ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಎಣ್ಣಿ' ಉಣ್ಣುವ ಸಂಕಟ

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಸಸಿ ನೆಟ್ಟು ಎಂಟು ದಿನ ಆಗೇತಿ. ಇನ್ನು ಎರಡು ದಿನ ಬಿಟ್ಟು ಎಣ್ಣಿ ಹೊಡೀಬೇಕು. ಬೆಂಕಿ ರೋಗ, ಹುಳ ಬೀಳೋದು ಇದ್ದೇ ಇದೆ. ಇಲ್ಲೇ ಎಣ್ಣಿ (ಕೀಟನಾಶಕ) ಅಂಗಡಿಯಿಂದ ತರ್ತೀವಿ. ಇಂಥ ರೋಗಕ್ಕೆ ಎಣ್ಣಿ ಕೊಡಪ್ಪಾ ಅಂದ್ರೆ ಸಾಕು. ಕೊಡ್ತಾರೆ. ಪ್ರತೀ ಎಕರೆಗೆ ಒಂದು ಲೀಟರ್‌ ಎಣ್ಣಿ ಹೊಡೀತೀವಿ. ಬೆಳೆ ಬರೋತನಕ ಅದೆಷ್ಟು ರೋಗ ಬರುತ್ತೋ ಅಷ್ಟೂ ಎಣ್ಣಿ ಹೊಡೆಯೋದೇ ಹೊಡೆಯೋದು...’

ಕೊಪ್ಪಳ ತಾಲ್ಲೂಕು ಆಗಳಕೇರಾದ ರೈತ ಹನುಮಂತಪ್ಪ ತಮ್ಮ ಬೆಳೆಗಳು ಎಣ್ಣೆ ಕುಡಿಯುವ ಕಥೆಯನ್ನು ಹೆಮ್ಮೆ ಎಂಬಂತೆ ಅಷ್ಟೇ ಮುಗ್ಧವಾಗಿ ಹೇಳಿದರು. ಇವರು ಪ್ರತೀ ಎಕರೆ ಭತ್ತಕ್ಕೆ ಒಂದೊಂದು ರೋಗಕ್ಕೂ ಒಂದೊಂದು ಲೀಟರ್ ಕೀಟನಾಶಕ ಬಳಸುತ್ತಾರೆ...

ಈ ಕಥೆ ಹೇಳಲು ಕಾರಣವಿದೆ...
ಮಿತಿಮೀರಿದ ಪ್ರಮಾಣದಲ್ಲಿ ಕೀಟನಾಶಕ ಶೇಷಾಂಶ ಉಳಿದ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಯುರೋಪ್‌ ಒಕ್ಕೂಟ, ಇರಾನ್‌ ಮತ್ತು ಅಮೆರಿಕದ ಮಾರುಕಟ್ಟೆಗಳು ತಿರಸ್ಕರಿಸಿವೆ. ಇದೇ ಸಾಲಿನಲ್ಲಿ ಹಸಿಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕಾಳುಮೆಣಸು ಸೇರಿವೆ. ಭಾರತ ಮತ್ತು ಪಾಕಿಸ್ತಾನದ ಮೆಣಸಿಗೆ ವಿದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಯುರೋಪ್‌ ಒಕ್ಕೂಟವು ರಫ್ತುದಾರ ದೇಶಗಳಿಗೆ ಸ್ಪಷ್ಟವಾದ ಸೂಚನೆ ನೀಡಿದೆ. ಮೆಣಸಿನಲ್ಲಿ ಕಾರ್ಬೋಫ್ಯುರಾನ್‌ ಕೀಟನಾಶಕದ ಶೇಷಾಂಶ ಮಿತಿ ಮೀರಿದ ಪ್ರಮಾಣದಲ್ಲಿ ಇರುವುದು ಈ ನಿರ್ಬಂಧಕ್ಕೆ ಕಾರಣ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಮೇಲಿನ ಅಂಶಗಳನ್ನು ಉಲ್ಲೇಖಿಸಿ ಮೆಣಸು ರಫ್ತುದಾರರಿಗೆ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದೆ. ಪ್ರಸಕ್ತ ವರ್ಷ ಜನವರಿ 1ರಿಂದ ಯುರೋಪ್‌ ಒಕ್ಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನದ ಮೆಣಸು ಕಠಿಣ ಪರೀಕ್ಷೆಗಳಿಗೆ ಒಳಗಾಗುತ್ತಿದೆ. ಭಾರತದ ಮೆಣಸನ್ನು ತೀವ್ರ ಅಪಾಯಕಾರಿ ಕೃಷಿ ಉತ್ಪನ್ನಗಳ ಪಟ್ಟಿಗೆ ಯುರೋಪ್‌ ಒಕ್ಕೂಟ ಸೇರಿಸಿದೆ ಎಂದು ಅಪೇಡಾದ ಉಪಪ್ರಧಾನ ವ್ಯವಸ್ಥಾಪಕ ಡಾ. ಸುಧಾಂಶು ಅವರು ಡಿ. 29ರಂದು ರಫ್ತುದಾರರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಮತ್ತೆ ಗದ್ದೆ ಬದುವಿನಲ್ಲಿ...
ಆಗಳಕೇರಾದ ಹೊಲದಲ್ಲಿ ಕೀಟನಾಶಕ ಸಿಂಪಡಿಸುತ್ತಿದ್ದ ಅಶೋಕ ಅವರಿಗೆ ತಾವು ಹೊಡೆಯತ್ತಿರುವ ರಾಸಾಯನಿಕವೇನು ಎಂದು ಕೇಳಿದರೆ, ‘ಅದೆಲ್ಲಾ ನನಗೆ ಗೊತ್ತಿಲ್ಲ. ನಮ್ಮ ಅಪ್ಪಂಗೆ ಗೊತ್ತು. ಕ್ಯಾನಿಗೆ ನೀರು ತುಂಬಿ ಎಣ್ಣಿ ಬೆರೆಸಿಯಾರೆ. ನಾನು ಹೊಡಿಯಾಕ್ಹತ್ತೀನಿ’ ಎಂದರು. ಅವರ ಪ್ರಕಾರ ತಾನು ಹೊಡೆಯುವ ಎಣ್ಣೆಗೂ ಬೆಳೆಯ ಸಮಸ್ಯೆಗೂ ಸಂಬಂಧ ಇರಲೇಬೇಕೆಂದಿಲ್ಲ. ನಾಟಿ ಆದ ಕೂಡಲೇ ‘ಎಣ್ಣಿ’ ಹೊಡೆಯಬೇಕು ಅಷ್ಟೇ.

ಇದೇ ರೀತಿ ಎಣ್ಣೆ ಹೊಡೆಯುವವರಲ್ಲಿ ಕಂಡುಬಂದ ಇನ್ನೊಂದು ಕಳವಳಕಾರಿ ವಿಷಯವೆಂದರೆ, ತಮ್ಮ ದೇಹದ ಸುರಕ್ಷತೆ ಬಗ್ಗೆ ಯಾರೂ ಕಾಳಜಿ ವಹಿಸದಿರುವುದು. ಮುಖಗವಸು, ಕೈಕವಚ ಇತ್ಯಾದಿ ಏನೂ ಇಲ್ಲ. ಬೆನ್ನಿಗೆ ಜೋತು ಬಿದ್ದ ಬೇತಾಳನಂತಿರುವ ಎಣ್ಣೆ ಕ್ಯಾನ್, ಒಂದು ಕೈಯಲ್ಲಿ ಪಂಪ್‌ ಇನ್ನೊಂದು ಕೈಯಲ್ಲಿ ಎಣ್ಣೆ ಪೈಪಿನ ಮೂತಿ ಹಿಡಿದು ಗದ್ದೆಗಳಲ್ಲಿ ಸಂಚರಿಸುತ್ತಾರೆ. ಹೊಲದ ಬದುವಿಗೆ ಬುತ್ತಿ ಬಂದಾಗ, ಎಣ್ಣೆ ಸಿಂಪಡಿಸಿದ ಅದೇ ಹೊಲದ ನೀರಿನಲ್ಲಿ ಕೈ ತೊಳೆದುಕೊಂಡು ರೊಟ್ಟಿ ಗಂಟು ಬಿಚ್ಚಿ ತಿನ್ನುತ್ತಾರೆ. ವಿಷ ಅನಾಯಾಸವಾಗಿ ದೇಹ ಸೇರುವುದು ಅರಿವಿಗೇ ಬರುವುದಿಲ್ಲ.

ಅಶೋಕ ಅವರ ಪ್ರಕಾರ ಗಿಡ ಸೊರಗಿದರೆ ಎಣ್ಣೆ, ಕೀಟ ಬಂದರೆ ಎಣ್ಣೆ, ನೀರಿನ ಕೊರತೆಯಾಗಿ ಸುಳಿ ಕೆಂಪಾದರೂ ಎಣ್ಣೆ, ಫಸಲು ತೆನೆ ಕಟ್ಟದಿದ್ದರೂ ಎಣ್ಣೆ. ಹೀಗೆ ಬಣ್ಣದ ಬಾಟಲಿಯಲ್ಲಿ ಪಕ್ಕದ ಅಂಗಡಿಯಲ್ಲಿ ಸಿಗುವ ಕಮಟು ವಾಸನೆಯ ‘ಎಣ್ಣಿ’ ಸರ್ವರುಜಾಪಹಾರಿ.

ಕೊಪ್ಪಳ- ಗಂಗಾವತಿ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಶಿವಪುರ ಸಿಗುತ್ತದೆ. ಅಲ್ಲಿನ ರೈತರು ಕೂಡಾ ಇತ್ತೀಚೆಗಷ್ಟೇ ನಾಟಿಯಾದ ಭತ್ತದ ಸಸಿಗಳಿಗೆ ಯೂರಿಯಾ ಸುರಿಯುತ್ತಿದ್ದರು. ‘ಇನ್ನೆರಡು ದಿನ ಬಿಟ್ಟರೆ ಬೆಳೆಗೆ ಸುಳಿ ಸುಡುವ ಇಲ್ಲವೇ ತಿನ್ನುವ ರೋಗ ಬರುತ್ತದೆ’ ಎಂಬ ಖಚಿತ ನಿರೀಕ್ಷೆ ಅವರದ್ದು. ಅದಕ್ಕೆ ಮದ್ದು ಸುರಿಯಬೇಕು. ಇವರ ಪ್ರಕಾರ– ‘ಬೆಳೆಗೆ ಯಾವುದೇ ರೋಗ ಬಂದರೂ ಪ್ರತೀ ಎಕರೆಗೆ ಕಾಲು ಲೀಟರ್‌ ಎಣ್ಣೆ ಸಾಕು’. ಇದೇ ಸಾಲಿನಲ್ಲಿ ಮುಂದೆ ಸಾಗಿದರೆ ಭತ್ತದ ಕಣಜ ಗಂಗಾವತಿಯಲ್ಲಿ ಎಣ್ಣೆಯ ಲೆಕ್ಕ ಕೇಳುವುದೇ ಬೇಡ. ನೂರಾರು ಎಕರೆ ಇರುವ ಜಮೀನಿಗೆ ಅಷ್ಟೇ ಲೀಟರ್‌ ಪ್ರಮಾಣದ ಕೀಟನಾಶಕದ ಹೊಳೆ ಹರಿಯುತ್ತದೆ. ಸಾಲದ್ದಕ್ಕೆ ರಾಸಾಯನಿಕ ಗೊಬ್ಬರಗಳು ಬೀಳುತ್ತವೆ.

ಜೀವ ತೆಗೆಯಲೂ ಅದೇ ಎಣ್ಣೆ
ಭೂಮಿ ಸಂಪೂರ್ಣವಾಗಿ ರಾಸಾಯನಿಕಭರಿತವಾಗಿದೆ. ಯಾವ ಪ್ರಮಾಣದಲ್ಲಿದೆ? ಏನು ಎತ್ತ ಎಂಬುದರ ಲೆಕ್ಕ ಇಟ್ಟವರಿಲ್ಲ. ಊರಿನಲ್ಲಿ ಕೀಟನಾಶಕ ಮಾರುವವನೇ ರೈತರ ಪಾಲಿನ ಕೃಷಿ ಧನ್ವಂತರಿ. ಬೆಳೆ ಕೈಕೊಟ್ಟು ನಷ್ಟಕ್ಕೊಳಗಾದರೆ ಅದೇ ‘ಎಣ್ಣೆ’ ಹೊಟ್ಟೆ ಸೇರುತ್ತದೆ. ಜೀವ ತೆಗೆಯುತ್ತದೆ.

ವಿಷದ ಹೊಳೆಯೇ ಹರಿಯಿತು...
‘ಭತ್ತದ ಬೆಂಕಿರೋಗಕ್ಕೆ ಟ್ರೈಸೈಕ್ಲೋಝೋಲ್‌ ಅನ್ನು 10 ಲೀಟರ್‌ ನೀರಿಗೆ 6 ಗ್ರಾಂನಷ್ಟು ಬಳಸಬೇಕು. ಅದೇ ರೀತಿ ಐಸೋಪ್ರೋಥಿಯೋಲೆನ್‌ ಎಂಬ ಔಷಧವನ್ನು 10 ಲೀಟರ್‌ ನೀರಿಗೆ 15 ಮಿಲಿಲೀಟರ್‌ನಷ್ಟು ಬಳಸಬೇಕು. ಅರಿವಿಲ್ಲದ ರೈತರು ಇದೆಲ್ಲವನ್ನೂ ವಿಪರೀತ ಬಳಸಿದ ಕಾರಣ ಅಕ್ಕಿಯಲ್ಲಿ ಕೀಟನಾಶಕದ ಶೇಷಾಂಶ ಉಳಿದಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ. ಪಾಟೀಲ ಹೇಳುತ್ತಾರೆ.

ಕೀಟನಾಶಕದ ಅಂಶ ಅಕ್ಕಿಯಲ್ಲಿ ಉಳಿಯದಂತೆ ಎಚ್ಚರ ವಹಿಸಬೇಕು ಮತ್ತು ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಬಿ.ಕೆ. ಶ್ರೀವಾಸ್ತವ ಅವರು ರಾಜ್ಯ ಕೃಷಿ ಮಿಷನ್‌ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಕೃಷಿ ನಿರ್ವಹಣಾ ಸಂಸ್ಥೆಯು ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳಿಗೆ ಇದೇ ವಿಷಯ ಉಲ್ಲೇಖಿಸಿ ಪತ್ರ ಬರೆದಿದೆ. ಬೆಂಕಿರೋಗದ ನಿಯಂತ್ರಣಕ್ಕೆಂದು ಸಿಂಪಡಿಸಿದ ಶಿಲೀಂಧ್ರನಾಶಕಗಳನ್ನು ವಿಪರೀತ ಪ್ರಮಾಣದಲ್ಲಿ ಬಳಸಿರುವುದೇ ಶೇಷಾಂಶ ಉಳಿಯಲು ಕಾರಣ ಎಂದು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಅಭಿಪ್ರಾಯಪಟ್ಟಿದೆ.

ಯುರೋಪ್‌ ಒಕ್ಕೂಟದ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವಾಗಬೇಕಾದರೆ ಟ್ರೈ ಸೈಕ್ಲೋಝೋಲ್‌ ಶೇಷಾಂಶ ಪ್ರತೀ ಕೆ.ಜಿಯಲ್ಲಿ 0.01 ಮಿಲಿ ಗ್ರಾಂ ಮೀರಬಾರದು. ಅಮೆರಿಕದಲ್ಲಿ ಐಸೋಪ್ರೋಥಿಯೋಲೆನ್‌ನ ಶೇಷಾಂಶ ಪ್ರತೀ ಕೆ.ಜಿಗೆ 0.01 ಮಿಲಿ ಗ್ರಾಂ ಮೀರಬಾರದು.

ಮೆಣಸಿನಕಾಯಿಗೆ ಎಣ್ಣೆಯದೇ ಘಾಟು...
ವಿದೇಶದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ನಿರ್ಬಂಧಕ್ಕೊಳಗಾದ ಬಗ್ಗೆ ರೈತರಿಗೆ ಸುಳಿವು ಸಿಗುವುದಕ್ಕೂ ಮೊದಲು ದಲಾಲರು ಇದನ್ನು ನಗದೀಕರಿಸಿಕೊಂಡಿದ್ದಾರೆ. ಕೊಪ್ಪಳ ತಾಲ್ಲೂಕು ಹನಕುಂಟಿಯ ರೈತ ಮುರಳಿರಾವ್‌ ಆ ಕುರಿತು ತಮ್ಮ ಅನುಭವ ಬಿಚ್ಚಿಟ್ಟರು. ‘ಪ್ರತಿವರ್ಷ ಮೆಣನಕಾಯಿಗೆ ಕ್ವಿಂಟಲ್‌ಗೆ ₹ 10 ಸಾವಿರದಿಂದ 12 ಸಾವಿರದವರೆಗೆ ಧಾರಣೆ ಇರುತ್ತಿತ್ತು. ಈ ಬಾರಿ ಅದು ₹ 6,500ರವರೆಗೆ ಇಳಿದಿದೆ. ಏಕೆ ಎಂದು ಬ್ಯಾಡಗಿ ಮಾರುಕಟ್ಟೆಯಲ್ಲಿ ಕೇಳಿದೆ. ಫಾರಿನ್‌ಗೆ ಮಾಲು ಹೋಗೋದು ನಿಂತುಬಿಟ್ಟಿದೆ. ಹಾಗಾಗಿ ಧಾರಣೆ ಇಲ್ಲವಂತೆ. ಅವರು ಹೇಳಿದ ದರಕ್ಕೆ ಕೊಡುವುದಾದರೆ ಕೊಡಿ. ಇಲ್ಲವಾದರೆ ಮಾಲು ವಾಪಸ್‌ ಒಯ್ಯಿರಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ’ ಎಂದು ಅಸಹಾಯಕತೆ ತೋಡಿಕೊಂಡರು.

‘ನೀವೇ ಹೇಳಿ. ಎಣ್ಣೆ ಇಲ್ಲದೆ ಇಂದು ಯಾವುದಾದರೂ ಬೆಳೆ ಬೆಳೆಯೋದು ಸಾಧ್ಯವೇ? ಈಗ ಬಾಧಿಸುವ ರೋಗ, ಕಡಿಮೆಯಾಗುವ ಇಳುವರಿ ಇಂಥ ಸಮಸ್ಯೆಗಳಿಗೆ ಎಣ್ಣೆ ಬಿಟ್ಟರೆ ಪರಿಹಾರವಿದೆಯೇ’ ಎಂದು ಪ್ರಶ್ನಿಸಿದರು.

ಮೆಣಸಿನಕಾಯಿ ವಹಿವಾಟಿನ ಪ್ರಧಾನ ಕೇಂದ್ರ ಬ್ಯಾಡಗಿಯ ರಫ್ತು ಉದ್ಯಮಿ ಜಗದೀಶಗೌಡ ಪಾಟೀಲ್‌ ಅವರು ಒಟ್ಟಾರೆ ಮೆಣಸಿನಕಾಯಿ ಕೃಷಿ ವ್ಯವಸ್ಥೆ ಬಗ್ಗೆ ಅಸಹಾಯಕತೆ, ಬೇಸರ ವ್ಯಕ್ತಪಡಿಸಿದರು. ‘ನಮ್ಮ ಮೆಣಸಿನಕಾಯಿಗೆ ಮಲೇಷ್ಯಾ ಮತ್ತು ವಿಯೆಟ್ನಾಂನಲ್ಲಿ ನಿರ್ಬಂಧ ಹೇರಲಾಗಿದೆ. ಏಕೆಂದರೆ ಮೊದಲೇ ಗುಣಮಟ್ಟ ಪರಿಶೀಲಿಸಿ ಕಳುಹಿಸುವ ಕಟ್ಟುನಿಟ್ಟಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಸಣ್ಣ ಲೋಪ ಕಂಡರೂ ವಿದೇಶಿ ಮಾರುಕಟ್ಟೆಗಳು ಮಾಲು ತಿರಸ್ಕರಿಸಿಬಿಡುತ್ತವೆ. ಇನ್ನು ಯುರೋಪ್‌ ಒಕ್ಕೂಟ ಮತ್ತು ಜಪಾನ್‌ನಲ್ಲಿ ಆಹಾರಪದಾರ್ಥಗಳ ಗುಣಮಟ್ಟ ಪರಿಶೀಲನೆ ಬಹಳ ಕಟ್ಟುನಿಟ್ಟಾಗಿ ನಡೆಯುತ್ತದೆ. ಈ ಹಿಂದೆಯೂ ಕೆಲವು ರಾಸಾಯನಿಕ ಅಂಶಗಳಿದ್ದ ಕಾರಣಕ್ಕೆ ಮೆಣಸಿನಕಾಯಿ ತಿರಸ್ಕರಿಸಿದ್ದ ಪ್ರಸಂಗ ನಡೆದಿತ್ತು. ಈಗ ಕಾರ್ಬೋಫ್ಯುರಾನ್‌ ಸರದಿ’.

ಈಗ ಸಾವಯವ ಉತ್ಪನ್ನದ ಕಡೆ ಒಲವು!
ಜಗದೀಶಗೌಡ ಮಾತು ಮುಂದುವರಿಸಿದರು. ‘ನೋಡಿ, ಈ ರಸಗೊಬ್ಬರ, ಕೀಟನಾಶಕಗಳನ್ನು ನಮ್ಮ ದೇಶಕ್ಕೆ ಪರಿಚಯಿಸಿದ್ದೇ ಅಮೆರಿಕದ ಕಂಪನಿಗಳು. ಈಗ ಅವರೇ ‘ನಮಗೆ ಸಾವಯವ ಉತ್ಪನ್ನಗಳು ಬೇಕು’ ಅನ್ನುತ್ತಿದ್ದಾರೆ. ವಿಪರೀತ ಕೀಟನಾಶಕ, ರಸಗೊಬ್ಬರ ಬಳಸಿ ನಮ್ಮ ಭೂಮಿ ಹಾಳಾಗಿದೆ. ಅದನ್ನು ಬಳಸದೇ ಬೆಳೆ ತೆಗೆಯುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿಗೆ ರೈತರು ತಲುಪಿದ್ದಾರೆ. ಈಗ ಸಾವಯವ ಬೇಕು ಎಂದರೆ ಏನು ಮಾಡಲಿ? ಯಾರಿಗೆ ತಿಳಿಹೇಳಬೇಕು? ಏಕಬೆಳೆ ಪದ್ಧತಿ ಅನುಸರಿಸಿದ ಪರಿಣಾಮ ಬಳ್ಳಾರಿ ಭಾಗದಲ್ಲಿ ಮೆಣಸಿನಕಾಯಿಗೆ ವೈರಲ್‌ ಕಾಯಿಲೆ ಬಂದಿದೆ. ಮೊದಲು ಇದೆಲ್ಲಾ ಮನುಷ್ಯರಿಗಷ್ಟೇ ಬರುತ್ತಿತ್ತು. ರೈತರ ಮನೋಭಾವವನ್ನು ವ್ಯಾಪಕವಾಗಿ ಬದಲಾವಣೆ ಮಾಡುವುದು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ.

‘ಬ್ಯಾಡಗಿ ಮೆಣಸಿನಕಾಯಿ ಏಷ್ಯಾದಲ್ಲೇ ವಿಶೇಷವಾದ ತಳಿ. ಈಗ ಅದರ ಜಾಗವನ್ನು ಹೈಬ್ರಿಡ್‌ ತಳಿ ಆಕ್ರಮಿಸುತ್ತಿದೆ. ಸರ್ಕಾರ ಈ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ಬ್ಯಾಡಗಿ ಮೆಣಸಿನಕಾಯಿ ಎಂಬ ವೈವಿಧ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಎಂ.ಬಿ.ಪಾಟೀಲ್‌ ಅವರು ಮೆಣಸಿನಕಾಯಿ ಕಥೆಯನ್ನು ವಿವರಿಸಿದರು. ‘ರಾಸಾಯನಿಕ ಬಳಸದ ಶುದ್ಧವಾದ ಕೆಂಪುಮೆಣಸಿನಕಾಯಿಯನ್ನು ಜಜ್ಜಿದರೆ ಸಾಕು ಜೆಲ್‌ನಂಥ ಪದಾರ್ಥ ಬರುತ್ತದೆ. ಅದರ ಚಟ್ನಿ ಸವಿಯುವುದೇ ಅದ್ಭುತ ಅನುಭವ. ಮಾತ್ರವಲ್ಲ ಹೊಟ್ಟೆ ಉರಿ, ಅಜೀರ್ಣದಂಥ ಸಮಸ್ಯೆ ಕಾಣಿಸದು. ಆ ಸ್ವಾದ ಮಾರುಕಟ್ಟೆಯಲ್ಲಿ ಸಿಗುವ ಖಾರದ ಪುಡಿಯಲ್ಲಿ, ಮೆಣಸಿನಲ್ಲಿ ಇಲ್ಲ’.

ಎಣ್ಣೆ ಅಂಗಡಿ ಮುಂದೆ...
ಕೀಟನಾಶಕ ಮಾರಾಟದ ಅಂಗಡಿಗೆ ಬರುವ ರೈತರ ಮನಸ್ಸಿನಲ್ಲಿ ಬೆಳೆಗಿರುವ ಸಮಸ್ಯೆಯಷ್ಟೇ ಮುಖ್ಯವಲ್ಲ. ಬಾಟಲಿಯ ಆಕರ್ಷಣೆ, ದುಬಾರಿ ಬೆಲೆ, ಕಮಟು ವಾಸನೆ... ಇವೇ ಅದರ ಗುಣಮಟ್ಟ ನಿರ್ಧರಿಸುವ ಪ್ರಧಾನ ಅಂಶಗಳಾಗಿ ಗೋಚರಿಸುತ್ತವೆ. ರೈತರನ್ನು ಆಕರ್ಷಿಸಲು ಹೊಲಗಳ ಬದಿಯ ಮರ, ವಿದ್ಯುತ್‌ ಕಂಬ, ಬಸ್‌ ನಿಲ್ದಾಣದ ಗೋಡೆ, ಗೂಡಂಗಡಿಯ ತಡಿಕೆಯ ಮೇಲೆ ಬಗೆಬಗೆಯ ಕೀಟನಾಶಕಗಳ ಆಕರ್ಷಕ ಜಾಹೀರಾತುಗಳು ಕಣ್ಣಿಗೆ ರಾಚುತ್ತವೆ. ಸಣ್ಣ ವಾಹನಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಕೀಟನಾಶಕ ಉತ್ಪನ್ನಗಳ ಬಗ್ಗೆ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರವನ್ನೂ ಮಾಡಲಾಗುತ್ತದೆ.

ಕಾರಟಗಿ ಸಮೀಪ ಬೂದಗುಂಪಾದ ವೀರಭದ್ರೇಶ್ವರ ಟ್ರೇಡರ್ಸ್‌ನ ಸಂಗಮೇಶಗೌಡ ಪೊಲೀಸ್ ಪಾಟೀಲ್‌ ಅವರ ಪ್ರಕಾರ, ‘ಗೊಬ್ಬರದ ವ್ಯಾಪಾರಿಗಳು ಲಾಭವೊಂದನ್ನೇ ನೋಡದೆ, ರೈತರ ಪಾಲಿಗೆ ಬೆಳೆ ವೈದ್ಯರಂತೆ ಕಾರ್ಯನಿರ್ವಹಿಸಬೇಕು. ನಮ್ಮಲ್ಲಿ ಬರುವವರಲ್ಲಿ ಶೇ 10ರಷ್ಟು ರೈತರು ತಾವೇ ನಿರ್ದಿಷ್ಟ ಔಷಧ ಕೇಳಿ ಬಳಸುತ್ತಾರೆ. ಉಳಿದವರಿಗೆ ನಾವೇ ಸಲಹೆ ನೀಡುತ್ತೇವೆ. ಭತ್ತದ ಬೆಳೆಗೆ ದ್ವಾಮಿ (ಹುಳು, ನುಸಿ) ಕಾಟ ಅಧಿಕ. ಕ್ರಿಮಿನಾಶಕ ಸಿಂಪಡಿಸಿದ 5 ದಿನದ ಬಳಿಕ ಅದರ ಪರಿಣಾಮ ಆಗುತ್ತದೆ. ಆದರೆ ಅಲ್ಲಿಯವರೆಗೆ ಕಾಯಲು ರೈತರು ಸಿದ್ಧರಿಲ್ಲ. ಅದರ ಮೇಲೆ ಮರು ಸಿಂಪಡಣೆ ಮಾಡುತ್ತಾರೆ. ರಸಗೊಬ್ಬರಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕೀಟನಾಶಕ ಬಳಕೆಯಾಗುತ್ತದೆ’.

ಯಲಬುರ್ಗಾ ತಾಲ್ಲೂಕು ಕುದುರಿಮೋತಿ- ಮಂಗಳೂರು ಸಮೀಪ ಬಸವರಾಜ್‌ ಎಂಬುವರು ಮಾತಿಗೆ ಸಿಕ್ಕಿದರು. ಅವರೀಗ ನರ್ಸರಿ ನಡೆಸುತ್ತಿದ್ದಾರೆ. ‘ಸುಮಾರು 10 ವರ್ಷಗಳ ಹಿಂದೆ ನಾನೂ ಒಂದು ಕೀಟನಾಶಕ ಕಂಪನಿಯ ಮಾರಾಟ ಪ್ರತಿನಿಧಿಯಾಗಿದ್ದೆ. ನಮ್ಮ ಕಂಪನಿಯ ಉತ್ಪನ್ನದ ಮಾರಾಟ ಚೆನ್ನಾಗಿಯೇ ಇತ್ತು. ಕಂಪನಿ ನನಗೆ ಓಡಾಡಲು ಜೀಪು, ಒಳ್ಳೆಯ ಸಂಬಳ ಎಲ್ಲವನ್ನೂ ನೀಡಿತು. ವೈಯಕ್ತಿಕವಾಗಿ ನನ್ನ ಬದುಕು ಚೆನ್ನಾಗಿಯೇ ಇತ್ತು ಅನ್ನಿ. ಆದರೆ, ವಿನಾಕಾರಣ ರೈತರಿಗೆ ಕೀಟನಾಶಕ ಬಳಸುವಂತೆ ಒತ್ತಾಯಿಸಬೇಕಾಗುತ್ತಿತ್ತು. ಅನಗತ್ಯ ಔಷಧಿಗಳನ್ನು ಶಿಫಾರಸು ಮಾಡಬೇಕಿತ್ತು. ಅಧಿಕಾರಿಗಳು, ವ್ಯವಸ್ಥೆಯೊಂದಿಗೆ ‘ವ್ಯವಹಾರ’ ಮಾಡಬೇಕಿತ್ತು. ಇದೆಲ್ಲಾ ಮನಸ್ಸಿಗೆ ಒಲ್ಲದ ಕೆಲಸ ಅನಿಸಿತು. ಬಿಟ್ಟು ಹೊರಬಂದೆ’ ಎಂದು ಕಂಪನಿಗಳ ಅಂತರಾಳ ತೆರೆದಿಟ್ಟರು.

ಇದೇ ವಿಷಯವನ್ನು ಪುಷ್ಟೀಕರಿಸುವಂತೆ ಗದಗ ಹುಲಕೋಟಿಯ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಚ್‌.ಎಲ್‌. ಹಿರೇಗೌಡರ್‌ ಮಾತನಾಡಿದರು. ‘ಬಿತ್ತನೆ ಬೀಜ ಪೂರೈಸಿದ ಕಂಪನಿಗಳು ತಾವು ಕೊಟ್ಟ ಬೀಜದ ಇಳುವರಿ ಹೆಚ್ಚಳಕ್ಕಾಗಿ ಹೆಚ್ಚು ರಾಸಾಯನಿಕ ಬಳಸಲು ಒತ್ತಡ ಹೇರುತ್ತವೆ. ಮೆಣಸಿನಕಾಯಿಗೆ ವಾರಕ್ಕೆ ಹತ್ತಾರು ಬಾರಿ ಕೀಟನಾಶಕ ಸಿಂಪಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಮಳೆ ಆಧಾರಿತ ಪ್ರದೇಶದಲ್ಲಿ ಕೀಟನಾಶಕ ಸಿಂಪಡಣೆ ಪ್ರಮಾಣ ಕಡಿಮೆ ಇದೆ’ ಎನ್ನುತ್ತಾರೆ.

ರೈತರ ಮುಗ್ಧತೆ, ಕೀಟನಾಶಕ ಕಂಪನಿಗಳ ಲಾಭಕೋರತನ, ಮಾರಾಟ ಪ್ರತಿನಿಧಿಗಳಿಗೆ ಕೊಡುವ ಗುರಿ ನಿಗದಿ (ಟಾರ್ಗೆಟ್‌), ಸಮರ್ಪಕ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು... ಈ ಎಲ್ಲ ಅಂಶಗಳು ಟನ್‌ಗಟ್ಟಲೆ ಕೀಟನಾಶಕಗಳು ಭೂಮಿ ಸೇರಲು ಕಾರಣವಾಗಿವೆ.

‘ಕೀಟನಾಶಕದ ಕಾವನ್ನು ಮೀರಿ ಬೆಳೆಯುವ ಶಕ್ತಿಯನ್ನು ಕೀಟಗಳು ಬೆಳೆಸಿಕೊಂಡಿವೆ. ವಿಷದ ತೀವ್ರತೆ ನಿಭಾಯಿಸುವಲ್ಲಿಯೇ ಸಸ್ಯ ತನ್ನ ಶಕ್ತಿ ವ್ಯಯಿಸುತ್ತದೆ. ಅಲ್ಲೂ ಉಳಿದದ್ದು ಫಸಲಿಗೆ ಸಹಜವಾಗಿ ಸೇರುತ್ತದೆ. ಮುಂದೆ ಅದು ಸೇರಬೇಕಾದದ್ದು ನಮ್ಮ ದೇಹವನ್ನೇ’ ಎಂದು ಡಾ. ಎಂ.ಬಿ. ಪಾಟೀಲ್‌ ವಿವರಿಸಿದರು.

ಡೀಲರ್‌ಗಳಿಗೂ ಬಂತು ನಿಯಮ
ಕೀಟನಾಶಕ ಡೀಲರ್‌ ಆಗಬೇಕಾದರೆ ಸಾಮಾನ್ಯ ಉದ್ಯಮವೊಂದನ್ನು ನೋಂದಾಯಿಸುವ ರೀತಿಯಲ್ಲೇ ಸರಳವಾದ ಅರ್ಜಿ ನಮೂನೆ ಸಲ್ಲಿಸಿದರೆ ಇಲ್ಲಿಯವರೆಗೆ ಸಾಕಿತ್ತು. ಮುಂದೆ ಈ ನಿಯಮ ಕಠಿಣವಾಗಿರಲಿದೆ.

2019ರ ಜನವರಿ 31ರ ಒಳಗೆ ಈಗಾಗಲೇ ಇರುವ ಕೀಟನಾಶಕ, ರಸಗೊಬ್ಬರ, ಕೃಷಿ ಪೂರಕ ಸಾಮಗ್ರಿಗಳ ಡೀಲರ್‌ಗಳು 48 ದಿನಗಳ ಡಿಪ್ಲೊಮಾ ಕೋರ್ಸನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅವರ ಪರವಾನಗಿ ನವೀಕರಣಗೊಳ್ಳುವುದಿಲ್ಲ. ಹೊಸದಾಗಿ ಡೀಲರ್‌ಗಳಾಗಬಯಸುವವರು ಕೃಷಿ ವಿಜ್ಞಾನದಲ್ಲಿ ಬಿಎಸ್‌ಸಿ, ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ, ರಸಾಯನ ಶಾಸ್ತ್ರ, ಜೀವರಸಾಯನಶಾಸ್ತ್ರ ಅಥವಾ ಸಸ್ಯಶಾಸ್ತ್ರದಲ್ಲಿ ಪದವಿ ಹೊಂದಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ.  ಹೊಸ ಕ್ರಮದಿಂದ ಕೀಟನಾಶಕ ಮಾರಾಟ ಕ್ಷೇತ್ರದಲ್ಲಿ ಅಲ್ಪ ಬದಲಾವಣೆಯ ನಿರೀಕ್ಷೆ ಇದೆ. ಆದರೆ, ರೈತರ ಮನೋಭಾವ ತಿದ್ದುವ ಕೆಲಸ ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಇಲ್ಲಿ ಚರ್ಚಿಸಿರುವುದು ಭತ್ತ ಮತ್ತು ಮೆಣಸಿನಕಾಯಿ ಮಾತ್ರ. ನಾವು ಬಳಸುವ ಬಹುಪಾಲು ಕೃಷಿ ಪದಾರ್ಥಗಳು ವಿಷಮಯವಾಗಿವೆ ಎಂಬುದನ್ನು ಕೃಷಿ ವಿಜ್ಞಾನಿಗಳೇ ಅಸಹಾಯಕತೆಯಿಂದ ಒಪ್ಪಿಕೊಳ್ಳುತ್ತಾರೆ. ರಫ್ತಾದ ಪದಾರ್ಥಗಳು ತಿರಸ್ಕೃತಗೊಂಡರೆ ಮರಳಿ ನಮ್ಮ ತಟ್ಟೆಗೇ ಬರುತ್ತವೆ. ನಾವು ಮಾಡಿದ್ದನ್ನು ನಾವೇ ಉಣ್ಣಬೇಕಾದ ವಾಸ್ತವ ನಮ್ಮ ಮುಂದಿದೆ.
****
ಏನಿದು ಗರಿಷ್ಠ ಶೇಷಾಂಶ?
ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಕಂಡು ಬರುವ ಕೀಟನಾಶಕ ಅಂಶವೇ ‘ಶೇಷಾಂಶ’. ಅಕ್ಕಿ ಸೇವನೆಗೆ ಯೋಗ್ಯವೆನಿಸಬೇಕಾದರೆ ಅದರಲ್ಲಿ ಇರಬಹುದಾದ ಕೀಟನಾಶಕದ ಗರಿಷ್ಠ ಪ್ರಮಾಣವೇ ‘ಗರಿಷ್ಠ ಶೇಷಾಂಶ’. ಉದಾಹರಣೆಗೆ ಪ್ರತೀ ಕೆ.ಜಿ ಅಕ್ಕಿಯಲ್ಲಿ 0.01 ಮಿಲಿಗ್ರಾಂನಷ್ಟು ಕೀಟನಾಶಕದ ಅಂಶ ಉಳಿದಿದ್ದರೆ ಅದು ಕೀಟನಾಶಕದ ಗರಿಷ್ಠ ಶೇಷಾಂಶ. ಶೇಷಾಂಶ ಇರಲೇಬಾರದು ಅಥವಾ ಅದಕ್ಕಿಂತಲೂ ಕಡಿಮೆ ಇರಬೇಕು. ವಿದೇಶದ ಪ್ರಯೋಗಾಲಯಗಳ ಮಾನದಂಡದ ಪ್ರಮಾಣಕ್ಕಿಂತ ಶೇಷಾಂಶ ಹೆಚ್ಚು ಇದ್ದರೆ ಅಂತಹ ಅಕ್ಕಿಯ ಸೇವನೆ ಹಾನಿಕಾರಕ ಎಂದು ವಿಜ್ಞಾನಿಗಳು ಹೇಳುತ್ತಾರೆ.
***
ಕಾರ್ಬೋಫ್ಯುರಾನ್‌ ಪರಿಣಾಮವೇನು?
ಕಾರ್ಬೋಫ್ಯುರಾನ್‌ ಹಾಗೂ ಟ್ರೈಸೈಕ್ಲೋಝೋಲ್‌ ಮಾನವ ದೇಹ ಸೇರಿದರೆ ತೂಕ ಗಣನೀಯ ಇಳಿಕೆಯಾಗುವುದು, ನಿರ್ವೀರ್ಯತೆ ಅಥವಾ ಸಂತಾನೋತ್ಪತ್ತಿ ಸಾಮರ್ಥ್ಯ ಇಲ್ಲವಾಗುವುದು, ಟೆಸ್ಟೋಸ್ಟಿರಾನ್‌ ಹಾರ್ಮೋನ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ ಎಂದು 2008ರಲ್ಲಿ ಪ್ರಕಟವಾದ ಜರ್ನಲ್‌ ಆಫ್‌ ಎನ್ವಿರಾನ್‌ಮೆಂಟಲ್‌ ಸೈನ್ಸ್‌ ಆಂಡ್ ಹೆಲ್ತ್‌ನ ಕೀಟನಾಶಕಗಳು, ಆಹಾರ ಕಲಬೆರಕೆ ಮತ್ತು ಕೃಷಿ ತ್ಯಾಜ್ಯಗಳು ಲೇಖನದಲ್ಲಿ ಹೇಳಲಾಗಿದೆ.

ಐಸೋಪ್ರೋಥಿಯೋಲೆನ್‌ ಮಾನವ ದೇಹ ಸೇರಿದರೆ ಭ್ರೂಣದ ತೂಕ ಕಡಿಮೆಯಾಗುವುದು, ಮೂಳೆಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ, ಶ್ವಾಸಕೋಶದ ಕಾರ್ಯಚಟುವಟಿಕೆ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಇದೇ ರಾಸಾಯನಿಕ ಕುರಿತು ಪ್ರಕಟಿಸಲಾದ ಅಮೆರಿಕದ ಸಂಶೋಧನಾ ಲೇಖನವೊಂದು ಹೇಳಿದೆ.
***
ಯುರೋಪ್‌ ಒಕ್ಕೂಟ ಸಹಿತ ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿರುವ ಕೀಟನಾಶಕಗಳು
(* ಭಾರತದಲ್ಲಿ ಇನ್ನೂ ಬಳಕೆಯಲ್ಲಿವೆ)

ಕೀಟನಾಶಕ ನಿಷೇಧಿಸಿರುವ ದೇಶಗಳ ಸಂಖ್ಯೆ

* ಮೋನೋಕ್ರೋಟೋಫಾಸ್‌  60 ದೇಶಗಳು
* ಟ್ರೈಝಾಫಾಸ್‌                 40
* ಫಾಸ್ಫಾಮಿಡಾನ್‌              49
* ಕಾರ್ಬೋಫ್ಯುರಾನ್‌           49
* ಮಿಥೈಲ್‌ ಪಾರಾಥಿಯಾನ್‌  59
* ಫೋರೇಟ್‌                     37
ಆಧಾರ: ಪೆಸ್ಟಿಸೈಡ್‌ ಆಕ್ಷನ್‌ ನೆಟ್‌ವರ್ಕ್‌ 2017ರಲ್ಲಿ ಪ್ರಕಟಿಸಿದ ನಿಷೇಧಿತ ಕೀಟನಾಶಕಗಳ ಕ್ರೋಡೀಕೃತ ಪಟ್ಟಿ
***
4.9 ಬಿಲಿಯನ್‌ ಡಾಲರ್‌
 ಭಾರತದ ಕೀಟನಾಶಕ ಮಾರುಕಟ್ಟೆಯ ವಹಿವಾಟು ( ಅಮೆರಿಕ, ಚೀನಾ, ಜಪಾನ್‌ ನಂತರದ ಸ್ಥಾನ ಭಾರತದ್ದು)
***
40,00471.67 ಮಿಲಿಯನ್‌ ಟನ್‌
2016- 17ರಲ್ಲಿ ಭಾರತದಿಂದ  ರಫ್ತಾದ ಬಾಸ್ಮತಿ ಅಕ್ಕಿ
21,604.58 ಕೋಟಿ ವಹಿವಾಟು
* ಆಧಾರ: ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT