ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದದ ಕಥೆಯ ಬಿಡಿ ಚಿತ್ರಗಳು

Last Updated 6 ಜುಲೈ 2018, 13:26 IST
ಅಕ್ಷರ ಗಾತ್ರ

‘ತುಂಬಾ ಕಲಿತವರು ತಾವು ಹಣ ಸಂಪಾದಿಸಬೇಕು ಎಂದು ಹೆತ್ತವರನ್ನು ಹಳ್ಳಿಯಲ್ಲೇ ಬಿಟ್ಟು ದೂರ ಹೋಗುತ್ತಾರೆ. ಜಾಸ್ತಿ ಕಲಿಯದವರು ತಮ್ಮ ಪಾಲಕರನ್ನು ನೋಡಿಕೊಳ್ಳುತ್ತ ಊರಲ್ಲೇ ಇರುತ್ತಾರೆ’ ಎಂಬುದು ಎಸ್‌.ಎಂ.ಎಸ್‌ ಮೂಲಕ ಕೆಲವರು ಹಂಚಿಕೊಳ್ಳುತ್ತಿದ್ದ ಸಂದೇಶ. ಇದೇ ಧಾಟಿಯಲ್ಲಿ, ‘ಕನ್ನಡ ಮಾಧ್ಯಮದಲ್ಲಿ ಕಲಿಸುವ ಸರ್ಕಾರಿ ಶಾಲೆಗಳ ಮಕ್ಕಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳುತ್ತಾರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ಮಕ್ಕಳು ಹಣ ಸಂಪಾದನೆಯತ್ತ ಮಾತ್ರ ದೃಷ್ಟಿ ನೆಟ್ಟಿರುತ್ತಾರೆ’ ಎಂಬ ಅರ್ಥದ ಸಂದೇಶಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿವೆ.

ಈ ಸಂದೇಶಗಳು ವಾಸ್ತವವನ್ನು ಎಷ್ಟರಮಟ್ಟಿಗೆ ಬಿಂಬಿಸುತ್ತವೆ ಎಂಬುದು ಚರ್ಚೆಯ ವಸ್ತು. ಆದರೆ, ಇವೆರಡೂ ಸಂದೇಶಗಳನ್ನು ತುಸು ಮಾರ್ಪಾಡು ಮಾಡಿ, ಅಕ್ಕ–ಪಕ್ಕ ಜೋಡಿಸಿ ಸಿನಿಮಾ ಮಾಡಿದ್ದಾರೆ ರಾಜೇಶ್ ವೇಣೂರ್. ಕತ್ತಲಿನಿಂದ ಬೆಳಕಿನೆಡೆ ಸಾಗುವ ಅರ್ಥ ಕೊಡುವ ‘ಅಸತೋಮ ಸದ್ಗಮಯ’ ಎಂಬ ಹೆಸರನ್ನು ಸಿನಿಮಾಕ್ಕೆ ಇಟ್ಟಿದ್ದಾರೆ.

ಶಾಲಿನಿ (ರಾಧಿಕಾ ಚೇತನ್‌) ಫಿನ್ಲೆಂಡ್‌ನಲ್ಲಿ ನೆಲೆ ಕಂಡುಕೊಂಡಿರುವ ಯುವತಿ. ತನ್ನ ಹೆತ್ತ ಅಮ್ಮನನ್ನು ನೋಡಬೇಕು ಎಂಬುದು ಶಾಲಿನಿಯ ಆಸೆ. ಆ ಕಾರಣಕ್ಕಾಗಿ ಆಕೆ ಭಾರತಕ್ಕೆ ಮರಳಿ ಬಂದಿರುತ್ತಾಳೆ. ಸಂಧ್ಯಾ (ಲಾಸ್ಯಾ ನಾಗರಾಜ್) ಮತ್ತು ರಾಘವ (ಕಿರಣ್ ರಾಜ್) ಪರಸ್ಪರ ಪ್ರೀತಿಸುತ್ತಿರುತ್ತಾರೆ. ‘ಭಾರತವು ವಿದ್ಯಾವಂತರಿಗೆ ಅಲ್ಲ. ಪ್ರತಿಭೆಗೆ ಇಲ್ಲಿ ಬೆಲೆ ಇಲ್ಲ. ಹಾಗಾಗಿ, ಮುಂದುವರಿದ ದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳಬೇಕು’ ಎಂಬುದಷ್ಟೇ ಇವರ ಉದ್ದೇಶ ಆಗಿರುತ್ತದೆ. ಅಮ್ಮನನ್ನು ಅರಸುತ್ತ ಭಾರತಕ್ಕೆ ಬಂದವಳನ್ನೂ, ಹೊಸ ಬದುಕು ಅರಸಿ ಬೇರೆ ದೇಶಕ್ಕೆ ಹೋಗಲು ಅಣಿಯಾಗಿ ನಿಂತವರನ್ನೂ ಒಂದೇ ಕಡೆ ತಂದು ಕಥೆ ಆರಂಭಿಸಿದ್ದಾರೆ ನಿರ್ದೇಶಕರು.

ಈ ಚಿತ್ರದಲ್ಲಿ ಮೂರು ಎಳೆಗಳನ್ನು ಗುರುತಿಸಬಹುದು. ಮೊದಲಿನದು ತಾಯಿಯ ಹುಡುಕಾಟ, ಎರಡನೆಯದು ಮಕ್ಕಳನ್ನು ಸೃಜನಶೀಲವಾಗಿ ಬೆಳೆಸುವ ಕ್ರಮ ಹೇಗೆ ಎಂಬುದು, ಮೂರನೆಯದು ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಆಪೋಷನ ತೆಗೆದುಕೊಳ್ಳುತ್ತಿರುವುದು.‌

ಮೊದಲ ಎಳೆಯ ನಿರೂಪಣೆಯಲ್ಲಿ ನಿರ್ದೇಶಕರು ತುಸು ಅವಸರದಲ್ಲಿ ಇದ್ದರು ಅನಿಸುತ್ತದೆ. ಆದರೆ, ಅಮ್ಮನನ್ನು ಹುಡುಕುವುದು, ಮೊದಲ ಬಾರಿ ಅಮ್ಮನನ್ನು ಕಂಡು, ಆಕೆಯನ್ನು ಮುಟ್ಟಿ, ಕೂದಲು ನೇವರಿಸಿ, ಅಪ್ಪಿಕೊಳ್ಳುವ ದೃಶ್ಯಗಳನ್ನು ರಾಧಿಕಾ ಚೇತನ್ ನಿಭಾಯಿಸಿರುವ ರೀತಿ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ. ವರುಣ್ ಎಂಬ ಪುಟಾಣಿ ಪಾತ್ರ ಸೃಷ್ಟಿಸಿ, ಮಕ್ಕಳು ಎದುರಿಸುತ್ತಿರುವ ಅಂಕ ಗಳಿಕೆಯ ಸಂಕಟಗಳನ್ನು ಹೇಳುವ ಯತ್ನವನ್ನೂ ಮಾಡಲಾಗಿದೆ.

ಕಥೆಯ ಮೂರನೆಯ ಎಳೆಯಲ್ಲಿ, ರಾಘವ, ಸಂಧ್ಯಾ ಮತ್ತು ಶಾಲಿನಿ ಒಟ್ಟಾಗಿ ಸೇರಿ ದಕ್ಷಿಣ ಕನ್ನಡದ ಒಂದು ಪುಟ್ಟ ಊರಿನ ಸರ್ಕಾರಿ ಶಾಲೆ ಉಳಿಸಲು ಹೋರಾಡುವ ಆಯಾಮ ಇದೆ. ಇದನ್ನು ಹೇಳುವಾಗಲೂ ನಿರ್ದೇಶಕರು ತುಸು ಸಾವಧಾನವಾಗಿ ಇದ್ದಿದ್ದರೆ ಚೆನ್ನಾಗಿತ್ತೇನೋ ಅನಿಸುತ್ತದೆ. ಸಿನಿಮಾದ ಕೆಲವು ಸನ್ನಿವೇಶ– ಸಂಭಾಷಣೆಗಳು ನಾಟಕೀಯ ಅನಿಸಿದರೂ ಚೆಂದದ ಕಥೆ ಇದರಲ್ಲಿದೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ದೃಶ್ಯಗಳನ್ನು ಮುದ್ದಾಗಿ ಪೋಣಿಸಿ, ಮನೋಜ್ಞ ದೃಶ್ಯಕಾವ್ಯ ಕಟ್ಟುವ ಅವಕಾಶ ತಪ್ಪಿಸಿಕೊಂಡಂತೆ ಭಾಸವಾಗುತ್ತದೆ. ಸಿನಿಮಾದ ಬಿಡಿ ಚಿತ್ರಗಳೇ ನೆನಪಿನ ಬುಟ್ಟಿಯನ್ನು ಆಕ್ರಮಿಸಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT