ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯಿಂದ ಸಂಪನ್ಮೂಲ ಬರಿದು

Last Updated 12 ಫೆಬ್ರುವರಿ 2018, 6:56 IST
ಅಕ್ಷರ ಗಾತ್ರ

ಸಾಗರ: ಆಧುನಿಕತೆಯ ಕಾರಣಕ್ಕೆ  ಪ್ರಾಕೃತಿಕ ಸಂಪನ್ಮೂಲಗಳು ವೇಗವಾಗಿ ಬರಿದಾಗುತ್ತಿರುವುದು ಅಪಾಯದ ಸಂಕೇತ ಎಂದು ಬೆಂಗಳೂರು ಕೆರೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಪ್ರಕಾಶ್‌ ಬೆಳವಾಡಿ ಹೇಳಿದರು.

ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ವೃಕ್ಷಲಕ್ಷ ಆಂದೋಲನ ಹಾಗೂ ಸೇವಾ ಸಾಗರ ಟ್ರಸ್ಟ್‌ ಶನಿವಾರ ಏರ್ಪಡಿಸಿದ್ದ ಪಶ್ಚಿಮಘಟ್ಟ ಸಂರಕ್ಷಣೆ–ಸಂವರ್ಧನೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮಘಟ್ಟದ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿರುವುದು ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಬೃಹತ್‌ ಅಭಿವೃದ್ಧಿ ಯೋಜನೆಗಳನ್ನು ಯಾರ ಉಪಯೋಗಕ್ಕಾಗಿ ಮಾಡುತ್ತಿದ್ದೇವೆ ಎನ್ನುವ ಕಲ್ಪನೆಯೇ ಇಲ್ಲವಾಗಿದೆ. ಧರ್ಮ, ಮಠ, ಜಾತಿ, ರಾಜಕಾರಣಿಗಳು ನಮ್ಮನ್ನು ಉಳಿಸುವುದಿಲ್ಲ, ಬದಲಾಗಿ ನಮ್ಮನ್ನು ಉಳಿಸುವುದಿದ್ದರೆ ಪರಿಸರ ಮಾತ್ರ ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಜಾಗೃತಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

‌ಗ್ರಾಮೀಣ ಪ್ರದೇಶಗಳಿಗೂ ಹೆದ್ದಾರಿಗಳು, ಬೃಹತ್‌ ಗಾತ್ರದ ಕೈಗಾರಿಕೆಗಳು ದಾಪುಗಾಲಿಡುತ್ತಿವೆ. ಗ್ರಾಮೀಣ ಸಂಸ್ಕೃತಿ, ಸಂವೇದನೆಯನ್ನು ಕೇವಲ ಮಾಧ್ಯಮಗಳಲ್ಲಿ ಮಾತ್ರ ನೋಡುವಂತಾಗಿದೆ. ನೆಲಜಲ, ಜೀವ ವೈವಿಧ್ಯ, ಪ್ರಾಣಿ ಪಕ್ಷಿ ಸೇರಿದಂತೆ ಈ ಭೂಮಿಯ ಮೇಲಿನ ಪ್ರತಿ ಜೀವಸಂಕುಲ ಬದುಕಿನ ಭಾಗ ಎಂಬ ಅರಿವು ಮೂಡುವವರೆಗೂ  ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.

ಗಲ್ಫ್‌ ರಾಷ್ಟ್ರದಲ್ಲಿ ಸಮುದ್ರದ ನೀರಿನಿಂದ ಕುಡಿಯುವ ನೀರಿನ ಉತ್ಪಾದನೆ ಮಾಡುವ ದುಸ್ಸಾಹಸ ನಡೆಯುತ್ತಿದೆ. ಇದು ಪ್ರಕೃತಿಯನ್ನೆ ಮನುಷ್ಯ ಬದಲಿಸಲು ಹೊರಟಿರುವ ದುರಹಂಕಾರದ ಸಂಕೇತ. ಇದರ ಪರಿಣಾಮ ಅಲ್ಲಿನ ಸಮುದ್ರದ ನೀರಿನಲ್ಲಿ ಉಪ್ಪಿನ ಅಂಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಗಾಂಧೀಜಿ ಪ್ರತಿಪಾದಿಸಿದ ಗ್ರಾಮ ಪರಿಕಲ್ಪನೆಯ ಮಾದರಿಯೊಂದೇ ಪರಿಸರವನ್ನು ಕಾಪಾಡಬಲ್ಲದು ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಜನಸಂಖ್ಯೆ ಅತಿಯಾಗಿ ಬೆಳೆಯುತ್ತಿರುವುದೂ ಪರಿಸರದ ಸಮಸ್ಯೆಗೆ ಕಾರಣವಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯದಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಇದಕ್ಕೆ  ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಪರಿಸರ ಚಳವಳಿಗೆ ಈಗ ನಾವು ಹೊಸ ರೂಪವನ್ನು ಕೊಡಬೇಕಿದೆ. ಪರಿಸರಾಸಕ್ತ ಜನಪ್ರತಿನಿಧಿಗಳನ್ನು ಹೋರಾಟದ ಚೌಕಟ್ಟಿನೊಳಗೆ ಒಳಗೊಳ್ಳಬೇಕು. ಕಾನೂನು ಹೋರಾಟದ ಜೊತೆಗೆ ಜನರ ವಿಶ್ವಾಸವನ್ನು ಗಳಿಸಿಕೊಂಡು ಮಾಧ್ಯಮಗಳ ಜೊತೆ ಸಮನ್ವಯತೆ ಸಾಧಿಸಬೇಕಿದೆ ಎಂದು ಸಲಹೆ ನೀಡಿದರು.

ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನದಿ ತಿರುವು ಯೋಜನೆ ಪಶ್ಚಿಮಘಟ್ಟ ಪ್ರದೇಶಕ್ಕೆ ಮಾರಕವಾಗಲಿದೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಅಭ್ಯಂತರವಿಲ್ಲ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಹೇಳಿಕೆ ನೀಡಿರುವುದು ಬೇಸರದ ಸಂಗತಿ. ಈ ರೀತಿ ಹೇಳಿಕೆ ನೀಡುವಾಗ ಅವರು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಿತ್ತು ಎಂದರು.

ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ, ಕೇಶವ ಕೊರ್ಸೆ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಸೇವಾ ಸಾಗರ ಟ್ರಸ್ಟ್‌ನ ಅಧ್ಯಕ್ಷ ಅ.ಪು.ನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT