ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈವೇಸ್ಟ್‌ ಪ್ಯಾಂಟ್‌ ಧರಿಸಿದಾಗ ನಿಮ್ಮ ಸ್ಟೈಲು ಹೀಗಿರಲಿ

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸೊಂಟದ ಮೂಳೆಯಿಂದ ಮೂರಿಂಚು ಕೆಳಗಿನ ಲೋ ವೇಸ್ಟ್‌ ಪ್ಯಾಂಟುಗಳು ಹೆಣ್ಮಕ್ಕಳ ವಾರ್ಡ್‌ರೋಬ್‌ನ ಮೂಲೆ ಸೇರಿ ಕೆಲವು ವರ್ಷಗಳೇ ಆಗಿವೆ. ಇದೀಗ ಹೊಕ್ಕುಳಿನಿಂದ ನಾಲ್ಕು ಇಂಚು ಮೇಲಕ್ಕೆ ಕೂರುವ ‘ಹೈವೇಸ್ಟ್‌’ ಪ್ಯಾಂಟ್‌ ಜಮಾನ. ಬಗೆ ಬಗೆಯ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವ ಈ ಪ್ಯಾಂಟುಗಳು ಕುಳ್ಳಗಿನವರಿಗೂ, ಎತ್ತರದವರಿಗೂ ಒಪ್ಪುವುದು ವಿಶೇಷ. ಆದರೆ ಇಂತಹ ಪ್ಯಾಂಟು ಧರಿಸುವುದಕ್ಕೂ ಮೊದಲು ಮೇಲಂಗಿ (ಟಾಪ್‌) ಹೇಗಿರಬೇಕು, ಇದಕ್ಕೊಪ್ಪುವ ತೊಡುಗೆಗಳು ಏನೇನು ಎಂಬುದನ್ನು ಅಲಕ್ಷಿಸುವಂತಿಲ್ಲ!

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದರು. ಅವರು ಎಲ್ಲಿಂದ ಎಲ್ಲಿಗೆ ಹೋದರು, ಬಂದರು ಎಂಬುದಕ್ಕಿಂತ ಅವರ ಉಡುಗೆ ತೊಡುಗೆ ಹೆಚ್ಚು ಸುದ್ದಿಯಾಯಿತು. ನೀಲಿ ಬಣ್ಣದ ಹೈ ವೇಸ್ಟ್‌ ಡೆನಿಮ್‌ ಮೇಲೆ ಬಿಳಿ ಸ್ಲೀವ್‌ಲೆಸ್‌ ಟೀ ಶರ್ಟ್‌, ಅದರ ಮೇಲೆ ಹೊದ್ದುಕೊಂಡ ಕಂದು ಬಣ್ಣದ ಜಾಕೆಟ್‌, ಎರಡೂ ಭುಜದ ಮೇಲೆ ಇಳಿಬಿಟ್ಟ ಕೂದಲು, ಮಂಡಿವರೆಗಿನ ಶೂಗಳು, ಬೋಳಾಗಿದ್ದ ಎರಡೂ ಕೈಗಳು, ಬಲಗೈನಲ್ಲಿ ಹಿಡಿದುಕೊಂಡಿದ್ದ ಲೆದರ್‌ ಬ್ಯಾಗ್‌ ಮತ್ತು ದೊಡ್ಡ ಫ್ರೇಮಿನ ಕಪ್ಪು ಕನ್ನಡಕ... ದೀಪಿಕಾ ಅವರ ಆ ನೋಟ, ಹೈವೇಸ್ಟ್‌ ಪ್ಯಾಂಟ್‌ ಜತೆಗೆ ಹೊಂದಿಸಿಕೊಳ್ಳಬಹುದಾದ ತೊಡುಗೆಗಳ ಪಟ್ಟಿಯನ್ನೇ ಪ್ಯಾಷನ್‌ಪ್ರಿಯರ ಮುಂದಿಟ್ಟಿತ್ತು!

ಹೈ ವೇಸ್ಟ್‌ ಪ್ಯಾಂಟು ಅತ್ಯಂತ ಆರಾಮದಾಯಕ. ಯಾಕೆಂದರೆ, ಕೂತಾಗಲೂ ಸೊಂಟದಿಂದ ಜಾರುವ ಪ್ರಮೇಯ ಇರುವುದಿಲ್ಲ. ಹೊಟ್ಟೆಯನ್ನೂ ಮುಚ್ಚಿಕೊಳ್ಳುವ ಕಾರಣ ದೇಹಕ್ಕೆ ಅಂಟಿಕೊಂಡಂತೆ ಇರುತ್ತದೆ. ಸಮರ್ಪಕವಾದ ತೊಡುಗೆಗಳನ್ನೂ ಧರಿಸಿದರೆ ಇಡೀ ದೇಹಕ್ಕೊಂದು ಸರಳ ಮತ್ತು ಅಚ್ಚುಕಟ್ಟು ನೋಟವನ್ನು ನೀಡುತ್ತದೆ.

ಚಪ್ಪಲಿ: ಹೈವೇಸ್ಟ್‌ ಪ್ಯಾಂಟ್‌ ಧರಿಸಿದಾಗ ಸಾಧಾರಣ ಚಪ್ಪಲಿ ಆರಿಸಿಕೊಂಡರೆ ನಿಮ್ಮ ಫ್ಯಾಷನ್‌ಪ್ರಜ್ಞೆ ಸರಿಯಿಲ್ಲ ಎಂದೇ ಅರ್ಥ. ಕಾಲಿನ ಮಣಿಕಟ್ಟಿಗಿಂತ ಮೇಲಿರುವ, ಬೆಲ್ಟ್‌ ವಿನ್ಯಾಸದ ಪಾದರಕ್ಷೆಗಳು, ಆ್ಯಂಕಲ್‌ ಬೂಟ್‌, ನೀ ಲೆಂಗ್ತ್‌ ಬೂಟ್‌ ಈ ಪ್ಯಾಂಟ್‌ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. ಎರಡು ಇಂಚು ಎತ್ತರದ ಹಿಮ್ಮಡಿಯ ಚಪ್ಪಲಿ, ಶೂಗಳಂತೂ ನೋಡುಗರನ್ನು ಕಣ್ಣರಳಿಸುವಂತೆ ಮಾಡುತ್ತವೆ.

ಕೈಗಳಿಗೆ: ಆಧುನಿಕ ನೋಟ ನೀಡುವ ಉಡುಗೆ ಧರಿಸಿದಾಗ ಕೈಗಳು ಬೋಳಾಗಿದ್ದರೂ ಚಂದ, ಸಾಂಪ್ರದಾಯಿಕ ನೋಟವನ್ನು ಬೆರೆಸಿದರೂ ಅಂದ. ಸಣ್ಣ ಕೈಗಡಿಯಾರ ಕಟ್ಟಬಾರದು. ದೊಡ್ಡ ಚೌಕಟ್ಟು ಮತ್ತು ಒಂದು ಇಂಚು ಅಗಲದ ಬೆಲ್ಟ್‌ ಅಥವಾ ಚೈನ್‌ನ ವಾಚ್‌ ಕಟ್ಟಿಕೊಂಡರೆ ಒಪ್ಪುತ್ತದೆ. ಹಾರವನ್ನು ಕೈಗೆ ನಾಲ್ಕೈದು ಸುತ್ತು ಸುತ್ತಿಕೊಂಡರೆ ನಿಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್‌ ನೀಡಿದಂತಾಗುತ್ತದೆ. ದಪ್ಪದ ಏಳೆಂಟು ಬಳೆಗಳನ್ನೂ ಹಾಕಿಕೊಳ್ಳಬಹುದು.

ಒಡವೆ: ಬಂಗಾರದೊಡವೆ ಧರಿಸುವುದು ಸೂಕ್ತವಲ್ಲ. ಕಿವಿಗೆ ಓಲೆ ಬೇಕೆಂದಿದ್ದರೆ ಪುಟ್ಟದಾದ ಆದರೆ ಹೊಳೆಯುವ ಓಲೆ ಇಲ್ಲವೇ ಭುಜ ತಾಕುವ ಉದ್ದನೆಯ ಲೋಲಕ್‌ಗಳು ಸೂಕ್ತ. ಕತ್ತಿಗೆ ತೆಳ್ಳನೆಯ ಎಳೆಗಳಿರುವ ಹಾರಗಳನ್ನೋ, ಒಂದೆಳೆಯ ನೆಕ್‌ಲೇಸ್‌ನ್ನೋ ಧರಿಸಬಹುದು. ಕತ್ತಿನ ಸುತ್ತ ಸಡಿಲವಾಗಿ ಸ್ಟೋಲ್‌ ಸುತ್ತಿಕೊಂಡರೆ ರೆಬೆಲ್‌ ನೋಟ ಸಿಗುತ್ತದೆ. ಏನೂ ಧರಿಸದ ಬೋಳು ಕತ್ತು ಇನ್ನೂ ಚಂದ!

ತೆಳ್ಳಗಿನ (ಸ್ಕಿನ್ನಿ) ಬೆಲ್ಟ್‌ ಧರಿಸಬೇಕು. ಪ್ಯಾಂಟ್‌ಗೆ ವಿರುದ್ಧ ಬಣ್ಣದ ಬೆಲ್ಟ್‌ ಆರಿಸಿಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ಬೆಲ್ಟ್‌ನಲ್ಲಿ ಒಂದೇ ಬಕಲ್‌ ಇರುತ್ತದೆ. ಆದರೆ ಎರಡೂ ಕಡೆ ಸಿಕ್ಕಿಸಬಹುದಾದ ಡಬಲ್‌ ಬಕಲ್‌ ಬೆಲ್ಟ್‌ಗಳು ಹೈವೇಸ್ಟ್‌ ಪ್ಯಾಂಟು, ಸ್ಕರ್ಟ್‌ನ ಜೊತೆಗೆ ಟ್ರೆಂಡ್ ಸೃಷ್ಟಿಸಿವೆ.

ದೀಪಿಕಾ ಪಡುಕೋಣೆ ಕೈಲಿದ್ದ ಬ್ಯಾಗ್‌ ಬಣ್ಣ ಕೆಂಪು! ಅವರಿಗೆ ಒಟ್ಟಾರೆಯಾಗಿ ಶ್ರೀಮಂತ ನೋಟ ನೀಡಿರುವುದೇ ಈ ಎರಡು ತೊಡುಗೆಗಳು. ಉಡುಗೆಗೆ ಇನ್ನಷ್ಟು ವಿಲಾಸಿತನ ನೀಡುವಂತಹ ತೊಡುಗೆಗಳನ್ನು ಆರಿಸುವುದೂ ಫ್ಯಾಷನ್‌ ಪ್ರಜ್ಞೆಯ ಪ್ರತೀಕ.

**

ಟಾ‍ಪ್‌, ಬೆಲ್ಟ್‌ ಆಯ್ಕೆ...

ಕ್ರಾಪ್‌ ಟಾಪ್‌ನಲ್ಲಿ ಹತ್ತಾರು ವಿಧಗಳಿವೆ. ಯಾವುದನ್ನೇ ಆಯ್ದುಕೊಂಡರೂ ಹೈ ವೇಸ್ಟ್‌ ಪ್ಯಾಂಟ್‌ಗೆ ಸಖತ್ತಾಗಿ ಹೊಂದಿಕೊಳ್ಳುತ್ತದೆ. ಹೊಟ್ಟೆಯ ಭಾಗ ಕಾಣುವಂತಹ ಟಾಪ್‌ ಧರಿಸಿದ್ದರೆ ಉದ್ದನೆಯ ಶ್ರಗ್‌, ಜಾಕೆಟ್‌ ಹಾಕಿಕೊಂಡರೆ ನಿಮ್ಮ ಮೇಲಿನ ದೃಷ್ಟಿ ಕೀಳಲು ಸಾಧ್ಯವೇ ಇಲ್ಲ ಬಿಡಿ.

ನೀವು ಜೀನ್ಸ್‌ ಪ್ಯಾಂಟ್‌ ಧರಿಸಿದ್ದರೆ ಜೀನ್ಸ್‌ ಫ್ಯಾಬ್ರಿಕ್‌ನದ್ದೇ ಕಾರ್ಗೊ ಜಾಕೆಟ್‌ ಆರಿಸಿಕೊಳ್ಳಬಹುದು. ಬಿಗಿಯಾದ ಟೀ ಶರ್ಟು ಈ ಪ್ಯಾಂಟ್‌ಗೆ ಹೇಳಿಮಾಡಿಸಿದ ಜೋಡಿ. ಶರ್ಟನ್ನು ಇನ್‌ (ಟಕ್‌) ಮಾಡಲೇಬೇಕು. ಮುಂಭಾಗದಲ್ಲೋ, ಎರಡೂ ಬದಿಗಳಲ್ಲೋ ಟಕ್ ಮಾಡಿದರೂ ಚಂದ. ಗ್ರಾಫಿಕ್ಸ್‌, ವ್ಯಕ್ತಿ ಚಿತ್ರ, ಆಕರ್ಷಕ ಸಾಲುಗಳಿರುವ ಟೀ ಶರ್ಟನ್ನೂ ಆರಿಸಬಹುದು. ಚೌಕಳಿ, ಗೀಟು, ಗೆರೆಗಳಿರುವ ಶರ್ಟನ್ನು ಹೊಟ್ಟೆ ಕಾಣುವಂತೆ ಗಂಟು ಹಾಕಿಬಿಟ್ಟರೆ ಬಿಂದಾಸ್‌ ನೋಟ ನಿಮ್ಮದಾಗುತ್ತದೆ. ಆದರೆ ಇದು ಪಾರ್ಟಿಗೆ ಹೇಳಿಮಾಡಿಸಿದ ಸ್ಟೈಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT