ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ವೇತನಕ್ಕೆ ಆಗ್ರಹಿಸಿ ಭಿಕ್ಷಾಟನೆ

ಪೌರ ಕಾರ್ಮಿಕರಿಗೆ ನಾಲ್ಕು ತಿಂಗಳಿಂದ ಪಾವತಿಯಾಗದ ಸಂಬಳ
Last Updated 4 ಜುಲೈ 2018, 15:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೇರ ವೇತನ ಪಾವತಿಗೆ ಆಗ್ರಹಿಸಿ, ಗುತ್ತಿಗೆ ಪೌರ ಕಾರ್ಮಿಕರು ಹುಬ್ಬಳ್ಳಿಯ ಚನ್ನಮ್ಮನ ವೃತ್ತದಲ್ಲಿ ಬುಧವಾರಸಾಮೂಹಿಕವಾಗಿ ಭಿಕ್ಷಾಟನೆ ಮಾಡುವ ಮೂಲಕ, ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೈಯಲ್ಲಿ ತಟ್ಟೆ ಹಿಡಿದು ಈದ್ಗಾ ಮೈದಾನದಿಂದ ದಾಜಿಬಾನ ಪೇಟೆ ಹಾಗೂ ಜನತಾ ಬಜಾರ್‌ನಲ್ಲಿ ಗುಂಪಾಗಿ ಬಂದ ನೂರಕ್ಕೂ ಹೆಚ್ಚು ಪೌರ ಕಾರ್ಮಿಕರು, ಬೀದಿ ಬದಿ ತರಕಾರಿ ವ್ಯಾಪಾರಿಗಳು ಹಾಗೂ ಅಂಗಡಿಗಳಲ್ಲಿ ಭಿಕ್ಷೆ ಬೇಡುತ್ತಾ, ಪಾಲಿಕೆ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದರು.

‘ಪಾಲಿಕೆಯವರು ನ್ಯಾಯವಾಗಿ ನಮಗೆ ಕೊಡಬೇಕಾದ ವೇತನ ಕೊಟ್ಟಿಲ್ಲ. ಇದರಿಂದಾಗಿ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ, ನಿಮ್ಮ ಕೈಲಾದ್ದನ್ನು ನಮಗೆ ಭಿಕ್ಷೆ ನೀಡಿ’ ಎಂದು ವ್ಯಾಪಾರಿಗಳನ್ನು ಬೇಡುತ್ತಾ ಭಿಕ್ಷಾಟನೆ ಮಾಡಿದರು. ಈ ವೇಳೆ ಕೆಲ ಮಹಿಳಾ ಪೌರ ಕಾರ್ಮಿಕರು ಕಣ್ಣೀರು ಹಾಕಿದ ದೃಶ್ಯ ಮನ ಕಲಕಿತು.

ಕಾರ್ಮಿಕರ ಕಷ್ಟ ಕೇಳಿದ ಕೆಲ ಅಂಗಡಿಯವರು ತಟ್ಟೆಗೆ ಚಿಲ್ಲರೆ ಹಾಕಿದರೆ, ಬೀದಿ ವ್ಯಾಪಾರಿಗಳು ತಮ್ಮಲ್ಲಿದ್ದ ಹಣ್ಣು–ತರಕಾರಿ ನೀಡುವ ಮೂಲಕ, ಪೌರ ಕಾರ್ಮಿಕರ ಕಷ್ಟಕ್ಕೆ ಮಿಡಿದರು. ಜನತಾ ಬಜಾರ್ ರಸ್ತೆ ಕೆಲ ಕಾಲ ಭಿಕ್ಷಾ ಬೀದಿಯಂತೆ ಗೋಚರಿಸಿತು. ಬಳಿಕ ಕಾರ್ಮಿಕರು ಪಾಲಿಕೆ ಆಯುಕ್ತರ ಕಚೇರಿಗೆ ಬಂದು, ನೇರ ವೇತನ ಪಾವತಿಗೆ ಆಗ್ರಹಿಸಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ‘ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ಮಾಡಬೇಕು ಎಂದು ಹೈಕೋರ್ಟ್ ಮೇ ತಿಂಗಳಲ್ಲಿ ಆದೇಶ ಹೊರಡಿಸಿ ನಾಲ್ಕು ತಿಂಗಳಾದರೂ, ಪಾಲಿಕೆ ಅಧಿಕಾರಿಗಳು ಇನ್ನೂ ವೇತನ ಪಾವತಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೇತನ ಸಿಗದಿದ್ದರಿಂದ ಕಾರ್ಮಿಕರ ಜೀವನ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳ ಶಾಲಾ– ಕಾಲೇಜು ಶುಲ್ಕ, ಶೈಕ್ಷಣಿಕ ಸಾಮಾಗ್ರಿ, ವೃದ್ಧರ ಔಷಧೋಪಚಾರ, ಮನೆಯಲ್ಲಿರುವ ರೋಗಿಗಳ ಚಿಕಿತ್ಸೆ ಹಾಗೂ ಆಹಾರಕ್ಕೆ ಹಣವಿಲ್ಲದೆ, ಬಡ್ಡಿ ಸಾಲ ಪಡೆದು ಜೀವನ ನಿರ್ವಹಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಬೂಬು ಹೇಳಿಕೊಂಡು ಇದುವರೆಗೆ ಕಾಲ ಕಳೆದ ಅಧಿಕಾರಿಗಳು, ಇದೀಗ ನೇರ ವೇತನ ಪಾವತಿಗೆ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕಿದೆ ಎಂದು ಹೊಸ ರಾಗ ತೆಗೆಯುತ್ತಿದ್ದಾರೆ. ಪೌರ ಕಾರ್ಮಿಕರ ಸಂಘದ ಜತೆ ಚರ್ಚಿಸದೆ, ಅನಧಿಕೃತ ಗುತ್ತಿಗೆದಾರರ ಮೂಲಕ ಕಾನೂನುಬಾಹಿರವಾಗಿ ವೇತನ ಪಾವತಿಸಲು ಕೆಲ ಜನಪ್ರತಿನಿಧಿಗಳು ಲಾಬಿ ಮಾಡುತ್ತಿದ್ದಾರೆ. ಇದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾದ ನಡೆಯಾಗಿದೆ’ ಎಂದು ಹೇಳಿದರು.

ಕೆಲಸ ಸ್ಥಗಿತ ಎಚ್ಚರಿಕೆ:

‘ಒಂದು ವಾರದೊಳಗೆ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು. ಇದಕ್ಕೆ ಪೂರಕವಾಗಿ ಮೇಯರ್ ಸೇರಿದಂತೆ ಅವಳಿನಗರದ ಜನಪ್ರತಿನಿಧಿಗಳು ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ, ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT