ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವದಾಸಿಮಯ್ಯ ಜಯಂತ್ಯುತ್ಸವ ಸಂಭ್ರಮ

Last Updated 19 ಫೆಬ್ರುವರಿ 2018, 8:36 IST
ಅಕ್ಷರ ಗಾತ್ರ

ಅಮೀನಗಡ: ‘ಶಂಕರ ದಾಸಿಮಯ್ಯ ಮತ್ತು ಶಿವದಾಸಿಮಯ್ಯ ಬೇರೆಯಲ್ಲ. ಶಂಕರ ಅಂದರೆ ಶಿವ. ಸಮಾಜದ ಜನ ಎಲ್ಲರೂ ಒಂದು ಕಡೆ ಸೇರಿ ಚಿಂತನೆ ಮಾಡುವ ಸದವಕಾಶವೇ ಜಯಂತ್ಯುತ್ಸದ ಉದ್ದೇಶ’ ಎಂದು ಉಪನ್ಯಾಸಕಿ ಡಾ.ಸ್ನೇಹಾ ಭೂಸನೂರ ಹೇಳಿದರು.

ಪಟ್ಟಣದ ಶಿವಶಿಂಪಿ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವದಾಸಿಮಯ್ಯನವರ ಜಯಂತ್ಯುತ್ಸವ ಹಾಗೂ ಶಿವಶಿಂಪಿ ಸಮಾಜದ ಜಿಲ್ಲಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಒಂದು ಸಮುದಾಯ ಒಗ್ಗಟ್ಟಾಗಿ ಸಮಾವೇಶ ಮಾಡಿ ಸಮಾಜ ಪ್ರಗತಿ ಕುರಿತು ಚಿಂತನೆ ಮಾಡುವ ಅಗತ್ಯವಿದೆ. ಶಿವಸಿಂಪಿ ಸಮಾಜದವರು ಸಾತ್ವಿಕರು. ನಮ್ಮದು ಹೊಲಿಯುವ ಕಾಯಕ. ಅದು ನಿಕೃಷ್ಟ ಕಾಯಕವಲ್ಲ. ಸೂಜಿ ಜೋಡಿಸುತ್ತದೆ. ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಬೆಳಕನ್ನು ಜೋಡಿಸುವುದು ಶಿವಶಿಂಪಿ ಸಮಾಜದ ಕಾಯಕ. ಕವಿ ಮಧುರಚೆನ್ನರು ಶಿವಶಿಂಪಿ ಸಮಾಜಕ್ಕೆ ಸೇರಿದವರು.

ಅವರು ತಮ್ಮ ಜೀವನವನ್ನೆ ಸಮಾಜಕ್ಕೆ ಮಡುಪಾಗಿಟ್ಟರು. ಈಶ್ವರ ಸಣಕಲ್ಲ, ಶಿಕ್ಷಣ ತಜ್ಞ ಡಿ.ಸಿ.ಪಾವಟೆ, ಬ.ಗಿ. ಯಲ್ಲಟ್ಟಿ, ಸಿದ್ರಾಮಪ್ಪ ಪಾವಟೆ, ಪದ್ಮಶ್ರೀ ಪುರಸ್ಕೃತೆ ಚಿಂದೋಡಿಲೀಲಾ, ಸಂಪತ್ತಕುಮಾರ ಅವರುಗಳು ನಮ್ಮ ಶಿವಶಿಂಪಿ ಸಮಾಜಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಸಮಾಜ ಚಿಕ್ಕದಾದರು ಬೆರಳೆಣಿಕೆಯಷ್ಟು ಜನ ಉನ್ನತ ಹುದ್ದೆಯಲ್ಲಿದ್ದಾರೆ’ ಎಂದರು.

ಸಮಾವೇಶ ಉದ್ಘಾಟಿಸಿದ ಶಾಸಕ ಎಚ್.ವೈ.ಮೇಟಿ ಮಾತನಾಡಿ ‘ಶಿವಶಿಂಪಿ ಸಮಾಜ ಉತ್ತಮ ಸಮಾಜ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಣ ನೀಡಿದರೆ ನಿಮ್ಮ ಸಮಾಜ ಪ್ರಗತಿ ಹೊಂದಲು ಅನುಕೂಲವಾಗುತ್ತದೆ’ ಎಂದರು.

ಸಂಸದ ಗದ್ದಿಗೌಡರ ಮಾತನಾಡಿ ‘ಶಿವಶಿಂಪಿ ಜನರು ಸುಸಂಸ್ಕೃತರು. ಅವರು ತತ್ವ ನಿಯಮಗಳನ್ನು ಪಾಲಿಸುವ ಜನ. ಶಿವದಾಸಿಮಯ್ಯನವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದರು.

ಶಿವಶಿಂಪಿ ಸಮಾಜದ ಜಿಲ್ಲಾಧ್ಯಕ್ಷ ಪ್ರಭಾಕರ ಮೊಳೇದ ಮಾತನಾಡಿದರು. ಪ್ರಭಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಶಿಂಪಿ ಸಮಾಜದ ಅಮೀನಗಡ ಘಟಕದ ಅಧ್ಯಕ್ಷ ಮಹಾಂತೇಶ ಐಹೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು.

ಡಾ.ಪ್ರಶಾಂತ ಆದೇಪ್ಪ, ಡಾ.ವಿಜಯಮಹಾಂತೆಶ ನಿಡಗುಂದಿ, ರಾಜ್ಯ ಔಷಧ ವಿಜ್ಞಾನ ಪರಿಷತ್ತು ಅಧ್ಯಕ್ಷ ಗಂಗಾಧರ ಯಾವಗಲ್ಲ, ಮುಖಂಡರಾದ ಎಸ್.ಷಣ್ಮುಖಪ್ಪ, ಸಿದ್ದಪ್ಪ ಶಿನ್ನೂರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತತ್ರಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಶಂಕ್ರಪ್ಪ ಚಳ್ಳಗಿಡದ, ಬಸವರಾಜ ಐಹೊಳ್ಳಿ, ಮುತ್ತಣ್ಣ ಕಬ್ಬಿಣದ, ಕೀರ್ತಪ್ಪ ಬುಯ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಅಮೀನಗಡ ಶಿವಶಿಂಪಿ ಸಮಾಜದ ಅಧ್ಯಕ್ಷ ಮಹಾಂತೇಶ ಐಹೊಳ್ಳಿ, ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷ ಪ್ರಭಾಕರ ಮೊಳೆದ, ಶಿವಶಿಂಪಿ ಸಮಾಜದ ಉಪಾಧ್ಯಕ್ಷ ಆರ್.ಕೆ.ಗೌಡರ, ಎಸ್.ಕೆ.ಗೌಡರ, ಶಿವುಕುಮಾರ ವಂದಾಲ, ಈರಣ್ಣ ಮಮದಾಪುರ, ಮಹೇಶ ಜತ್ತಿ, ಪ್ರಕಾಶ ಐಹೊಳ್ಳಿ, ಶಂಕರ ಐಹೊಳ್ಳಿ, ಕುಮಾರ ಐಹೊಳ್ಳಿ, ಬಸು ಕಬ್ಬಿಣದ, ಪ್ರಕಾಶ ಬ್ಯಾಳಿ, ಶಿವುಪ್ರಸಾದ ಪಟ್ಟದಕಲ್, ಮಂಜು ತುಂಗಳ ಪಾಲ್ಗೊಂಡಿದ್ದರು.

ಅದ್ಧೂರಿ ಮೆರವಣಿಗೆ

ಪಟ್ಟಣದ ಶಿವಶಿಂಪಿ ಸಮಾಜದ ಜಿಲ್ಲಾ ಸಮಾವೇಶ ಮತ್ತು ಶಿವದಾಸಿಮಯ್ಯನವರ ಜಯಂತ್ಯುತ್ಸವ ಅಂಗವಾಗಿ ಅಮೀನಗಡ ಸಕಲ ವಾದ್ಯ ವೈಭವಗಳೊಂದಿಗೆ ಅದ್ಧೂರಿ ಭಾವಚಿತ್ರ ಮೆರವಣಿಗೆಯು ಸುಮಂಗಲಿಯರು ಪೂರ್ಣಕುಂಭ ಹಾಗೂ ಡೊಳ್ಳು ಕುಣಿತ, ವಿವಿಧ ವಾದ್ಯಗಳೊಂದಿಗೆ ಸಂಭ್ರಮದಿಂದ ನಡೆಯಿತು.

ಭಾವಚಿತ್ರ ಮೆರವಣಿಗೆ ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಹೊರಟು ಪ್ರಮುಖ ಮಾರ್ಗಗಳಾದ ಶ್ರೀ ಬನಶಂಕರಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಮಂಗಳಮ್ಮ ದೇವಸ್ಥಾನ, ಎಮ್.ಜಿ.ರೋಡ, ರಾಜಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಭುಶಂಕರೇಶ್ವರ ಗಚ್ಚಿನಮಠದ ಆವರಣ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT