ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಪಸಂಖ್ಯಾತರಲ್ಲಿ ವಿವಾಹ ನಂತರದ ಕೌಶಲ ಹೆಚ್ಚಿದೆ’

Last Updated 25 ಫೆಬ್ರುವರಿ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿನ ಬಹುಸಂಖ್ಯಾತರು ನಾಳೆ ಅಲ್ಪಸಂಖ್ಯಾತರಾಗಲಿದ್ದಾರೆ. ಏಕೆಂದರೆ, ಈಗಿನ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಕೌಶಲವಿದೆ. ಅದೇನೆಂದು ನಾನು ಬಿಡಿಸಿ ಹೇಳಬೇಕಾ? ನಮ್ಮಲ್ಲಿ ಆ ಕೌಶಲ ಇಲ್ಲ ಎಂದು ಹೇಳುತ್ತಿಲ್ಲ. ನಮ್ಮದು ಶಿಸ್ತಿನ ಕೌಶಲ; ಅವರದ್ದು ವಿವಾಹ ನಂತರದ ವಿಶೇಷ ಕೌಶಲ’

–ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಆಡಿರುವ ವ್ಯಂಗ್ಯದ ಮಾತುಗಳಿವು.

ಎಚ್‌.ಎಂ. ಪ್ರಸನ್ನ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಯುವಶಕ್ತಿ ಸಬಲೀಕರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಗೆರೆಯನ್ನು ನಾವು ಒಡೆಯಬೇಕು. ಪ್ರವಾಹವನ್ನು‌ ತಡೆಯಲೇ ಬೇಕು. ಈ ಹೇಳಿಕೆ ಒರಟು, ಅಪ್ರಬುದ್ಧತೆ, ವಿವಾದ ಅನ್ನಿಸಬಹುದು. ಸ್ವಾಮಿ... ನನ್ನ ದೇಶ ಬದುಕ ಬೇಕೆಂದರೆ ಇದೇ ಆಗಬೇಕು. ಬೇರೆ ದಾರಿಯಿಲ್ಲ. ಸಾವಿರಾರು ವರ್ಷದಿಂದ ಬಂದಿರುವ ಈ ಮಣ್ಣಿನ ಗೌರವ ಉಳಿಸಬೇಕೆಂದರೆ, ನನ್ನ ರಕ್ತದ ಪರಿಚಯದ ಜೊತೆಗೆ ಗುರುತಿಸಿಕೊಳ್ಳಬೇಕು. ನನ್ನ ರಕ್ತವನ್ನು ಬೇರೆ ಯಾವುದೋ ರಕ್ತ ಎಂದು ಹೇಳಲು ಆಗುವುದಿಲ್ಲ’ ಎಂದು ಹೇಳಿದರು.

‘ಹಿಂದುಳಿದವರು ಎಂದು ಮರುಗುತ್ತಾ ಕುಳಿತಿರುವುದರಿಂದಲೇ ನೀವು ಹಿಂದುಳಿದಿದ್ದೀರಿ. ಹಾಗೆ ಹೇಳಿಕೊಳ್ಳುವುದೇ ಈಗ ಫ್ಯಾಷನ್‌ ಆಗಿದೆ. ಅದರಿಂದ ಎಂತಹ ಸಂತೋಷ, ನೆಮ್ಮದಿ ಸಿಗುತ್ತದೆಯೋ ಗೊತ್ತಿಲ್ಲ’ ಎಂದರು.

‘ಜಗತ್ತಿಗೆ ಭಾರತ ಸೊನ್ನೆಯನ್ನು ಕೊಡುಗೆ ನೀಡದಿದ್ದರೆ, ಆಧುನಿಕ ಕ್ರಾಂತಿ ನಡೆಯುತ್ತಿರಲಿಲ್ಲ ಎಂದು ಆಲ್ಬರ್ಟ್‌ ಐನ್‌ಸ್ಟೀನ್‌ ಹೇಳುತ್ತಾನೆ. ಅನಂತ
ಕುಮಾರ್‌ ಹೆಗಡೆ ಏನಾದರೂ ಈ ಮಾತನ್ನು ಹೇಳಿದ್ದರೆ, ಕೇಸರಿತನ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಈ ರೀತಿಯ ವಿಕೃತ ಬುದ್ಧಿ
ಜೀವಗಳಿಗೆ ಧಿಕ್ಕಾರ ಹೇಳಬೇಕು’ ಎಂದು ಟೀಕಿಸಿದರು.

‘ಈ ದೇಶದ ಅಂತಃಸತ್ವವನ್ನು ಕೊಂದಿರುವುದು ಹೊರಗಡೆಯಿಂದ ಬಂದಿರುವ ಉಗ್ರಗಾಮಿಗಳಲ್ಲ. ನಮ್ಮ ಮನೆಯೊಳಗೆ ಹುಟ್ಟಿ ಬೆಳೆದಿರುವ ಹೆಗ್ಗಣ
ಗಳು. ಎಡಬಿಡಂಗಿ ಕೆಂಪಂಗಿ ದೊರೆಗಳೇ ನಮ್ಮ ದೇಶವನ್ನು ಹಾಳು ಮಾಡಿದ್ದಾರೆ. ಕೀಳರಿಮೆಯಿಂದ ಈ ದೇಶವನ್ನು ಹೊರಗಡೆ ತರಬೇಕಾದರೆ
ವಿಶ್ವವಿಜೇತ ಮಾನಸಿಕತೆ ಎಂಬ ಕೌಶಲದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಷ್ಟ್ರೀಯತೆಯನ್ನು ನೀವೇನು ಗುತ್ತಿಗೆ ತೆಗೆದುಕೊಂಡಿದ್ದೀರಾ? ನಾವೂ ರಾಷ್ಟ್ರೀಯತಾವಾದಿಗಳೇ ಎಂದು ಹೇಳುವ ಎಡಬಿಡಂಗಿಗಳು ತುಂಬಾ ಜನ ಇದ್ದಾರೆ. ಆದರೆ, ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿ ಎಂದರೆ ಉತ್ತರಿಸಲು ಬರುವುದಿಲ್ಲ. ಯಾವುದೋ ಒಂದು ಭೂಭಾಗದ ಚೌಕಟ್ಟನ್ನು ರಾಷ್ಟ್ರೀಯತೆ ಎಂದು ಭಾವಿಸಿದ್ದರೆ ಅದು ಸಣ್ಣತನ. ದೇಶದ ಭೌಗೋಳಿಕ ಚೌಕಟ್ಟಿನ ಜೊತೆಗೆ ಇಲ್ಲಿನ ಜನ, ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಇತಿಹಾಸ, ನಂಬಿಕೆ ಎಲ್ಲವನ್ನು ಒಳಗೊಂಡ ಸಮಗ್ರ ವ್ಯಕ್ತಿತ್ವವೇ ರಾಷ್ಟ್ರೀಯತೆ’ ಎಂದು ವಿವರಿಸಿದರು.

ತಂತ್ರಜ್ಞಾನ–ಸಲಕರಣೆಗಳಿಂದ ದೇಶ ಕಟ್ಟುವ ಕೆಲಸ ನಡೆಯುವುದಿಲ್ಲ. ಹೊಟ್ಟೆ ಕೇಂದ್ರಿತ ರಾಷ್ಟ್ರೀಯತೆ ಬಗ್ಗೆಯೇ ಇಂದು ಹೆಚ್ಚು ಚರ್ಚಿಸಲಾಗುತ್ತಿದೆ. ಹಸಿದಾಗ ಅನ್ನ ಹುಡುಕಿಕೊಳ್ಳುವ ಕೌಶಲ ಒದಗಿಸುವುದರ ಜೊತೆಗೆ, ನೂರಾರು ವರ್ಷಗಳ ಗುಲಾಮಗಿರಿಯ ಪರಿಣಾಮವಾಗಿ ಮಲಗಿ ನಿದ್ದೆ ಮಾಡುತ್ತಿರುವ ಅಂತಃಸತ್ವವನ್ನು ಬಡಿದೆಬ್ಬಿಸುವ ಕೌಶಲವೂ ದೇಶಕ್ಕೆ ಅಗತ್ಯವಿದೆ ಎಂದು ಹೇಳಿದರು.

‘ಸಮಗ್ರ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ ನಮ್ಮದು. ನಿರಂತರ ದಾಸ್ಯದ ಪರಿಣಾಮ ನಮ್ಮ ಮನಸ್ಸುಗಳು ತುಂಡಾಗಿವೆ. ನಾವೆಲ್ಲರೂ ಒಂದು ಎಂದು ಯಾರಿಗೂ ಅನಿಸುತ್ತಿಲ್ಲ. ಜಾತಿಗಳಿಂದ ಗುರುತಿಸುವ ದೃಷ್ಟಿಕೋನ ನಮ್ಮಲ್ಲಿದೆ. ಹಿಂದೂಗಳು, ಹಿಂದುತ್ವ ನಮ್ಮ ರಾಷ್ಟ್ರೀಯತೆ ಎನ್ನುವ ಭಾವನೆಯೇ ಇಲ್ಲ’ ಎಂದರು.

ರಾಜ್ಯಕ್ಕೆ ಬರಲಿದೆ ‘ಐಐಎಸ್‌’

‘ಐಐಟಿ, ಐಐಎಂಬಿ ರೀತಿಯಲ್ಲಿಯೇ ಐಐಎಸ್‌ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಕಿಲ್‌) ಪ್ರಾರಂಭಿಸಲಿದ್ದೇವೆ. ರಾಜ್ಯದಲ್ಲಿಯೂ ಇದರ ಒಂದು ಕೇಂದ್ರ ನಿರ್ಮಾಣವಾಗಲಿದೆ’ ಎಂದು ಅನಂತ್‌ ಕುಮಾರ್‌ ತಿಳಿಸಿದರು

ಐಎಎಸ್, ಐಪಿಎಸ್‌ ಮಾದರಿಯಲ್ಲಿಯೇ ಕೌಶಲ ಅಭಿವೃದ್ಧಿಗಾಗಿ ಐಎಸ್‌ಡಿಎಸ್‌ (ಭಾರತೀಯ ಕೌಶಲ ಅಭಿವೃದ್ಧಿ ಸೇವೆ) ರೂಪಿಸಿದ್ದೇವೆ. ಈ ಅಧಿಕಾರಿಗಳ ಮೊದಲ ತಂಡ ಸದ್ಯದಲ್ಲೇ ಸಿದ್ಧಗೊಳ್ಳಲಿದೆ. ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯಗಳನ್ನು ಏಳು ಕಡೆ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT