ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ಜೀವ ಹಿಂಡಿದ ಇಲಾಖಾ ವಿಚಾರಣೆ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಆಶಯದಿಂದಲೇ ಹೊರಹೊಮ್ಮಿದ ಲೋಕಾಯುಕ್ತ ಸಂಸ್ಥೆ ತನ್ನ ಮಡಿಲಿನಲ್ಲೇ ಕೈಗೊಳ್ಳುವ ಇಲಾಖಾ ವಿಚಾರಣೆಗಳ ಕಲಾಪಗಳನ್ನು ನ್ಯಾಯಾಲಯಗಳಂತೆ ಸಾರ್ವಜನಿಕವಾಗಿ ಮುಕ್ತವಾಗಿಡದೆ ಗೋಪ್ಯತೆಯಿಂದ (ವಿಚಾರಣಾ ಕೊಠಡಿಯಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಹೊರತುಪಡಿಸಿದ ಬೇರೆ ಯಾರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ) ನಡೆಸುವುದು ವಿರೋಧಾಭಾಸದಿಂದ ಕೂಡಿದೆ. ಕ್ಷಣಾರ್ಧದಲ್ಲಿಯೇ ತೀರ್ಪುಗಳು, ಆದೇಶಗಳು ಅಂತರ್ಜಾಲದಲ್ಲಿ ಸಿಗುವ ದಿನಗಳಲ್ಲಿಯೂ ವಿಚಾರಣಾ ವರದಿ ಮತ್ತು ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮಾಡಿದ ಶಿಫಾರಸುಗಳನ್ನು ಮುಕ್ತವಾಗಿ ಪ್ರಕಟಿಸದೇ, ಮುಚ್ಚಿದ ಲಕೋಟೆಯಲ್ಲಿ ಶಿಸ್ತು ಪ್ರಾಧಿಕಾರಕ್ಕೆ ಕಳುಹಿಸುವ ವಿಧಾನವೇ ಸುಧಾರಣೆ ಬೇಡುತ್ತದೆ. ವಿಚಿತ್ರ ಎಂದರೆ, ಬೇರೆಲ್ಲಾ ಇಲಾಖೆಗಳು, ಇಲಾಖಾ ವಿಚಾರಣಾ ವ್ಯಾಪ್ತಿಗೆ ಒಳಪಟ್ಟರೆ ಇದಕ್ಕೆ ಪೊಲೀಸ್ ಇಲಾಖೆ ಅಪವಾದ. ಇವರು ಮಾತ್ರ ಲೋಕಾಯುಕ್ತ ಮೇಲ್ವಿಚಾರಣೆ ಇಲ್ಲದೆ ತಮ್ಮದೇ ಆದ ಪ್ರತ್ಯೇಕ ವಿಚಾರಣಾ ವ್ಯವಸ್ಥೆ ಹೊಂದಿರುವುದೇ ಸೋಜಿಗ!.

ಲೋಕಾಯುಕ್ತ ಕಚೇರಿಗೆ ವಿಚಾರಣೆಗೆಂದು (ಇಲಾಖಾ ವಿಚಾರಣಾ ನ್ಯಾಯಾಲಯ) ಬರುವ ಸರ್ಕಾರಿ ನೌಕರರು ತಮ್ಮ ಬೆನ್ನಹುರಿಯಲ್ಲಿ ನಡುಕ ಇರಿಸಿಕೊಂಡೇ ಅಲೆದಾಡುತ್ತಿರುತ್ತಾರೆ! ಮೂರ್ನಾಲ್ಕು ವಕೀಲರ ಏಕಸ್ವಾಮ್ಯದ ಅಬ್ಬರದಲ್ಲಿ ನಡೆಯುವ ಈ ಇಲಾಖಾ ವಿಚಾರಣೆ ನೌಕರರ ಪಾಲಿಗೆ ವಧಾ ಕೇಂದ್ರದಂತೆ ಭಾಸವಾಗುತ್ತಿರುತ್ತದೆ!!

ಆಡಳಿತ ನಿರ್ವಹಣೆಯಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಶಿಸ್ತು, ಅಕ್ರಮಗಳ ಕುರಿತಾದ ದೂರುಗಳ ವಿಚಾರಣೆ ನಡೆಸುವ ಮೂಲಕ, ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಿಸುವ ಉದ್ದೇಶಕ್ಕಾಗಿ 1984ರಲ್ಲಿ ಕರ್ನಾಟಕ ಲೋಕಾಯುಕ್ತ ಅಧಿನಿಯಮ ಜಾರಿಗೆ ತರಲಾಯಿತು.

ಲೋಕಾಯುಕ್ತರ ವ್ಯಾಪ್ತಿಗೆ ದಿವಾನನಿಂದ ಹಿಡಿದು ಜವಾನನವರೆಗೂ ಒಳಪಡುತ್ತಾರೆ. ಸರ್ಕಾರಿ ನೌಕರರ ಕಾರ್ಯವೈಖರಿಯಲ್ಲಿ ಕಂಡು ಬರುವ ಲಂಚದ ಬೇಡಿಕೆ, ತಾರತಮ್ಯ, ನಿರ್ಲಕ್ಷ್ಯತೆ, ಅಕ್ರಮ ಸಂಪಾದನೆ, ದಮನಕಾರಿ ನೀತಿಗಳು, ವಿಳಂಬ ಧೋರಣೆ ವಿರುದ್ಧದ ದೂರುಗಳನ್ನು ಆಧರಿಸಿ, ಅಗತ್ಯವಿದ್ದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಲು, ಆರೋಪಿಗೆ ಕಾರಣ ಕೇಳಿ ನೋಟಿಸ್‌ ನೀಡುವ ಮುಖಾಂತರ ಇಲಾಖಾ ವಿಚಾರಣೆ ಆರಂಭಿಸಲಾಗುತ್ತದೆ.

ಇಂತಹದ್ದೊಂದು ಇಲಾಖಾ ವಿಚಾರಣೆಯ ನೋಟಿಸ್‌ ಪಡೆದಿದ್ದ ವೆಂಕಟೇಶಪ್ಪನನ್ನು ಚಿಕ್ಕಬಳ್ಳಾಪುರದ ವಕೀಲ ಲಕ್ಷ್ಮೀನರಸಿಂಹಪ್ಪ ನನಗೆ ಪರಿಚಯಿಸಿದರು. ಆತ ತಂದಿದ್ದ ದಾಖಲೆಗಳನ್ನು ಗಮನಿಸಿದಾಗ, ‘ವೆಂಕಟೇಶಪ್ಪ ರಾಜಕೀಯ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ ಎನ್ನುವವರಿಗೆ ₹ 2,500 ಚೆಕ್ ನೀಡಿ ಸರ್ಕಾರದ ಹಣ ಪೋಲು ಮಾಡಿದ್ದಾರೆ. ಉಮೇಶ್ ಹೆಸರಿನಲ್ಲಿ 2 ಜಾಬ್ ಕಾರ್ಡ್‌ಗಳಿದ್ದ ವಿಚಾರ ತಿಳಿದಿದ್ದರೂ ನಿರ್ಲಕ್ಷತೆಯಿಂದ ಅವುಗಳಿಗೆ ಮಜೂರಿ ಸಂದಾಯ ಮಾಡಿದ್ದಾರೆ’ ಎಂದು ಆರೋಪಿಸಲಾಗಿತ್ತು.

28ರ ಆಸುಪಾಸಿನ ವೆಂಕಟೇಶಪ್ಪ ಚಿಕ್ಕಬಳ್ಳಾಪುರ ಜಿಲ್ಲೆ ಬೋಡಿನಾರೇನಹಳ್ಳಿ ನಿವಾಸಿ. ಹಂಬಲದ ಹಿನ್ನೆಲೆಯುಳ್ಳ ಯುವಕ. ತಂದೆ, ತಾಯಿ, ಹೆಂಡತಿ, ಚಿಕ್ಕ ಮಗು ಈತನ ಕುಟುಂಬ. ಆರಂಭದಲ್ಲಿ ಒಂದೆರಡು ವರ್ಷ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದವನು. ಉನ್ನತ ಹುದ್ದೆಯ ಆಶಯ ಹೊಂದಿದ್ದ ಈತ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಯಾದಗೀರ ತಾಲ್ಲೂಕಿನ, ಅಜಲಾಪೂರ ಗ್ರಾಮ ಪಂಚಾಯ್ತಿಗೆ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಆಗಿ 2011ರ ಜನವರಿಯಲ್ಲಿ ನಿಯೋಜನೆಗೊಂಡ.

ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛತೆ, ವಿದ್ಯುತ್ ದೀಪ, ರಸ್ತೆ, ಅಂಗನವಾಡಿ ಕೇಂದ್ರ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ...ಹೀಗೆ ಸರ್ಕಾರದ 233 ಯೋಜನೆಗಳ ಮಾಹಿತಿ ಮತ್ತು ಪ್ರಚಾರದ ಕರ್ತವ್ಯ ಪಿಡಿಒ ಹೆಗಲಿಗಿರುತ್ತದೆ.

ವೆಂಕಟೇಶಪ್ಪ ಕೆಲಸಕ್ಕೆ ಸೇರಿ ಮೂರ್ನಾಲ್ಕು ತಿಂಗಳಾಗಿತ್ತು. ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿತ್ತು. ಈ ಸಂದರ್ಭದಲ್ಲೇ ವೆಂಕಟೇಶಪ್ಪನಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಿಂದ ಬುನಾದಿ ತರಬೇತಿಗೆಂದು (ಬೇಸಿಕ್‌ ಟ್ರೈನಿಂಗ್‌) ಒಂದು ತಿಂಗಳ ಕಾಲ ಬೀದರ್‌ನಲ್ಲಿರುವ ಶಾರದಾ ರುಡ್‌ಸೆಟ್ ಸಂಸ್ಥೆಗೆ ಕಳುಹಿಸಲಾಯಿತು.

ಈ ಮಧ್ಯೆ ಅಜಲಾಪುರ ಪಂಚಾಯ್ತಿಗೆ ಸೇರುವ ಬದ್ದೇಪಲ್ಲಿಯ ಸಾರ್ವಜನಿಕರು ಬಳಸುವ ಕೊಳವೆ ಬಾವಿ ಕೆಟ್ಟಿತು. ಬೀದರ್‌ನಲ್ಲಿದ್ದ ವೆಂಕಟೇಶಪ್ಪನಿಗೆ ಗ್ರಾಮಸ್ಥರು ಫೋನ್ ಮಾಡಿ ಶೀಘ್ರ ಕೊಳವೆ ಬಾವಿ ದುರಸ್ತಿ ಮಾಡಿಸಬೇಕೆಂದು ಒತ್ತಾಯಿಸಿದರು. ಈ ರೀತಿ ಒತ್ತಾಯಿಸಿದವರಲ್ಲಿ ಆ ವಾರ್ಡಿನ ಚುನಾಯಿತ ಸದಸ್ಯರಾಗಿದ್ದ ಉಮೇಶ್‌ ಕೂಡಾ ಒಬ್ಬರು. ಅರ್ಧದಲ್ಲಿಯೇ ತರಬೇತಿ ಶಿಬಿರ ಬಿಟ್ಟು ಬರಲಾಗದ ವೆಂಕಟೇಶಪ್ಪ ಪರಿಸ್ಥಿತಿಯ ಗಂಭೀರತೆ ಮನಗಂಡ. ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಕೊಳವೆ ಬಾವಿಯಲ್ಲಿನ ಮೋಟಾರ್ ಪಂಪ್ ದುರಸ್ತಿ ಮಾಡಿಸುವಂತೆ ಉಮೇಶ್‌ಗೆ ಸೂಚಿಸಿದ. ತರಬೇತಿ ಶಿಬಿರದಿಂದ ಹಿಂದಿರುಗಿದ ನಂತರ ದುರಸ್ತಿಯ ಬಿಲ್‌ಗಳನ್ನು ಪಡೆದು ಉಮೇಶ್‌ಗೆ ಹಣ ಸಂದಾಯ ಮಾಡಿದ.

ಪಂಚಾಯಿತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿಯೊಬ್ಬ ಉಮೇಶ್‌ಗೆ ಹೆಜ್ಜೆ ಹೆಜ್ಜೆಗೂ ತೊಡಕಾಗಿದ್ದ. ಈತ, ‘ಉಮೇಶ್‌, ಕೊಳವೆ ಬಾವಿ ದುರಸ್ತಿಯಲ್ಲಿ ಅಕ್ರಮ ಎಸಗಿದ್ದಾರೆ. ಎರಡು ಜಾಬ್ ಕಾರ್ಡ್ ಪಡೆದು ಉದ್ಯೋಗ ಖಾತ್ರಿ ಯೋಜನೆಯ ಅಕ್ರಮ ಫಲಾನುಭವಿಯಾಗಿದ್ದಾರೆ’ ಎಂದು ಆರೋಪಿಸಿ ದಿನಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ. ಈ ಕುರಿತಂತೆ ತನ್ನ ಹೇಳಿಕೆ ಪ್ರಕಟವಾಗಿದ್ದ ದಿನಪತ್ರಿಕೆಯ ಪ್ರತಿ ಲಗತ್ತಿಸಿ ಯಾದಗೀರ ಜಿಲ್ಲಾ ಲೋಕಾಯುಕ್ತ ಕಚೇರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ.

ಇದನ್ನು ಆಧರಿಸಿ ಲೋಕಾಯುಕ್ತ ಎಸ್.ಪಿ ಜಿಲ್ಲಾ ಪಂಚಾಯಿತಿ ಸಿ.ಇ.ಒ.ಗೆ ಮಾಹಿತಿ ನೀಡುವಂತೆ ಆದೇಶಿಸಿದರು. ಸಿ.ಇ.ಒ ತಾಲ್ಲೂಕು ಕಾರ್ಯ ನಿರ್ವಹಣಾ ಅಧಿಕಾರಿಗೆ ಪತ್ರ ರವಾನಿಸಿ ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದರು. ಈ ದೂರಿನ ಅನುಸಾರ ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಈ ಕುರಿತು ವರದಿ ತಯಾರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ, ‘ಅಕ್ರಮಕ್ಕೆ ವೆಂಕಟೇಶಪ್ಪನೇ ಹೊಣೆ’ ಎಂದು ಉಲ್ಲೇಖಿಸಿ, ಕಡತವನ್ನು ಜಿಲ್ಲಾ ಲೋಕಾಯುಕ್ತ ಕಚೇರಿಗೆ ರವಾನಿಸಿದರು. ಈ ವರದಿಯನ್ನೇ ಯಥಾವತ್ತಾಗಿ ನಂಬಿದ ಲೋಕಾಯುಕ್ತ ತನಿಖಾಧಿಕಾರಿಗಳು, ಪ್ರಕರಣವನ್ನು ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಗೆ ಕಳುಹಿಸಿದರು. ಇದರ ಆಧಾರದ ಮೇಲೆ ವೆಂಕಟೇಶಪ್ಪನಿಗೆ ‘ನಿಮ್ಮ ವಿರುದ್ಧ ಏಕೆ ಇಲಾಖಾ ವಿಚಾರಣೆ ಜರುಗಿಸಬಾರದು’ ಎಂದು ನೋಟಿಸ್‌ ನೀಡಲಾಗಿತ್ತು.

ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಜರುಗುವ ಇಲಾಖಾ ವಿಚಾರಣೆಗೆ ನಾನು ಆರೋಪಿ ವೆಂಕಟೇಶಪ್ಪನ ಪರವಾಗಿ ಹಾಜರಾಗಿ ತಕರಾರು ಸಲ್ಲಿಸಿದೆ. ‘ಆಪಾದನೆಯಲ್ಲಿ ಹುರುಳಿಲ್ಲ. ಇಲಾಖಾ ವಿಚಾರಣೆ ಕೈ ಬಿಡಬೇಕು’ ಎಂದು ಕೋರಿದೆ. ಆದರೆ, ವಿಚಾರಣಾಧಿಕಾರಿ (ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ತತ್ಸಮಾನ ಪ್ರಿಸೈಡಿಂಗ್‌ ಆಫೀಸರ್) ಸಾಕ್ಷಿಗಳನ್ನು ಹಾಜರುಪಡಿಸುವಂತೆ ಮಂಡನಾಧಿಕಾರಿಗೆ (ಪ್ರಾಸಿಕ್ಯೂಟರ್) ಆದೇಶಿಸಿದರು.

ಈ ಬೆಳವಣಿಗೆಯಿಂದ ನನ್ನ ಕಕ್ಷಿದಾರ ವಿಚಲಿತನಾದ. ಪ್ರಕರಣದಲ್ಲಿ ವೆಂಕಟೇಶಪ್ಪನ ವಿರುದ್ಧ ವರದಿ ಕಳುಹಿಸಿದ್ದ ಇನ್‌ಸ್ಪೆಕ್ಟರ್‌ನನ್ನು ಪ್ರಾಸಿಕ್ಯೂಟರ್‌, ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಿದರು. ದೂರಿನ ಪ್ರತಿ, ಕಾರ್ಯ ನಿರ್ವಹಣಾಧಿಕಾರಿ ನೀಡಿದ್ದ ವರದಿ, ಕೊಳವೆ ಬಾವಿ ದುರಸ್ತಿಯ ರಸೀದಿ ಮತ್ತು ಹಣ ಪಾವತಿಸಿದ ಚೆಕ್ ಮತ್ತು ವಿವಾದಿತ ಎರಡು ಜಾಬ್ ಕಾರ್ಡ್‌ಗಳನ್ನೂ ಇನ್‌ಸ್ಪೆಕ್ಟರ್‌ ವಿಚಾರಣೆ ವೇಳೆ ಹಾಜರು ಪಡಿಸಿದರು.

‘ವೆಂಕಟೇಶಪ್ಪನ ನಿರ್ಲಕ್ಷ್ಯತನದಿಂದಲೇ ಬೊಕ್ಕಸಕ್ಕೆ ನಷ್ಟವುಂಟಾಗಿದೆ. ಜಾಬ್ ಕಾರ್ಡ್‌ ರದ್ದು ಮಾಡುವಲ್ಲಿ ವಿಳಂಬವಾಗಿದೆ ಹಾಗೂ ಪಂಚಾಯಿತಿ ಸದಸ್ಯ ಜಾಬ್ ಕಾರ್ಡ್ ಪಡೆಯಲು ಅನರ್ಹ’ ಎಂಬ ಸಂಗತಿಯನ್ನು ಪ್ರಾಸಿಕ್ಯೂಟರ್‌ ವಿಚಾರಣಾ ನ್ಯಾಯಲಯಕ್ಕೆ ಅರುಹಿದರು.

ಪಾಟೀ ಸವಾಲಿನ ಅವಕಾಶ ಬಳಸಿಕೊಂಡ ನಾನು ಇನ್‌ಸ್ಪೆಕ್ಟರ್‌ಗೆ ಉಮೇಶ್‌ ಪಡೆದಿದ್ದ ಜಾಬ್ ಕಾರ್ಡ್‌ಗಳನ್ನು ತೋರಿಸಿ, ‘ಮೊದಲ ಕಾರ್ಡ್ 2006 ರಲ್ಲಿ ಹಂಚಿಕೆಯಾಗಿದ್ದು ಇದಕ್ಕೆ ಬದ್ದೇಪಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲಾಗಿದೆ. ಎರಡನೇ ಜಾಬ್‌ಕಾರ್ಡ್ ಅನ್ನು 2009ರಲ್ಲಿ ಪಡೆಯಲಾಗಿದೆ. ಇದು ಕೃಷ್ಣ ಗ್ರಾಮೀಣ ಬ್ಯಾಂಕ್ ಖಾತೆಗೆ ಜಂಟಿಯಾಗಿದೆ. ಅಂದರೆ ಈ ಅಕ್ರಮವು ಆರೋಪಿತನು ಪಿ.ಡಿ.ಒ ಆಗಿ ನೇಮಕವಾಗುವ ಮೊದಲೇ ಜರುಗಿದೆ. ಗ್ರಾಮ ಪಂಚಾಯಿತಿಯ ನಿಕಟಪೂರ್ವ ಕಾರ್ಯದರ್ಶಿಗಳ ಅವಧಿಯಲ್ಲಿ ಇದು ನಡೆದಿರುತ್ತದೆ. ಹಾಗಾಗಿ ಜಾಬ್‌ಕಾರ್ಡ್ ವಿತರಣೆಗೂ ಆರೋಪಿ ವೆಂಕಟೇಶಪ್ಪನಿಗೂ ಸಂಬಂಧವಿಲ್ಲ’ ಎಂದು ವಿವರಿಸಿದೆ.

‘ಎರಡು ಜಾಬ್‌ ಕಾರ್ಡ್ ಇರುವುದು ಕಂಡುಬಂದ ಕೂಡಲೇ ಉನ್ನತಾಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ 2011ರ ಏಪ್ರಿಲ್‌ನಲ್ಲಿ ಮೊದಲನೇ ಜಾಬ್ ಕಾರ್ಡ್‌ ಅನ್ನು ವೆಂಕಟೇಶಪ್ಪ ರದ್ದುಗೊಳಿಸಿರುತ್ತಾರೆ. ಯಾವುದೇ ಕರ್ತವ್ಯ ಲೋಪ ಎಸಗಿರುವುದಿಲ್ಲ. ಅವರ ವ್ಯಾಪ್ತಿಯಲ್ಲಿ ಇರುವ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದ್ದಾರೆ. ಜಾಬ್‌ ಕಾರ್ಡ್‌ ರದ್ದುಮಾಡುವ ಅಧಿಕಾರ ಇರುವುದು ಉನ್ನತ ಅಧಿಕಾರಿಗಳಗೆ ಮಾತ್ರ. ಉದ್ಯೋಗ ಖಾತ್ರಿ ಯೋಜನೆಯಡಿ ಚುನಾಯಿತ ಸದಸ್ಯರು ಜಾಬ್ ಕಾರ್ಡ್ ಪಡೆಯಲು ಅನರ್ಹರೆಂಬ ನಿಯಮವಿಲ್ಲ’ ಎನ್ನುವ ಸಂಗತಿಯನ್ನು ಸಾದರಪಡಿಸಿದೆ.

‘ಕೊಳವೆ ಬಾವಿಯ ಪಂಪ್‌ ದುರಸ್ತಿ ವೆಚ್ಚದ ಬಿಲ್‌ ಅನ್ನು ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ, ಅಧ್ಯಕ್ಷರ ಅನುಮೋದನೆ ಮೇರೆಗೆ ಹಣ ಬಿಡುಗಡೆ ಮಾಡಲು ತೀರ್ಮಾನಿಸಿ, ₹ 2,500 ಚೆಕ್ ನೀಡಲಾಗಿದೆ. ಆಪಾದಿತನ ಮೇಲೆ ಯಾವುದೇ ಬಾಹ್ಯ ಒತ್ತಡ ಇರಲಿಲ್ಲ, ಇದು ನಾಗರಿಕರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸುವ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾದ ತುರ್ತು ಕಾಮಗಾರಿ ಆಗಿರುತ್ತದೆ’ ಎಂದು ವಿವರಿಸಿದೆ.

‘ಸ್ವಯಂ ಪ್ರೇರಣೆಯಿಂದ ಕಾಮಗಾರಿ ನಡೆಸಲು ಯಾವುದೇ ಗುತ್ತಿಗೆದಾರ ಅಥವಾ ಗ್ರಾಮಸ್ಥರು ಮುಂದೆ ಬಾರದ ಕಾರಣ ಉಮೇಶ್‌ ತಮ್ಮದೇ ವಾರ್ಡಿನ ಬೋರ್‌ವೆಲ್ ದುರಸ್ತಿ ಮಾಡಿಸಿದ್ದಾರೆ. ಇದು ಕಾನೂನಿನನ್ವಯ ಅಥವಾ ನೈತಿಕವಾಗಿ ತಪ್ಪಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ತುರ್ತಾಗಿ ಒದಗಿಸುವುದು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯ ಹಾಗೂ ಹೊಣೆಗಾರಿಕೆ ಆಗಿದೆ ಎಂದು ಹೇಳಿದೆ’ ಎಂಬ ಪೂರ್ವ ನಿದರ್ಶನವನ್ನು ವಿಚಾರಣಾಧಿಕಾರಿ ಗಮನಕ್ಕೆ ತಂದೆ. ವೆಂಕಟೇಶಪ್ಪ ಪ್ರಶಂಸನಾರ್ಹ ಕೆಲಸ ಮಾಡಿದ್ದಾರೆ. ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮ 1996 ಅಡಿಯಲ್ಲಿ ದುರ್ನಡತೆ ತೋರಿಲ್ಲ. ಹಾಗಾಗಿ ಈ ಎಲ್ಲಾ ಆರೋಪಗಳು ನಿರಾಧಾರ ಮತ್ತು ಕೆಳಹಂತದ ನೌಕರನನ್ನು ಗುರಿಯಾಗಿಟ್ಟುಕೊಂಡು ಉನ್ನತ ಅಧಿಕಾರಿಗಳು ಹೆಣೆದ ಸುಳ್ಳು ಆರೋಪಗಳು’ ಎಂದು ಮನವರಿಕೆ ಮಾಡಿಕೊಟ್ಟೆ.

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಹಣ ಪಾವತಿ ಮಾಡುವ ಮೊದಲು ಬಿಲ್‌ಗಳಿಗೆ ಕಿರಿಯ ಅಭಿಯಂತರ, ಸಹಾಯಕ ಅಭಿಯಂತರ, ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಅನುಮೋದನೆ ನೀಡಿದ ನಂತರವೇ ಮಜೂರಿ ಪಾವತಿಸಲಾಗಿದೆ. ಆದ್ದರಿಂದ ಆರೋಪಿ ವೆಂಕಟೇಶಪ್ಪನನ್ನು ಮಾತ್ರವೇ ಇದಕ್ಕೆ ಹೊಣೆಯಾಗಿಸಿರುವುದು ದುರುದ್ದೇಶದ ಕ್ರಮವಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಹಲವು ಹಂತಗಳಲ್ಲಿ ನೆರವೇರುವುದರಿಂದ ಹೆಚ್ಚು ಸಮಯ ಬೇಕಾಗಿರುತ್ತದೆ ವಿನಾ ಉದ್ದೇಶ ಪೂರ್ವಕವಾಗಿ ವಿಳಂಬವಾಗಿರುವುದಿಲ್ಲ. ಯಾವುದೇ ಅಕ್ರಮವೆಸಗದ ನೌಕರನನ್ನು ಪ್ರಕರಣದಲ್ಲಿ ವೃಥಾ ಸಿಲುಕಿಸಲಾಗಿದೆ. ತಪ್ಪೆಸಗದ ನೌಕರನನ್ನು ವಿಚಾರಣೆಗೆ ಗುರಿಪಡಿಸುವುದರಿಂದ ಸರ್ಕಾರಿ ನೌಕರರ ನೈತಿಕ ಸ್ಥೈರ್ಯ ಕುಸಿದು ಅವರು ಸಾರ್ವಜನಿಕ ಸೇವೆಯಿಂದಲೇ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ, ಆರೋಪಿ ವೆಂಕಟೇಶಪ್ಪ ಒಂದು ನಯಾಪೈಸೆಯಷ್ಟೂ ದುರ್ಲಾಭ ಪಡೆದಿರುವುದಿಲ್ಲ’ ಎಂದು ತಿಳಿಸಿದ ನಂತರ ವಿಚಾರಣೆ ಮುಕ್ತಾಯಗೊಳಿಸಲಾಯಿತು.

ಎಳ್ಳಷ್ಟೂ ಅಕ್ರಮವೆಸಗದ ವೆಂಕಟೇಶಪ್ಪ ವಿಚಾರಣಾಧಿಕಾರಿ ತನ್ನನ್ನು ನಿರ್ದೋಷಿ ಎಂದೇ ಸಾರುತ್ತಾರೆ ಎಂದುಕೊಂಡಿದ್ದ. ಆದರೆ, ಆದೇಶ ಹೊರಬಿದ್ದಾಗ ಆತನ ಆಶಾಸೌಧ ಕಳಚಿ ಬಿದ್ದಿತ್ತು. ಕೇವಲ ವರದಿ ಸಲ್ಲಿಸಬೇಕಾದ ಲೋಕಾಯುಕ್ತ, ಇಂತಹುದೇ ಶಿಕ್ಷೆಯನ್ನು ನೀಡಬೇಕೆಂದು ಶಿಫಾರಸು ಮಾಡಿ, ವೆಂಕಟೇಶಪ್ಪನ ಎರಡು ವೇತನ ಬಡ್ತಿ ಹಾಗೂ ಎರಡು ವರ್ಷದವರೆಗೆ ಮುಂಬಡ್ತಿ ತಡೆ ಹಿಡಿಯುವಂತೆ ಆದೇಶಿಸಿತ್ತು.

ಕೊನೆಗೂ ಕಳಂಕಿತನಾದೆ ಎಂಬ ವೇದನೆಯಲ್ಲಿಯೇ ನನಗೆ ಫೋನಾಯಿಸಿದ ಆತ, ‘ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ಗಣಿ ಅಕ್ರಮದ ಸಮಗ್ರ ವರದಿ ಪತ್ರಾಗಾರದಲ್ಲಿ ಧೂಳು ಹಿಡಿದಿರುವಾಗ ನನ್ನಂತಹ ನೌಕರರು ಮಾತ್ರ ಅಬ್ಬೇಪಾರಿಗಳಂತೆ ದೋಷಿಗಳಾಗುತ್ತಾರಲ್ಲಾ ಸರ್‌, ಇದು ನ್ಯಾಯವೇ, ಈ ವ್ಯವಸ್ಥೆಯಲ್ಲಿ ಭ್ರಷ್ಟರಾಗದೇ ಉಳಿಯುವುದೇ ಘೋರ ಅಪರಾಧ. ನನಗೀಗ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ’ ಎಂದು ಗೋಳಾಡಿದ.

ವಾಮ ಮಾರ್ಗಗಳನ್ನು ಬಳಸಿ ಇಲಾಖಾ ವಿಚಾರಣೆಯೇ ನಡೆಯದಂತೆ ನೋಡಿಕೊಳ್ಳುವ ಬಲಿಷ್ಠರ ನಡುವೆ ನನ್ನ ಕಕ್ಷಿದಾರನ ಹೋರಾಟ ಸ್ಫೂರ್ತಿದಾಯಕ ಎನಿಸಿತಾದರೂ ಇತ್ತೀಚಿನ ವರ್ಷಗಳಲ್ಲಿ ಪಿಡಿಒಗಳು ಯಾಕೆ ಆತ್ಮಹತ್ಯೆ ಮಾರ್ಗ ಹಿಡಿದಿದ್ದಾರೆ ಎಂಬ ನಗ್ನಸತ್ಯ ನನ್ನ ಅಂತರಾತ್ಮವನ್ನು ಕಲಕಿತ್ತು.

–ಲೇಖಕ ಹೈಕೋರ್ಟ್‌ ವಕೀಲ
ಹೆಸರುಗಳನ್ನು ಬದಲಾಯಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT