ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಕಷ್ಟ

Last Updated 28 ಫೆಬ್ರುವರಿ 2018, 8:57 IST
ಅಕ್ಷರ ಗಾತ್ರ

ವಿಜಯಪುರ: ಬದಲಾಗುತ್ತಿರುವ ವಾತಾವರಣ, ತೀವ್ರ ನೀರಿನ ಕೊರತೆ, ಹಿಪ್ಪುನೇರಳೆ ಸೊಪ್ಪಿನ ಕೊರತೆಯಿಂದಾಗಿ ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆಗೂಡಿನ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ. ಇದರಿಂದ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಆರಂಭದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಗೂಡಿನ ಪ್ರಮಾಣ 200 ಲಾಟುಗಳಿಗೂ ಹೆಚ್ಚು, ಈ ವರ್ಷದಲ್ಲಿ ಫೆಬ್ರುವರಿ ತಿಂಗಳ ಕೊನೆಯಲ್ಲಿ ಬಂದಿರುವ ಗೂಡಿನ ಪ್ರಮಾಣ 83 ಲಾಟು ಎಂದು ರೇಷ್ಮೆ ಗೂಡು ಮಾರುಕಟ್ಟೆ ಮೂಲಗಳು ತಿಳಿಸಿವೆ.

ರೇಷ್ಮೆ ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರು ಚಳಿಗಾಲದಲ್ಲಿ ಸುಣ್ಣ ಕಟ್ಟು ರೋಗ ಬಾಧೆ ಎದುರಿಸುತ್ತಾರೆ. ಬೇಸಿಗೆಯಲ್ಲಿ ಉಷ್ಣಾಂಶದಿಂದ ಸೊಪ್ಪಿನ ಕೊರತೆ ಹೆಚ್ಚಾಗುತ್ತಿದೆ. ಇದಕ್ಕಾಗಿ ರೇಷ್ಮೆ ಹುಳು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳ ಮಾಲೀಕರು ಗೂಡಿನ ಅಭಾವದಿಂದ ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಮುಂದಾಗಿದ್ದಾರೆ.

‘ಚಳಿಗಾಲದಲ್ಲಿ ಗೂಡು ಕೊಳ್ಳಲು ನಾಮುಂದು, ತಾಮುಂದು ಎಂದು ಪೈಪೋಟಿ ನಡೆಯುತ್ತದೆ. ಬೆಲೆಯೂ ಹೆಚ್ಚಾಗುತ್ತದೆ. ಈಗ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಗೂಡು ಸಿಗುತ್ತಿಲ್ಲ. ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ಇದೀಗ ಅವರಿಗೆ ಕೆಲಸ ಇಲ್ಲದಂತಾಗಿದೆ. ಒಂದೊಮ್ಮೆ ಗೂಡಿನ ಕೊರತೆಯಿಂದ ಘಟಕ ಬಂದ್‌ ಆದರೆ ಅವರಿಗೂ ಕಷ್ಟ’ ಎನ್ನುತ್ತಾರೆ ರೀಲರ್‌ ಕೃಷ್ಣಪ್ಪ.

‘ಸುಮಾರು 40 ವರ್ಷಗಳಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ಚಳಿಗಾಲದಲ್ಲಿ ರೈತರು ಗೂಡು ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ ಅಷ್ಟೇ ನಾವು ಕಷ್ಟ ಅನುಭವಿಸುತ್ತಿದ್ದೇವೆ. ದಿನಕ್ಕೆ ರೇಷ್ಮೆ ನೂಲು ಬಿಚ್ಚಲು ಒಬ್ಬರಿಗೆ ₹320 ಸಂಬಳ ಕೊಡುತ್ತಿದ್ದೇನೆ. ಇನ್ನೂ ಗೂಡು ಖರೀದಿ ಮಾಡಲು ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಗೂಡು ಖರೀದಿಸಬೇಕಾಗಿದೆ’ ಎನ್ನುತ್ತಾರೆ ರೀಲರ್ ಅಕ್ಮಲ್ ಪಾಷ.

‘ಮಾರುಕಟ್ಟೆಯಲ್ಲಿ ಗೂಡಿನ ಅಭಾವ ಇದ್ದಾಗ ಸ್ಥಳೀಯ ಶಿಡ್ಲಘಟ್ಟ, ಎಚ್.ಕ್ರಾಸ್‌ನ ಮಾರುಕಟ್ಟೆಯಲ್ಲಿ ಗೂಡು ಖರೀದಿ ಮಾಡಿಕೊಂಡು ಬಂದು ರೇಷ್ಮೆ ನೂಲು ಬಿಚ್ಚುವ ಕೆಲಸ ಮಾಡಿಸುತ್ತಿದ್ದೇನೆ’ ಎಂದರು.

150 ಮೊಟ್ಟೆ ಹುಳಕ್ಕೆ ₹30 ಸಾವಿರ ಖರ್ಚು

‘ಪ್ರತಿ ತಿಂಗಳು 100 ರಿಂದ 150 ಮೊಟ್ಟೆ ಹುಳು ಸಾಕುತ್ತೇನೆ. ಈ ತಿಂಗಳಲ್ಲಿ 150 ಮೊಟ್ಟೆ ಹುಳಕ್ಕೆ ₹30 ಸಾವಿರ ಖರ್ಚು ಮಾಡಿ ರೇಷ್ಮೆ ಗೂಡು ಬೆಳೆಸಿದ್ದೇನೆ. ಅದರಲ್ಲಿ 50ಕ್ಕೂ ಹೆಚ್ಚು ಮೊಟ್ಟೆ ಹುಳಗಳು ಬಿಸಿಗೆ ಸತ್ತಿವೆ’ ಎಂದು ರೈತ ನಾರಾಯಣಮೂರ್ತಿ ತಿಳಿಸಿದರು.

ಆಗೊಮ್ಮೆ, ಈಗೊಮ್ಮೆ ರೇಷ್ಮೆ ಗೂಡಿನ ಬೆಲೆ ಏರುತ್ತಿರುವಾಗ ಬೇಡಿಕೆಗೆ ತಕ್ಕಷ್ಟು ಗೂಡು ಬೆಳೆಯಲು ಸಾಧ್ಯವಾಗುತ್ತಿಲ್ಲ. ಚಳಿಗಾಲದಲ್ಲಂತೂ ಸುಣ್ಣ ಕಟ್ಟು ರೋಗ, ಹೂಜಿಗಳ ಕಾಟ ಹೆಚ್ಚಾಗಿ ಬೆಳೆಗೆ ಹಾಕಿದ ಬಂಡವಾಳ ಕೈಗೆ ಸಿಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT