ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂದಿನ ವಾರ ರೈತರ ಖಾತೆಗೆ ₹900 ಕೋಟಿ’

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ
Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಮಂತ್ರಿ ‘ಫಸಲ್ ಬಿಮಾ ಯೋಜನೆ’ಯಡಿ ಹಿಂಗಾರು (2016–17) ಬೆಳೆ ನಷ್ಟದ ಪರಿಹಾರ ಮೊತ್ತ ₹ 900 ಕೋಟಿಗಳನ್ನು ಮುಂದಿನ ವಾರ ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದೆಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕೆಲವು ತಾಂತ್ರಿಕ ಕಾರಣಗಳಿಂದಾಗಿ ರೈತರಿಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ ಮೊತ್ತ  ₹ 245.32 ಕೋಟಿ ಪಾವತಿ ಆಗಿಲ್ಲ. ಸಮಸ್ಯೆಗಳು ಬಹುತೇಕ ಬಗೆಹರಿದಿವೆ. ಆದಷ್ಟು ಬೇಗ ರೈತರ ಖಾತೆಗೆ ಹಣ ಪಾವತಿಸಲಾಗುವುದು ಎಂದೂ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದರು.

2016–17 ರ ಸಾಲಿನ ಮುಂಗಾರು ಹಂಗಾಮಿನಲ್ಲಿ 9.44 ಲಕ್ಷ ರೈತರು ₹14,937 ಲಕ್ಷ ವಿಮೆ ಕಂತು ಪಾವತಿಸಿದ್ದರು. ಇದರಲ್ಲಿ 6.80 ಲಕ್ಷ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಲ್ಲಿಯವರೆಗೆ 4.96 ಲಕ್ಷ ಫಲಾನುಭವಿಗಳಿಗೆ ₹ 781.51 ಕೋಟಿ ವಿಮಾ ಪರಿಹಾರವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಇನ್ನು 1.84 ಲಕ್ಷ ರೈತರಿಗೆ ಒಟ್ಟು ₹ 245.32 ಕೋಟಿ ಬೆಳೆ ವಿಮೆ ಪರಿಹಾರ ಪಾವತಿ ಬಾಕಿ ಇದೆ ಎಂದರು.

ಬೆಳೆ ವಿಮೆ ಪರಿಹಾರ ಬಾಕಿ ಉಳಿಯಲು ಮುಖ್ಯ ಕಾರಣಗಳೆಂದರೆ, ಬಹು ಕಟಾವು ಬೆಳೆಗಳ ಇಳುವರಿ  ವ್ಯತ್ಯಾಸದ ಬಗ್ಗೆ ವಿಮಾ ಸಂಸ್ಥೆಗಳು ತಕರಾರು ತೆಗೆದಿರುವುದು( ₹ 163.48 ಕೋಟಿ), ಭತ್ತ ಮತ್ತು ಅಕ್ಕಿ ಎಂಬ ಪದಗಳನ್ನು ಸೇರಿಸಿರುವುದರಿಂದ ಉಂಟಾದ ಗೊಂದಲ( ₹ 63.65 ಕೋಟಿ), ರೈತರ ಬ್ಯಾಂಕ್‌ ಖಾತೆ ಸಂಖ್ಯೆಗಳನ್ನು ತಪ್ಪಾಗಿ ಬರೆದಿರುವುದರಿಂದ( ₹ 11.3 ಕೋಟಿ) ಮತ್ತು ಬೆಳೆ ಕಟಾವು ಪ್ರಯೋಗದಲ್ಲಿ ಸಣ್ಣ– ಪುಟ್ಟ ಲೋಪ ದೋಷ ಇರುವುದರಿಂದ (₹7.16 ಕೋಟಿ) ಪಾವತಿ ಆಗಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

‘ಆಗಿರುವ ತಪ್ಪುಗಳನ್ನು ಸರಿಪಡಿಸಿದ್ದೇವೆ. ಈ ಸಂಬಂಧ ಕೇಂದ್ರ ಕೃಷಿ ಇಲಾಖೆ ಜತೆ ಮಾತುಕತೆ ನಡೆಸಿದ್ದೇವೆ. ಮುಂದೆ ಇಂತಹ ಸಮಸ್ಯೆಗಳು ಉದ್ಭವಿಸದಂತೆ ಕಟ್ಟುನಿಟ್ಟಾದ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT