ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ರೈಲ್ವೆ; ಪಾದಾಚಾರಿ ಸೇತುವೆ ಕುಸಿತ

Last Updated 3 ಜುಲೈ 2018, 19:59 IST
ಅಕ್ಷರ ಗಾತ್ರ

ಮುಂಬೈ : ಮುಂಬೈನ ಉಪನಗರ ರೈಲು ಮಾರ್ಗವನ್ನು ಹಾದುಹೋಗುವ ಪಾದಚಾರಿ ಸೇತುವೆಯೊಂದು ಕುಸಿದು ಬಿದ್ದು ಐವರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

‘ಇಲ್ಲಿನ ಅಂಧೇರಿಯಲ್ಲಿ ಘಟನೆ ನಡೆದಿದೆ. ರೈಲ್ವೆ ಹಳಿಗಳನ್ನು ಹಾದುಹೋಗುವ ರಸ್ತೆಯ ಹೊಂದಿಕೊಂಡಂತೆಯೇ ಈ ಪಾದಚಾರಿ ಸೇತುವೆ ಇತ್ತು. 1971ರಲ್ಲಿ ನಿರ್ಮಿಸಲಾಗಿದ್ದ ಇದನ್ನು ಗೋಖಲೆ ಸೇತುವೆ ಎಂದೇ ಕರೆಯಲಾಗುತ್ತಿತ್ತು. ಭಾರಿ ಮಳೆಯ ಕಾರಣ ಶಿಥಿಲಗೊಂಡು ಸೇತುವೆ ಕುಸಿದಿದೆ’ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.

ಸೇತುವೆ ಕುಸಿದ ಸಂದರ್ಭದಲ್ಲಿ ಅಲ್ಲಿ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ರೈಲ್ವೆ ವಿದ್ಯುತ್ ಲೇನ್ ಮತ್ತು ಹಳಿಗಳಿಗೆ ಹಾನಿಯಾಗಿತ್ತು. ಹೀಗಾಗಿ ಈ ಭಾಗದಲ್ಲಿ ಸಂಚರಿಸಬೇಕಿದ್ದ ಎಲ್ಲ ರೈಲುಗಳನ್ನು ಹಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ನೀಡಿ ಎಂದು ರೈಲ್ವೆ ಸಚಿವ ಪೀಯೂಷ್ ಗೋಯೆಲ್ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಮಾಸದ ಕಾಲ್ತುಳಿತ ದುರಂತ

2017ರ ಸೆಪ್ಟೆಂಬರ್ 29ರಂದು ಎಲ್ಫಿನ್‌ಸ್ಟನ್ ರೋಡ್ ರೈಲ್ವೆ ಸೇತುವೆಯಲ್ಲಿ ಕಾಲ್ತುಳಿತ ಉಂಟಾಗಿ 22 ಮಂದಿ ಮೃತಪಟ್ಟಿದ್ದರು. ಸೆತುವೆ ಕುಸಿದಿದೆ ಎಂಬ ವದಂತಿಯ ಕಾರಣ ಕಾಲ್ತುಳಿತ ಸಂಭವಿಸಿತ್ತು. ಪ್ರಯಾಣಿಕರ ಸುರಕ್ಷತೆಯನ್ನುರೈಲ್ವೆ ಕಡೆಗಣಿಸುತ್ತಿದೆ ಎಂದು ಮುಂಬೈ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರ ನಗರದ ಎಲ್ಲಾ ರೈಲ್ವೆ ಪಾದಚಾರಿ ಸೇತುವೆಗಳ ಸ್ಥಿತಿಯನ್ನು ಪರಿಶೀಲಿಸಲು ರೈಲ್ವೆ ಮುಂದಾಗಿತ್ತು. ಹೀಗೆ ಪರಿಶೀಲನೆ ಪಟ್ಟಿಯಲ್ಲಿದ್ದ ಸೇತುವೆಗಳಲ್ಲಿ ಗೋಖಲೆ ಸೇತುವೆಯೂ ಒಂದು.

ಎಲ್ಫಿನ್‌ಸ್ಟನ್ ರೋಡ್ ದುರಂತ ನಡೆದು ಇಷ್ಟು ದಿನ ಕಳೆದರೂ, ಪ್ರಯಾಣಿಕರ ಸುರಕ್ಷತೆಗೆ ರೈಲ್ವೆಯಾಗಲೀ, ಮಹನಾಗರ ಪಾಲಿಕೆಯಾಗಲೀ ಕ್ರಮ ತೆಗೆದುಕೊಂಡಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವ್ಯಕ್ತವಾಗಿದೆ.

ಸರ್ಕಾರದ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಆರೋಪಿಸಿವೆ.

ದುರಂತ ವಿವರ

ಬೆಳಿಗ್ಗೆ 7.30

ದುರಂತ ನಡೆದ ಸಮಯ

5 ಗಾಯಾಳುಗಳು

2 ಗಂಭೀರವಾಗಿ ಗಾಯಗೊಂಡಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT