ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಇಲಾಖೆಯಲ್ಲಿ 25,784 ಸಿಬ್ಬಂದಿ ಕೊರತೆ!

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ 25,784 ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆಯು ಠಾಣೆಗಳ ದೈನಂದಿನ ಕಾರ್ಯವೈಖರಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಇಲಾಖೆಗೆ ಮಂಜೂರಾಗಿರುವ ಪೊಲೀಸ್ ಬಲ 1,06,818. ಆದರೆ, ಸದ್ಯ ಇರುವುದು 81,034 ಸಿಬ್ಬಂದಿ ಮಾತ್ರ. ಅವರಲ್ಲಿ 6,206 ಮಹಿಳಾ ಪೊಲೀಸರು. ಕೆಲವೆಡೆ ಒಬ್ಬ ಇನ್‌ಸ್ಪೆಕ್ಟರ್‌ ಎರಡೆರಡು ಠಾಣೆಗಳ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಕಾನ್‌ಸ್ಟೆಬಲ್ ದರ್ಜೆಯಿಂದ ಪಿಎಸ್‌ಐವರೆಗಿನ ಸಿಬ್ಬಂದಿಯೇ ಇಲಾಖೆಯ ಜೀವಾಳ. ಜನಸಾಮಾನ್ಯರೊಂದಿಗೆ ನೇರ ಒಡನಾಟ ಇಟ್ಟುಕೊಂಡಿರುವ ಈ ವರ್ಗದ ಸಿಬ್ಬಂದಿಯು ಕಾನೂನು ಸುವ್ಯವಸ್ಥೆ ಪಾಲನೆ, ತನಿಖಾ ಕಾರ್ಯ, ಗಣ್ಯ ವ್ಯಕ್ತಿಗಳ ಭದ್ರತೆ, ಗಸ್ತು, ಸಂಚಾರ ನಿರ್ವಹಣೆ, ನ್ಯಾಯಾಲಯ ಕಲಾಪಕ್ಕೆ ಹಾಜರಾಗುವುದು, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಭದ್ರತೆ ಒದಗಿಸುವುದು. ಹೀಗೆ ಠಾಣಾ ಮಟ್ಟದ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಅಂಕಿ ಅಂಶಗಳ ಪ್ರಕಾರ ಈ ಹಂತದ 25,132 ಸಿಬ್ಬಂದಿಯ ಕೊರತೆ ಇದೆ.

ಈ ಸಮಸ್ಯೆಗೆ ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿರುವ ಗೃಹಸಚಿವ ರಾಮಲಿಂಗಾರೆಡ್ಡಿ, ‘ಪ್ರತಿ ವರ್ಷ 2 ಸಾವಿರದಿಂದ 3 ಸಾವಿರ ಪೊಲೀಸರು ನಿವೃತ್ತರಾಗುತ್ತಾರೆ.
ಅದಕ್ಕೆ ತಕ್ಕಂತೆ ಪ್ರತಿ ವರ್ಷವೂ ನೇಮಕಾತಿ ನಡೆಯಲೇಬೇಕು. ಹಿಂದಿನ ಸರ್ಕಾರ ಆ ಕೆಲಸವನ್ನು ಸರಿಯಾಗಿ ಮಾಡಿದ್ದರೆ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ತನ್ನ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಕೇವಲ 11 ಸಾವಿರ ಸಿಬ್ಬಂದಿಯನ್ನು ಇಲಾಖೆಗೆ ಸೇರಿಸಿತ್ತು. ನಮ್ಮ ಅವಧಿಯಲ್ಲಿ 31 ಸಾವಿರ ಅಭ್ಯರ್ಥಿಗಳನ್ನು ನೇಮಕ ಮಾಡಿ, ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿಗೆ ತದ್ವಿರುದ್ಧ: ರಾಷ್ಟ್ರೀಯ ಪೊಲೀಸ್ ಆಯೋಗದ (ಎನ್‌ಪಿಸಿ) ವರದಿ ಪ್ರಕಾರ, ಗ್ರಾಮೀಣ ಭಾಗದಲ್ಲಿ ಠಾಣೆಯೊಂದರ ವ್ಯಾಪ್ತಿ 150 ಕಿ.ಮೀಗಿಂತ ಹೆಚ್ಚಿರಬಾರದು. ಠಾಣೆಯ ವ್ಯಾಪ್ತಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಹೊರ ಠಾಣೆಗಳನ್ನು (ಔಟ್ ಪೋಸ್ಟ್) ತೆರೆಯಬೇಕು. ನಗರ ಪ್ರದೇಶದಲ್ಲಿ ಜನಸಂಖ್ಯೆಯನ್ನು ಮುಖ್ಯ ಮಾನದಂಡವಾಗಿ ಪರಿಗಣಿಸಿ ಠಾಣೆ ಆರಂಭಿಸಬೇಕು. ಅಂದರೆ, ಠಾಣೆಯೊಂದರ ವ್ಯಾಪ್ತಿಯಲ್ಲಿ 60 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರಬಾರದು. ವರ್ಷಕ್ಕೆ 700ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾದರೆ, ಆ ಪ್ರದೇಶದಲ್ಲಿ ಮತ್ತೊಂದು ಠಾಣೆ ಆರಂಭಿಸಬೇಕು.

ಅದೇ ರೀತಿ ಪ್ರಕರಣಗಳ ತನಿಖೆ ಹಾಗೂ ಮೇಲ್ವಿಚಾರಣೆ ವಿಚಾರದಲ್ಲೂ ಆಯೋಗ ಕೆಲ ಸೂಚನೆಗಳನ್ನು ನೀಡಿದೆ. ಎಎಸ್‌ಐ ಅಥವಾ ಎಸ್‌ಐಗಳು ವರ್ಷವೊಂದರಲ್ಲಿ ತನಿಖೆ ಮಾಡಬಹುದಾದ ಪ್ರಕರಣಗಳ ಸಂಖ್ಯೆ 60 ಮೀರಿರಬಾರದು. ಅಂತೆಯೇ ಇನ್‌ಸ್ಪೆಕ್ಟರ್‌ಗಳಿಗೆ 300 ಪ್ರಕರಣಗಳನ್ನು ಮೀರಿರಬಾರದು. ಆದರೆ, ರಾಜ್ಯದಲ್ಲಿ ಆಯೋಗದ ವರದಿಗೆ ತದ್ವಿರುದ್ಧವಾಗಿ ಸಿಬ್ಬಂದಿ ಹೆಚ್ಚಿನ ಪ್ರಕರಣಗಳ ತನಿಖಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಠಾಣೆಗಳ ವ್ಯಾಪ್ತಿ, ಅಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಪ್ರಮಾಣ, ಠಾಣೆ ವ್ಯಾಪ್ತಿಯಲ್ಲಿನ ಜನಸಂಖ್ಯೆ ಎಲ್ಲವೂ ನಿಗದಿತ ಮಿತಿಗಿಂತ ಹೆಚ್ಚಾಗಿಯೇ ಇದೆ ಎನ್ನುತ್ತವೆ ಪೊಲೀಸ್ ಮೂಲಗಳು.

‘ನೈತಿಕ ಮಟ್ಟ ಕುಸಿಯುತ್ತಿದೆ’: ‘ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ, ಅಪರಾಧಗಳ ಪ್ರಮಾಣ, ಕೈಗಾರಿಕೆಗಳು, ಶಾಲೆಗಳ ಸಂಖ್ಯೆ, ಸ್ಥಳೀಯ ಸಮಸ್ಯೆಗಳು, ಜನರ ಸ್ವಭಾವ, ವಾಹನ ಸಂಖ್ಯೆಯಂತಹ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿ ಠಾಣೆಗಳನ್ನು ಆರಂಭಿಸಬೇಕು ಮತ್ತು ಸಿಬ್ಬಂದಿ ನಿಯೋಜನೆ ಮಾಡಬೇಕು. ಮುಂದಿನ ವರ್ಷ ನಿವೃತ್ತರಾಗುವ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ವರ್ಷದ ಮುನ್ನವೇ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು’ ಎಂದು ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್ ಸಲಹೆ ನೀಡಿದರು.

‘ವಿದೇಶಗಳಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 400 ಪೊಲೀಸರು ಇದ್ದಾರೆ. ರಾಜ್ಯದಲ್ಲಿ ಅಷ್ಟು ಜನರ ಕಾವಲಿಗೆ ಇರುವುದು 140 ಪೊಲೀಸರು ಮಾತ್ರ. ಈ ಸಿಬ್ಬಂದಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. 8 ತಾಸು ಕೆಲಸ ಮಾಡಬೇಕಾದ ಸಿಬ್ಬಂದಿ, ಕನಿಷ್ಠ 12 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರದ ರಜೆ, ವಿಶೇಷ ಭತ್ಯೆಗಳು ಅವರಿಗೆ ಕನಸಿನ ಮಾತಾಗಿವೆ. ಕೆಲಸದ ಒತ್ತಡದಿಂದಾಗಿ ಸಿಬ್ಬಂದಿಯ ನೈತಿಕ ಮಟ್ಟ ಕುಸಿದು ಹೋಗಿದೆ’ ಎಂದು ಹೇಳಿದರು.

**

890 ಜನಕ್ಕೆ ಒಬ್ಬ ಪೊಲೀಸ್!

‘ರಾಜ್ಯದ ಜನಸಂಖ್ಯೆ 7 ಕೋಟಿ ಸಮೀಪಿಸುತ್ತಿದ್ದು, 890 ಜನಕ್ಕೆ ಒಬ್ಬ ಪೊಲೀಸ್ ಇದ್ದಾರೆ. ಸಿಬ್ಬಂದಿ ಸಂಖ್ಯೆಯನ್ನು 1.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಎರಡು ವರ್ಷಗಳ ಹಿಂದೆಯೇ ಗೃಹಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದರೆ, ನೇಮಕಾತಿ ಪ್ರಕ್ರಿಯೆ ಮಾತ್ರ ಅಂದುಕೊಂಡಂತೆ ಆಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

**

ಪೊಲೀಸ್ ಇಲಾಖೆಯ ಬಲಾಬಲ

ಹುದ್ದೆ      ಮಂಜೂರಾದ ಸಿಬ್ಬಂದಿ      ಪುರುಷ       ಮಹಿಳೆ       ಒಟ್ಟು ಸಿಬ್ಬಂದಿ         ಖಾಲಿ


ಡಿಜಿಪಿ              6                           5             1                 6                   –


ಎಡಿಜಿಪಿ           20                        17            0                 17                 3

ಐಜಿಪಿ             30                       19             1                 20                 10

ಡಿಐಜಿ             24                        11             1                 12                12

ಎಸ್ಪಿ/ಡಿಸಿಪಿ       266                     161          34                195               70


ಡಿವೈಎಸ್ಪಿ/ಎಸಿಪಿ  671                    472          27                499               172


ಇನ್‌ಸ್ಪೆಕ್ಟರ್        1,605                1,349       52                1,401           204

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT