ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣೇಶರ ಹಾಸ್ಯ ಚಟಾಕಿ: ನಕ್ಕು ಸುಸ್ತಾದ ಪ್ರೇಕ್ಷಕರು

‘ಆಯಿಷ್‌ ಆವಾಜ್‌’ ಸಾಂಸ್ಕೃತಿಕ ಉತ್ಸವ
Last Updated 17 ಮಾರ್ಚ್ 2018, 7:11 IST
ಅಕ್ಷರ ಗಾತ್ರ

ಮೈಸೂರು: ಜುಬ್ಬ–ಪೈಜಾಮು ತೊಟ್ಟು, ನೀಟಾಗಿ ಕ್ರಾಪು ತೆಗೆದ ಕೂದಲು, ಉತ್ತರ ಕರ್ನಾಟಕದ ಶೈಲಿಯಲ್ಲಿ ಟಿ.ಪಿ.ಕೈಲಾಸಂ ಮತ್ತು ಬೀಚಿ ಅವರ ಹಾಸ್ಯಭರಿತ ಸಾಹಿತ್ಯದ ಧಾಟಿಯಲ್ಲಿ ಗಂಗಾವತಿಯ ಪ್ರಣೇಶ್‌ ಅವರು ನಿರರ್ಗಳವಾಗಿ ಮಾತನಾಡುತ್ತಿದ್ದರೆ ಇತ್ತ ಪ್ರೇಕ್ಷಕರು ಮನಸಾರೆ ನಕ್ಕುನಕ್ಕು ಹಾಸ್ಯದ ಹೊನಲಿನಲ್ಲಿ ತೇಲಿದರು.

ನಗರದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಆಯಿಷ್ ಆವಾಜ್‌’ ಅಂತರಕಾಲೇಜು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಈ ದೃಶ್ಯಕ್ಕೆ ವೇದಿಕೆ ಸಾಕ್ಷಿಯಾಯಿತು.

ಆಕಾಶದಲ್ಲಿ ಮೋಡ ಮುಸುಕಿದ್ದರಿಂದ ಎಲ್ಲಿ ಮಳೆ ಬಂದು ಪ್ರಾಣೇಶ್‌ ಅವರ ಹಾಸ್ಯ ಕೇಳದಂತೆ ಅಡ್ಡಿಪಡಿಸುವುದೊ ಎಂಬ ಆತಂಕ ಪ್ರೇಕ್ಷಕರಲ್ಲಿ ಮನೆಮಾಡಿತ್ತು. ಆದರೆ, ಪ್ರಾಣೇಶ್ ಮಳೆಯ ನಡುವೆಯೂ ಸುಂದರ ವೇದಿಕೆ ಸಜ್ಜುಗೊಳಿಸಿರುವವರನ್ನು ಮನಸಾರೆ ಹೊಗಳಿ, ‘ಇಂದಿನ ಮಳೆ ನಮಗೆ ವರದಕ್ಷಿಣೆ ಇದ್ದಂತೆ’ ಎಂದು ತಮ್ಮ ಹಾಸ್ಯವನ್ನು ಪ್ರಾರಂಭಿಸಿದರು.

ತುತ್ತು ಕೊಡೋಳು ಬಂದಾಗ.. ಮುತ್ತುಕೊಟ್ಟೋಳ ಮರಿಬೇಡ.. ಎಂಬ ಮಾತೊಂದಿದೆ. ಇದನ್ನು ಸ್ವಲ್ಪ ಬದಲಾಯಿಸಿ, ಲಕ್ಸ್‌ ಹಚ್ಚೋಳು ಬಂದಾಗ.. ವಿಕ್ಸ್‌ ಹಚ್ಚಿದೋಳ ಮರಿಬೇಡ.. ಅಂತ ಆಟೊ ಒಂದರ ಹಿಂದೆ ಬರೆದಿದ್ರು. ಯಾವುದೇ ತತ್ವವನ್ನು ಲೇಟೆಸ್ಟಾಗಿ ಹೇಗೆ ತೆಗೆದುಕೊಳ್ಳುತ್ತಾರೆ ನಮ್ಮ ಜನ. ಬಾಳೆಹಣ್ಣು ತಿಂದರೆ ಮೂಳೆ ಗಟ್ಟಿಯಾಗುತ್ತೆ. ಸಿಪ್ಪೆ ಮೇಲೆ ಕಾಲಿಟ್ಟರೆ ಮೂಳೆ ಮುರಿಯುತ್ತೆ ಎಂಬ ಪ್ರಣೇಶರ ಹಾಸ್ಯ ಚಟಾಕಿಗೆ ಸಭಿಕರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರು.

ಗಾಂಧೀಜಿ ಯಾವಾಗಲೂ ಕುಡಿಯಬೇಡಿ, ಸತ್ಯ ಮಾತನಾಡಿ ಎಂದು ಹಿತವಚನ ಹೇಳುತ್ತಿದ್ದರು. ಇಂದು ಕಾಲ ಬದಲಾಗಿದೆ. ಕುಡಿಯದಿದ್ರೆ ಸತ್ಯ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಭಗವದ್ಗೀತೆ ಮುಟ್ಟಿ ನಾನು ಸತ್ಯವನ್ನೇ ಹೇಳುತ್ತೇನೆಂದು ಸುಳ್ಳು ಹೇಳುತ್ತಾರೆ. ಇವರಿಗೆ 2 ಪೆಗ್‌ ವಿಸ್ಕಿ ಹೊಡೆಸಿದರೆ ಸಾಕು ಸತ್ಯ ಬಾಯಿಬಿಡುತ್ತಾರೆ ಎಂದಾಗ ಸಭೆಯಲ್ಲಿ ನಗುವೋ ನಗು.

ಜನ ನಮ್ಮನ್ನೆ ನೋಡಬೇಕು ಎಂಬ ಆಸೆಯಿಂದ ರಂಗುರಂಗಾಗಿ ರೆಡಿಯಾಗಿ ಯುವತಿಯರು ಹೊರಗಡೆ ಹೋಗುತ್ತಾರೆ. ಬ್ಯೂಟಿ ಪಾರ್ಲರ್‌ಗೆ ಹೋಗುವ ಹುಡುಗಿಯರು ದಯವಿಟ್ಟು ಕೊನೆಯ ತನಕ ಹೋಗಿ. ಆಗ ಮುಖ ಚೆನ್ನಾಗಿ ಹೊಳೆಯುತ್ತದೆ. ಒಂದುವೇಳೆ ನೀವು 4 ದಿನ ಬ್ಯೂಟಿ ಪಾರ್ಲರ್‌ಗೆ ಹೋಗದಿದ್ದರೆ ನಿಮ್ಮ ಮುಖ ಆನೆಯ ಹಿಂಭಾಗದಂತೆ ಕಾಣುತ್ತದೆ ಎಂದು ಕಾಲೆಳೆದರೂ ಹುಡುಗಿಯರು ಮನಸಾರೆ ‘ಗೊಳ್‌’ ಎಂದು ನಕ್ಕರು.

ಆಯಿಷ್ ನಿರ್ದೇಶಕಿ ಎಸ್.ಆರ್.ಸಾವಿತ್ರಿ, ಆಯಿಷ್ ಜಿಮ್ಕಾನ್‌ ಉಪಾಧ್ಯಕ್ಷ ಯು.ಅಜಿತ್ ಕುಮಾರ್‌, ಪ್ರಧಾನ ಕಾರ್ಯದರ್ಶಿ ಕಿಶೋರಕುಮಾರ್ ಇದ್ದರು.

ಮೈಸೂರಲ್ಲಿ ಬುದ್ಧಿಜೀವಿಗಳಿದ್ದಾರೆ
ಮೈಸೂರು ಸ್ವಚ್ಛತೆಯ, ಸುಸಂಸ್ಕೃತ ನಗರಿ. ಇದು ಬೆಂಗಳೂರಿನ ನರಕದಂತಿಲ್ಲ. ಇಲ್ಲಿ ಇರುವವರು ಬುದ್ಧಿಜೀವಿಗಳು. ಇವರು ದಿನವೆಲ್ಲ ಯೋಚಿಸಿ ವಿದ್ವತ್‌ಪೂರ್ಣ, ಪ್ರಬಂಧ ಮಂಡಿಸಿದಂತೆ ಭಾಷಣ ಮಾಡುತ್ತಾರೆ. ನಮ್ಮಂತೆ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ. ಆದರೂ ನನ್ನಂತೆ ಹಾಸ್ಯ ಮಾಡುವವನು ನಿಮಗಿಲ್ಲಿ ಸಿಗದೆ ಇರುವುದಕ್ಕೊ ಏನೊ ಇಷ್ಟು ಜನ ಸೇರಿದ್ದೀರಿ ಎಂದು ತುಂಬಿದ ವೇದಿಕೆ ಕಂಡು ಹೊಗಳಿದರು.

ಹೆಣ್ಣು ಸಣ್ಣದ್ದಕ್ಕೂ ದೊಡ್ಡದ್ದಕ್ಕೂ ಸಂತೋಷ ಪಡುತ್ತಾಳೆ. ಅದೇ ರೀತಿ ಗಂಡಿಗೂ ಜೀವನೋತ್ಸಾಹ ಮುಖ್ಯ. ಜೀವನದ ಪ್ರತಿಕ್ಷಣವನ್ನು ಎಂಜಾಯ್‌ ಮಾಡಬೇಕು. ಸಣ್ಣಸಣ್ಣ ಸಂತೋಷ ಹಂಚಿಕೊಂಡವರು ಆರೋಗ್ಯವಾಗಿರುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT