ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋನಿ ಬೆಲ್ಲಕ್ಕೆ ಬಂಪರ್ ಬೆಲೆ

ಕಬ್ಬು ಬೆಳೆಗಾರರ ಮುಖದಲ್ಲಿ ಮೂಡಿದ ಮಂದಹಾಸ
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಿರಸಿ: ಜನರಲ್ಲಿ ಮೂಡಿರುವ ಆರೋಗ್ಯದ ಅರಿವು ಮಲೆನಾಡಿನ ಕಬ್ಬು ಬೆಳೆಗಾರರಿಗೆ ವರವಾಗಿದೆ. ಆಲೆಮನೆಯಲ್ಲಿ ಸಿದ್ಧವಾಗುವ ಬೆಲ್ಲಕ್ಕೆ ಬಂಪರ್ ಬೆಲೆ ಬಂದಿದೆ. 25 ಕೆ.ಜಿ ತೂಕದ ಜೋನಿ ಬೆಲ್ಲದ ಡಬ್ಬಿಯೊಂದಕ್ಕೆ ₹ 2,300ರ ದರದಲ್ಲಿ ರೈತರಿಂದ ಖರೀದಿಯಾಗುತ್ತಿದೆ.

ಮಲೆನಾಡಿನ ಹಳ್ಳಿಗಳಲ್ಲಿ ಡಿಸೆಂಬರ್ ತಿಂಗಳಿನಿಂದ ಆಲೆಮನೆಯ ಘಮ ಆರಂಭವಾಗುತ್ತದೆ. ಕಬ್ಬಿನ ಗದ್ದೆಯ ಪಕ್ಕದಲ್ಲಿ ಗಾಣ ಹಾಕಿ, ಬೆಲ್ಲ ತಯಾರಿಸುವ ರೈತರು ಜನವರಿ ಹೊತ್ತಿಗೆ ಅದನ್ನು ಮಾರಾಟಕ್ಕೆ ತರುತ್ತಾರೆ. ಈ ಬಾರಿ ಹಂಗಾಮಿನ ಆರಂಭದಲ್ಲೇ ರೈತರಿಗೆ ಒಂದು ಡಬ್ಬಿ (25 ಕೆ.ಜಿ) ಬೆಲ್ಲಕ್ಕೆ ₹ 2,000 ದರ ದೊರೆತಿತ್ತು. ಬೆಲ್ಲದ ಬೇಡಿಕೆ ಹೆಚ್ಚಾದಂತೆ ಖರೀದಿ ದರದಲ್ಲಿ ಏರಿಕೆ ಕಾಣತೊಡಗಿದೆ.

‘ನೀರಿನ ಅಭಾವ, ಕೃಷಿ ಕಾರ್ಮಿಕರ ಕೊರತೆಯಿಂದ ಕಬ್ಬು ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಜನರಲ್ಲಿ ಮೂಡಿರುವ ಆರೋಗ್ಯದ ಅರಿವು ಬೆಲ್ಲದ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು, ಲೇಖನಗಳು ಜನರ ಮೇಲೆ ಗಾಢ ಪರಿಣಾಮ ಬೀರುತ್ತಿವೆ. ಮೊದಲು ಸ್ಥಳೀಯ ಗ್ರಾಹಕರು ಮಾತ್ರ ಬೆಲ್ಲವನ್ನು ಕೇಳಿ ಬರುತ್ತಿದ್ದರು. ಈಗ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಕುಂದಾಪುರ ಭಾಗದ ಜನರು ಬೆಲ್ಲ ಕೊಂಡೊಯ್ಯಲೆಂದೇ ಶಿರಸಿಗೆ ಬರುತ್ತಾರೆ’ ಎನ್ನುತ್ತಾರೆ ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ.

‘ಕಳೆದ ವರ್ಷಕ್ಕಿಂತ ಈ ವರ್ಷ ಹೊರ ಪ್ರದೇಶಗಳಿಂದ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಅನೇಕರು ನಮ್ಮಲ್ಲಿ ಸಿಗುವ ಜ್ಯೂಸ್, ಜಾಮ್ ಅನ್ನು ಸಹ ಬೆಲ್ಲದಲ್ಲಿಯೇ ಸಿದ್ಧಪಡಿಸಿಕೊಡುವಂತೆ ಬೇಡಿಕೆ ಇಡುತ್ತಾರೆ. ಸಕ್ಕರೆಯ ದರ ಒಂದೆರಡು ತಿಂಗಳ ಈಚೆಗೆ ಕಡಿಮೆಯಾಗಿದೆ ಎಂದು ಅಂಗಡಿಕಾರರು ಹೇಳುತ್ತಾರೆ. ಆದರೂ ಬೆಲ್ಲದ ಬೇಡಿಕೆ ಕಡಿಮೆಯಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕದಂಬ ಮಾರ್ಕೆಟಿಂಗ್ ಈವರೆಗೆ 1,800 ಡಬ್ಬಿ ಬೆಲ್ಲ ಖರೀದಿಸಿದೆ. ಅದರಲ್ಲಿ ಈಗಾಗಲೇ 1,500 ಡಬ್ಬಿಗಳು ಖಾಲಿಯಾಗಿವೆ. ನಮ್ಮ ವಾರ್ಷಿಕ ಬೇಡಿಕೆ ಪೂರೈಸಿಕೊಳ್ಳಲು ಕನಿಷ್ಠ 3,000 ಡಬ್ಬಿ ಜೋನಿ ಬೆಲ್ಲ ಬೇಕಾಗುತ್ತದೆ. ಕಳೆದ ವರ್ಷದ ಹಂಗಾಮಿನ ಆರಂಭದಲ್ಲಿ ಡಬ್ಬಿಯೊಂದಕ್ಕೆ ₹ 1,500 ದರವಿದ್ದರೂ, ಕೊನೆಗೆ ಉತ್ಪನ್ನದ ಕೊರತೆಯಿಂದ ಬೆಲ್ಲದ ಬೆಲೆ ಗಗನಕ್ಕೇರಿತ್ತು. ಅನೇಕ ಉತ್ಪಾದಕ ರೈತರಿಗೆ ಈ ದರ ಲಭಿಸಿರಲಿಲ್ಲ. ಈ ಬಾರಿ ಎಲ್ಲ ರೈತರಿಗೂ ಲಾಭ ದೊರೆತಿದೆ’ ಎಂದು ಅವರು ತಿಳಿಸಿದರು.

‘ಕಬ್ಬು ಬೆಳೆದ ರೈತನಿಗೆ ಪ್ರಸ್ತುತ ನ್ಯಾಯಯುತ ಬೆಲೆ ಸಿಗುತ್ತಿದೆ. ಹಿಂದಿನ‌ ವರ್ಷಗಳಲ್ಲಿ ಬೆಲ್ಲದ ಬೆಲೆ‌ ಕುಸಿದಾಗ ಅನೇಕ ರೈತರು ಕೈಸುಟ್ಟುಕೊಂಡು ಕಬ್ಬು ಬೆಳೆಯುವುದನ್ನೇ ಬಿಟ್ಟಿದ್ದಾರೆ’ ಎಂದು ಬೆಳೆಗಾರ ಸಂದೇಶ ಭಟ್ಟ ಬೆಳಖಂಡ ಹೇಳಿದರು.
***
ರೈತರು ಸರಿಯಾಗಿ ಸಂಸ್ಕರಣೆ ಮಾಡಿ, ಗುಣಮಟ್ಟದ ಬೆಲ್ಲ ತಂದರೆ ಕದಂಬ ಮಾರ್ಕೆಟಿಂಗ್ ಖರೀದಿಸಲು ಸಿದ್ಧವಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಬೆಲ್ಲದ ಪೂರೈಕೆ ಆಗುತ್ತಿಲ್ಲ.
 - ಬಲರಾಮ, ನಾಮಧಾರಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT