ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ ಟಿಕೆಟ್‌ ಸಿಗದಿದ್ದರೆ ಬೇರೆ ಪಕ್ಷ ಸೇರಲ್ಲ’

Last Updated 21 ಫೆಬ್ರುವರಿ 2018, 9:03 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್‌ನಲ್ಲಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಸಿಗದಿದ್ದರೆ ನಾನು ಯಾವ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.

ನಗರದಲ್ಲಿ ಗೃಹಕಚೇರಿಯಲ್ಲಿ ಇಫ್ಕೋ ಟೋಕಿಯೊ ಫಲಾನುಭವಿಗಳಿಗೆ ಸೋಮವಾರ ಸಹಾಯಧನದ ಚೆಕ್‌ ವಿತರಿಸಿ ಮಾತನಾಡಿದರು. ‘ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟವಾಗಬೇಕಾಗಿತ್ತು. ಸದ್ಯ ಅದನ್ನು ಯಾರು ತಪ್ಪಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿ ರಕ್ಷಣೆಗೆ ಮತದಾರರು ನಿಲ್ಲಬೇಕೇ ಹೊರತು ಜತೆಗೆ ಇರುವವರಲ್ಲ’ ಎಂದು ಹೇಳಿದರು.

ಜೆಡಿಎಸ್‌ನಿಂದ 224 ಕ್ಷೇತ್ರಗಳ ಪೈಕಿ 126 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಒಂದು ವೇಳೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿ, ತಮ್ಮನ್ನು ಕೈಬಿಟ್ಟಿದ್ದರೆ, ಅದಕ್ಕೆ ತಾವು ಪ್ರತಿಕ್ರಿಯಿಸಬೇಕಿತ್ತು ಎಂದು ಹೇಳಿದರು.

ಅವಿಭಜಿತ ಕೋಲಾರ ಜಿಲ್ಲೆಯ ಕೋಲಾರ ಹಾಗೂ ಗೌರಿಬಿದನೂರು ಕ್ಷೇತ್ರಗಳು ಸೇರಿ ರಾಜ್ಯದಲ್ಲಿ ಸಾಕಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ. ಹೀಗಾಗಿ ಇಲ್ಲಸಲ್ಲದ ಅನುಮಾನಗಳನ್ನು ಪಡುವುದು ಬೇಡ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್. ರಮೇಶ್‌ಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಳ್ಳೆ ಕೆಲಸ ಮಾಡುವವರನ್ನು ಸಮಾಜ ಒಪ್ಪಲೇಬೇಕು. ರಮೇಶ್‍ಕುಮಾರ್ ಅವರನ್ನು ಶ್ಲಾಘಿಸಿದಕ್ಕಾಗಿ ರಾಜಕೀಯ ಸ್ವಪ್ನ ಕಟ್ಟುವ ಅವಶ್ಯಕತೆಯಿಲ್ಲ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅದರಲ್ಲಿ ಕೆಲವನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ವೈಫಲ್ಯ ಕಂಡಿವೆ. ಹೀಗಾಗಿ ವಿರೋಧ ಪಕ್ಷಗಳಿಗೆ ಸರ್ಕಾರದ ವೈಫಲ್ಯಗಳು ಅಸ್ತ್ರಗಳಾಗಿ ಬಳಕೆಯಾಗಲಿವೆ. ಕೋಲಾರ ಕ್ಷೇತ್ರದ ಶಾಸಕರ ವೈಫಲ್ಯಗಳು ತಮಗೆ ಲಾಭವಾಗಲಿವೆ ಎಂದರು.

ಇದೇ ಸಂದರ್ಭದಲ್ಲಿ ಇಫ್ಕೊ ಟೋಕಿಯೊ ಸಂಸ್ಥೆಯಿಂದ ಬಿಡುಗಡೆಯಾಗಿದ್ದ ₹ 4.58 ಲಕ್ಷ ಮೌಲ್ಯದ ಸಹಾಯಧನದ ಚೆಕ್‌ ಅನ್ನು 21 ಫಲಾನುಭವಿಗಳಿಗೆ ವಿತರಿಸಲಾಯಿತು.

ಸಹಕಾರಿ ಯೂನಿಯನ್ ನಿರ್ದೇಶಕ ಸೊಣ್ಣೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್‌ಪಾಷಾ, ಉಪಾಧ್ಯಕ್ಷರಾದ ಈ.ಗೋಪಾಲ್, ಚಂದ್ರಮೌಳಿ, ಎಪಿಎಂಸಿ ಮಾಜಿ ನಿರ್ದೇಶಕ ಗೋಪಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT