ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಕು ಚೀಲದಿಂದ ಹಸನಾದ ಬದುಕು

ರಸ್ತೆ ಬದಿ ಪ್ಲಾಸ್ಟಿಕ್ ಸಂಗ್ರಹ ಈ ಕುಟುಂಬದ ಕಾಯಕ
Last Updated 4 ಜುಲೈ 2018, 17:49 IST
ಅಕ್ಷರ ಗಾತ್ರ

ತಾವರಗೇರಾ: ಕೈಯಲ್ಲಿ ಹರಕು ಚೀಲ, ಹೆಗಲ ಮೇಲೆ ಕೊಳೆಯ ಟವೆಲ್, ಕಾಲಲ್ಲಿ ಹಳೆಯ ಹರಿದ ಚಪ್ಪಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸುತ್ತಾ ಬದುಕಿನ ಬಂಡಿಯನ್ನು ದೂಡುತ್ತಿದೆ ಇಲ್ಲೊಂದು ಕುಟುಂಬ.

ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪಿನ ನಿವಾಸಿ ಪಾಂಡು ಮತ್ತು ಲಕ್ಷ್ಮಿ ದಂಪತಿ ತ್ಯಾಜ್ಯ ಸಂಗ್ರಹದಿಂದ ಜೀವನ ಕಂಡುಕೊಂಡವರು. ಪಟ್ಟಣದ ವಿವಿಧ ವಾರ್ಡ್‌ಗಳು, ಬಸ್‌ ನಿಲ್ದಾಣ, ಮುಖ್ಯ ಬಜಾರ್‌, ತಾವರಗೇರಾ- ಕುಷ್ಟಗಿ ರಸ್ತೆ, ಸಿಂಧನೂರ ಹಾಗೂ ಮುದಗಲ್ ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಪೇಪರ್ ರಟ್ಟು, ಮದ್ಯದ ಬಾಟಲ್‍ಗಳನ್ನು ಸಂಗ್ರಹಿಸುವುದೇ ಇವರ ಕಾಯಕ.

ಬೆಳಿಗ್ಗೆ ಎದ್ದ ಕೂಡಲೇ ಆರಂಭವಾಗುವ ಈ ದಂಪತಿಯ ಕಾಯಕವೂ ಹೊತ್ತು ಮುಳುಗುವರೆಗೂ ನಡೆದಿರುತ್ತದೆ. ಕೈಯಲ್ಲಿ ಹಳೆ ಚೀಲ ಹಿಡಿದು ರಸ್ತೆ ಗುಂಟ ಬಿದ್ದ ಪ್ಲಾಸ್ಟಿಕ್ ಹಾಗೂ ಮರುಬಳಕೆಗೆ ಪೂರಕವಾದ ತ್ಯಾಜ್ಯ, ಪ್ಲಾಸ್ಟಿಕ್‌ ನೀರಿನ ಬಾಟಲ್‌ಗಳನ್ನು ಆಯ್ದುಕೊಂಡು ಒಂದು ಕಡೆಯಿಂದ ಮತ್ತೊಂದು ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ.

‘ಒಂದು ಕೆ.ಜಿ ಪೇಪರ್ ರಟ್ಟು ಮಾರಾಟ ಮಾಡಿದರೆ ₹ 6 ಸಿಗುತ್ತದೆ. ಮದ್ಯದ ಖಾಲಿ ಬಾಟಲ್‌ವೊಂದಕ್ಕೆ ಒಂದು ರೂಪಾಯಿ ಬರುತ್ತದೆ. ನೀರಿನ ಬಾಟಲ್ ಪ್ರತಿ ಕೆ.ಜಿಗೆ ₹12 ಸಿಗುತ್ತಿದೆ. ಪ್ರತಿ ದಿನ 20 ಕೆ.ಜಿಯಷ್ಟು ತ್ಯಾಜ್ಯ ಸಂಗ್ರಹ ಮಾಡುತ್ತೇವೆ. ತ್ಯಾಜ್ಯ ಮಾರಾಟದಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಕುಟುಂಬದ ಯಜಮಾನ ಪಾಂಡು.

‘ವಿವಿಧ ವಾರ್ಡ್‌, ಮುಖ್ಯ ರಸ್ತೆ ಹಾಗೂ ಮತ್ತಿತರ ಪ್ರದೇಶದಲ್ಲಿ ಚೀಲ ಹಿಡಿದು ತಿರುಗುವುದು ನಾಚಿಕೆ ಎನಿಸಿದರೂ ಅದು ನಮಗೆ ಅನಿವಾರ್ಯ. ಇದರಿಂದ ಪ್ರತಿ ದಿನ ₹ 200 ರಿಂದ 250 ಸಿಗುತ್ತಿದೆ. ಈ ಕಾಯಕದಿಂದ ಹೊಟ್ಟೆ ತುಂಬುತ್ತಿದೆ ಅಷ್ಟೆ ಸಾಕು’ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

‘ಬದುಕಲು ದುಡಿಮೆಯ ದಾರಿಗಳು ಹೇಗಿವೆ ಎನ್ನುವುದಕ್ಕೆ ಇವರ ಕಾಯಕವೂ ಮಾದರಿ. ಬರುವ ಅಲ್ಪ ಆದಾಯದಿಂದ ಜೀವನ ನಡೆಸುತ್ತಿರುವುದು ಶ್ಲಾಘನಿಯ. ಜೀವನದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸುವ ಮಂದಿ ಈ ದಂಪತಿಯಿಂದ ಜೀವನದ ಪಾಠ ಕಲಿಯಬೇಕು ಎನ್ನುತ್ತಾರೆ’ ತಾವರೇಗೇರಾ ಯುವ ಮುಖಂಡ ರಾಹುಲ.

‘ಸರ್ಕಾರ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ಸಮಸ್ಯೆ ಇನ್ನೂ ಜೀವಂತವಾಗಿದೆ. ಪರಿಸರ ಪೂರಕ ಕಾಯಕದಲ್ಲಿ ತೊಡಗಿರುವ ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ನೇಮಕಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರತಿದಿನ ಪಟ್ಟಣದ ಬಸ್‌ನಿಲ್ದಾಣ, ರಸ್ತೆ ಬದಿ, ವಿವಿಧ ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಪೇಪರ್ ಸಂಗ್ರಹಿಸಿ, ಮಾರಾಟ ಮಾಡಿ ಅದರಿಂದ ಬಂದ ಹಣ ಕುಟುಂಬ ನಿರ್ವಹಣೆಗೆ ಸಹಾಯವಾಗುತ್ತಿದೆ.
ಪಾಂಡು ತಾವರಗೇರಾ, ತ್ಯಾಜ್ಯ ಸಂಗ್ರಹಿಸುವ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT