ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಪೇಕ್ಷ ಸೌಂದರ್ಯ ಎನ್ನುವುದುಂಟೇ?

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಹೆಣ್ಣು, ಸೌಂದರ್ಯ ಮತ್ತು ದುರಂತ’ ಎಂಬ ತಮ್ಮ ಬರಹದಲ್ಲಿ (ಸಂಗತ, ಫೆ. 27) ಟಿ.ಎನ್. ವಾಸುದೇವಮೂರ್ತಿ ‘ಸ್ಫುರದ್ರೂಪದ ಮೋಹ ಸೃಜಿಸುವ ಒತ್ತಡ’ಗಳನ್ನು ಸಮರ್ಥವಾಗಿ ಬಿಂಬಿಸಿದ್ದಾರೆ. ಈ ನಿಟ್ಟಿನಲ್ಲಿ ವೃತ್ತಾಂತವೊಂದು ಉದಾಹರಣೀಯವಾಗಿದೆ. ತಾನು ಜಗತ್ತಿನಲ್ಲೇ ಬಹು ಸುಂದರವಾಗಿ ಕಾಣಬೇಕೆಂದು ಹಪಹಪಿಸಿದ ರಾಣಿಯೊಬ್ಬಳು ದೇವರಿಗೆ ಮೊರೆಹೋಗುತ್ತಾಳೆ. ‘ಜಗತ್ತಿನಲ್ಲೇ ಅತಿ ಸುಂದರವಾದ ಚರ್ಮ, ಮೂಗು, ಕಿವಿ, ಕಣ್ಣು, ಹಣೆ... ಯಾರ‍್ಯಾರ ಬಳಿಯೇ ಇರಲಿ ನಿನ್ನ ಮುಖಕ್ಕೆ ಇದೋ ಈ ಕ್ಷಣದಲ್ಲೇ ಬಂದು ಲಗತ್ತಾಗಲಿ’ ಎಂದು ದೇವರು ವರ ಕೊಡುತ್ತಾನೆ. ತದನಂತರ ‘ನಿನ್ನ ರೂಪ ಈಗ ಹೇಗಿದೆ ನೋಡಿಕೊ’ ಅಂತ ದೇವರು ಆಕೆಗೆ ಕನ್ನಡಿ ಹಿಡಿಯುತ್ತಾನೆ. ರಾಣಿ ತನ್ನ ಪ್ರತಿಬಿಂಬ ದಿಟ್ಟಿಸಿ ಪ್ರಜ್ಞೆ ತಪ್ಪುವುದೊಂದು ಬಾಕಿ. ಅವಳು ಅಷ್ಟು ಕುರೂಪಿಯಾಗಿರುತ್ತಾಳೆ!

ನಿಸರ್ಗವನ್ನು ಗೌರವಿಸಬೇಕೆನ್ನುತ್ತೇವೆ. ಮಾನವನನ್ನೂ ಒಳಗೊಂಡಂತೆ ಸಕಲ ಪ್ರಾಣಿಗಳಲ್ಲೂ ಅದು ಸೌಂದರ್ಯವನ್ನೇ ನಿಯುಕ್ತಗೊಳಿಸಿದೆ. ಪ್ರಕೃತಿಯಲ್ಲಿ ಚೆಲುವನ್ನು ಸೃಜಿಸುವ ಅಗತ್ಯವೇ ಇಲ್ಲ, ಸೃಜಿಸಲಾಗದು ಕೂಡ. ನನ್ನ ಆಪ್ತ ಮಿತ್ರರೊಬ್ಬರನ್ನು ‘ನೀವು ತಲೆಗೂದಲಿಗೆ ಕಪ್ಪು ಬಣ್ಣ ಹಚ್ಚಬಹುದಲ್ಲ’ ಎಂದಿದ್ದಕ್ಕೆ ಆತ ಮಾರ್ಮಿಕವಾಗಿ ಹೇಳಿದ್ದು: ‘ನನ್ನ ಪರಿಚಿತರಿಗೆ ನಾನು ತಲೆಗೆ ಬಣ್ಣ ಹಾಕಿರುವುದು ತಿಳಿಯುತ್ತದೆ. ಇನ್ನು ಅಪರಿಚಿತರ ಪಾಲಿಗೆ ನಾನು ಹೇಗಿದ್ದರೆ ಏನು?’

ಅಂದ– ಚೆಂದ ಇಂದಿದ್ದಂತೆ ನಾಳೆ ಇರದು. ಯಾವುದೇ ಜೀವಿಯ ದೇಹವು ಕಾಲಚಕ್ರ ಉರುಳಿದಂತೆ ಮುದುಡಲೇಬೇಕು. ವಯಸ್ಸನ್ನು ಮರೆಮಾಚಿದಷ್ಟೂ ಅದು ಇನ್ನೊಂದು ಬಗೆಯಲ್ಲಿ ಪ್ರಕಟಗೊಂಡೇ ತೀರುತ್ತದೆ. ‘ನಿಮ್ಮ ವಯಸ್ಸೆಷ್ಟು’ ಎಂಬ ಪ್ರಶ್ನೆಗೆ ಇಷ್ಟೆಂದು ಉತ್ತರಿಸುತ್ತಲೇ ಬರುವ, ‘ಖಂಡಿತ ಹಾಗೆ ಕಾಣಿಸದು’ ಎನ್ನುವ ತಕ್ಷಣದ ಪ್ರತಿಕ್ರಿಯೆ ಎಷ್ಟು ಪ್ರಾಮಾಣಿಕ ಎಂಬುದು ಗೊತ್ತಿರುವುದೇ! ದುರ್ದೈವವೆಂದರೆ ಫೇಸ್‍ಬುಕ್‍ನಲ್ಲಿ ಒಬ್ಬರ ವೇಷ, ಚಹರೆಗೆ ಬೀಳುವ ಲೈಕ್‍ಗಳೇ ಅವರ ವ್ಯಕ್ತಿತ್ವದ ಅಳತೆಗೋಲಾಗಿವೆ. ಆಸ್ಪತ್ರೆ, ಕಂಪನಿ ಮೊದಲಾದೆಡೆ ಸ್ವಾಗತಕಾರರಲ್ಲಿ ಅಗತ್ಯ ಇರಬೇಕಾದ್ದೇನು? ನಯ– ವಿನಯದ ನುಡಿ, ಮಾರ್ಗದರ್ಶನದ ಕೌಶಲ. ಆದರೆ ಈ ಮುಖ್ಯ ಅರ್ಹತೆಯೇ ಗೌಣವಾಗಿ, ಅವರು ಚೆಂದವಾಗಿದ್ದಾರೆಯೇ ಇಲ್ಲವೇ ಎಂಬ ಬಗ್ಗೆಯೇ ಚರ್ಚಿಸಲಾಗುತ್ತದೆ. ಒಬ್ಬರ ರೂಪ ಏಕಾದರೂ ಎಲ್ಲರ ಚರ್ಚೆಗೆ ಗ್ರಾಸವಾಗಬೇಕು? ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದು ಅಸಂಭವ. ವೈವಿಧ್ಯವು ನಿಸರ್ಗದ ನಿಯಮ. ಸೌಂದರ್ಯ ಬಗೆ ಬಗೆ ಬಣ್ಣಗಳಲ್ಲಿ, ಗಾತ್ರಗಳಲ್ಲಿ, ಛಾಪುಗಳಲ್ಲಿ ಪ್ರಕಟಗೊಳ್ಳುತ್ತದೆ.

ಪುರುಷರಾಗಲೀ, ಮಹಿಳೆಯರಾಗಲೀ ಸುಂದರವಾಗಿ ಕಾಣಲು ಹಂಬಲಿಸುವುದು ಸಹಜವೇ. ಆದರೆ ಪ್ರಕೃತಿದತ್ತ ನಾಜೂಕನ್ನು, ಅದರ ಹಿಂದಿನ ಉದ್ದೇಶವನ್ನು ಮನಗಾಣದೆ, ತಿದ್ದಿ– ತೀಡಿ ಆಕರ್ಷಣೆಯನ್ನು ಆವಾಹಿಸಿಕೊಳ್ಳುವುದು ವಿಪರ್ಯಾಸ. ನಟಿಯರು ಚೆಲುವಿನ ಮೋಹದ ಭರದಲ್ಲಿ ತಮ್ಮ ವೈಯಕ್ತಿಕ ಬದುಕಿಗೆ ಗಮನ ನೀಡದಿರುವುದಂತೂ ಅತಿ ದೊಡ್ಡ ದುರಂತ.

ನಾನು ಅಮೆರಿಕದ ಸಿಯಾಟಲ್‍ ಶಹರಿನಲ್ಲಿ ಅಡ್ಡಾಡುವಾಗ ಒಂದೆಡೆ ಬ್ಯೂಟಿ ಪಾರ್ಲರಿನ ಮುಂದೆ ಲಗತ್ತಿಸಿದ್ದ ‘ಸಾರಿ, ನೋ ಐ ಬ್ರೊ ಟ್ರಿಮಿಂಗ್’ ಫಲಕ ಗಮನ ಸೆಳೆಯಿತು. ‘ಸರ್, ನಿಮ್ಮ ಕುತೂಹಲ ನನಗೆ ಅರ್ಥವಾಯಿತು’ ಎಂದ ಸೌಂದರ್ಯಕಾರಿಣಿ, ‘ಹೇಳಿ ಕೇಳಿ ಹುಬ್ಬು ಇರುವುದು ಅಮೂಲ್ಯವಾದ ಕಣ್ಣಿನ ರಕ್ಷಣೆಗೆ ಅಲ್ವೇ ಸರ್? ಅದನ್ನು ತುಸು ಕೊಂಕಿಸಿದರೂ ಕಣ್ಣಿಗೆ ರವಷ್ಟಾದರೂ ದೂಳು ಮುತ್ತಿ ಅಪಾಯ ಕಟ್ಟಿಟ್ಟದ್ದು. ನಾವು ನೋಡುವ ಕಣ್ಣುಗಳಿಗೆ ಅಪಾಯ ಆಹ್ವಾನಿಸಿಯಾದರೂ ನೋಡುಗರನ್ನು ಮೆಚ್ಚಿಸುವ ಅಗತ್ಯವೇನಿದೆ ಹೇಳಿ...’ ಮುಂತಾಗಿ ವಿವರಿಸಿದಳು.

ಸುಂದರವಾಗಿ ಕಾಣಹೊರಟು ಏನೆಲ್ಲ ಪಾಡು ಪಡಬಹುದು. ಆಸ್ಪತ್ರೆಯ ವೈದ್ಯರಾಗಲೀ, ಪಾರ್ಲರಿನ ಸೌಂದರ್ಯಕಾರಿಣಿಯಾಗಲೀ ಮುಖದಲ್ಲಿ ನಸುನಗೆಯನ್ನು ತಂದುಕೊಡಲು ಸಾಧ್ಯವೇ?! ಸ್ವತಃ ಸೌಂದರ್ಯಾಕಾಂಕ್ಷಿಗಷ್ಟೇ ಅದು ಸಾಧ್ಯ. ನಮ್ಮ ಅಲಂಕರಣವನ್ನು ಆಖೈರುಗೊಳಿಸುವುದು ನಮ್ಮ ಮುಖಭಂಗಿಯೇ. ಕೀಳರಿಮೆ, ಕೃತಕ ತೋರಿಕೆ ದಾಟಿದವರೆಲ್ಲ ಸುಂದರರೇ. ತಲೆ ಬಾಚಿಕೊಳ್ಳಬೇಡಿ, ಉಗುರು ಕತ್ತರಿಸದಿರಿ ಮುಂತಾಗಿ ಯಾರೂ ಹೇಳುವುದಿಲ್ಲ. ಆದರೆ ಒಪ್ಪ, ಓರಣ ಕೃತ್ರಿಮವಾಗಬೇಕೇ ಎನ್ನುವುದು ಪ್ರಶ್ನೆ.

ಒಂದು ಕಾಲದಲ್ಲಿ ಮನೆಯಂಗಳದಲ್ಲೇ ಸೌಂದರ್ಯವರ್ಧಕ ಸಾಧನಗಳನ್ನು ತಯಾರಿಸಿಕೊಳ್ಳಲಾಗುತ್ತಿತ್ತು. ಸೀಗೆಕಾಯಿ ತಂದು ಒರಳಿನಲ್ಲಿ ರುಬ್ಬಿ ಅದನ್ನು ಮಜ್ಜನಕ್ಕೆ ಬಳಸಲಾಗುತ್ತಿತ್ತು. ನಂದಿಬಟ್ಟಲು ಹೂವಿನಿಂದ ಕಾಡಿಗೆ ಉತ್ಪಾದಿಸುವ ರೂಢಿ ಇಂದಿಗೂ ಗ್ರಾಮಾಂತರಪ್ರದೇಶಗಳಲ್ಲಿದೆ. ಇಂದು ಎಂಥ ಪರಿಸ್ಥಿತಿ ಏರ್ಪಟ್ಟಿದೆಯೆಂದರೆ ವಧು ಅಲಂಕಾರ ಒತ್ತಟ್ಟಿಗಿರಲಿ; ಸೀರೆ ಧರಿಸಲೂ ಪಾರ್ಲರಿಗೆ ಧಾವಿಸಲಾಗುತ್ತದೆ! ಮನೆಯಲ್ಲಿನ ಹಿರಿಯ ಮಹಿಳೆಯರು ಮಗು, ಬಾಣಂತಿಗೆ ಸ್ನಾನ ಮಾಡಿಸುತ್ತಿದ್ದರು. ಇಂದು ಅದಕ್ಕಾಗಿ ಮನೆಗೆ ಭೇಟಿ ನೀಡುವ ಸಹಾಯಕಿಯರನ್ನು ಅವಲಂಬಿಸುವಂತಾಗಿದೆ. ಉದ್ದನೆಯ ಕಾಲುಗಳು, ನೀಳ ಕೇಶರಾಶಿ, ಪದೇ ಪದೇ ಹಣೆ ಮೇಲೆ ವಕ್ಕರಿಸುವ ಮುಂಗುರುಳನ್ನು ಹಿಂದಟ್ಟುವುದು- ಇವೇ ಚೆಲುವಿನ ಮಜಲುಗಳೋ ಎನ್ನುವಂತೆ ರಿಯಾಲಿಟಿ ಷೋಗಳು, ಜಾಹೀರಾತುಗಳು ಸಾರುತ್ತವೆ.

ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬುದು ಸರಿಯೇ. ಈ ಅರ್ಹತೆಯ ಹೊರತಾಗಿಯೂ ಮತದಾರರು, ‘ಇವರು ದಕ್ಷವಾಗಿ ಜನಪ್ರತಿನಿಧಿತ್ವವನ್ನು ನಿಭಾಯಿಸಬಲ್ಲರೇ’ ಎಂದು ಪರ್ಯಾಲೋಚಿಸಿಯೇ ಮತ ನೀಡಬೇಕು. ತೆರೆಯ ಮೇಲೆ ಸಿನಿಮಾ ನಟ–ನಟಿಯರ ಹಾವಭಾವಗಳಿಗೆ ಮರುಳಾದಲ್ಲಿ, ಅವರು ಆಳಿದಂತೆ ನಟಿಸುವುದೇ ನಮ್ಮ ನಿರೀಕ್ಷೆ ಎಂದಾದೀತು! ನಟನೆಯ ನೈಪುಣ್ಯ, ಆಡಳಿತ ನೈಪುಣ್ಯ ಬೇರೆ ಬೇರೆ. ಅಂದಹಾಗೆ ಅದೆಷ್ಟೋ ಕಲಾವಿದರು ನೋಡಲು ಅಷ್ಟಕ್ಕಷ್ಟೇ ಎನ್ನಿಸಿದರೂ ಸಮರ್ಥ ಅಭಿನಯ ನೀಡಿದ್ದಾರೆ. ಪ್ರತಿಭೆಗೆ ಗೋಧಿ, ನಸುಗೆಂಪು, ಬಿಳಿ, ಕಪ್ಪು ಬಣ್ಣವೆಂಬ ಭೇದವಿಲ್ಲ. ಈ ಮಾತನ್ನು ಏಕೆ ಹೇಳಿದೆನೆಂದರೆ, ನಟನೆ ಸಹ ಚೆಲುವನ್ನು ಮೀರಿದ್ದು. ಜನಪ್ರಿಯತೆ, ಸ್ಫುರದ್ರೂಪವನ್ನೇ ಪರಿಗಣಿಸಿ ನಟ, ನಟಿಯರನ್ನು ಚುನಾವಣೆಗೆ ನಿಲ್ಲಲು ಒತ್ತಾಯಿಸುವ ಅಪ್ರಬುದ್ಧತೆಯನ್ನು ನಮ್ಮ ರಾಜಕೀಯ ಪಕ್ಷಗಳು ಮೆರೆಯಬಾರದು. ನುರಿತ ಆಭಿನಯ ಪಟುಗಳೆಲ್ಲರಲ್ಲೂ ಧೀಮಂತ ಆಡಳಿತಗಾರರನ್ನು ಕಾಣಲು ಹೋಗಿ ಆದ ಭ್ರಮನಿರಸನಗಳು ನಮಗೆ ಗೊತ್ತೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT