ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಸಿಯುತ್ತಿದೆ ತಂತ್ರಜ್ಞಾನ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತೈವಾನ್‌ನ ಶೆನ್‌ಜೆನ್‌ ಎಂಬಲ್ಲಿ ಫಾಕ್ಸ್‌ಕಾನ್‌ ಎಂಬ ಕಾರ್ಖಾನೆಯೊಂದಿದೆ. ಆ್ಯಪಲ್ ಕಂಪನಿಯ ಐಫೋನ್‌ ಮತ್ತು ಐಪಾಡ್‌, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಫೋನ್‌, ಸೋನಿ ಕಂಪನಿಯ ಪ್ಲೇ ಸ್ಟೇಷನ್‌ 4 ಮತ್ತು ವಿಶ್ವದ ಇತರ ದೊಡ್ಡ ದೊಡ್ಡ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಇಲ್ಲಿ ಅಸೆಂಬಲ್‌ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಈ ಕೆಲಸವನ್ನು ಕಾರ್ಮಿಕರೇ ಮಾಡುತ್ತಿದ್ದರು.

ಇತ್ತೀಚೆಗೆ ಈ ಅಸೆಂಬಲ್‌ ಕೆಲಸವನ್ನು ರೋಬೊಗಳಿಂದ ನಿರ್ವಹಿಸುವ ನಿರ್ಧಾರವನ್ನು ಕಾರ್ಖಾನೆ ಅಧ್ಯಕ್ಷ ಟೆರ್‍ರಿ ಗೌ ಕೈಗೊಂಡರು. ಇದರಿಂದ  ಸಾಕಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡರು. ಮನನೊಂದ 16 ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು. ಸದ್ಯ 60 ಸಾವಿರ ರೋಬೊಗಳು ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿವೆ. ಅಂದರೆ ಉದ್ಯೋಗಿಗಳ ಅರ್ಧದಷ್ಟು ಇದರ ಸಂಖ್ಯೆ. ಅಲ್ಲಿಗೆ, ಊಹಿಸಿ ಎಷ್ಟು ಜನರು ಕೆಲಸದಿಂದ ವಂಚಿತರಾಗಿದ್ದಾರೆ ಎಂದು?

ಸ್ವಯಂಚಾಲಿತ ಟ್ರಕ್‌
ಅಮೆರಿಕದ ಅರಿಜೋನ ಎಂಬಲ್ಲಿ ವೇಮೊ ಎಂಬ ಗೂಗಲ್‌ನ ಸ್ವಯಂಚಾಲಿತ ಕಾರ್‌ ತಯಾರಿ ಕಂಪನಿ ಯೊಂದಿದೆ. ಇದು ಈಗ 600 ಸ್ವಯಂಚಾಲಿತ ಟ್ಯಾಕ್ಸಿಗಳನ್ನು ಕಳೆದ ನವೆಂಬರ್‌ನಿಂದ ರಸ್ತೆಗಿಳಿಸಿದೆ. ಇತ್ತೀಚೆಗೆ ಈ ಕಂಪನಿ ಪ್ರಾಯೋಗಿಕ ಯೋಜನೆಯಡಿ ಸ್ವಯಚಾಲಿತ ಟ್ರಕ್‌ಗಳನ್ನೂ ರಸ್ತೆಗಿಳಿಸಿದೆ. ಅಟ್ಲಾಂಟದಲ್ಲಿನ ದತ್ತಾಂಶ ಕೇಂದ್ರಕ್ಕೆ ಈ ಟ್ರಕ್‌ಗಳು ಚಲಿಸಿವೆ. ಇವುಗಳಲ್ಲಿ ಚಾಲಕನೊಬ್ಬ ಇದ್ದು ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲಿದ್ದಾನೆ.

ಕಿವಾ ರೋಬೊ: ಅಮೆಜಾನ್‌ನ ಕಿವಾ ರೋಬೊಗಳು ನೂರಾರು ಕಾರ್ಮಿಕರ ಶ್ರಮವನ್ನು ಉಳಿಸುತ್ತಿವೆ. ಗೋದಾಮುಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತಿದೆ. 2014ರವರೆಗೂ ಅಮೆಜಾನ್‌ ಕಂಪನಿ ತಾನೇ ತಯಾರು ಮಾಡಿದ ಯಂತ್ರಗಳನ್ನು ಬಳಕೆ ಮಾಡುತ್ತಿತ್ತು.  ಇವುಗಳಲ್ಲಿ ಸ್ವಲ್ಪಮಟ್ಟಿಗೆ ಕಾರ್ಮಿಕರ ಬಳಕೆಯಾಗುತ್ತಿತ್ತು. ಆದರೀಗ ಬಳಸುತ್ತಿರುವ ಕಿವಾ ರೋಬೊಗಳಿಂದ ಕೋಟ್ಯಂತರ ಹಣ ಉಳಿತಾಯವಾಗಿದೆ. ಸಾಮಾನುಗಳನ್ನು ಎತ್ತುವುದು ಮತ್ತು ಪ್ಯಾಕಿಂಗ್‌ ಘಟಕಗಳಲ್ಲಿ ಇವುಗಳನ್ನು ನಿಯೋಜಿಸಲಾಗಿದೆ. ಇವುಗಳಿಂದ ಕಾರ್ಯಾಚರಣಾ ವೆಚ್ಚ ಶೇ 20ರಷ್ಟು ಕಡಿಮೆಯಾಗಿದೆ.

ಐಬಿಎಂನ ವಾಟ್ಸನ್‌ ಸೂಪರ್ ಕಂಪ್ಯೂಟರ್‌: ಐಬಿಎಂ ಕಂಪನಿಯ ವಾಟ್ಸನ್‌ ಸೂಪರ್ ಕಂಪ್ಯೂಟರ್‌ ಕೃತಕಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ. ಕ್ಯಾನ್ಸರ್‌ ಪತ್ತೆ ಮತ್ತು ಚಿಕಿತ್ಸಾ ವಿಧಾನ ಸುಧಾರಣೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಪ್ರಮುಖವಾದ ತೀರ್ಮಾನವನ್ನು ವೈದ್ಯರು ತೆಗೆದುಕೊಳ್ಳಲು ಕೈಜೋಡಿಸುತ್ತಿದೆ.

ಹೋಂಡಾ ಕಂಪನಿಯ ‘ಅಸಿಮೊ ರೋಬೊ’: ಹೋಂಡಾ ಕಂಪನಿ 1980ರಿಂದಲೇ ಹ್ಯುಮನಾಯ್ಡ್‌ ರೋಬೊಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿದೆ. ಮನುಷ್ಯನಂತೆ ನಡೆಯುವ ಎರಡು ಕಾಲುಗಳುಳ್ಳ ರೋಬೊ ತಯಾರು ಮಾಡುವುದು ಕಂಪನಿಯ ಕನಸಾಗಿತ್ತು. ಇತ್ತೀಚೆಗೆ ಕಂಪನಿಯ ‘ಅಸಿಮೊ ರೋಬೊ’ ಮಾರುಕಟ್ಟೆಗೆ ಬಂದಿದೆ.

ಇದನ್ನು ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸಬಹುದಾಗಿದೆ. ತಗ್ಗು ದಿಣ್ಣೆ ಮತ್ತು ಇಳಿಜಾರಿನಲ್ಲಿ ಅಸಿಮೊ ನಡೆದಾಡುತ್ತದೆ. ಮೆಟ್ಟಿಲುಗಳನ್ನು ಏರುತ್ತದೆ.

ಆಟೊಮೇಷನ್‌ ಎಂಬುದು ಇಂದು ವಿಶ್ವದಾದ್ಯಂತ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ದೊಡ್ಡದೊಡ್ಡ ಕಂಪನಿಗಳು  ಇದಕ್ಕಾಗಿ ಸಾಕಷ್ಟು ವೆಚ್ಚ ಮಾಡುತ್ತಿವೆ. ರೋಬೊಗಳ ಕಾರ್ಯನಿರ್ವಹಣೆಗಾಗಿ ಪ್ರೋಗ್ರಾಮಿಂಗ್‌ ಮಾಡುತ್ತಿವೆ. ಕಾರ್ಮಿಕರನ್ನು ಉಳಿಸಿಕೊಳ್ಳುವುದಕ್ಕಿಂತ ರೋಬೊಗಳ ನೇಮಕ ಹೆಚ್ಚು ಸ್ಮಾರ್ಟ್ ಉಪಾಯವೆಂಬಂತೆ ಕಾಣುತ್ತಿದೆ. ಇದರಿಂದ ಕೇವಲ ಮನುಷ್ಯರಿಗೆ ಉದ್ಯೋಗ ವಂಚನೆಯಲ್ಲದೆ ಆರ್ಥಿಕ ಸ್ಥಿರತೆ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಆಟೊಮೇಷನ್‌ನಿಂದ ಕೆಲಸ ಕಳೆದುಕೊಳ್ಳುವ ಕೋಟ್ಯಂತರ ಜನರು ಏನು ಮಾಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ರೋಬೊಗಳನ್ನು ನಿರ್ವಹಿಸಲು ತ‌ಂತ್ರಜ್ಞರು ಬೇಕಲ್ಲವೇ‌. ಆದರೆ ಎಷ್ಟು ಜನರಿಗೆ ಹೀಗೆ ಕೆಲಸ ಸಿಗುತ್ತದೆ. ತರಬೇತಿ ಪಡೆದವರು ಮತ್ತು ಹೊಸ ತಂತ್ರಜ್ಞಾನದ ಅರಿವು ಇದ್ದವರಿಗೆ ಮಾತ್ರ ಉದ್ಯೋಗಾವಕಾಶವಿದೆ. ಅದರಲ್ಲೂ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಆಟೊಮೇಷನ್‌ ಪರಿಣಾಮಗಳು ವಿಭಿನ್ನವಾಗಿರುತ್ತವೆ.

ಹಾಗೆಂದ ಮಾತ್ರಕ್ಕೆ ಮುಂದಿನ ದಿನಗಳಲ್ಲಿ ಎಲ್ಲವೂ ನಿರಾಶಾದಾಯಕವಾಗಿರುತ್ತದೆ ಎಂದಲ್ಲ. ಭಾರತದಲ್ಲಂತೂ ಸಾಫ್ಟ್‌ವೇರ್‌ ಉದ್ಯಮ ಸ್ಥಿರವಾಗಿಯೇ ಇದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಹೊಸ ಹೊಸ ಸ್ಟಾರ್ಟ್‌ ಅಪ್‌ಗಳು ಆರಂಭವಾಗುತ್ತಲೇ ಇವೆ. ಇವೆಲ್ಲವೂ ಹೊಸ ಉದ್ಯೋಗವನ್ನು ಸೃಷ್ಟಿಸುತ್ತಲೇ ಇವೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಕೌಶಲ ಇಲ್ಲದ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿವೆ.

ಫೆಬ್ರುವರಿಯಲ್ಲಿ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕೃತಕಬುದ್ಧಿಮತ್ತೆ, ರೋಬೊಟಿಕ್ಸ್‌, 3ಡಿ ಪ್ರಿಂಟಿಂಗ್‌ ಸಂಬಂಧಿತ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು ಸರ್ಕಾರ ಘೋಷಣೆ ಮಾಡಿದೆ.  ನಾಲ್ಕನೇ ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನಗಳು ಎಂದೇ ಇವುಗಳು ಹೆಸರು ಪಡೆದಿವೆ.

ಈ ತಂತ್ರಜ್ಞಾನಗಳಲ್ಲಿ ಅಮೆರಿಕ ಇಡೀ ವಿಶ್ವವನ್ನೇ ಮುನ್ನಡೆಸುತ್ತಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದೆ. ಭಾರತ ಸೇರಿದಂತೆ ಹಲವು ದೇಶಗಳು ಈ ಕ್ರಾಂತಿಯಲ್ಲಿ ಇನ್ನೂ ಹಿಂದುಳಿದಿವೆ. ದೇಶ ದೇಶಗಳ ನಡುವೆ ನಡೆಯುತ್ತಿದ್ದ ಕೈಗಾರಿಕಾ ಕ್ರಾಂತಿ ಇದೀಗ ಮನುಷ್ಯರು ಮತ್ತು ಯಂತ್ರಗಳ ನಡುವೆ ಆರಂಭವಾಗಿದೆ.

ಕೃತಕ ಬುದ್ಧಿಮತ್ತೆಯ ಅನುವಾದಕ
ಇದೇ ಮೊದಲ ಬಾರಿಗೆ ಮೈಕ್ರೊಸಾಫ್ಟ್ ಸಂಶೋಧಕರು ಕೃತಕಬುದ್ಧಿಮತ್ತೆಯ ಅನುವಾದಕ ಯಂತ್ರವನ್ನು ಸಂಶೋಧನೆ ಮಾಡಿದ್ದಾರೆ. ಚೀನೀ ಭಾಷೆಯಿಂದ ಇಂಗ್ಲಿಷ್‌ಗೆ ಇದು ಅನುವಾದ ಮಾಡಿದ್ದು, ಮನುಷ್ಯರು ಎಷ್ಟು ನಿಖರವಾಗಿ ಅನುವಾದ ಮಾಡಬಲ್ಲರೊ ಅಷ್ಟೇ ಸರಿಯಾಗಿ ಮಾಡಿದೆ.

ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಇರುವವರು ಈ ಅನುವಾದಕವನ್ನು ತಯಾರಿಸಿದ್ದಾರೆ. ಇದರ ಕೆಲಸ ಎಷ್ಟರಮಟ್ಟಿಗೆ ನಿಖರವಾಗಿದೆ ಎಂಬುದನ್ನು ಕಂಡುಹಿಡಿಯಲು ಮೈಕ್ರೊಸಾಫ್ಟ್‌, ಎರಡು ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ತಂಡವನ್ನು ಕರೆಸಿ ಕೃತಕ ಬುದ್ಧಿಮತ್ತೆ ಅನುವಾದವನ್ನು ಪರಿಶೀಲನೆ ನಡೆಸಿದರು.

‘ಸವಾಲಿನ ಭಾಷೆಯ ಅನುವಾದದಲ್ಲಿ ಇದೊಂದು ಮೈಲುಗಲ್ಲು’ ಎಂದು ಮೈಕ್ರೊಸಾಫ್ಟ್‌ನ ಸಂವಹನ, ಭಾಷೆ ಮತ್ತು ಯಂತ್ರ ಅನುವಾದ ವಿಭಾಗದ ಸಂಶೋಧಕ ಕ್ಸೆಡಾಂಗ್ ಹುವಾಂಗ್ ಹೇಳಿದ್ದಾರೆ.

ಮೈಕ್ರೊಸಾಫ್ಟ್‌ನ ಸಂಶೋಧನೆ ಎಲ್ಲಾ ರೀತಿಯಿಂದ ಸರಿಯಾದರೆ ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಅನುವಾದಕರಿಗೆ ಕೆಲಸ ಇಲ್ಲವಾಗುತ್ತದೆ.

*
ಶೇ 35 -ಮುಂದಿನ ಎರಡು ದಶಕಗಳಲ್ಲಿ ಇಷ್ಟು ಪ್ರಮಾಣದ ಉದ್ಯೋಗ ಆಟೊಮೇಷನ್‌ಗೊಳಗಾಗುತ್ತಿದೆ ಎಂದು ಡೆಲೊಯಿಟ್ಟೆ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಂದಾಜಿಸಿದೆ. ಮುಂದಿನ ಐವತ್ತು ವರ್ಷಗಳಲ್ಲಿ ಇದು ಶೇ 50 ರಷ್ಟಾಗಲಿದೆ.

ಶೇ 90 -ಚೀನಾದ ಕಾರ್ಖಾನೆಗಳಲ್ಲಿ ಇಷ್ಟು ಪ್ರಮಾಣದ ಕಾರ್ಮಿಕರನ್ನು ಬದಲಾಯಿಸಿ ಯಂತ್ರಗಳಿಗೆ ಕೆಲಸ ಕೊಟ್ಟರೆ ಶೇ 250 ರಷ್ಟು ಉತ್ಪಾದನೆ ಏರಿಕೆಯಾಗಲಿದೆ. ಇದರಿಂದ ಶೇ 80 ರಷ್ಟು ಉತ್ಪಾದನಾ ನ್ಯೂನತೆ ಇಳಿಕೆಯಾಗಲಿದೆ.

37ಲಕ್ಷ - ಭಾರತದಲ್ಲಿ ಐಟಿ ಮತ್ತು ಬಿಪಿಒ ಉದ್ದಿಮೆಗಳಲ್ಲಿ ಕೆಲಸ ಮಾಡುವ ಜನರ ಸಂಖ್ಯೆ. ಇದರಲ್ಲಿ ಹೆಚ್ಚಿನವರು ಕೌಶಲ ಹೊಂದಿಲ್ಲ. ಇದ್ದರೂ ಅರೆಬರೆ.

6.40 ಲಕ್ಷ -ಬೆಂಗಳೂರು ಮೂಲಕ ಎಚ್ಎಫ್ಎಸ್‌ ರೀಸರ್ಚ್‌ ಸಂಸ್ಥೆ ಅಂದಾಜು ಮಾಡಿರುವಂತೆ 2021 ರೊಳಗೆ ಇಷ್ಟು ಜನರು ಆಟೊಮೇಷನ್ ತಂತ್ರಜ್ಞಾನದಿಂದ ಭಾರತದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT