ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರ ಹೆಸರು ನಾಪತ್ತೆ

Last Updated 20 ಫೆಬ್ರುವರಿ 2018, 9:27 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿಯ 23 ಸದಸ್ಯ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಯಿತು. ಯಾವುದೇ ದೋಷವಿಲ್ಲದೇ ಶಾಂತಿಯುತವಾಗಿ ಶೇ 85ರಷ್ಟು ಮತದಾನ ನಡೆಯಿತು.

ಬೆಳಿಗ್ಗೆ 7ಕ್ಕೆ ಆರಂಭಗೊಂಡ ಮತದಾನ ಪ್ರಕ್ರಿಯೆ, ಮಧ್ಯಾಹ್ನ ಸ್ವಲ್ಪ ಇಳಿಮುಖವಾಗಿ ಸಂಜೆ ವೇಳೆಗೆ ತುರುಸಿನಿಂದ ನಡೆಯಿತು. ಸಂಜೆ 5 ಗಂಟೆಯಾದರೂ ಹುಲಿಕಟ್ಟಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನ ಮತದಾನ ಮಾಡಲು ಸರದಿಯಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಹಾರಕನಾಳು ಗ್ರಾಮದಲ್ಲಿ ಐದು ಸದಸ್ಯ ಸ್ಥಾನ, ಹುಲಿಕಟ್ಟಿ ಗ್ರಾಮದ ಏಳು ಸ್ಥಾನ, ಕನ್ನನಾಯಕನಹಳ್ಳಿಯಲ್ಲಿ ಎರಡು ಸ್ಥಾನ, ಈಶಾಪುರದಲ್ಲಿ ಒಂದು, ಚೆನ್ನಹಳ್ಳಿಯಲ್ಲಿ ನಾಲ್ಕು, ಹಾರಕನಾಳು ಸಣ್ಣ ತಾಂಡಾ, ದೊಡ್ಡ ತಾಂಡಾ ಸೇರಿ ಪೂರ್ಣ ಗ್ರಾಮದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಗ್ರಾಮ ಪಂಚಾಯ್ತಿ ಚುನಾವಣೆಗೆ ಮೊದಲ ಬಾರಿಗೆ ಇವಿಎಂ ಬಳಸಿದ್ದರೂ, ತಾಲ್ಲೂಕು ಆಡಳಿತ ಮೊದಲೇ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತಿಳಿವಳಿಕೆ ನೀಡಿದ್ದರಿಂದ ಯಾವುದೇ ರೀತಿಯ ಗೊಂದಲ ಉಂಟಾಗಲಿಲ್ಲ. ಮತದಾನ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಕೆ.ಗುರುಬಸವರಾಜ್ ಹಾಜರಿದ್ದರು.

ಹೆಸರು ನಾಪತ್ತೆ:ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವುದರಿಂದ ಹಾರಕನಾಳು ಗ್ರಾಮದ ಮತದಾರರು ಚುನಾವಣಾ ಆಯೋಗದ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಹಾರಕನಾಳು ಗ್ರಾಮದಲ್ಲಿ 100ಕ್ಕೂ ಅಧಿಕ ಹೊಸ ಹಾಗೂ ಹಳೆಯ ಮತದಾರರ ಹೆಸರು ಪಟ್ಟಿಯಲ್ಲಿ ಪ್ರಕಟಗೊಂಡಿರಲಿಲ್ಲ. ಇದರಿಂದಾಗಿ ಅವರೆಲ್ಲ ಮತದಾನ ಮಾಡಲಾಗದೇ ನಿರಾಸೆಯಿಂದ ಮನೆಗೆ ತೆರಳುವಂತಾಯಿತು. ಹುಲಿಕಟ್ಟಿ, ಈಶಾಪುರ, ಕನ್ನನಾಯಕನಹಳ್ಳಿಯಲ್ಲೂ ಇದೇ ಸಮಸ್ಯೆ ಕಂಡು ಬಂತು.

ಹಾರಕನಾಳು ಯುವ ಮತದಾರರಾದ ವಿರೇಶ್, ಭಾಷು, ವೀರನಗೌಡ, ಮಂಜುನಾಥ್, ಮುತ್ತುರಾಜ್, ಎಚ್.ಮಂಜಪ್ಪ, ಹಾಲಸ್ವಾಮಿ, ಭೋವಿ ಮಂಜುನಾಥ್ ಅವರು, ‘ನಮ್ಮ ಬಳಿ ಮತದಾರರ ಗುರುತಿನ ಚೀಟಿ ಇದೆ. ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ತೋರಿಸುತ್ತಿದೆ. ನಮಗೂ ಮತದಾನ ಮಾಡಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಮತಗಟ್ಟೆಗೆ ಬಂದ ಜಿಲ್ಲಾಧಿಕಾರಿ ಬಳಿಯೂ ಸಮಸ್ಯೆಯನ್ನು ಹೇಳಿಕೊಂಡರು.

‘2017ರ ಅಕ್ಟೋಬರ್ 30ರ ಮತದಾರರ ಕರುಡು ಪ್ರತಿ ಅನ್ವಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಹೆಸರು ಸೇರ್ಪಡೆಗೊಂಡಿರುವ ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದ್ದರೂ, ಮತದಾನಕ್ಕೆ ಅವಕಾಶವಿಲ್ಲ. ಅಂತಿಮವಾಗಿ ಫೆ.28ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸ ಲಾಗುವುದು’ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT