ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

ರೈತ–ವಿಜ್ಞಾನಿಗಳೊಂದಿಗೆ ಸಂವಾದದ ನೇರ ಪ್ರಸಾರ ವೀಕ್ಷಿಸಿದ ಸಂಸದ ಸಿದ್ದೇಶ್ವರ ಆಗ್ರಹ
Last Updated 19 ಮಾರ್ಚ್ 2018, 10:34 IST
ಅಕ್ಷರ ಗಾತ್ರ

ದಾವಣಗೆರೆ: ಮೆಕ್ಕೆಜೋಳಕ್ಕೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯಿಸಿದರು.

ನವದೆಹಲಿಯಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ರೈತ–ವಿಜ್ಞಾನಿಗಳ ಸಂವಾದ ‘ಕೃಷಿ ಉನ್ನತಿ’ ಕಾರ್ಯಕ್ರಮದ ನೇರ ಪ್ರಸಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಈ ಬೆಳೆಗೆ ಬೆಂಬಲ ಬೆಲೆ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ. ಆದರೆ, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗಲೂ ಆಗಿನ ಯುಪಿಎ ಸರ್ಕಾರ ಮೆಕ್ಕೆಜೋಳ ಬೆಂಬಲ ಬೆಲೆ ಘೋಷಿಸಿರಲಿಲ್ಲ. ಅವಾಗ ಯಡಿಯೂರಪ್ಪ ರಾಜ್ಯ ಸರ್ಕಾರದಿಂದಲೇ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಬಂದರು ಎಂದು ಹೇಳಿದರು.

ಸರ್ಕಾರವೇ ಅಷ್ಟೂ ಮೆಕ್ಕೆಜೋಳವನ್ನು ಖರೀದಿಸಬೇಕಿಲ್ಲ. ಬೆಂಬಲ ಬೆಲೆ ಘೋಷಿಸುವುದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಸ್ಥಿರತೆಗೆ ಬರುತ್ತದೆ. ಇದರಿಂದ ರೈತರಿಗೆ ನಷ್ಟ ತಪ್ಪುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಆತ್ಮಹತ್ಯೆ ಪರಿಹಾರ ಅಲ್ಲ: ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರ ಅಲ್ಲ. ಸಾಲ ಮಾಡಿದರೆ ಅದನ್ನು ತೀರಿಸಲು ಹಲವು ಮಾರ್ಗಗಳಿವೆ. ಧೈರ್ಯದಿಂದಿರಬೇಕು. ಪಕ್ಷದ ಸೂಚನೆಯಂತೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿ ಯಡಿಯೂರಪ್ಪ ಅವರ ಭರವಸೆಯ ಪತ್ರ ನೀಡಲಾಗುತ್ತದೆ ಎಂದು ಹೇಳಿದರು.

ರೈತರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮಣ್ಣು ಆರೋಗ್ಯ ಕಾರ್ಡ್ ನೀಡಿದೆ. ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ಕೊಟ್ಟಿದೆ. ರೈತರ ಆದಾಯ ದ್ವಿಗುಣಗೊಳಿಸಲು ಗುರಿ ನಿಗದಿ‍ಪಡಿಸಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಮಂಡಳಿ ಸದಸ್ಯ ರೇಣಕಾರ್ಯ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಹನುಮಂತಪ್ಪ, ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ.ಮಲ್ಲೇಶಪ್ಪ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಉಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ರವಿ ಅವರೂ ಉಪಸ್ಥಿತರಿದ್ದರು.
**
ಇಸ್ರೇಲ್‌ ಕೃಷಿ ಮಾದರಿ
ಇಸ್ರೇಲ್‌ ದೇಶದಲ್ಲಿ ನೀರು ಮತ್ತು ಭೂಮಿಯ ಒಡೆತನ ಸರ್ಕಾರದ್ದು. ಕೃಷಿಗೆ ಇಂತಿಷ್ಟು ಭೂಮಿ ಮತ್ತು ನೀರನ್ನು ಸರ್ಕಾರವೇ ನೀಡುತ್ತದೆ. ಕುಡಿಯುವ ನೀರನ್ನು ಕೃಷಿಗೆ ಬಳಸುವಂತಿಲ್ಲ. ಸಮುದ್ರದ ನೀರನ್ನು ಶುದ್ಧೀಕರಿಸಿ ಕೃಷಿಗೆ ಬಳಸಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ.ಬಸವನಗೌಡ ಹೇಳಿದರು.

ರೈತರೊಂದಿಗೆ ಇಸ್ರೇಲ್‌ ಪ್ರವಾಸದ ಅನುಭವ ಹಂಚಿಕೊಂಡ ಅವರು, ಆ ದೇಶದಲ್ಲಿ ಶೇ 90ರಷ್ಟು ಕೃಷಿ ಚಟುವಟಿಕೆಗಳು ಯಂತ್ರೋಪಕರಣಗಳಿಂದ ನಡೆಯುತ್ತವೆ. ಹಾಗಾಗಿ, ಅಲ್ಲಿ ಶೇಕಡವಾರು ಕೃಷಿ ಉತ್ಪಾದನೆ ಭಾರತಕ್ಕಿಂತ ಹೆಚ್ಚು ಎಂದು ಉದಾಹರಣೆ ಸಹಿತ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT