ಒದಗಿಸುವುದಲ್ಲದೆ, ಬಿಹಾರದ ವೈಶಾಲಿಯಲ್ಲೂ ಪ್ರಾಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
**
ಬೆಳಗೊಳಕ್ಕೆ ಐತಿಹಾಸಿಕ ದಿನ

‘ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಮುಖ ಘಟ್ಟವಾಗಿರುವ ರಾಜ್ಯಾಭಿಷೇಕ ಮಹೋತ್ಸವವನ್ನು ಉಪರಾಷ್ಟ್ರಪತಿ ನೆರವೇರಿಸುತ್ತಿರುವುದು ಬೆಳಗೊಳದ ಇತಿಹಾಸದಲ್ಲಿ ಐತಿಹಾಸಿಕ ಸುದಿನ’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

‘1981ರಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದರು. 1993 ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ, ಪ್ರಧಾನಿ ಪಿ.ವಿ.ನರಸಿಂಹರಾವ್, 2006ರಲ್ಲಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಉಪರಾಷ್ಟ್ರಪತಿ ಶೇಖಾವತ್ ಪಾಲ್ಗೊಂಡಿದ್ದರು’ ಎಂದು ಸ್ಮರಿಸಿದರು.

‘ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸುಮಾರು 2000 ಕಿ.ಮೀ. ಪಾದಯಾತ್ರೆಯಲ್ಲಿ ಸಾಗಿ ಬಂದಿರುವ ಮಹಾಮುನಿಗಳು ಹಾಗೂ ಮಾತಾಜಿಗಳ ಬಗ್ಗೆ ಹೇಳಲು ಪದಗಳು ಸಾಲದು. ಮಹೋತ್ಸವದ ಅಂಗವಾಗಿ ಭಾರತೀಯ ಜ್ಞಾನಪೀಠದಿಂದ ₹ 1 ಕೋಟಿ ವೆಚ್ಚದಲ್ಲಿ ಬಾಹುಬಲಿ ಜೀವನ, ಸಂದೇಶ ಕುರಿತ 108 ಪುಸ್ತಕಗಳನ್ನು ಪ್ರಕಟಿಸಿರುವುದು ಹೆಮ್ಮೆಯ ವಿಚಾರ’ ಎಂದು ಬಣ್ಣಿಸಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಹಾಸನ
ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

20 Feb, 2018

ಅರಕಲಗೂಡು
ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಧರಣಿ

ಕೊಳವೆ ಬಾವಿಗಳ ದುರಸ್ತಿಗೂ ಕ್ರಮ ಕೈಗೊಂಡಿಲ್ಲ. ಜನರು ಪಡಿಪಾಟಲು ಪಡಬೇಕಾಗಿದೆ. ಕೊಡ ನೀರಿಗಾಗಿ ಖಾಸಗಿ ಕೊಳವೆಬಾವಿಯವರ ಹತ್ತಿರ ಬೇಡುವ ಸ್ಥಿತಿ ಇದೆ

20 Feb, 2018

ಹಳೇಬೀಡು
ಪ್ರವಾಸಿಗರಿಲ್ಲದೆ ಭಣಗುಡುತ್ತಿರುವ ಜಿನಮಂದಿರಗಳು

ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭ ಒಂದು ತಿಂಗಳು ಮುಂಚಿತವಾಗಿಯೇ ಬಸ್ತಿಹಳ್ಳಿಯ ಜಿನಮಂದಿರಗಳ ವೀಕ್ಷಣೆಗೆ ಕರ್ನಾಟಕವಲ್ಲದೆ, ಉತ್ತರ ಭಾರತದಿಂದಲೂ ಜೈನಯಾತ್ರಿಗಳು ಬರುತ್ತಿದ್ದರು.

20 Feb, 2018
ಸಂತಸೇವಾಲಾಲರ ವೈಭವದ ಜಯಂತೋತ್ಸವ

ಹಳೇಬೀಡು
ಸಂತಸೇವಾಲಾಲರ ವೈಭವದ ಜಯಂತೋತ್ಸವ

19 Feb, 2018
ಬಾಹುಬಲಿ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು

ಶ್ರವಣಬೆಳಗೊಳ
ಬಾಹುಬಲಿ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು

19 Feb, 2018