ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಯಲ್ಲಿ ಕ್ರಿಯಶೀಲತೆ ಹೆಚ್ಚು’

Last Updated 19 ಫೆಬ್ರುವರಿ 2018, 8:45 IST
ಅಕ್ಷರ ಗಾತ್ರ

ವಿಜಯಪುರ: ವೃತ್ತಾಕಾರವಾಗಿ ನಿಂತ ಮಕ್ಕಳು ಗಣಿತದ ಸರಳ ಲೆಕ್ಕ ಬಿಡಿಸುತ್ತಿದ್ದರು. ತಮ್ಮದೇ ಕಲ್ಪನೆಯಲ್ಲಿ ಶಿಕ್ಷಕರೊಂದಿಗೆ ಆಟವಾಡುತ್ತಾ, ಪಾಠ ಕೇಳುತ್ತಾ, ಕೇಕೆಗಳೊಂದಿಗೆ ಕಲಿಯುವ ಮೂಲಕ ಶಾಲೆಗೆ ಕಳೆಕಟ್ಟಿಸಿದ್ದರು.

ಇದು ಖಾಸಗಿ ಶಾಲೆಗಳ ಯುಗ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ತಂದೆ ತಾಯಿಯರು ಅಸಡ್ಡೆ ತೋರುತ್ತಾರೆ. ಖಾಸಗಿಯಲ್ಲಿ ಓದಿದರಷ್ಟೇ ಅವರ ಬೌದ್ಧಿಕಮಟ್ಟ ಹೆಚ್ಚಲು ಸಾಧ್ಯ ಎಂಬ ಭಾವನೆ ಅನೇಕರಿಗಿದೆ. ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವತ್ತ ಶಾಲಾಭಿವೃದ್ಧಿ ಸಂಸ್ಥೆಯ ಜೊತೆಗೆ ಸರ್ಕಾರವು ಕೈ ಜೋಡಿಸಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಿದೆ.

ಸರ್ಕಾರಿ ಶಾಲೆಗೆ ಸೇರಿಸುವುದು ಎಂದರೆ ಕೇವಲ ಕೆಳವರ್ಗದ ಜನರು, ಆರ್ಥಿಕವಾಗಿ ಹಿಂದುಳಿದವರು ಒಂದು ಹೊತ್ತಿನ ಊಟ, ಮೊಟ್ಟೆ, ಹಾಲಿಗಾಗಿ ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ ಎಂಬ ಅಭಿಪ್ರಾಯವೂ ಜನರಲ್ಲಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆಯ ಅರಿವು ಇರುವುದಿಲ್ಲ, ಶೌಚಾಲಯ, ಶುದ್ಧ ನೀರು ಇರುವುದಿಲ್ಲ ಎಂಬ ಸಾಲು ಸಾಲು ದೂರುಗಳಿವೆ.

ಇವೆಲ್ಲಾ ದೂರುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿಜಯಪುರ ಹೋಬಳಿ ಮುದುಗುರ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲಿಕೆಯಲ್ಲಿ ಬಹಳಷ್ಟು ಪ್ರಗತಿ ಕಾಣುತ್ತಿದ್ದಾರೆ. ಶಾಲಾವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಸ್ವಚ್ಛತೆ ಕಾಪಾಡಲಾಗಿದೆ. 14 ಮಂದಿ ಮಕ್ಕಳು, ಸ್ಪಷ್ಟವಾಗಿ ಆಂಗ್ಲಭಾಷೆಯಲ್ಲಿ ಓದುತ್ತಾರೆ. ಶಿಕ್ಷಕರೊಂದಿಗೆ ಆಂಗ್ಲಭಾಷೆಯಲ್ಲೆ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಎಲ್ಲಾ ಮಕ್ಕಳಂತೆ ನಮ್ಮ ಮಕ್ಕಳೂ ಖಾಸಗಿ ಶಾಲೆಗಳಿಗೆ ಹೋಗಬೇಕು, ಆಂಗ್ಲಭಾಷೆ ಮಾತನಾಡಬೇಕು. ಓದಬೇಕು, ಎನ್ನುವ ಆಸೆಯಿದೆ ಆದರೂ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಉತ್ತಮ ಕಲಿಕೆಯಿದೆ. ಸುಲಲಿತವಾಗಿ ಗಣಿತ ಲೆಕ್ಕ ಮಾಡುತ್ತಾರೆ. ನಿರಾಯಾಸವಾಗಿ ಕನ್ನಡ ಓದುತ್ತಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಹೇಳುತ್ತಾರೆ.

ಸರ್ಕಾರದಿಂದ ವರ್ಷಕ್ಕೆ ನಾಲ್ಕು ಬಾರಿ ಸಮವಸ್ತ್ರ, ಪಠ್ಯಪುಸ್ತಕ, ಶೂಗಳು, ಮಧ್ಯಾಹ್ನದ ಬಿಸಿಯೂಟ, ಹಾಲು, ಎಲ್ಲವನ್ನೂ ಕೊಡ್ತೇವೆ. ಅಷ್ಟೇ ಅಲ್ಲದೇ ತರಗತಿ ಆರಂಭಕ್ಕೆ ಮೊದಲು 15 ನಿಮಿಷ ಧ್ಯಾನ, ಆಧ್ಯಾತ್ಮಿಕ ಬೋಧನೆ ನಡೆಯುವುದು. ತ್ರಿಭಾಷಾ ಸೂತ್ರದಂತೆ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಬೋಧನೆ ಮಾಡುತ್ತೇವೆ. ರಾಷ್ಟ್ರೀಯ ಹಬ್ಬಗಳು ಬಂದರೆ ಹದಿನೈದು ದಿನಗಳ ಮುಂಚೆ ಪೂರ್ವ ತಯಾರಿ ಮಾಡಿಸುತ್ತೇವೆ. ಹಾಡು ಹಾಡುವುದು, ನೃತ್ಯ ಮಾಡುವುದು, ಏಕಪಾತ್ರಾಭಿನಯ, ನಾಟಕ, ಚಿತ್ರಕಲೆ, ಸಂಗೀತ, ಭಾಷಣ ಮಾಡುವ ಕಲೆ, ಮುಂತಾದ ಅನೇಕ ಚಟುವಟಿಕೆಗಳನ್ನು ಮಾಡಿಸುತ್ತೇವೆ. ಗ್ರಾಮಸ್ಥರು ಮಕ್ಕಳಿಗೆ ಒಳ್ಳೆಯ ಪ್ರೋತ್ಸಾಹ ನೀಡುತ್ತಾರೆ ಎಂದು ಮುಖ್ಯಶಿಕ್ಷಕಿ ರಾಜೇಶ್ವರಿ ಹೇಳಿದರು.

ದೈಹಿಕ ಶಿಕ್ಷಣದ ಕಲಿಕೆಗೆ ತೊಂದರೆ

ಮಕ್ಕಳು ಶೈಕ್ಷಣಿಕವಾಗಿ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಹಚ್ಚ ಹಸಿರು ಕಂಗೊಳಿಸುತ್ತಿದೆ. ಆದರೆ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಟದ ಮೈದಾನವಿಲ್ಲದೆ ದೈಹಿಕ ಶಿಕ್ಷಣದ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಮಾರಪ್ಪ, ಆಂಜಿನಪ್ಪ, ಮೂರ್ತಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT