ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ತಲುಪುವುದು ಮುಖ್ಯ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಮ್ಮ ಮನಸ್ಸಿನಲ್ಲೊಂದು ಪರಿಕಲ್ಪನೆ ಇರುತ್ತದೆ. ಅದನ್ನು ನಾವು ಅಂದುಕೊಂಡ ಹಾಗೆಯೇ ನಿರ್ಮಿಸುತ್ತೇವೆಯೋ ಅಥವಾ ಅದಕ್ಕಿಂತ ಉತ್ಕೃಷ್ಟವಾಗಿ ರೂಪಿಸಬಲ್ಲೆವೋ ಎನ್ನುವುದು ತುಂಬ ಮುಖ್ಯ. ಸಿನಿಮಾ ಮಾಧ್ಯಮದಲ್ಲಿ ಬಹುಕಾಲದಿಂದ ಅನುಸರಿಸಿಕೊಂಡು ಬಂದಿರುವ ದಾರಿಯೊಂದಿರುತ್ತದೆ. ಆ ದಾರಿಯಿಂದ ಭಿನ್ನವಾಗಿ ಹೆಜ್ಜೆ ಹಾಕಿದರೆ ಸುಲಭವಾಗಿ ಯಾರೂ ಒಪ್ಪಿಕೊಳ್ಳುವುದಿಲ್ಲ. ಆದರೆ ಆ ಭಿನ್ನ ಹೆಜ್ಜೆಯಲ್ಲಿಯೇ ನಮ್ಮ ಅನನ್ಯತೆ ಇರುತ್ತದೆ. ಧ್ವನಿ ವಿನ್ಯಾಸಕಾರನಿಗೆ ಇಂಥ ಸಿದ್ಧಮಾದರಿಯನ್ನು ಮುರಿಯುವ ಹಂಬಲ ಇರಬೇಕು.

ಒಂದು ಸಿನಿಮಾ ಚಿತ್ರೀಕರಿಸುವಾಗ ಒಬ್ಬ ಹುಡುಗ ಟೀ ತಂದುಕೊಡುತ್ತಾನೆ. ಅವನು ತಂದ ಟೀಯಲ್ಲಿ ಒಂದೇ ಒಂದು ಕಪ್‌ ಟೀಗೆ ಸಕ್ಕರೆ ಕಮ್ಮಿಯಾಗಿದ್ದರೂ ನಾವು ಎಲ್ಲ ಟೀಯನ್ನೂ ವಾಪಸ್‌ ಕಳಿಸುತ್ತೇವೆ. ಆ ಟೀ ಮಾರುವ ಹುಡುಗನಿಗೆ ಇರಬೇಕಾದ ಜವಾಬ್ದಾರಿಯೇ ಧ್ವನಿವಿನ್ಯಾಸಕನಿಗೂ ಇರಬೇಕು ಎಂದು ನಾನು ಬಯಸುತ್ತೇನೆ. ನಾವು ಮಾಡುವ ಕೆಲಸವನ್ನು ಒಬ್ಬ ಪ್ರೇಕ್ಷಕ ಮಲ್ಟಿಪ್ಲೆಕ್ಸ್‌ನಲ್ಲಿ ನಾಲ್ಕು ನೂರು ರೂಪಾಯಿ ಟಿಕೆಟ್‌ ಕೊಟ್ಟು ನೋಡುತ್ತಾನೆ. ಅವನಿಗಾಗಿ ಸಂಪೂರ್ಣ ಶ್ರದ್ಧೆ ಮತ್ತು ಪ್ರತಿಭೆಯನ್ನು ಬಳಸಿಕೊಂಡು ಕೆಲಸ ಮಾಡಬೇಕು.

ಸಾಮಾನ್ಯವಾಗಿ ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಸಂಕೀರ್ಣವಾಗಿ ಧ್ವನಿ ಮಿಶ್ರಣ ಮಾಡುವುದೇ ಶ್ರೇಷ್ಠತೆಯ ಲಕ್ಷಣ ಎಂದುಕೊಂಡಿದ್ದಾರೆ. ಆದರೆ ಇದು ದೊಡ್ಡ ತಪ್ಪು ತಿಳಿವಳಿಕೆ. ಧ್ವನಿ ವಿನ್ಯಾಸ ಆದಷ್ಟೂ ಸರಳವಾಗಿರಬೇಕು. ಮನುಷ್ಯನ ಮಿದುಳು ಏಕಕಾಲಕ್ಕೆ ಎರಡು ಸಂಗತಿಗಳನ್ನು ಮಾತ್ರ ಸಮರ್ಪಕವಾಗಿ ಗ್ರಹಿಸಲು ಸಾಧ್ಯ. ಮೂರನೇ ಸಂಗತಿ ಎದುರಾದರೆ ಮೊದಲಿನ ಎರಡು ಸಂಗತಿಗಳು ಹಿನ್ನೆಲೆಗೆ ಹೋಗುತ್ತವೆ. ಧ್ವನಿವಿನ್ಯಾಸ ಮಾಡುವವರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಸರಳವಾಗಿ ಧ್ವನಿವಿನ್ಯಾಸ ಮಾಡುವುದು ಕಷ್ಟ. ಯಾಕೆಂದರೆ ಅಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ಜನರಿಗೆ ಗೊತ್ತಾಗುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತವೆ. ಜನರನ್ನು ಪರಿಣಾಮಕಾರಿಯಾಗಿ ತಲುಪುವುದು ಎಲ್ಲಕ್ಕಿಂತ ಮುಖ್ಯ.

ಪ್ರೇಕ್ಷಕನಿಗೆ ಒಳಗೊಳ್ಳುವುದಕ್ಕೆ ಅವಕಾಶವೇ ಇಲ್ಲದಂತೆ ಎಲ್ಲವನ್ನೂ ಸಿದ್ಧಪಡಿಸಿಕೊಡುವುದು ಸರಿಯಲ್ಲ. ಅವನನ್ನು ಒಳಗೊಳ್ಳುವ ಹಾಗೆಯೇ ಧ್ವನಿ ವಿನ್ಯಾಸ ಇರಬೇಕು. ಒಂದು ಐಸ್‌ಕ್ರೀಂ ಅನ್ನು ಎಷ್ಟೇ ರುಚಿಯಿದೆ ಎಂದು ವರ್ಣಿಸಿದರೂ ಅದರ ನಿಜವಾದ ರುಚಿಯ ಅನುಭವವನ್ನು ನೀವು ದಾಟಿಸಲು ಸಾಧ್ಯವಿಲ್ಲ. ಅವರೇ ಬಂದು ಐಸ್‌ ಕ್ರೀಂ ತಿಂದಾಗ ಮಾತ್ರ ಅದು ಸಾಧ್ಯ.

ತುಂಬಾ ಜನರು ಧ್ವನಿ ಮತ್ತು ಸಂಗೀತ ಇವೆರಡೂ ವಿರುದ್ಧ ಸಂಗತಿಗಳು ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಹಾಗಲ್ಲ, ಧ್ವನಿ ಮತ್ತು ಸಂಗೀತ ಇವೆರಡರ ಸಂಯೋಜನೆಯಲ್ಲಿಯೇ ಉತ್ತಮ ಸಿನಿಮಾ ಮೂಡಿಬರಲು ಸಾಧ್ಯ. ಆದರೆ ಎಲ್ಲಿ ಸಂಗೀತವನ್ನು ಅಳವಡಿಸಬೇಕು ಮತ್ತು ಎಲ್ಲಿ ಧ್ವನಿಯನ್ನು ಅಳವಡಿಸಬೇಕು ಎಂಬ ಅರಿವು ಇರಬೇಕು.
***
ಒಂದಿಷ್ಟು ಸಲಹೆಗಳು

* ನಿರ್ದೇಶಕ, ಧ್ವನಿವಿನ್ಯಾಸಕ, ಸಂಗೀತ ಸಂಯೋಜಕ ಹೀಗೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಸರಿ, ತಂತ್ರಜ್ಞಾನದ ಕುರಿತು ಕುತೂಹಲ ಬೆಳೆಸಿಕೊಳ್ಳಿ. ಅದು ಈಗ ಎಲ್ಲರಿಗೂ ಲಭ್ಯವಿರುತ್ತದೆ. ತಂತ್ರಜ್ಞಾನಕ್ಕೆ ಹೆದರಬೇಡಿ.

* ನೀವು ಯಾವುದೇ ಸಲಕರಣೆ ಬಳಸಿಕೊಳ್ಳುತ್ತಿದ್ದರೂ ಅದರ ಬಗ್ಗೆ ತಿಳಿದುಕೊಳ್ಳಿ. ಅದರಿಂದ ನಿಮಗೆ ಏನಾಗಬೇಕು ಎಂಬ ಕುರಿತು ಸ್ಪಷ್ಟತೆ ಇರಲಿ. ಸಾಧನಗಳು ನಿಮ್ಮ ಸೃಜನಶೀಲತೆಯ ಸಾಕಾರದ ಸಲಕರಣೆಗಳಷ್ಟೆ. ನಿಮಗೆ ಏನು ಬೇಕೋ ಅದನ್ನು ಸಲಕರಣೆಗಳಿಂದ ಪಡೆದುಕೊಳ್ಳಿ. ಅದನ್ನು ಬಿಟ್ಟು, ಆ ಸಲಕರಣೆಗಳಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲು ಹೋಗಬೇಡಿ.

* ಧ್ವನಿ ವಿನ್ಯಾಸವೆಂದರೆ ಅದೂ ಒಂದು ಕಥೆ ಹೇಳುವ ಕ್ರಮವೇ ಎನ್ನುವುದು ತಿಳಿದಿರಲಿ. ಗದ್ದಲವಷ್ಟೇ ಅಲ್ಲ, ಮೌನ, ಭಾವನೆಗಳು, ಸಂಭಾಷಣೆ ಎಲ್ಲವೂ ನಿಮ್ಮ ಧ್ವನಿ ವಿನ್ಯಾಸದ ಭಾಗವೇ ಆಗಿರುತ್ತದೆ.

* ನೀವು ಯಾವುದೇ ಒಂದು ಸಣ್ಣ ಧ್ವನಿಯನ್ನು ದೃಶ್ಯದೊಂದಿಗೆ ಅಳವಡಿಸಿದ್ದರೂ ಅದಕ್ಕೆ ಒಂದು ಸ್ಪಷ್ಟವಾದ ಕಾರಣ ಇರಬೇಕು. ಆ ಕಾರಣದ ಸನ್ನಿವೇಶಕ್ಕೆ ಅವಶ್ಯ ಎಂದು ನಿಮಗೆ ಮನವರಿಕೆಯಾಗಬೇಕು. ನಿಮಗೇ ಮನವರಿಕೆ ಆಗದಿದ್ದರೆ ಅದು ಪ್ರೇಕ್ಷಕನಿಗೆ ಮನವರಿಕೆ ಆಗಲು ಹೇಗೆ ಸಾಧ್ಯ?

* ಧ್ವನಿ ವಿನ್ಯಾಸಕಾರನಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಗುರ್ತಿಸುವ ಶಕ್ತಿ ಇರಬೇಕು. ಯಾವುದು ಕೆಟ್ಟದ್ದು ಎಂದು ಗುರ್ತಿಸಲಾಗದೇ ಹೋದರೆ ಯಾವುದು ಒಳ್ಳೆಯದು ಎಂಬುದನ್ನೂ ಗುರುತಿಸಲಾಗದು
***
ಶ್ರೀಜೇಶ್ ನಾಯರ್

ರಾಷ್ಟ್ರಪ್ರಶಸ್ತಿ ಪುರಸ್ಕೃತ ಧ್ವನಿ ವಿನ್ಯಾಸಕ ಶ್ರೀಜೇಶ ನಾಯರ್‌ ಸಿನಿಮೋತ್ಸವದ ‘ಸೌಂಡ್‌ ಡಿಸೈನ್ ಇನ್ ಡಿಜಿಟಲ್ ಫಿಲ್ಮ್ ಮೇಕಿಂಗ್ ಏಜ್’ ಗೋಷ್ಠಿಯಲ್ಲಿ ಮನದುಂಬಿ ಮಾತನಾಡಿದರು. ಹ್ಯಾರಿ ಪಾಟರ್‌, ರೌಡಿ ರಾಥೋಡ್‌, ಗ್ಯಾಂಗ್ಸ್ ಆಫ್ ವಸೇಪುರ್‌, ಬಳೆ ಕೆಂಪ ಸೇರಿದಂತೆ 250ಕ್ಕೂ ಹೆಚ್ಚು ಸಿನಿಮಾಗಳಿಗೆ ಧ್ವನಿವಿನ್ಯಾಸ ಮಾಡಿದ ಅನುಭವ ಶ್ರೀಜೇಶ್‌ ಅವರದು. ತಿರುವನಂತಪುರ ಮೂಲದ ಶ್ರೀಜೇಶ್‌, ಸಂಕೀರ್ಣ ವಿಷಯವನ್ನೂ ಸರಳವಾಗಿ, ಲಘುವಾಗಿ ಎಲ್ಲರಿಗೂ ತಲುಪುವ ರೀತಿಯಲ್ಲಿಯೇ ಮಂಡಿಸಿದರು.
***
ಸಿನಿಮಾ ಕಾಮನಬಿಲ್ಲು

ಸಿನಿಮಾ ಎನ್ನುವುದು ಒಂದು ಖಾಲಿ ಕ್ಯಾನ್ವಾಸ್‌ ಇದ್ದ ಹಾಗೆ. ಅದನ್ನು ನೀವು ಬರೀ ಕಪ್ಪು ಮಸಿಯಿಂದ ಮಾತ್ರ ತುಂಬಿದರೆ ಏನು ಚೆನ್ನ? ಅದರಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿಕೊಂಡು ಕಾಮನಬಿಲ್ಲು ಮೂಡಿಸಬೇಕಲ್ಲವೇ? ಧ್ವನಿ, ಸಂಗೀತ ಎಲ್ಲವೂ ಹೀಗೆಯೇ. ಯಾವುದನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು ಎಂದು ಅರಿವಿದ್ದರೆ ಸುಂದರವಾದ ಕಾಮನಬಿಲ್ಲು ಮೂಡಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT