ಗೂಗಲ್ ಎಂಬ ಕೇಡಿನ ವರ್ತಮಾನ ಮತ್ತು ಭವಿಷ್ಯ

ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಂಥ ಕಂಪನಿಗಳು ಈಗ ತಮ್ಮ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಪರಿಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಂತರ್ಜಾಲದಲ್ಲಿ ನಡೆಸಬಹುದಾದ ಯಾವುದೇ ವ್ಯವಹಾರವು ಒಂದಲ್ಲಾ ಒಂದು ಬಗೆಯಲ್ಲಿ ಈ ನಾಲ್ಕೈದು ಕಂಪನಿಗಳ ಸುಪರ್ದಿಯಲ್ಲೇ ಬರುತ್ತದೆ.

ಗೂಗಲ್ ಎಂಬ ಕೇಡಿನ ವರ್ತಮಾನ ಮತ್ತು ಭವಿಷ್ಯ

ಜಗತ್ತಿನ ಐದು ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗೂಗಲ್‌ಗೆ ಇದೆ. ಜಗತ್ತಿನ ಜ್ಞಾನವನ್ನು ವ್ಯವಸ್ಥಿತವಾಗಿಡುವ ಅಂದರೆ ಯಾರಾದರೂ ಹುಡುಕಿದರೆ ಸಿಗುವಂತೆ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡ ತನ್ನ ಸ್ಥಾಪನೆಯ ಎರಡೇ ವರ್ಷದಲ್ಲಿ ತನ್ನ ವ್ಯಾವಹಾರಿಕ ನೈತಿಕತೆಗೆ ಇನ್ನೊಂದು ಧ್ಯೇಯವಾಕ್ಯವನ್ನು ಕೊಟ್ಟುಕೊಂಡಿತು. ‘Don’t be evil’. ‘ಕೆಡುಕನ್ನು ಮಾಡಬೇಡ’ ಎಂದು ಅನುವಾದಿಸಬಹುದಾದ ಈ ಧ್ಯೇಯವಾಕ್ಯ ತನಗೆ ಬೇಕು ಎಂದು ಗೂಗಲ್‌ಗೆ ಅನ್ನಿಸಿದ್ದೇ ಅದು ‘ಜಗತ್ತಿನ ಜ್ಞಾನವನ್ನು ವ್ಯವಸ್ಥಿತವಾಗಿಡುವ’ ಪ್ರಕ್ರಿಯೆಯಲ್ಲಿ ಗಳಿಸಿದ ಶಕ್ತಿಯಿಂದ.

ಗೂಗಲ್ ತನ್ನ ವ್ಯಾವಹಾರಿಕ ನೈತಿಕತೆಯ ಬಗ್ಗೆ ಏನನ್ನೇ ಹೇಳಿಕೊಂಡರೂ ಅದು ‘Evil’ ಆಗಿ ಪರಿಣಮಿಸಿದೆ ಎಂದು ಹೇಳುವವರ ಸಂಖ್ಯೆ ಅದು ಸ್ಥಾಪನೆಯಾದ ನಂತರದ ಎರಡು ದಶಕಗಳ ಅವಧಿಯಲ್ಲಿ ಹೆಚ್ಚಾಗುತ್ತಲೇ ಬಂದಿದೆ. ಮೂರು ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಗೂಗಲ್‌ಗೆ ₹ 136 ಕೋಟಿ ದಂಡ ವಿಧಿಸುವ ಮೂಲಕ ಗೂಗಲ್ ಕೂಡಾ ಈವಿಲ್ ಆಗಿರಬಹುದು ಎಂದು ಸೂಚಿಸಿದೆ.

ಅಂತರ್ಜಾಲದಲ್ಲಿ ಹುಡುಕಾಟ ನಡೆಸುವುದನ್ನು ‘ಗೂಗಲಿಂಗ್’ ಎಂದು ಕರೆಯುವಷ್ಟರ ಮಟ್ಟಿಗೆ ಗೂಗಲ್‌ನ ಅಂತರ್ಜಾಲ ಶೋಧನಾ ಸೇವೆ ಜನಪ್ರಿಯ. ಈ ಸೇವೆಯೊಂದಿಗೆ ಸ್ಪರ್ಧಿಸಲು ಮುಂದಾದ ಯಾರೂ ಈ ತನಕ ಯಶಸ್ಸು ಗಳಿಸಿಲ್ಲ. 2017ರ ಅಂತ್ಯದವರೆಗಿನ ಲೆಕ್ಕಾಚಾರಗಳಂತೆ ಪ್ರಪಂಚದ ಅಂತರ್ಜಾಲ ಶೋಧನಾ ಮಾರುಕಟ್ಟೆಯ ಶೇಕಡ 91.74ರಷ್ಟು ಪಾಲು ಗೂಗಲ್‌ನದ್ದು. ಎರಡನೇ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್‌ನ ಬಿಂಗ್ ಬಳಕೆಯ ಪ್ರಮಾಣ ಕೇವಲ ಶೇಕಡ 2.76. ಮೂರನೇ ಸ್ಥಾನದಲ್ಲಿರುವ ಯಾಹೂ ಶೇಕಡ 1.83ರ ಮಾರುಕಟ್ಟೆ ಪಾಲಿಗೆ ಸೀಮಿತಗೊಂಡಿದೆ. ಅಂದರೆ ಗೂಗಲ್‌ ಸೇವೆ ಬಳಕೆಯ ಪ್ರಮಾಣ ತನ್ನ ಸಮೀಪದ ಪ್ರತಿಸ್ಪರ್ಧಿಗಿಂತ 33 ಪಟ್ಟು ಹೆಚ್ಚಿದೆ. ಭಾರತದಲ್ಲಿ ಗೂಗಲ್‌ನ ಶಕ್ತಿ ಇನ್ನೂ ಹೆಚ್ಚು. ಭಾರತದಲ್ಲಿ ಸರ್ಚ್ ಎಂಜಿನ್ ಬಳಕೆಯ ಶೇಕಡ 97.66ರಷ್ಟನ್ನು ಗೂಗಲ್ ಆಕ್ರಮಿಸಿಕೊಂಡಿದೆ. ಇನ್ನುಳಿದ ಶೇಕಡ 2.44ನ್ನು ಬಿಂಗ್, ಯಾಹೂ, ಡಕ್‌ಡಕ್‌ಗೋ, ಬೈದು, ಆಸ್ಕ್ ಜೀವ್ಸ್‌ಗಳು ಹಂಚಿಕೊಂಡಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬಿಂಗ್ ಬಳಿಯೇ ಇದೆ. ಭಾರತೀಯ ಸ್ಪರ್ಧಾ ಆಯೋಗವು ಗೂಗಲ್‌ಗೆ ವಿಧಿಸಿರುವ ದಂಡವನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.

ಇಂಟರ್ನೆಟ್ ಸಂಪರ್ಕ ಇರುವ ಯಾರು ಬೇಕಾದರೂ ಗೂಗಲ್‌ನ ಶೋಧನಾ ಸೇವೆಯನ್ನು ಬಳಸಬಹುದು. ಬಳಕೆದಾರರ ಮಟ್ಟಿಗೆ ಇದು ಉಚಿತ. ಈ ‘ಉಚಿತ ಸೇವೆ’ಗೆ ಖರ್ಚಾಗುವ ಹಣವನ್ನು ಅದು ಇತರ ಮಾರ್ಗಗಳಲ್ಲಿ ಸಂಪಾದಿಸುತ್ತದೆ. ಉದಾಹರಣೆಗೆ ಯಾವುದೇ ಪದ, ವಾಕ್ಯ ಅಥವಾ ಚಿತ್ರವನ್ನು ಹುಡುಕಿದರೂ ಅದರ ಜೊತೆಗೆ ಒಂದಷ್ಟು ಪ್ರಾಯೋಜಿತ ಲಿಂಕ್‌ಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ನಾವು ಹುಡಕಲು ಬಳಸುವ ಪದಕ್ಕೆ ಸಂಬಂಧಪಟ್ಟ ಸೇವೆ ಅಥವಾ ಸರಕನ್ನು ಮಾರಾಟ ಮಾಡುವ ಜಾಹೀರಾತುಗಳು.

ಅಂತರ್ಜಾಲ ಶೋಧನಾ ಸೇವೆಗಳ ಮಾರುಕಟ್ಟೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಪಾಲು ಒಂದೇ ಸಂಸ್ಥೆಯ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ ಏನೆಲ್ಲಾ ಅನಾಹುತಗಳಾಗಬಹುದೋ ಅವೆಲ್ಲವೂ ಗೂಗಲ್‌ನ ಸಂದರ್ಭದಲ್ಲಿಯೂ ಸಂಭವಿಸುತ್ತಿವೆ. ಗೂಗಲ್ ತನ್ನ ಎಲ್ಲಾ ಶೋಧನಾ ಫಲಿತಾಂಶಗಳ ಆರಂಭದಲ್ಲಿ ಒಂದಷ್ಟು ಜಾಹೀರಾತು ಕೊಂಡಿಗಳನ್ನು ಪ್ರಕಟಿಸುತ್ತದೆ. ಇದನ್ನು ಸ್ಪಷ್ಟವಾಗಿ ಜಾಹೀರಾತು ಎಂದೇ ಹೇಳಿರುತ್ತದೆ. ಆದರೂ ಇವುಗಳನ್ನು ಕ್ಲಿಕ್ಕಿಸುವವರ ಸಂಖ್ಯೆ ದೊಡ್ಡದೇ. ಗೂಗಲ್‌ನ ಆದಾಯದ ಬಹುದೊಡ್ಡ ಮೂಲವೂ ಅದೇ.

ಉದಾಹರಣೆಗೆ ಗೂಗಲ್ ಸೇವೆ ಬಳಸಿ ಬಸ್, ರೈಲು ಅಥವಾ ವಿಮಾನದ ಸಮಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಇದು ಅರ್ಥವಾಗುತ್ತದೆ. ಅದು ಸಮಯವನ್ನು ತಿಳಿಸುವುದರ ಜೊತೆಗೆ ಆಯಾ ಸೇವೆಗಳ ಟಿಕೆಟ್ ಕಾದಿರಿಸುವ ಸೇವೆಗಳ ಜಾಹೀರಾತು ಕೊಂಡಿಗಳನ್ನೂ ನಮ್ಮೆದುರು ಇಡುತ್ತದೆ. ಸಹಜವಾಗಿಯೇ ಬಳಕೆದಾರರು ಅವುಗಳಲ್ಲಿ ಒಂದನ್ನು ಆರಿಸಿಕೊಳ್ಳುತ್ತಾರೆ. ಇದು ಗೂಗಲ್‌ಗೆ ಆದಾಯ ತಂದುಕೊಡುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಇದೊಂದು ಸಮಸ್ಯೆಯೇ ಅಲ್ಲ.

ಭಾರತೀಯ ಸ್ಪರ್ಧಾ ಆಯೋಗದ ಎದುರು ಬಂದ ಭಾರತ್ ಮ್ಯಾಟ್ರಿಮೊನಿ ಪ್ರಕರಣ ಮೇಲೆ ಹೇಳಿದ ಸಾಮಾನ್ಯ ಸಂದರ್ಭವಾಗಿರಲಿಲ್ಲ. ಭಾರತ್ ಮ್ಯಾಟ್ರಿಮೊನಿ ಎಂಬ ವಧು–ವರರ ನಡುವೆ ಸಂಬಂಧ ಕಲ್ಪಿಸುವ ಸೇವೆ ಒದಗಿಸುವ ಪೋರ್ಟಲ್‌ನ ವ್ಯಾಪಾರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಕೆಲಸ ಗೂಗಲ್ ಒದಗಿಸುವ ಜಾಹೀರಾತು ಸೇವೆಯಿಂದ ಸಂಭವಿಸಿತ್ತು. ಎಷ್ಟರಮಟ್ಟಿಗೆ ಎಂದರೆ ಭಾರತ್ ಮ್ಯಾಟ್ರಿಮೊನಿ ಎಂಬ ಪದಗಳನ್ನು ಬಳಸಿ ಹುಡುಕಿದಾಗಲೂ ಆ ಸಂಸ್ಥೆಯ ಪ್ರತಿಸ್ಪರ್ಧಿಗಳ ಜಾಹೀರಾತು ಕಾಣಿಸುತ್ತಿತ್ತು. ಇದರಲ್ಲಿ ಕೆಲವು ಕಾನೂನಿನ ಸೂಕ್ಷ್ಮಗಳೂ ಇವೆ. ಟ್ರೇಡ್ ಮಾರ್ಕ್ ಕಾಯ್ದೆಯ ಪ್ರಕಾರ ‘ಭಾರತ್ ಮ್ಯಾಟ್ರಿಮೊನಿ’ ಎಂಬ ಹೆಸರಿನ ಮೇಲೆ ಅದನ್ನು ಟ್ರೇಡ್ ಮಾರ್ಕ್ ಕಾಯ್ದೆಯನ್ವಯ ನೋಂದಾಯಿಸಿದ ಸಂಸ್ಥೆಗೆ ಏಕಸ್ವಾಮ್ಯವಿದೆ. ಆ ಹೆಸರನ್ನು ಅದೇ ವ್ಯವಹಾರಕ್ಕಾಗಿ ಮತ್ತೊಂದು ಸಂಸ್ಥೆ ಬಳಸುವಂತಿಲ್ಲ. ಗೂಗಲ್‌ನ ಜಾಹೀರಾತು ಸೇವೆಯು ಭಾರತ್ ಮ್ಯಾಟ್ರಿಮೊನಿಯ ಸ್ಪರ್ಧಿಗಳಿಗೂ ಈ ಹೆಸರನ್ನು ಪರೋಕ್ಷವಾಗಿ ಬಳಸುವ ಅವಕಾಶ ಕಲ್ಪಿಸಿತ್ತು.

ಗೂಗಲ್ ತಂತ್ರಜ್ಞಾನದ ಹೆಸರಿನಲ್ಲಿ ಈ ಬಗೆಯ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಯುರೋಪ್ ಒಕ್ಕೂಟದಲ್ಲಿಯೂ ಇಂಥದ್ದೇ ಕಾರಣಕ್ಕಾಗಿ ಮೊಕದ್ದಮೆ ದಾಖಲಾಗಿತ್ತು. ದಂಡವನ್ನೂ ವಿಧಿಸಲಾಗಿತ್ತು. ಇದೆಲ್ಲವನ್ನೂ ಗೂಗಲ್ ತಂತ್ರಜ್ಞಾನದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತದೆ. ಸಂಸ್ಥೆಯ ಬಳಿ ಇರುವ ಅಗಾಧವಾದ ಹಣ ಬಲ ಈ ಬಗೆಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಳಕೆಯೂ ಆಗುತ್ತದೆ.

ಈ ಸಮಸ್ಯೆಯನ್ನು ‘ನೆಟ್ ನ್ಯೂಟ್ರಾಲಿಟಿ’ ಅಥವಾ ‘ಅಂತರ್ಜಾಲ ಅಲಿಪ್ತತೆ’ ಕುರಿತ ಚರ್ಚೆಗಳ ಬೆಳಕಿನಲ್ಲಿಯೂ ಅರ್ಥ ಮಾಡಿಕೊಳ್ಳಬಹುದು. ಫೇಸ್‌ಬುಕ್ ಮತ್ತು ಏರ್‌ಟೆಲ್‌ಗಳು ತಮ್ಮ ‘ಉಚಿತ ಇಂಟರ್ನೆಟ್’ ಸೇವೆಗಳನ್ನು ಪರಿಚಯಿಸಲು ಹೊರಟಾಗ ಉದ್ಭವಿಸಿದಂಥದ್ದೇ ಸಮಸ್ಯೆಯನ್ನು ಮತ್ತೊಂದು ಬಗೆಯಲ್ಲಿ ಗೂಗಲ್ ಸೃಷ್ಟಿಸುತ್ತಿದೆ. ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಿಗೂ ಇದೇ ಬಗೆಯ ಏಕಸ್ವಾಮ್ಯವಿದೆ. ಶೇಕಡ 90ಕ್ಕಿಂತ ಹೆಚ್ಚು ಮಾರುಕಟ್ಟೆಯಲ್ಲಿ ವ್ಯಾಪಿಸಿಕೊಂಡಿರುವ ಸಂಸ್ಥೆಯೊಂದು ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಸಮಾನ ಸ್ಪರ್ಧಾ ಕಣದ ನಿಯಮಗಳನ್ನಷ್ಟೇ ಮುರಿಯುತ್ತಿರುವುದಿಲ್ಲ. ಅವು ಬಳಕೆದಾರನ ಎದುರು ಇರುವ ಆಯ್ಕೆಗಳನ್ನೂ ಸೀಮಿತಗೊಳಿಸುತ್ತಿರುತ್ತವೆ. ಹೊಸ ಆವಿಷ್ಕಾರಗಳಿಗೂ ತಡೆಯೊಡ್ಡುತ್ತಿರುತ್ತವೆ.

ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಂಥ ಕಂಪನಿಗಳು ಈಗ ತಮ್ಮ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಪರಿಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಂತರ್ಜಾಲದಲ್ಲಿ ನಡೆಸಬಹುದಾದ ಯಾವುದೇ ವ್ಯವಹಾರವು ಒಂದಲ್ಲಾ ಒಂದು ಬಗೆಯಲ್ಲಿ ಈ ನಾಲ್ಕೈದು ಕಂಪನಿಗಳ ಸುಪರ್ದಿಯಲ್ಲೇ ಬರುತ್ತದೆ. ಇಂಟರ್ನೆಟ್ ಎಂಬ ತಂತ್ರಜ್ಞಾನವು ದೇಶಗಳ ಗಡಿಯನ್ನು ಇಲ್ಲವಾಗುವಂತೆ ಮಾಡಿದ್ದೇನೋ ನಿಜ. ಆದರೆ ಇದು ಹೊಸಬಗೆಯ ಏಕಸ್ವಾಮ್ಯಗಳನ್ನು ಸೃಷ್ಟಿಸಿತು ಎಂಬ ಅಂಶವೂ ನಿಜವೇ. ನಿರ್ದಿಷ್ಟ ಕ್ಷೇತ್ರಕ್ಕೆ ಅನ್ವಯಿಸಬಹುದಾದ ತಂತ್ರಾಂಶ ಮತ್ತು ಅಂತರ್ಜಾಲಾಧಾರಿತ ಸೇವೆಗಳೆಲ್ಲವನ್ನೂ ಒಂದು ಅಥವಾ ಎರಡು ಕಂಪನಿಗಳು ನಿರ್ದೇಶಿಸುವಂಥ ವಾತಾವರಣವೂ ಸೃಷ್ಟಿಯಾಗುತ್ತಿದೆ.

ಗೂಗಲ್ ಎಷ್ಟು ಸಮರ್ಥ ಎಂದರೆ ಜಗತ್ತಿನಲ್ಲಿ ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ಎಲ್ಲರ ಮಾಹಿತಿಯೂ ಒಂದಲ್ಲಾ ಒಂದು ಬಗೆಯಲ್ಲಿ ಅದರ ಬಳಿ ಇದ್ದೇ ಇರುತ್ತದೆ. ಗ್ರಾಹಕನಿಗೆ ಅನುಕೂಲ ಕಲ್ಪಿಸುವ ಹೆಸರಲ್ಲಿ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವ ಗೂಗಲ್ ಸೇವೆಗಳು ಒಂದು ಬಗೆಯಲ್ಲಿ ವ್ಯಕ್ತಿಯನ್ನು ನಿರ್ದಿಷ್ಟ ಬಗೆಯಲ್ಲಿ ಆಲೋಚಿಸುವಂತೆ, ನಿರ್ದಿಷ್ಟ ಸೇವೆಗಳಿಗಷ್ಟೇ ಸೀಮಿತವಾಗಿ ಉಳಿಯುವಂತೆ ಮಾಡುವಷ್ಟು ಪ್ರಭಾವಶಾಲಿ. ಗೂಗಲ್ ಮ್ಯಾಪ್ಸ್ ಎಂಬ ಸೇವೆಗೆ ಪ್ರತಿಯಾಗಿ ಬಂದ ಸೇವೆಗಳಲ್ಲಿ ಹೆಚ್ಚಿನವು ವಿಫಲವಾದವು. ಉಳಿದುಕೊಂಡಿರುವ ಕೆಲವು ಮಾರುಕಟ್ಟೆಯಲ್ಲಿ ಬಹುಪುಟ್ಟ ಪಾಲಿಗೆ ಸೀಮಿತವಾಗಿ ಉಳಿದಿವೆ.

ನೆಟ್ ನ್ಯೂಟ್ರಾಲಿಟಿಯ ಪರವಾಗಿ ನಡೆದಂಥದ್ದೇ ಒಂದು ಹೋರಾಟ ಈ ಬಗೆಯ ಏಕಸ್ವಾಮ್ಯದ ವಿರುದ್ಧವೂ ನಡೆಯಬೇಕಾಗಿದೆ. ಬಹುಸಂಸ್ಕೃತಿ, ಬಹುಆಯ್ಕೆ, ಬಹುಬಗೆಯ ವಿಚಾರಧಾರೆಗಳನ್ನು ಉಳಿಸುವುದಕ್ಕೆ ಈ ಬಗೆಯ ಹೋರಾಟ ಅಗತ್ಯ. ಗೂಗಲ್‌ಗೆ ಹೋಲಿಸಿದರೆ ಅತಿ ಸಣ್ಣದು ಎನ್ನಬಹುದಾದ ಭಾರತೀಯ ಕಂಪನಿಯೊಂದು ಈ ಹೋರಾಟದಲ್ಲಿ ಪಡೆದಿರುವ ಸಣ್ಣ ಯಶಸ್ಸನ್ನು ವಿಸ್ತರಿಸುವ ಪ್ರಯತ್ನವೊಂದು ನಡೆಯಲೇಬೇಕಾಗಿದೆ. ಇದು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣಕ್ಕೆ ಅತ್ಯಂತ ಅಗತ್ಯ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಳ್ಳು ಸುದ್ದಿ’ಯ ನೆರಳಲ್ಲಿ ಕರ್ನಾಟಕ ಚುನಾವಣೆ

ಇ-ಹೊತ್ತು
‘ಸುಳ್ಳು ಸುದ್ದಿ’ಯ ನೆರಳಲ್ಲಿ ಕರ್ನಾಟಕ ಚುನಾವಣೆ

24 Apr, 2018

ಇ-ಹೊತ್ತು
ಸುಳ್ಳು ಸುದ್ದಿ: ಕುರಿಗಳನ್ನು ಕಾಯಲು ತೋಳ

ಇಲ್ಲಿಯ ತನಕ ನಡೆದಿರುವ ಎಲ್ಲಾ ಸಂಶೋಧನೆಗಳೂ ಸುಳ್ಳು ಸುದ್ದಿ ಹರಡುವಿಕೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವುದು ಸಾಮಾಜಿಕ ಮಾಧ್ಯಮ ಎಂದು ಕರೆಯಲಾಗುವ ಜಾಲತಾಣಗಳು. ಇದರಲ್ಲಿ ಟ್ವಿಟ್ಟರ್, ಫೇಸ್‌ಬುಕ್‌ಗಳದ್ದು...

10 Apr, 2018
ಚುನಾವಣಾ ತಂತ್ರಜ್ಞಾನದ ನಿಗೂಢ ಆಯಾಮಗಳು!

ಇ-ಹೊತ್ತು
ಚುನಾವಣಾ ತಂತ್ರಜ್ಞಾನದ ನಿಗೂಢ ಆಯಾಮಗಳು!

27 Mar, 2018
ಡಿಜಿಟಲ್ ಭಾರತದ ವಸಾಹತೀಕರಣ

ಇ-ಹೊತ್ತು
ಡಿಜಿಟಲ್ ಭಾರತದ ವಸಾಹತೀಕರಣ

13 Mar, 2018
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

ಇ-ಹೊತ್ತು
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

30 Jan, 2018