ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದದ ಒಲಿಂಪಿಕ್ಸ್‌ಗೆ ವೈಭವದ ತೆರೆ

ಸಮಾರೋಪ ಸಮಾರಂಭದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಉತ್ತರ–ದಕ್ಷಿಣ ಕೊರಿಯಾ ಅಥ್ಲೀಟ್‌ಗಳು
Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪಾಂಗ್‌ಚಾಂಗ್‌ (ಎಎಫ್‌ಪಿ): ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ಗೆ ಭಾನುವಾರ ವೈಭವದ ತೆರೆ ಬಿತ್ತು. ಚಳಿಗಾಲದ ಒಲಿಂಪಿಕ್ಸ್‌ ಇತಿಹಾಸದಲ್ಲಿ ಅತಿ ದೊಡ್ಡದು ಎಂದು ಬಣ್ಣಿಸಲಾದ ಕೂಟದ ಮುಕ್ತಾಯವನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್‌ ಬಾಕ್‌ ಘೋಷಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್‌ ಮುಖ್ಯ ಅತಿಥಿಯಾಗಿದ್ದರು. ಉತ್ತರ ಕೊರಿಯಾದ ಕಿಮ್‌ ಯಾಂಗ್ ಚಾಲ್‌ ಮತ್ತು ಸಹೋದರಿ ಕಿಮ್ ಚಾಂಗ್‌ ಯೂನ್‌ ಕೂಡ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಕ್‌ ‘ಈ ಕೂಟದ ಮೂಲಕ ಹೊಸ ಅಥ್ಲೀಟ್‌ಗಳನ್ನು ಮತ್ತು ಹೊಸ ರಾಷ್ಟ್ರಗಳನ್ನು ಪರಿಚಯಿಸಲು ನಮಗೆ ಸಾಧ್ಯವಾಗಿದೆ. ಈ ಮೂಲಕ ಕ್ರೀಡೆಯ ಹೊಸ ಮನ್ವಂತರಕ್ಕೆ ನಾಂದಿ ಹಾಡಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಎರಡು ವಾರ ನಡೆದ ಕೂಟದ ಮುಕ್ತಾಯ ಸಮಾರಂಭದಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾದ ಕ್ರೀಡಾಪಟುಗಳು ತಮ್ಮ ದೇಶದ ಧ್ವಜ ಹಿಡಿದುಕೊಂಡು ಹೆಜ್ಜೆ ಹಾಕಿದರು. ಈ ಅಪರೂಪದ ಕ್ಷಣಕ್ಕೆ ಬಣ್ಣ ಬಣ್ಣದ ಚಿತ್ತಾರ, ಸಿಡಿಮದ್ದು ಮತ್ತು ತಂಪು ಹವೆಯ ಹಿನ್ನೆಲೆ ಇತ್ತು.

ಅಮೆರಿಕ ಜೊತೆ ಉತ್ತರ ಕೊರಿಯಾ ಮಾತುಕತೆ ನಡೆಸುವ ಕಾಲ ದೂರ ಇಲ್ಲ ಎಂಬುದು ಈ ಸಮಾರಂಭದ ಮೂಲಕ ಬಿಂಬಿತವಾಗಿದೆ ಎಂದು ಕೊರಿಯಾ ಅಧ್ಯಕ್ಷರ ‘ಬ್ಲೂ ಹೌಸ್‌’ ಅಭಿಪ್ರಾಯಪಟ್ಟಿದೆ.

ಮಹಿಳೆಯರ ಐಸ್ ಹಾಕಿಯಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾದ ಆಟಗಾರರನ್ನು ಒಳಗೊಂಡ ಜಂಟಿ ತಂಡವನ್ನು ಕಣಕ್ಕೆ ಇಳಿಸಿಯೂ ಸೌಹಾರ್ದತೆಯ ಸಂದೇಶ ನೀಡಲಾಗಿತ್ತು.

‘ಜನರನ್ನು ಒಗ್ಗೂಡಿಸಲು ಕ್ರೀಡೆ ಯಾವ ರೀತಿ ಸಹಕಾರಿಯಾಗುತ್ತದೆ ಎಂಬುದನ್ನು ನಿಮ್ಮಿಂದ ಜಗತ್ತು ಕಲಿತುಕೊಂಡಿದೆ. ದ್ವೇಷ ಮರೆತು ಪ್ರೀತಿಯ ಸೇತುವೆ ಕಟ್ಟಲು ಕ್ರೀಡೆ ಸಹಕಾರಿ ಎಂಬ ಸಂದೇಶ ಇಲ್ಲಿಂದ ರವಾನೆಯಾಗಿದೆ’ ಎಂದು ಬಾಕ್ ಅಭಿಪ್ರಾಯಪಟ್ಟರು.

ಮುಂದಿನ ಚಳಿಗಾಲದ ಒಲಿಂಪಿಕ್ಸ್‌ 2022ರಲ್ಲಿ ಬೀಜಿಂಗ್‌ನಲ್ಲಿ ನಡೆಯಲಿದೆ.

ನಿಷೇಧ ತೆರವಿನ ಭರವಸೆ

ಮಾಸ್ಕೊ: ರಾಷ್ಟ್ರದ ಕ್ರೀಡಾಪಟುಗಳ ಮೇಲೆ ಹೇರಿರುವ ನಿಷೇಧ ಮುಂದಿನ ಕೆಲವೇ ದಿನಗಳಲ್ಲಿ ತೆರವುಗೊಳ್ಳುವ ವಿಶ್ವಾಸ ಇದೆ ಎಂದು ರಷ್ಯಾ ಅಭಿಪ್ರಾಯಪಟ್ಟಿದೆ.

ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ಗುರಿಯಾಗಿರುವ ರಷ್ಯಾ ಕ್ರೀಡಾಪಟುಗಳು ರಾಷ್ಟ್ರದ ಲಾಂಛನದ ಅಡಿ ಸ್ಪರ್ಧಿಸುವುದರಿಂದ ನಿಷೇಧಿಸಲಾಗಿತ್ತು.

ಮುಂದಿನ ದಿನಗಳಲ್ಲಿ ರಷ್ಯಾದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ವರದಿಯಾಗದೇ ಇದ್ದರೆ ನಿಷೇಧ ತೆರವಾಗುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಮೂಲಗಳು ಕೂಡ ಹೇಳಿವೆ.

ಚಳಿಗಾಲದ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ಕ್ರೀಡಾಪಟುಗಳು ಜೊತೆಯಾಗಿ ಹೆಜ್ಜೆ ಹಾಕಿ ಸೌಹಾರ್ದ ಮೆರೆದರು –ರಾಯಿಟರ್ಸ್ ಚಿತ್ರ

*

ಚಳಿಗಾಲದ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಕಲಾವಿದರು ಪ್ರದರ್ಶಿಸಿದ ಕಲಾವೈಭವ – ರಾಯಿಟರ್ಸ್ ಚಿತ್ರ

*

ಚಳಿಗಾಲದ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಗಮನ ಸೆಳೆದ ಬಾಲ ಕಲಾವಿದರು –ರಾಯಿಟರ್ಸ್ ಚಿತ್ರ

*

ಚಳಿಗಾಲದ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಮೂಡಿದ ಬಣ್ಣದ ಚಿತ್ತಾರಕ್ಕೆ ರಂಗು ತುಂಬಿದ ಸಿಡಿಮದ್ದು –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT