ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ…ನಂಗೂ ಬೇಕು ಆ ಗೊಂಬೆ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ...’ ಎಂದು ಕೈಬೀಸಿ ಕರೆಯುವ ದೇವಾಲಯಗಳು ನಮ್ಮ ನಾಡಿನ ಆಸ್ತಿಗಳು. ಬೆಂಗಳೂರಿನ ಆಸುಪಾಸು ದ್ರಾವಿಡ ಶೈಲಿಯ ಅನೇಕ ದೇಗುಲಗಳು ಕಂಡು ಬರುತ್ತವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗಾನಂದೀಶ್ವರ ದೇಗುಲ ಸಹ ಈ ಸಾಲಿಗೆ ಸೇರುತ್ತದೆ.

ಒಂಬತ್ತನೇ ಶತಮಾನದಲ್ಲಿ ಬಾಣರ ರಾಜಮನೆತನದ ರಾಣಿ ರತ್ನಾವತಿಯಿಂದ ಕಟ್ಟಲ್ಪಟ್ಟ ಈ ಶಿವ ಪಾರ್ವತಿ ಪೂಜಾಸ್ಥಳ, ಮುಂದಿನ ದಿನಗಳಲ್ಲಿ ವಿವಿಧ ರಾಜಮನೆಗಳಿಂದ ಅಭಿವೃದ್ಧಿ ಹೊಂದಿತು.

ಒಂದು ಸಂಜೆ, ಪುಟಾಣಿ ಪಾಪುವಿನೊಂದಿಗೆ ದೇಗುಲಕ್ಕೆ ಬಂದಿದ್ದ ಮಹಿಳೆಯ ಆತ್ಮೀಯ– ಆಕರ್ಷಕವಾದ ಈ ದೃಶ್ಯವನ್ನು ಮಂಟಪದ ಆಚಿನಿಂದ ಸಂಯೋಜಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದವರು ಹವ್ಯಾಸಿ ಛಾಯಾಗ್ರಾಹಕಿ ಮಾರುತಿ ಸೇವಾನಗರ ನಾಗಯ್ಯನಪಾಳ್ಯದ ಗೀತಾ ಸೀತಾರಾಮ್.

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ ಉದ್ಯೋಗಿಯಾಗಿರುವ ಗೀತಾ, ಕಳೆದ ಮೂರು ವರ್ಷಗಳಿಂದ ವನ್ಯ ಪಕ್ಷಿ ಹಾಗೂ ಕ್ಯಾಂಡಿಡ್ ಛಾಯಾಗ್ರಹಣದ ಹವ್ಯಾಸ ಹೊಂದಿದ್ದಾರೆ. ಈ ಚಿತ್ರ ತೆಗೆಯಲು ಅವರು ಕ್ಯಾಮೆರಾ, ಕೆನಾನ್ 600ಡಿ, ಜೊತೆಗೆ 55– 250 ಎಂ.ಎಂ. ಜೂಂ ಲೆನ್ಸ್. 200 ಎಂ.ಎಂ ಫೋಕಲ್ ಲೆಂಗ್ತ್‌ನಲ್ಲಿ ಅಪರ್ಚರ್ ಎಫ್ 5.6, ಷಟರ್ ವೇಗ 1/250 ಸೆಕೆಂಡ್, ಐ.ಎಸ್.ಒ 640, ಟ್ರೈಪಾಡ್ ಮತ್ತು ಫ್ಲಾಷ್ ಬಳಸಿಲ್ಲ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನ ಇಂತಿದೆ...

* ಕ್ಯಾಮೆರಾ ಹಿಡಿತಗಳ ಅಳವಡಿಕೆ, ಮುಖ್ಯವಾಗಿ ಡಿಫೆರೆಂಶಿಯಲ್ ಫೋಕಸಿಂಗ್ ತಂತ್ರ ಉದ್ದೇಶಪೂರ್ವಕವಾಗಿ ಚಿತ್ರದಲ್ಲಿ ಮೂಡಿರುವ ಭಿನ್ನ ಸಂಗಮವಲಯದ ಆಯಾಮಕ್ಕೆ ಪೂರಕವಾಗಿದೆ.
* ಮಹಿಳೆ ಮತ್ತು ಮಗುವಿನ ಮೇಲೆ ಹೆಚ್ಚಿನ ಬೆಳಕು ಬಿದ್ದಿದೆ. ಹೀಗಾಗಿಯೇ ಇಬ್ಬರೂ ಸ್ಫುಟವಾಗಿ ಕಾಣಿಸುತ್ತಿದ್ದಾರೆ. ಮುನ್ನೆಲೆಯಲ್ಲಿರುವ ಮಂಟಪದ ಕೆತ್ತನೆ ಸ್ಥಂಭಗಳು ಮಂದ ಬೆಳಕಿನ ನೆರಳಿನಲ್ಲಿವೆ.
* ಅಪರ್ಚರ್ ಒಂದು ವೇಳೆ ಕಿರಿದಾಗಿದ್ದಾರೆ (F 11 ಅಥವಾ 16) ಸ್ಥಂಭಗಳೆಲ್ಲವೂ ಸ್ಫುಟವಾಗಿ ಮೂಡಿ, ಚಿತ್ರದಲ್ಲಿ ಯಾವ ಭಾಗಕ್ಕೆ ಮುಖ್ಯ ಪ್ರವೇಶ ಬಿಂದು ಎಂಬುದು ಗೊಂದಲವಾಗುತ್ತಿತ್ತು. ಛಾಯಾಗ್ರಾಹಕರು F 6 ಬಳಸುವ ಮೂಲಕ ಪ್ರವೇಶ ಬಿಂದುವನ್ನು ಸ್ಫುಟವಾಗಿ ಕಾಣಿಸಿಕೊಟ್ಟಿದ್ದಾರೆ.
* ಚಿತ್ರ ನೋಡಿದ ತಕ್ಷಣ ಮಗುವಿನ ಕಾತರದ ಕಣ್ಣು-ಚಾಚಿದ ಕೈಗಳನ್ನು ತಾಕುತ್ತವೆ. ಅಲ್ಲಿಂದ ಮಹಿಳೆಯೆಡೆಗೆ, ನಂತರ ಒಂದೊಂದಾಗಿ ಸ್ಥಂಭಗಳ ನಿಲುವು, ಕೆತ್ತನೆಯ ಸವಿಯುಣ್ಣುತ್ತಾ ಚಿತ್ರದೆಲ್ಲೆಡೆ ಸಾಗುವುದು ಸಾದ್ಯವಾಗಿದೆ. ಇದಕ್ಕೆ ಎಕ್ಸ್‌ಪೋಷರ್‌ನ ಇತರ ಅಂಶಗಳೂ ಸಹಕರಿಸಿವೆ.
* ಕಲಾತ್ಮಕವಾಗಿ ಮಧುರವಾದ ಭಾವನೆಗಳನ್ನು ಸೂಸುವ ಚಿತ್ರ ಇದು.
* ಪ್ರವಾಸಿಗರಿಗೆ ತೊಂದರೆ ಕೊಡದೆ, ದೂರದಿಂದ ಉತ್ತಮ ಜೂಂ ಲೆನ್ಸ್ ಅಳವಡಿಸಿದ ಕ್ಯಾಮೆರಾವನ್ನು ಬಳಸಿ ಅಂತಹವರ ಭಾವ- ಭಂಗಿಗಳನ್ನು ದೇವಸ್ಥಾನದ ಹಿನ್ನೆಲೆ, ಮುನ್ನೆಲೆಗಳ ಜೊತೆಗೆ ಸಂಯೋಜಿಸಿ ಚಿತ್ರ ತೆಗೆಯಬೇಕಾಗುತ್ತದೆ. ಇದು ಸಾಧ್ಯವಾಗಲು ಉತ್ತಮ ಗುಣಮಟ್ಟದ ಕ್ಯಾಮೆರಾ ಜೊತೆಗೆ ಸಾಕಷ್ಟು ಪೂರ್ವ ತಯಾರಿ ಅಗತ್ಯ. ಈ ಚಿತ್ರವು ಛಾಯಾಗ್ರಾಹಕರ ಪೂರ್ವ ಸಿದ್ಧತೆಯನ್ನು ಸಾರಿ ಹೇಳುತ್ತದೆ.
* ದೇಗುಲಗಳ ಕೆತ್ತನೆಗಳು ಮುಖ್ಯವಾಗಿದ್ದರೆ, ಅವನ್ನು ಮಂದವಾಗಿಸುವ (ಔಟ್ ಆಫ್ ಫೋಕಸ್ ತಂತ್ರ) ಈ ಮಾದರಿ ಸಹಕಾರಿಯಲ್ಲ. ದೊಡ್ಡಳತೆಯ ಜೂಂ ಲೆನ್ಸ್ ಬದಲು ನಾರ್ಮಲ್ ಲೆನ್ಸ್ ಅಥವಾ ವೈಡ್ ಆ್ಯಂಗಲ್‌ ಲೆನ್ಸ್ ಬಳಸಿ ನಿರೂಪಣೆಯ ದೃಶ್ಯಗಳೆಲ್ಲವೂ ಸ್ಫುಟವಾಗಿ ಕಾಣಿಸುವಂತೆ ಕಿರಿದಾದ ಅಪರ್ಚರ್ ಬಳಸಬಹುದು. ಆಗ ಶಿಲ್ಪವೈಭವದ ಜೊತೆಗೆ ಅಲ್ಲಲ್ಲಿ ಸುತ್ತುವ ಪ್ರವಾಸಿಗರೂ ಚೌಕಟ್ಟಿನಲ್ಲಿ ಮೂಡಿಬರುತ್ತಾರೆ.
***
ಛಾಯಾಚಿತ್ರಗಾರ್ತಿ :  ಗೀತಾ ಸೀತಾರಾಮ್
Email: geetha2015seetharam@gmail.com
Phone: 9880080261
***
ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು.  ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್ : metropv@prajavani.co.in, ದೂರವಾಣಿ- 25880636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT