ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟರಿಗೆ ಕ್ಷೇತ್ರದಲ್ಲಿ ಅವಕಾಶ ನೀಡಬೇಡಿ’

ತೀರ್ಥಹಳ್ಳಿ: ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಪಾದಯಾತ್ರೆ, ಮಂಜುನಾಥ ಗೌಡ ವಿರುದ್ಧ ಟೀಕೆ
Last Updated 20 ಮಾರ್ಚ್ 2018, 11:31 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಹಗರಣದ ತನಿಖೆಗೆ ಆಗ್ರಹಿಸಿ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಕಾಂಗ್ರೆಸ್‌ ಮೂರು ದಿನಗಳ ಪಾದಯಾತ್ರೆಯನ್ನು ತಾಲ್ಲೂಕಿನ ಕಲ್ಲುಕೊಪ್ಪದಿಂದ ಸೋಮವಾರ ಆರಂಭಿಸಿತು.

ಪಾದಯಾತ್ರೆಗೂ ಮುನ್ನ ಮಾತನಾಡಿದ ಶಾಸಕ ಕಿಮ್ಮನೆ ರತ್ನಾಕರ, ‘ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ. ಅಗತ್ಯ ವಸ್ತುಗಳನ್ನು ಜನರು ಕೊಳ್ಳದಂತಾಗಿದೆ. ಉದ್ಯಮಿಗಳನ್ನು ಮಾತ್ರ ಪೋಷಿಸುವ ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೈತರನ್ನು ಗಡೆಗಣಿಸಿದೆ’ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ ಸಂಕಷ್ಟವನ್ನು ಅರಿತು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರ ಮಹತ್ವ ಅರಿಯದವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರ ಹಣ ವಂಚನೆಯಾಗಲು ಬಿಡುವುದಿಲ್ಲ. ಬ್ಯಾಂಕ್‌ ಅವ್ಯವಹಾರದ ರೂವಾರಿ ಮಂಜುನಾಥಗೌಡ ರೈತರ ಹಣವನ್ನು ಬ್ಯಾಂಕಿಗೆ ಸಂದಾಯ ಮಾಡುವವರೆಗೂ ಹೋರಾಟ ನಡೆಸಲಾಗುವುದು’ ಎಂದರು.

ಭ್ರಷ್ಟರಿಗೆ ಕ್ಷೇತ್ರದ ಜನ ಅವಕಾಶ ನೀಡಬಾರದು. ಈ ಕ್ಷೇತ್ರವನ್ನು ಪ್ರತಿನಿಧಿಸಿದವರಿಗೆ ಇರುವ ಗೌರವ, ಘನತೆಯನ್ನು ಜನರು ಮನಗಾಣಬೇಕು. ಹಣ ಸುರಿದು ಚುನಾವಣೆಯಲ್ಲಿ ಗೆಲ್ಲಲಾಗದು. ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮಂಜುನಾಥ ಗೌಡ ಅವರಿಗೆ ಶಾಂತವೇರಿ ಗೋಪಾಲಗೌಡರ ಜನ್ಮ ದಿನಾಚರಣೆ ಈಗ ನೆನಪಾಗಿದೆ. ಗೋಪಾಲಗೌಡರ ಅಧ್ಯಯನ ಕೇಂದ್ರ ಮಂಜೂರಾಗಿರುವುದೂ ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಮುಖಂಡ ಬಿ.ಎಸ್‌.ಪುರುಷೋತ್ತಮ್‌ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರಕ್ಕೆ ಶೇ 80ರಿಂದ 90ರಷ್ಟು ಮತದಾರರು ಬೆಂಬಲ ನೀಡಲಿದ್ದಾರೆ. ಐದು ವರ್ಷ ಅವಧಿ ಪೂರೈಸುವುದು ಸುಲಭವಲ್ಲ. ಆದರೆ, ಸಿದ್ದರಾಮಯ್ಯ ಯಶಸ್ವಿಯಾಗಿ ಪೂರೈಸಲಿದ್ದಾರೆ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಭಾರತಿ ಪ್ರಭಾಕರ, ಶ್ವೇತಾ ಬಂಡಿ, ಮುಖಂಡ ಬಿ.ಪಿ.ರಾಮಚಂದ್ರ, ತೀರ್ಥಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರ್‌ ಮಂಜುನಾಥ್‌, ಕೋಣಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ಯಡೂರು ರಾಜಾರಾಮ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕೆಳಕೆರೆ ಪ್ರದೀಪ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಳಕೆರೆ ದಿವಾಕರ್‌, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್‌, ವನಮಾಲಾ ಮೋಹನ್‌, ಶಿವಾನಂದ, ಕುಡುಮಲ್ಲಿಗೆ ರಮೇಶ್‌ ಶೆಟ್ಟಿ ಇದ್ದರು.

ಜೆಡಿಎಸ್‌ಗೆ ಗಿರಾಕಿ ಬೇಕಿತ್ತು!

‘ಜೆಡಿಎಸ್‌ಗೆ ಒಬ್ಬ ಗಿರಾಕಿ ಬೇಕಿತ್ತು. ಮಂಜುನಾಥಗೌಡ ಅವರನ್ನು ಕರೆ ತಂದಿದ್ದಾರೆ. ಅವರಿಗೂ ಜೆಡಿಎಸ್‌ಗೂ ಯಾವುದೇ ಸಂಬಂಧ ಇಲ್ಲ. ಅವರ ಜತೆ ಇರುವವರೆಲ್ಲ ಕೆಜೆಪಿಯವರು. ಬಿಲ್ಲಾರಂಗ ವ್ಯವಹಾರದ ಮಂಜುನಾಥಗೌಡರು ಎಲ್ಲವನ್ನೂ ದುಡ್ಡಿನಿಂದ ನಿರ್ವಹಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರ ಬಣ್ಣ ಬಯಲು ಮಾಡಿ ಮಠ ಸೇರಿಸಿ ಚುನಾವಣೆಗೂ ಮುನ್ನವೇ ನಿವೃತ್ತಿಗೊಳಿಸುತ್ತೇನೆ’ ಎಂದು ಕಿಮ್ಮನೆ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT