ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನ ಧ್ಯಾನದ ನವೋನ್ಮಾದ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

Bath– ಎಂದು ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್–ಕನ್ನಡ ನಿಘಂಟುವಿನಲ್ಲಿ ಹುಡುಕಿದರೆ ನಾಮವಾಚಕವೂ ಸಕರ್ಮಕ ಕ್ರಿಯಾಪದಗಳೂ ಕನ್ನಡದಲ್ಲಿ ಸಿಗುತ್ತವೆ. ಸ್ನಾನ; ಜಳಕ; ಮಜ್ಜನ; ಮೀಹ ಎನ್ನುವುದೆಲ್ಲ ನಾಮಸೂಚಕಗಳು. ನೀರುಮನೆ, ಬಚ್ಚಲುಮನೆ ಕೂಡ ಹಾಗೆಯೇ. ಸಕರ್ಮಕ ಕ್ರಿಯಾಪದವೆಂದರೆ ‘ಮೀಯುವುದು’ ಎಂದರ್ಥ. ಇಂಗ್ಲೆಂಡ್‌ನಲ್ಲಿ ಬಿಸಿನೀರಿನ ಊಟೆಗಳಿರುವ ‘ಬಾತ್’ ಎಂಬ ಹೆಸರಿನ ನಗರವೂ ಇದೆ. ಅದರ ಉಲ್ಲೇಖವೂ ನಿಘಂಟುವಿನಲ್ಲಿ ಉಂಟು.

ನನ್ನ ಪಾಲಿಗೆ ‘ಸ್ನಾನ’ ಎನ್ನುವುದು ಈ ಕೋಶಾರ್ಥಗಳನ್ನೂ ದಾಟಲು ಅಸಂಖ್ಯ ಕಾರಣಗಳಿವೆ. ಅವುಗಳಲ್ಲಿ ಕೆಲವು ಕಾಡುತ್ತಲೇ ಇರುತ್ತವೆ. ಇನ್ನು ಕೆಲವು, ಜ್ಞಾಪಕ ಚಿತ್ರಶಾಲೆಯಲ್ಲಿ ಆಗೀಗ ಮೂಡುತ್ತವೆಯಷ್ಟೆ.

ಕಾಲಕ್ಕೆ ತಕ್ಕಷ್ಟು ಬಿಸಿ; ಸುಡುಧಗೆ ಇದ್ದರೆ ಪೂರ್ತಿ ತಣ್ಣಗೆ– ಸ್ನಾನ ಶುರುವಾಗುವ ಮುನ್ನ ನೀರಿನ ಪರೀಕ್ಷೆ. ನೀರನ್ನು ಪರೀಕ್ಷಿಸಲು ನಾವು ಯಾರು? ಇಷ್ಟಕ್ಕೂ ನೀರೇ ನಮ್ಮನ್ನು ಪರೀಕ್ಷಿಸುತ್ತದಲ್ಲವೇ? ಕೆಲವು ಪ್ರದೇಶಗಳ ನೀರು ಗಡುಸು; ತೆಳುವಾಗಿ ಸೋಪು ತೀಡಿದರೂ ತೊಳೆಯುವುದೇ ಇಲ್ಲ. ಅಲ್ಲೆಲ್ಲಾ ಅದು ಹೇಗೆ ಸ್ನಾನವನ್ನು ಸಂಪೂರ್ಣ ಎನ್ನುವರೋ ಗೊತ್ತಿಲ್ಲ. ನನಗೆ ಈ ಪ್ರಶ್ನೆ ಮೂಡಲು ಕಾರಣ ನನ್ನೂರಿನ ಚೆನ್ನಾಗಿರುವ ನೀರು. ಅದು ಬಲು ಸಾಫ್ಟು; ಅಲಿಯಾ ಭಟ್‌ ಕೆನ್ನೆಯ ತರಹ ಎಂದರೂ ಉತ್ಪ್ರೇಕ್ಷೆಯಲ್ಲ. ಕೆನ್ನೆ ಎನ್ನುವುದು ನನ್ನ ಕಲ್ಪನೆ, ನೀರು ವಾಸ್ತವ. ನೀರನ್ನು ನೀರೆಗೆ ಹೋಲಿಸುವುದು ಅತಿಯೆನ್ನಿಸಿದರೂ ಅದಾಗಲೇ ನಮ್ಮ ಕಾವ್ಯ ಇಂಥ ಹೋಲಿಕೆಯನ್ನು ಒಪ್ಪಿರುವುದರಿಂದ ಸಮಾಧಾನ ಪಟ್ಟುಕೊಳ್ಳಬಹುದು.

ಸ್ನಾನ ಮಾಡುವಾಗ ನನಗೆ ಒಮ್ಮೊಮ್ಮೆ ಒಬ್ಬೊಬ್ಬರು ನೆನಪಾಗುತ್ತಾರೆ. ತಲೆಯಿಂದ ಸೋರುವಷ್ಟು ಹಚ್ಚಿದ ಎಣ್ಣೆಯನ್ನು ಹೋಗಿಸಲು ಕಷ್ಟ ಪಡುತ್ತಿದ್ದ ಅಮ್ಮನ ಮೃದು ಕೈಗಳು, ಬೆಣಚುಕಲ್ಲಿನಿಂದ ಕೈಕಾಲನ್ನು ತಿಕ್ಕಿ ಅವು ಇನ್ನಾದರೂ ಬೆಳ್ಳಗಾಗುವವೇ ಎಂದು ಕಣ್ಣರಳಿಸಿ ನೋಡುತ್ತಿದ್ದ ಅಜ್ಜಿ, ಒಂದು ಬದಿಯ ಜುಟ್ಟು ಹಿಡಿದು ಇನ್ನೊಂದು ಬದಿಗೆ ಸೀಗೇಕಾಯಿ ತೀಡುತ್ತಿದ್ದ ಅತ್ತೆ, ಬೆನ್ನಿನ ಅಗಲ ಅಳೆಯುವಂತೆ ಅದಕ್ಕೆ ಸೋಪು ಸವರಿ ನಕ್ಕಿದ್ದ ಮಡದಿ, ಕಾಲಿನ ಕೂದಲನ್ನು ಸಣ್ಣಗೆ ಎಳೆದು ಚಿಳ್ಳೆನ್ನಿಸಿ ಕಣ್ಣು ಮಿಟುಕಿಸಿದ್ದ ಚಿಕ್ಕ ಮಗ, ಟವಲ್‌ ಉಟ್ಟುಕೊಂಡು ಬಚ್ಚಲಿನಿಂದ ಹೊರಗೆ ಬರುತ್ತಿದ್ದಂತೆ ಎಲ್ಲಿಂದಲೋ ಓಡಿಬಂದು ಅದನ್ನು ಕಿತ್ತು ನನ್ನನ್ನು ಮುಜುಗರಕ್ಕೆ ಈಡುಮಾಡಿ ತುಂಟ ನಗೆ ನಗುತ್ತಿದ್ದ ಮಗಳು ಪೂರ್ವಿ, ನನ್ನಂತೆ ಊರಿಗೆ ರಜೆಗೆಂದು ಬಂದ ಒಂದೂವರೆ ಡಜನ್ನು ಮಕ್ಕಳಿಗೆ ದಣಿವೇ ಆಗದವರಂತೆ ಅಭ್ಯಂಜನ ಮಾಡಿಸುತ್ತಿದ್ದ ಪರಮ ಸಂಯಮ ಮೂರ್ತಿ ಶಾರದಜ್ಜಿ (ನನ್ನ ಖಾಸಾ ಅಜ್ಜಿಯ ಅತ್ತಿಗೆ) ಹೀಗೆ. ಇವೆಲ್ಲ ಬದುಕು ಕೊಟ್ಟ ಅನುಭವಗಳಾದರೆ, ಕಲ್ಪನೆಗೆ ನಿಲುಕುವ ಚಿತ್ರಗಳೂ ಮನಸ್ಸಿನಲ್ಲಿ ಮೂಡದೇ ಇರಲು ಸಾಧ್ಯವಿಲ್ಲ. ಅದೊಂದು ದಿನ ಯಾವುದೋ ಲಹರಿಯಲ್ಲಿ ‘ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ ಲವ್ವಲ್ಲಿ ಬಿದ್ದೆ...’ ಎಂಬ ರವಿಚಂದ್ರನ್‌ ಸಿನಿಮಾದ ಪೋಲಿ ಹಾಡನ್ನು ಗುನುಗುತ್ತಿರಬೇಕಾದರೆ ಹಿಂದಿನ ಮನೆಯ ಹುಡುಗಿ ಕಿಸಕ್ಕನೆ ನಕ್ಕಾಗ ಬೆನ್ನಿನಲ್ಲಿ ಚಳುಕು ಉಂಟಾಗಿತ್ತು.

ಬಾಲ್ಯದಲ್ಲಿ ಸ್ನಾನಾಸಕ್ತಿ ಅಷ್ಟಾಗಿ ಇರಲಿಲ್ಲ. ಆದರೆ, ಒಲೆಮುಂದೆ ಕುಳಿತು ಅರ್ಧ ತಾಸಾದರೂ ನೀರು ಕಾಯಿಸುವುದು ಖುಷಿಯ ಸಂಗತಿಯಾಗಿತ್ತು. ಹೆಂಚಿನ ಮನೆಯಲ್ಲಿ ವರ್ಷದ ಅರ್ಧ ಭಾಗ ಚಳಿ. ಬೆಳಿಗ್ಗೆ ಒಲೆ ಅದನ್ನು ಮೀರುವ ನನ್ನ ಪಾಲಿನ ತಾವು. ನಾನು–ಅಣ್ಣ ಶನಿವಾರ ಅರ್ಧದಿನ ಶಾಲೆ ಮುಗಿದ ಮೇಲೆ ಮೂಟೆಗೆ ತುಂಬಿಸಿಕೊಂಡು ಬಂದಿರುತ್ತಿದ್ದ ತರಗೆಲೆಗಳು, ಸರ್ವೆ ಮರದ ಸಣ್ಣ ಎಸಳುಗಳನ್ನು ಅದರ ಎದುರು ಕುಳಿತು ತುಂಬುತ್ತಿದ್ದೆ. ತರಗೆಲೆಗಳಂತೂ ಬೇಗ ಉರಿದುಹೋಗುತ್ತಿದ್ದವು. ಅಷ್ಟು ದೂರದಿಂದ ನಾನು–ಅಣ್ಣ ಕಷ್ಟಪಟ್ಟು ಎಳೆದುತಂದ ಚೀಲಗಳು ಅಷ್ಟು ಬೇಗ ಹಗುರಾಗುತ್ತವಲ್ಲ ಎಂಬ ಆತಂಕ ಮೂಡುತ್ತಿತ್ತು. ಚಳಿಯನ್ನು ಹೋಗಿಸುತ್ತಿದ್ದ ಒಲೆಯ ಎದುರಿನ ಕಾವಿನ ಸ್ನಾನವನ್ನೇ ನಾನು ನೀರಿನ ಸ್ನಾನಕ್ಕಿಂತ ಹೆಚ್ಚು ಮಾಡಿರುತ್ತಿದ್ದೆ.

ಭಾನುವಾರ ಬಂತೆಂದರೆ ಅಮ್ಮನಿಂದ ಅಭ್ಯಂಜನಕ್ಕೆ ಅರ್ಜಿ. ಆಟವಾಡುವ ಮೂಡಿನಲ್ಲಿರುತ್ತಿದ್ದ ನನಗೆ ಅದು ವರ್ಜ್ಯ. ಆದರೂ ಎಳೆದು ಒಂದಿಷ್ಟು ಎಣ್ಣೆ ತಿಕ್ಕಿ, ಸ್ನಾನ ಮಾಡಿಸುತ್ತಿದ್ದಳು ಅಮ್ಮ. ಅವಳ ಕೈಲಿ ಶಕ್ತಿ ಇರಲಿಲ್ಲ. ಹೆಚ್ಚು ಸೀಗೇಕಾಯಿ ತಿಕ್ಕಿಸಿಕೊಳ್ಳುವವನೂ ನಾನಾಗಿರಲಿಲ್ಲ. ಸೀಗೇಕಾಯಿ ತಿಕ್ಕಿದ ಮೇಲೆ ಅದಕ್ಕೆ ನೀರು ಸುರಿದಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಕಣ್ಣೊಳಗೆ ಸೀಗೇ ಚರಟ ಹೋಗುತ್ತಿತ್ತು. ಅದರ ಉರಿ ನನ್ನ ಪಾಲಿಗೆ ಆಟದಲ್ಲಿ ಬಿದ್ದು ಆದ ಗಾಯದ ಉರಿಗಿಂತ ಹೆಚ್ಚೇ ಆಗಿರುತ್ತಿತ್ತು.

ನನಗೆ ಅಭ್ಯಂಜನ ಮಾಡುವುದಕ್ಕಿಂತ ಅದನ್ನು ನೋಡುವುದು, ಓದುವುದು ಖುಷಿ ಕೊಟ್ಟಿದೆ. ‘ಬೆಟ್ಟದಜೀವ’ ಕಾದಂಬರಿಯಲ್ಲಿ ಶಿವರಾಮ ಕಾರಂತರು ಕಟೆದಿರುವ ಪಾತ್ರಗಳ ಅಭ್ಯಂಜನ ಸ್ನಾನವನ್ನು ಮರೆಯಲಾರೆ. ಶಿವರಾಮುವಿಗೆ ಗೋಪಾಲಯ್ಯ ಸ್ನಾನ ಮಾಡಿಸುವ ಬಗೆಯಲ್ಲಿ ಇರುವ ಕಕ್ಕುಲತೆ ಕಾಡುತ್ತದೆ. ಎಲ್ಲಿಂದಲೋ ಹೈರಾಣಾಗಿ ಬಂದವರಿಗೆ ನೀರು ಕೊಟ್ಟು, ಊಟಕ್ಕೆ ಬಡಿಸುವುದನ್ನು ನೋಡಿದ್ದೇವೆ. ಈ ಗೋಪಾಲಯ್ಯ ಎಣ್ಣೆ ಹಚ್ಚಿ ಅಭ್ಯಂಜನವನ್ನೇ ಮಾಡಿಸುತ್ತಾನೆ. ಅದನ್ನು ಓದಿದಾಗ ಮೂಡಿದ ಚಿತ್ರಗಳಿಗೆ ಅರ್ಥ ದಕ್ಕಿಸಿಕೊಡುವಂತೆ ಪಿ. ಶೇಷಾದ್ರಿ ತಾವು ನಿರ್ದೇಶಿಸಿದ ‘ಬೆಟ್ಟದಜೀವ’ ಸಿನಿಮಾದಲ್ಲಿ ದೃಶ್ಯಗಳನ್ನು ಮೂಡಿಸಿದ್ದರು. ಈಗ ನನಗೆ ಗೋಪಾಲಯ್ಯ ಎಂದರೆ ದತ್ತಣ್ಣ, ಶಿವರಾಮು ಎಂದರೆ ಸುಚೀಂದ್ರ ಪ್ರಸಾದ್‌ ಎಣ್ಣೆಹಚ್ಚಿಕೊಂಡ ಅವತಾರದಲ್ಲಿಯೇ ನೆನಪಾಗುವುದು. ಆ ಸಿನಿಮಾದಲ್ಲಿ ಇದ್ದ ಲೋಪಗಳನ್ನೆಲ್ಲಾ ಅಭ್ಯಂಜನದ ದೃಶ್ಯದ ಕಾರಣಕ್ಕೆ ಸ್ವಲ್ಪ ಮಟ್ಟಿಗಾದರೂ ಮಾಫಿ ಮಾಡಬಹುದು. ಅಗ್ರಹಾರ ಕೃಷ್ಣಮೂರ್ತಿಯವರ ’ನೀರು ಮತ್ತು ಪ್ರೀತಿ’ಯಲ್ಲಿ ಸ್ನಾನವೇ ಪ್ರೇಮದ ದಾರಿಯಾಗುವ ಪರಿಯನ್ನು ಓದಿಯೂ ಪುಲಕಗೊಂಡಿದ್ದೇನೆ.

ಅತಿ ಮೆತ್ತಗಿನ ಪುಟ್ಟ ಪಾದಗಳಿಗೆ ಎಣ್ಣೆ ಹಚ್ಚುವಾಗ ಮಗು ಒಂಥರಾ ಮುಖ ಮಾಡಿಕೊಂಡು ನಗು–ಅಳು ಎರಡೂ ಬೆರೆತ ಭಾವ ಸೂಸುತ್ತದಲ್ಲ; ಆಗ ನನಗೆ ಹೂ ಅರಳುವುದು ನೆನಪಾಗುತ್ತದೆ. ಅದಕ್ಕೇ ನಾನು ಪುಟ್ಟ ಮಕ್ಕಳಿರುವ ಮನೆಗೆ ಅವುಗಳಿಗೆ ಸ್ನಾನ ಮಾಡಿಸುವ ಸಮಯದಲ್ಲೇ ಹೋಗುತ್ತಿದ್ದುದು. ಹದಬಿಸಿ ನೀರನ್ನು ಮಗುವಿನ ಮೇಲೆ ಚೊಂಬುಗಟ್ಟಲೆ ಸುರಿಯುವಾಗ ಅದು ಎಡೆಬಿಡದೆ ಅಳುತ್ತಿತ್ತು. ಆಗ ನನಗೂ ಸಂಕಟ. ಆದರೆ, ಸ್ನಾನಾ ನಂತರದ್ದು ಸ್ವರ್ಗಸದೃಶ ಅನುಭವ. ನನಗೆ ಸಾಮ್ರಾಣಿ ಹೊಗೆಯ ಪರಿಮಳ ಆಗ ತುಂಬ ಇಷ್ಟವಿತ್ತು. ಆ ಹೊಗೆಯ ಮೇಲೆ ಮಗುವನ್ನು ಅತ್ತಿತ್ತ ಆಡಿಸಿದಾಗ ಅದು ತುಳುಕಿಸುತ್ತಿದ್ದ ನಗು ಸ್ವರ್ಗ ಸಮಾನ. ಈಗ ಯಾವುದೋ ಹೋಟೆಲ್‌ನಲ್ಲಿ ಶುಕ್ರವಾರದ ಪೂಜೆಗೆ ಸಾಮ್ರಾಣಿ ಹೊಗೆ ಹಾಕಿದರು. ಯಾಕೋ, ಸಾಮ್ರಾಣಿ ಗುಣಮಟ್ಟ ಮೊದಲಿನಂತೆ ಇಲ್ಲವೇನೋ ಎಂದು ಅನುಮಾನ ಮೂಡಿತು.

ಸ್ನಾನ ಮಾಡುವುದು ಒಂದು ಸುಖ. ನನ್ನ ಪಾಲಿಗೆ ಅದು ಧ್ಯಾನವೇ ಹೌದು. ಮೈಮೇಲೆ ಒಂದೂ ಬಟ್ಟೆ ಇಲ್ಲದೆ ಮಾಡುವ ಸ್ನಾನಕ್ಕೆ ನಾವು ಕೆಲವು ಸ್ನೇಹಿತರು ಸೇರಿ ‘ಫ್ರೀಡಂ ಬಾತ್‌’ ಎಂದು ಹೆಸರಿಟ್ಟಿದ್ದೆವು. ಆ ಕೋಡ್‌ ವರ್ಡ್‌ಗಳು ನಮಗಷ್ಟೇ ಗೊತ್ತಾಗುತ್ತಿದ್ದುದು. ಬಾಲ್ಯದಲ್ಲಿ ಸ್ನಾನದ ಮೇಲೆ ಇಲ್ಲದ ಒಲವು ತಾರುಣ್ಯದಲ್ಲಿ ಅದು ಹೇಗೋ ಹೆಚ್ಚಾಗಿಬಿಟ್ಟಿತು. ಹೇಳಿಕೇಳಿ, ನಾನು ಬಾತ್‌ರೂಮ್‌ ಸಿಂಗರ್‌. ಬಕೆಟ್‌ಗೆ ನೀರು ತುಂಬಿದೊಡನೆಯೇ ತಲೆಯಲ್ಲಿ ಅದ್ಯಾವ್ಯಾವುವೋ ಹಾಡುಗಳು ಹೊಮ್ಮುತ್ತಿದ್ದವು. ಅವು ನಾಲಗೆಗೆ ದಾಟಲು ಕ್ಷಣ ಸಾಕಿತ್ತು. ನೀರು ಸುರಿದುಕೊಳ್ಳುವ ಮೊದಲು ಒಂದು ಲಯದಲ್ಲಿ ಹೊಮ್ಮುವ ಸ್ವರಗಳು, ತುಟಿಯ ಮೇಲೆ  ನೀರು ಹರಿದುಹೋಗುವಾಗ ಬೇರೆಯದೇ ಪಲುಕು ಪಡೆದುಕೊಳ್ಳುತ್ತಿದ್ದವು. ನನ್ನ ಪಾಲಿಗೆ ಅದೂ ಒಂದು ಪ್ರಯೋಗ. ಮಗ್‌ನಲ್ಲಿ ಸ್ವಲ್ಪ ನೀರು ತುಂಬಿಸಿಕೊಂಡು, ಅದನ್ನು ಬಾಯಿಗೆ ಆನಿಸುವಂತೆ ಬಾಗಿಸಿ, ನೀರು ತುಟಿಯನ್ನು ತಾಕುವಂತೆ ಮಾಡುವುದು; ಆಮೇಲೆ ಹಾಡುವುದು ಇನ್ನೊಂದು ಪ್ರಯೋಗ. ಆಗ ಕಂಠದಿಂದಿಳಿದ ಸಂಗೀತ ಮಗ್‌ನ ನೀರಿನಲ್ಲಿ ಅಲೆ ಮೂಡಿಸುತ್ತಿದ್ದುದು ನನ್ನ ಪಾಲಿಗೆ ಸಾಕ್ಷಾತ್ಕಾರ. ಹೀಗೆ ಗಾನ ಪ್ರಯೋಗ ಮಾಡುವಾಗ ಆಗೀಗ ನೆರೆಯವರು ಕೇಳಿಸಿಕೊಂಡು, ಆಮೇಲೆ ಮನೆಯ ಸದಸ್ಯರ ಜೊತೆ ಆ ಕುರಿತು ಮೆಚ್ಚುಗೆ, ತಕರಾರು, ಅನುಮಾನಗಳನ್ನು ವ್ಯಕ್ತಪಡಿಸಿರುವುದೂ ಇದೆ. ಅದು ಬೇರೆಯದೇ ಕಥೆ.

ಸ್ನಾನಕ್ಕೂ ಕಾಲಕ್ಕೂ ಸಂಬಂಧವಿದೆ. ಬೇಸಿಗೆಯಲ್ಲಿ ತಣ್ಣೀರೇ ಪನ್ನೀರು. ಚಳಿಯಲ್ಲಿ ಹೊಗೆ ಹೊಮ್ಮುವ ಬಿಸಿನೀರಾದರೂ ಸಾಲದು. ಮಳೆಗಾಲದಲ್ಲಿ ಹೊರಗೂ ಮಳೆ ಬಚ್ಚಲಿನ ಒಳಗೂ ಮಳೆ. ಮಳೆಯಲ್ಲಿ ಚೆನ್ನಾಗಿ ನೆನೆದು ಬಂದಮೇಲೆ ಮಾಡುವ ಬಿಸಿನೀರಿನ ಸ್ನಾನಕ್ಕೆ ಬೇರೆಯದೇ ಗಮ್ಮತ್ತು. ಸೆಳೆತುಕೊಂಡ ಪಾದದ ಮೇಲೆ ಹದದ ಬಿಸಿನೀರು ಬಿದ್ದರೆ ಅಲಿಯಾ ಭಟ್‌ ನಕ್ಕಾಗ ಬೀಳುವ ಗುಳಿ ನೆನಪಾಗುತ್ತದೆ. ಯಾರಾದರೂ ಅರಿವಿಗೇ ಬಾರದಂತೆ ದಿಢೀರನೆ ಬಿಸಿನೀರಿನ ಸ್ನಾನದ ಮಧ್ಯೆ ತಣ್ಣೀರೆರಚಿದರೆ ಕಟ್ಟುವ ಉಸಿರು ಮಾಧುರಿ ದೀಕ್ಷಿತಳದ್ದೋ, ಶ್ರೀದೇವಿಯದ್ದೋ ಮಳೆ ಹಾಡನ್ನು ಸ್ಮೃತಿಪಟಲದಲ್ಲಿ ಮೂಡಿಸುತ್ತದೆ.

ಸ್ನಾನ ಮಾಡುವ ವಿಷಯ ಹಾಗಿರಲಿ. ಮಾಡಿಸುವುದು ಇನ್ನೊಂದು ಸವಾಲು. ಪುಟ್ಟ ಮಗನಿಗೆ ಸ್ನಾನ ಮಾಡಿಸುವ ಪರೀಕ್ಷೆಯಲ್ಲಿ ಪಾಸಾಗಿರುವುದರಿಂದ ಈ ಮಾತನ್ನು ಹೇಳುವ ಹಕ್ಕು ನನಗಿದೆ ಎಂದು ಭಾವಿಸಿದ್ದೇನೆ. ಅವನ ಹದಕ್ಕೆ ನೀರು ಎಷ್ಟು ಬಿಸಿಯಾಗಿಬೇಕು ಎಂದು ನಿರ್ಧರಿಸುವುದು ಮೊದಲ ಸವಾಲು. ಅವನನ್ನು ಹಿಡಿದು ಕೂರಿಸುವುದು ಇನ್ನೊಂದು ಸವಾಲು. ಸ್ನಾನ ಮಧ್ಯೆ ಅವನು ಕೇಳುವ ಪ್ರಶ್ನೆಗಳಿಗೆ ಉತ್ತರವಿಲ್ಲದೆ ತಲೆ ಕೆರೆದುಕೊಳ್ಳಬೇಕಾಗುವುದು ಇನ್ನೊಂದು ಸವಾಲು. ಕಿವಿಯೊಳಗೆ ನೀರು ಹಾಕಿಕೊಂಡರೆ ಏನಾಗುತ್ತದೆ ಎನ್ನುವುದರಿಂದ ಹಿಡಿದು ಅಂಡರಿವೆ ಯಾಕೆ ಹಾಕಬೇಕು ಎನ್ನುವವರೆಗೆ ಅವನ ಪ್ರಶ್ನೆಗಳಿಗೆ ಅವನದ್ದೇ ಕಾರಣಗಳು ಇರುತ್ತಿದ್ದವು. ನನಗೋ ಪೀಕಲಾಟ. ಮೊದಮೊದಲು ಅವನ ಮುಖಕ್ಕೆ ನೀರು ಹಾಕುವುದು ಬಲು ಕಷ್ಟವಿತ್ತು. ನೀರು ಮುಖದ ಮೇಲೆ ಬಿದ್ದರೆ ಉಸಿರು ಕಟ್ಟಿದಂತಾಗುತ್ತದಲ್ಲ; ಅದು ಅವನಿಗೆ ಭಯ. ಅದನ್ನು ಹೋಗಲಾಡಿಸಲು ನಾನೊಂದು ಪ್ರಾತ್ಯಕ್ಷಿಕೆಯನ್ನೇ ನೀಡಬೇಕಾಯಿತು. ನಾನೂ ಜೋರಾಗಿ ಮುಖಕ್ಕೆ ನೀರು ಎರಚಿಕೊಂಡು ಏನೂ ಆಗುವುದಿಲ್ಲ ಎಂದು ಖಾತರಿಪಡಿಸಿದ ಮೇಲೆಯೇ ಅವನು ಪಟ್ಟನ್ನು ಸ್ವಲ್ಪ ಸಡಿಲಿಸಿದ್ದು.

ನದಿ ನೀರಿನ ಸ್ನಾನದ್ದು ಇನ್ನೊಂದು ಕಥೆ. ನೀರನ್ನು ಕುರಿತು ಗಂಟೆಗಟ್ಟಲೆ ಮಾತನಾಡಬಲ್ಲ, ನೀರಿನ ವಿವಾದಗಳ ಬಗೆಗೆ ಸಂಪಾದಕೀಯವನ್ನೂ ಬರೆಯಬಲ್ಲ ಕವಿ ಹೃದಯದ ಆಪ್ತ ಸ್ನೇಹಿತನೊಬ್ಬ ನದಿಯ ನೀರಿಗೆ ಇಳಿಯಲು ಸುತರಾಂ ಒಪ್ಪದೇಹೋದದ್ದು ನನಗೆ ಸೋಜಿಗವಾಗಿ ಕಂಡಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಶಾಲಾದಿನಗಳಲ್ಲಿ ಒಬ್ಬ ಸ್ನೇಹಿತ ಸಮುದ್ರದ ನೀರಿಗಿಳಿದು, ಸಂಪೂರ್ಣ ಬೆತ್ತಲಾಗಿ ನಕ್ಕಿದ್ದ. ದೇವಸ್ಥಾನದ ಪವಿತ್ರ ಸ್ನಾನ ಮಾಡುವವರು ಶಾಸ್ತ್ರಕ್ಕೆಂದು ಮುಳುಗೆದ್ದು ಬರುವುದು ಹಕ್ಕಿ ಸ್ನಾನ. ನದಿಯ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದು ಸವಾಲು ಹೌದಾದರೂ ಅವರ ನೀರಾಟ ನೋಡಿದಾಗ ಆಗುವ ಖುಷಿ ಆ ಪಡಿಪಾಟಲನ್ನು ಮರೆಸಿಬಿಡುತ್ತದೆ.

ಸ್ನಾನದಲ್ಲೂ ವೈವಿಧ್ಯವಿದೆ. ಅದು ನಮ್ಮ ಆಯಾ ದಿನದ ಮನಸ್ಥಿತಿಯ ಬಿಂಬವೂ ಹೌದು. ಅಣ್ಣ ಮೊದಲ ಚೊಂಬು ನೀರು ಮೈಮೇಲೆ ಬೀಳುವಾಗಿನಿಂದ ಮಂತ್ರೋಚ್ಚಾರ ಮಾಡತೊಡಗಿದನೆಂದರೆ ಸಹಜವಾಗಿದ್ದಾನೆ ಎಂದರ್ಥ. ಮಂತ್ರ ನಿಂತು, ಮೌನದ ಸ್ನಾನ ಅವನದ್ದಾಯಿತೋ ನಮಗೆಲ್ಲಾ ಚಿಂತೆ. ನನಗೂ ಅಷ್ಟೇ, ಸ್ನಾನ ನಿತ್ಯನೂತನ. ಹಾಡಿನ ಮೂಡಿನ ಮಾತು ಅದಾಗಲೇ ಹೇಳಿದೆನಲ್ಲ. ಅದಲ್ಲದೆ ಒಮ್ಮೊಮ್ಮೆ ಮಾಡಬೇಕಾದ ಕೆಲಸಗಳ ಪಟ್ಟಿ ತಲೆಯೊಳಗೆ ಗುಂಗಿಹುಳುವಾದಾಗ, ಅದನ್ನು ಹೊರಗೆ ತೆಗೆದೋಡಿಸಲೋ ಎಂಬಂತೆ ಚೊಂಬುಗಟ್ಟಲೆ ನೀರು ಸುರಿದುಕೊಳ್ಳುವುದುಂಟು. ಸೋಪು ಹಚ್ಚಿ ತೀಡುವುದಕ್ಕಿಂತ ಸುಮ್ಮನೆ ನೀರು ಹೊಯ್ದುಕೊಳ್ಳುವುದರಲ್ಲಿ ಇರುವ ಮಜವೇ ಬೇರೆ ಅಲ್ಲವೇ? ಈಗ ಬಿಡಿ, ಶವರ್‌ ಅಡಿ ನಿಂತರೆ ಅದು ಬೇರೆಯದೇ ಭಾವದ ಸ್ನಾನವಾಗಿಬಿಡುತ್ತದೆ. ಇನ್ನು ಕೆಲವೊಮ್ಮೆ ಸ್ನಾನಗೃಹದಲ್ಲಿ ಕಣ್ಣುಮುಚ್ಚಿದರೂ ಹಿಂದಿನ ದಿನವೋ ಆ ದಿನವೋ ನೋಡಿದ ಸುಂದರ ವದನ ನೆನಪಾಗಿ ರೋಮಾಂಚನವಾಗುತ್ತದೆ (ಸ್ನಾನ ಮಾಡುವಾಗ ನೀರು ಸುರಿದರೆ ಕೂದಲು ಹೇಗೆ ನಿಂತೀತು ಎಂದು ಕೇಳಬೇಡಿ).

ಇತ್ತೀಚೆಗೆ ಆಪ್ತರೊಬ್ಬರು ಬಿಸಿನೀರಿಗೆ ಕಲ್ಲುಪ್ಪು ಹಾಕಿಕೊಂಡು ಸ್ನಾನ ಮಾಡಿದರೆ ದೇಹದ ದಣಿವು ಇಲ್ಲವಾಗುತ್ತದೆಂಬ ಸಲಹೆ ಕೊಟ್ಟರು. ಉಪ್ಪುನೀರಿನ ಸ್ನಾನ ಮಾಡಿದ ಮೇಲೆ ದಣಿವು ಇಲ್ಲವಾದದ್ದು ಹಾಗಿರಲಿ, ಬೋರಲು ಮಲಗಿದ ನನ್ನನ್ನು ನಿದ್ರಾದೇವಿ ಆವರಿಸಿಕೊಂಡುಬಿಡುವುದೇ? ಅದು ನಿಜಕ್ಕೂ ದಣಿವು ಕಳೆದ ಸ್ನಾನವೇ ಸರಿ. ಸಲಹೆ ಕೊಟ್ಟವರಿಗೆ ಸ್ನಾನಕ್ಕೂ ಉಪ್ಪಿಗೂ ಇರುವ ಸಂಬಂಧದ ಮೇಲೆ ವಿಪರೀತ ಆಸಕ್ತಿ. ಅದಕ್ಕೇ ಈಗ ಮಾರುಕಟ್ಟೆಗೆ ಲಗ್ಗೆಇಟ್ಟಿರುವ ಹಿಮಾಲಯನ್‌ ಉಪ್ಪನ್ನು ಅವರು ತರಿಸಿಕೊಂಡಿದ್ದಾರೆ. ಅದನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ದೇಹ ಇನ್ನಷ್ಟು ಹಗುರವಾಗುವುದಂತೆ. ನಾನು ಆ ಪ್ರಯೋಗ ಮಾಡುವುದೊಂದು ಬಾಕಿ ಇದೆ. ಉಪ್ಪುನೀರಿನ ಸ್ನಾನದ ಐಡಿಯಾ ನನ್ನ ಆಪ್ತವಲಯದಲ್ಲಿ ವೈರಲ್‌ ಆದದ್ದೇ ಕೆಲವು ಪ್ರಶ್ನೆಗಳೂ ಕೇಳಿಬರಲಾರಂಭಿಸಿದವು. ಆ ನೀರಿನಲ್ಲಿ ತಲೆಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲವೇ ಎನ್ನುವುದು ಮೊದಲ ಪ್ರಶ್ನೆ. ಕೂದಲು ನರೆಯುವುದಿಲ್ಲವೇ ಎನ್ನುವುದು ಎರಡನೇ ಪ್ರಶ್ನೆ. ತರಚು ಗಾಯವೋ, ದೊಡ್ಡ ಗಾಯವೋ ಆಗಿದ್ದಾಗ ಅದಕ್ಕೆ ಉಪ್ಪುನೀರು ಸುರಿದರೆ ಉರಿಯುವುದಲ್ಲವೇ ಎನ್ನುವುದು ಮೂರನೇ ಪ್ರಶ್ನೆ. ನಾಲ್ಕನೇ ಪ್ರಶ್ನೆ ಇನ್ನೂ ಮಜವಾಗಿದೆ: ಕಣ್ಣೊಳಗೆ ಆ ನೀರು ಹೋದರೆ ಮದ್ರಾಸ್‌ ಐ ತರಹ ಆಗುವುದಿಲ್ಲವೇ. ಇವೆಲ್ಲಕ್ಕೂ ಅವರವರ ಉಪ್ಪುನೀರು ಸ್ನಾನವೇ ಉತ್ತರ ಕೊಟ್ಟೀತು. ನನಗಂತೂ ನರೆಕೂದಲಾದರೇನು ಗತಿ ಎಂಬ ಯೋಚನೆ ಇಲ್ಲ; ತಲೆಗೂದಲಿನಲ್ಲಿ ಕಪ್ಪು ಕೂದಲನ್ನು ಹುಡುಕಬೇಕು!

ದೂರದ ಸಂಬಂಧಿಕರೊಬ್ಬರ ಮನೆಗೆ ನಾನು ಆರನೇ ಇಯತ್ತೆಯಲ್ಲಿದ್ದಾಗ ಹೋದ ದಿನವೊಂದು ನೆನಪಾಗುತ್ತಿದೆ. ಆಗಿನ್ನೂ ಮೊಸಾಯಿಕ್‌ ನೆಲ ನನ್ನ ಪಾಲಿಗೆ ಅತಿ ಹೊಸದು. ಅವರೋ ಉಳ್ಳವರು. ಬಚ್ಚಲಮನೆಗೂ ವಿಪರೀತ ಜಾರುವ ಟೈಲ್ಸ್‌ ಹಾಕಿಸಿಬಿಟ್ಟಿದ್ದರು. ಸ್ನಾನ ನನಗೆ ನೆಪವಾಗಿತ್ತು; ವಂದನಾರ್ಪಣೆ (ಹಿರಿಯ ಮಿತ್ರ, ಕಥೆಗಾರ ಎಸ್‌. ದಿವಾಕರ್‌ ಮೂತ್ರ ವಿಸರ್ಜನೆಗೆ ಹೀಗೂ ಕರೆಯಬಹುದು ಎಂದು ಹೇಳಿಕೊಟ್ಟಿದ್ದು) ಮಾಡುವುದು ಮುಖ್ಯ ಉದ್ದೇಶ. ಒಂದೇ ಉಸಿರಿಗೆ ಬಚ್ಚಲಿಗೆ ಓಡಿದೆ. ಕ್ಷಣಾರ್ಧದಲ್ಲಿ ಬಚ್ಚಲ ನೆಲದ ಮೇಲೆ ಜಾರಿಬಿದ್ದಿದ್ದೆ. ಎಲ್ಲೆಲ್ಲಿಗೆ ಏಟು ಬಿದ್ದಿತ್ತೆಂದು ಈಗ ಮರೆತುಹೋಗಿದೆ. ನಾನು ಬಿದ್ದಿದ್ದನ್ನು ಕಂಡು ಅಣ್ಣ ನಕ್ಕಿದ್ದಷ್ಟೇ ನೆನಪು.

ಮತ್ತೆ ಸ್ನಾನ ಮಾಡಿಸುವ ವಿಷಯಕ್ಕೇ ಬಂದು ಈ ಲಹರಿಯನ್ನು ಮುಗಿಸುತ್ತೇನೆ.

ತಾತನಿಗೆ ಅಪ್ಪ ಸ್ನಾನ ಮಾಡಿಸುತ್ತಿದ್ದರು. ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದ ತಾತನಿಗೆ ಅಪ್ಪ ಸ್ನಾನ ಮಾಡಿಸಿದ್ದನ್ನು ನೋಡಿದ್ದ ನನಗೆ ಅದರ ಕಷ್ಟವೇನು ಎನ್ನುವುದು ತಿಳಿದಿತ್ತು. ಅಜ್ಜಿಗೆ ಪಾರ್ಶ್ವವಾಯು ಆದಾಗ ಅವರ ಸ್ನಾನಕ್ಕೆ ನಾನು ನೆರವು ನೀಡಿದ್ದೂ ಇದೆ. ತಾನು ಹೆಣ್ಣೆಂಬ ಸಂಕೋಚ ಅಜ್ಜಿಗೆ; ಮೊಮ್ಮಗ ಎಂಬ ನಿಸ್ಸಂಕೋಚ ನನಗೆ. ಬೆನ್ನ ಹಿಂದೆಯೇ ನನ್ನನ್ನು ನಿಲ್ಲಿಸಿ ತನಗೆ ಬೇಕಾದೆಡೆಗೆಲ್ಲಾ ಅವಳು ನೀರು ಹನಿಸಿಕೊಂಡು ಸ್ನಾನ ಮಾಡಿ, ಘಮಘಮಿಸಿ ಬಾಯಿತುಂಬಾ ನಕ್ಕಿದ್ದನ್ನು ಹೇಗೆ ಮರೆಯಲಿ? ತಾತನಿಗೆ ಅಷ್ಟೆಲ್ಲಾ ಆಸ್ಥೆಯಿಂದ ಸ್ನಾನ ಮಾಡಿಸಿದ ಅಪ್ಪನಿಗೂ ಆಸ್ಪತ್ರೆಯಲ್ಲಿ ಸ್ನಾನ ಮಾಡಿಸುವ ಪರಿಸ್ಥಿತಿ ನನಗೆ ಬಂದಿತು. ಮೈ ಕೈ ಎಲ್ಲವನ್ನೂ ನಾನೇ ತಿಕ್ಕಿದ ಮೇಲೆ, ಸ್ವಲ್ಪ ಹೊರಗೆ ಹೋಗುವಂತೆ ಅಪ್ಪ ನನಗೆ ಆಜ್ಞೆ ಮಾಡಿದರು. ಮೂರ್ನಾಲ್ಕು ನಿಮಿಷಗಳಾದ ಮೇಲೆ ಮತ್ತೆ ಬರುವಂತೆ ಕರೆದರು. ಅಷ್ಟರಲ್ಲಿ ಅವರು ತಮ್ಮ ಖಾಸಗೀ ವಲಯಗಳನ್ನೂ ಸ್ವಚ್ಛ ಮಾಡಿಕೊಂಡಿದ್ದಾಗಿತ್ತು. ಆಸ್ಪತ್ರೆಯಲ್ಲಿ ನೋವಿನಿಂದ ನರಳುತ್ತಿದ್ದಾಗಲೂ ಅಪ್ಪನಿಗಿದ್ದ ಸ್ವಚ್ಛತೆಯ ಪ್ರಜ್ಞೆ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು.ಅಪ್ಪ ಸತ್ತಾಗ ಮಾಡಿಸಿದ ಸ್ನಾನ ಹಾಗೂ ಆ ಸಂದರ್ಭದ ಶ್ರಾದ್ಧದ ದಿನಗಳಲ್ಲಿ ನಾನು, ಅಣ್ಣ ಪದೇ ಪದೇ ಮಾಡುತ್ತಿದ್ದ ಸ್ನಾನ ಕಣ್ಣೀರು–ನೀರು ಎರಡನ್ನೂ ಬೆರೆಸಿ ಸ್ನಾನಕ್ಕೆ ವಿಷಾದದ ಅರ್ಥವನ್ನೂ ಕೊಟ್ಟುಬಿಟ್ಟಿತ್ತು.

ಇನ್ನೊಂದು ಸ್ನಾನ. ಮತ್ತೊಂದು ಧ್ಯಾನ; ಪ್ರವಾಸದ ದಣಿವಾರಲೆಂದು ಒಂದು, ಕಚೇರಿಯ ಉಸಾಬರಿ ತೊಳೆದುಕೊಳ್ಳಲು ಇನ್ನೊಂದು, ಮೈಶಾಖ ಇಳಿಸಿಕೊಳ್ಳಲೆಂದು ಮತ್ತೊಂದು... ಹೀಗೆ. ರಾತ್ರಿ ನಿದ್ದೆ ಮಾಡಲು ಕಾಟ ಕೊಡುತ್ತಿದ್ದ ಅಣ್ಣನ ಮಗನಿಗೆ ಅಷ್ಟು ಹೊತ್ತಿನಲ್ಲೂ ಸ್ನಾನ ಮಾಡಿಸಿದ್ದನ್ನು ನೆನಪಿಸಿಕೊಂಡು ನಾನೂ ಒಮ್ಮೆ ನಡುರಾತ್ರಿ ಬಿಸಿ ನೀರು ಸುರಿದುಕೊಂಡಿದ್ದಿದೆ. ಅದನ್ನು ಮಗದೊಂದು ಸ್ನಾನ ಎನ್ನಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT