ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ತೊಡಕು ಸಂಭ್ರಮ, ಬಾಡೂಟದ ಘಮ

ಹೊಳಲ್ಕೆರೆ ತಾಲ್ಲೂಕಿನಲ್ಲಿ 50 ಕ್ವಿಂಟಲ್ ಕೋಳಿ ಮಾರಾಟ, ಕುರಿ ಮಾಂಸಕ್ಕೂ ಹೆಚ್ಚು ಬೇಡಿಕೆ
Last Updated 21 ಮಾರ್ಚ್ 2018, 8:49 IST
ಅಕ್ಷರ ಗಾತ್ರ

ಹೊಳಲ್ಕೆರೆ: ಯುಗಾದಿಯ ಮರುದಿನ ಆಚರಿಸುವ ವರ್ಷದ ತೊಡಕನ್ನು ಮಂಗಳವಾರ ತಾಲ್ಲೂಕಿನಲ್ಲಿ ಸಡಗರದಿಂದ ಆಚರಿಸಲಾಯಿತು.

ವರ್ಷದ ತೊಡಕುವಿನಲ್ಲಿ ಕುರಿ, ಕೋಳಿ, ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಎಲ್ಲಾ ಕಡೆ ಬಾಡೂಟದ ಘಮ ಆವರಿಸಿತ್ತು. ಪಟ್ಟಣದ ಕುರಿ, ಕೋಳಿ ಮಾಂಸದ ಅಂಗಡಿಗಳು ಗ್ರಾಮೀಣರು ಮತ್ತು ಪಟ್ಟಣದ ನಿವಾಸಿಗಳಿಂದ ತುಂಬಿ ಹೋಗಿದ್ದವು. ಅಂಗಡಿಗಳ ಮುಂದೆ ನೂರಾರು ಬೈಕ್, ಕಾರುಗಳು ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

‘ಪಟ್ಟಣವೂ ಸೇರಿದಂತೆ ತಾಲ್ಲೂಕಿನ ರಾಮಗಿರಿ, ಮಲ್ಲಾಡಿಹಳ್ಳಿ, ತಾಳಿಕಟ್ಟೆ, ಎಚ್.ಡಿ.ಪುರ, ಚಿಕ್ಕಜಾಜೂರು, ಸಾಸಲು ಹಳ್ಳ, ಚಿತ್ರಹಳ್ಳಿ ಮತ್ತಿತರ ಕಡೆ 50ಕ್ಕೂ ಹೆಚ್ಚು ಕೋಳಿ ಮಾರಾಟದ ಅಂಗಡಿಗಳಿದ್ದು, ಮಂಗಳವಾರ ಒಂದೇ ದಿನ 5 ಟನ್ ಕೋಳಿ ಮಾರಾಟ ಆಗಿದೆ. ಇದರಲ್ಲಿ 30 ಕ್ವಿಂಟಲ್ ಕೋಳಿ ಮತ್ತು 20 ಕ್ವಿಂಟಲ್ ಮೊಟ್ಟೆ ಕೋಳಿ ಸರಬರಾಜು ಮಾಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವ್ಯಾಪಾರ ಸ್ವಲ್ಪ ಹೆಚ್ಚಾಗಿದೆ’ ಎನ್ನುತ್ತಾರೆ ಪಟ್ಟಣದ ಕೋಳಿ ಸಗಟು ವ್ಯಾಪಾರಿ ಫೈರೋಜ್.

ಕುರಿ ಮಾಂಸಕ್ಕೂ ಬೇಡಿಕೆ ಹೆಚ್ಚಿದ್ದು, ಪಟ್ಟಣದ ಮಟನ್ ಸ್ಟಾಲ್ ಗಳಲ್ಲಿ ಸುಮಾರು 10 ಕ್ವಿಂಟಲ್ ಕುರಿ ಮಾಂಸ ಮಾರಾಟವಾಗಿದೆ. ಪ್ರತಿ ಕೆಜಿ ಕುರಿ ಮಾಂಸ ₹ 400ರಿಂದ 500 ಕ್ಕೆ ಮಾರಾಟವಾದರೆ, ಕೋಳಿ ಮಾಂಸದ ಬೆಲೆ ಕೆ.ಜಿ.ಗೆ ₹ 100 ರಿಂದ ₹ 140 ಇತ್ತು. ಕುರಿ ಮಾಂಸ ಕೊಳ್ಳಲಾಗದವರು, ಕೋಳಿ ಮಾಂಸಕ್ಕೆ ತೃಪ್ತಿಪಟ್ಟುಕೊಂಡರು. ಮೀನು ಮಾರಾಟ ಸಾಧಾರಣವಾಗಿತ್ತು.

ಭಾನುವಾರ ಚಂದ್ರದರ್ಶನ ಆಗಿದ್ದರೆ ಸೋಮವಾರ ವರ್ಷತೊಡಕು ಆಚರಿಸಲಾಗುತ್ತಿತ್ತು. ಆದರೂ ಸೋಮವಾರ ಕೆಲವರು ಮಾಂಸದೂಟ ಮಾಡುವುದಿಲ್ಲ. ಸೋಮವಾರ ಚಂದ್ರದರ್ಶನ ಆಗಿದ್ದರಿಂದ ಎಲ್ಲರೂ ಮಂಗಳವಾರ ವರ್ಷದ ತೊಡಕು ಆಚರಿಸಿದರು. ಕೆಲವು ವ್ಯಾಪಾರಿಗಳು ಟಾಟಾ ಏಸ್, ಲಗೇಜ್ ಆಟೊಗಳಲ್ಲಿ ಹಳ್ಳಿಗಳಿಗೇ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳನ್ನು ಕೊಂಡೊಯ್ದು ಮಾರಾಟ ಮಾಡಿದರು.

ಜನ ಚಿಕನ್, ಮಟನ್ ಮಸಾಲಾ, ಫ್ರೈ, ಡ್ರೈ, ಬಿರಿಯಾನಿ, ಕಬಾಬ್ ಹಾಗೂ ಮೊಟ್ಟೆಯಿಂದ ಮಾಡಿದ ರುಚಿ, ರುಚಿಯಾದ ಖಾದ್ಯಗಳನ್ನು ಸವಿದರೆ, ವ್ಯಾಪಾರಿಗಳು ಭರ್ಜರಿ ವಹಿವಾಟು ನಡೆಸಿ ಜೇಬು ತುಂಬಿಸಿಕೊಂಡರು.

ವರ್ಷದ ತೊಡಕಿನ ಅಂಗವಾಗಿ ಹಳ್ಳಿಗಳಲ್ಲಿ ಒಬ್ಬರ ಮೇಲೆ ಒಬ್ಬರು ನೀರು ಎರಚಿ ಸಂಭ್ರಮಿಸಿದರು. ಕೆಲವರು ಬಣ್ಣ ಹಚ್ಚಿ ಹೋಳಿ ಆಚರಿಸಿದರು.

**

ತಾಲ್ಲೂಕಿನಾದ್ಯಂತ ಸುಮಾರು 50 ಕ್ವಿಂಟಲ್ ಕೋಳಿ ಮಾರಾಟ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವ್ಯಾಪಾರ ಸ್ವಲ್ಪ ಹೆಚ್ಚಾಗಿದೆ.
-ಫೈರೋಜ್, ಕೋಳಿ ಸಗಟು ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT