ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

56,218 ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣ

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 17ರಷ್ಟು ಅಧಿಕ ಮಳೆ, ಭತ್ತ ನಾಟಿಗೆ ಸಿದ್ಧತೆ
Last Updated 3 ಜುಲೈ 2018, 13:19 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 17ರಷ್ಟು ಅಧಿಕ ಮಳೆಯಾಗಿದ್ದು, ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆ ಮೂಡಿಸಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ 686 ಮಿ.ಮೀ. ಮಳೆಯಾಗಬೇಕಿತ್ತು. ಈಗ ಸುರಿದ ಮಳೆ ಪ್ರಮಾಣ 803 ಮಿ.ಮೀ. ಅಂದರೆ ವಾಡಿಕೆಗಿಂತ ಶೇ 17ರಷ್ಟು ಹೆಚ್ಚುವರಿ ಮಳೆಯಾಗಿದೆ. ಉತ್ತಮ ಮಳೆಯಾದ ಕಾರಣ ಈಗಾಗಲೇ 56,218 ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಬಾರಿ 1,68,599 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಮೆಕ್ಕೆಜೋಳದತ್ತ ರೈತರ ಚಿತ್ತ:

ಮುಂಗಾರಿಗೆ ಮುನ್ನವೇ ಮಳೆ ಆರಂಭವಾದ ಕಾರಣ ಮೇ ಆರಂಭದಲ್ಲೇ ರೈತರು ಹೊಲ, ಗದ್ದೆಗಳನ್ನು ಹಸನು ಮಾಡಿಕೊಂಡಿದ್ದರು. ಹಾಗಾಗಿ, ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆಯತ್ತ ಹೆಚ್ಚಿನ ಚಿತ್ತ ಹರಿಸಿದ್ದಾರೆ. ಈ ಬಾರಿ 59,955 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ 48,291 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಜೂನ್ ಆರಂಭದಲ್ಲೇ 675 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರೈಸಲಾಗಿತ್ತು. ಇನ್ನು ಕೇವಲ 10 ಸಾವಿರ ಹೆಕ್ಟೇರ್ ಬಾಕಿ ಇದೆ.

ಭತ್ತ ಬಿತ್ತನೆ ಕುಂಠಿತ:

ಪ್ರತಿ ವರ್ಷ ಸೊರಬ, ಶಿಕಾರಿಪುರ ಭಾಗದಲ್ಲಿ ಈ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕೂರ್ಗೆ ಬಿತ್ತನೆ ಕಾರ್ಯ ಮಾಡುತ್ತಿದ್ದರು. ಈ ಬಾರಿ ಮಳೆ ಅಧಿಕವಾದ ಕಾರಣ ಎಲ್ಲೆಡೆ ನಾಟಿ ಮಾಡಲು ಭತ್ತದ ಸಸಿ ಮಡು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ, ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ನಾಟಿ ಕಾರ್ಯ ಆರಂಭವಾದ ನಂತರ ಕ್ಷೇತ್ರ ವಿಸ್ತಾರ ಅಧಿಕವಾಗಬಹುದು ಎಂಬ ನಿರೀಕ್ಷೆಯಲ್ಲಿ ಕೃಷಿ ಅಧಿಕಾರಿಗಳು ಇದ್ದಾರೆ.

ಭತ್ತದ ಬಿತ್ತನೆ ಕ್ಷೇತ್ರ 1,02,593 ಹೆಕ್ಟೇರ್ ಇದೆ. ಇದುವರೆಗೂ ಆಗಿರವ ಬಿತ್ತನೆ ಕೇವಲ 6,385 ಹೆಕ್ಟೇರ್ ಮಾತ್ರ. ಕಳೆದ ಬಾರಿ ಮಳೆ ಕೊರತೆಯ ಕಾರಣ ನಿಗದಿತ ಅವಧಿಯಲ್ಲಿ ಜಲಾಶಯಗಳು ಭರ್ತಿಯಾಗಲಿಲ್ಲ. ಹಾಗಾಗಿ, ನಿರೀಕ್ಷಿತ ಮಟ್ಟದಲ್ಲಿಭತ್ತದನಾಟಿ ಆಗಿರಲಿಲ್ಲ. ಬದಲಿಗೆ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿತ್ತು.

21,881 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ:

ಮುಂಗಾರಿನ ಹಂಗಾಮಿಗೆ ರೈತರಿಂದ 21,881 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇತ್ತು. 6,317 ಕ್ವಿಂಟಲ್ ಭತ್ತದ ಬೀಜ, 11,400 ಕ್ವಿಂಟಲ್ ಮೆಕ್ಕೆಜೋಳ, 156 ಕ್ವಿಂಟಲ್ ತೊಗರಿ, 165 ಕ್ವಿಂಟಲ್ ರಾಗಿ ಬೀಜ ಸಂಗ್ರಹಿಸಲಾಗಿತ್ತು. ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 23,200 ಕ್ವಿಂಟಲ್, ರೈತ ಸಂಪರ್ಕ ಕೇಂದ್ರಗಳಲ್ಲಿ 12 ಸಾವಿರ ಕ್ವಿಂಟಲ್‌ ಸೇರಿದಂತೆ ಬೇಡಿಕೆಗಿಂತ ಅಧಿಕವಾಗಿಯೇ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.

89,822 ಟನ್‌ ರಸಗೊಬ್ಬರದ ಬೇಡಿಕೆ ಇತ್ತು. ಪ್ರಸ್ತುತ 26,394 ಟನ್‌ಗೆ ಬೇಡಿಕೆ ಪೂರೈಸಲಾಗಿದೆ. 37 ಸಾವಿರ ಟನ್‌ ರಸಗೊಬ್ಬರ ದಾಸ್ತಾನು ಇದೆ.

ಅಧಿಕ ಮಳೆಯ ದಾಖಲೆ:

ರಾಜ್ಯದಲ್ಲೇ ಅಧಿಕ ಮಳೆ ಬೀಳುವ ಪ್ರದೇಶ ಎಂಬ ಖ್ಯಾತಿಗೆ ಒಳಗಾಗಿರುವ ಹುಲಿಕಲ್‌, ಯಡೂರು, ಮಾಣಿ ಜಲಾಶಯ ಪ್ರದೇಶದಲ್ಲಿ ಜೂನ್‌ನಲ್ಲಿ ದಾಖಲೆಯ ಮಳೆಯಾಗಿದೆ. ಹುಲಿಕಲ್‌ನಲ್ಲಿ 1,984 ಮಿ.ಮೀ, ಯಡೂರಿನಲ್ಲಿ 1,794 ಮಿ.ಮೀ, ಮಾಣಿ ಅಣೆಕಟ್ಟೆ ಪ್ರದೇಶದಲ್ಲಿ 1,698 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT